1 : ಆಗ ಶೂಹ್ಯನಾದ ಬಿಲ್ದದನು ಇಂತೆಂದನು:
2 : “ಇನ್ನೆಷ್ಟರವರೆಗೆ ಹೀಗೆ ನುಡಿಯುತ್ತಿರುವೆ? ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ?
3 : ಅನ್ಯಾಯವಾದ ತೀರ್ಪನು ಕೊಡುತ್ತಾನೆಯೆ
ದೇವರು?
ಸತ್ಯವನ್ನು ಡೊಂಕು ಮಾಡುತ್ತಾನೆಯೆ
ಸರ್ವಶಕ್ತನು?
4 : ಬಹುಶಃ ನಿನ್ನ ಮಕ್ಕಳು ಆತನ ವಿರುದ್ಧ
ಪಾಪ ಮಾಡಿರಬೇಕು
ಎಂದೇ ಆತ ಅವರನು ಆ ದ್ರೋಹದ ನಿಮಿತ್ತ
ದಂಡಿಸಿರಬೇಕು.
5 : ಶುದ್ಧನೂ ಸತ್ಯವಂತನೂ ನೀನಾಗಿದ್ದರೆ
ದೇವರ ಪ್ರಸನ್ನತೆಯನು ಅರಸಿದೆಯಾದರೆ
ಆ ಸರ್ವಶಕ್ತನನು ವಿಜ್ಞಾಪಿಸಿದೆಯಾದರೆ,
6 : ನಿಶ್ಚಯವಾಗಿ ನಿನಗೋಸ್ಕರ ಎಚ್ಚೆತ್ತು
ಬರುವನು
ಸತ್ಯವಂತನ ಮನೆಮಾರನು
ಸಮೃದ್ಧಗೊಳಿಸುವನು.
7 : ಆಗ ನಿನ್ನ ಭವಿಷ್ಯ ಎಷ್ಟು ಉಜ್ವಲ
ವಾಗಿರುತ್ತದೆಂದರೆ
ನಿನ್ನ ಮೊದಲಿನ ಸ್ಥಿತಿ ಕೂಡ ಅತ್ಯಲ್ಪವಾಗಿ
ಕಾಣುವುದು ನಿನಗೆ.
8 : ವಿಚಾರಿಸಿ ನೋಡು ಪುರಾತನ ಕಾಲವನು
ಧ್ಯಾನಿಸಿ ನೋಡು ಪೂರ್ವಜರ ಅನುಭವವನು.
9 : ನಾವಾದರೋ ನಿನ್ನೆ ಹುಟ್ಟಿದವರು, ಏನೂ
ಅರಿಯದವರು
ಭೂಲೋಕದಲ್ಲಿನ ನಮ್ಮ ಬಾಳು ಕೇವಲ
ನೆರಳು.
10 : ನಿನಗೆ ಬೋಧಿಸಿ ಬುದ್ಧಿಹೇಳುವರು
ಪೂರ್ವಜರು
ಅವರ ಅನುಭವದಿಂದ ಬಂದ ವಚನಗಳಿವು:
11 : ಕೆಸರಿಲ್ಲದೆ ಆಪುಹುಲ್ಲು ಬೆಳೆಯುವುದುಂಟೆ?
ಆವುಗಿಲ್ಲದೆ ಜಂಬು ಹುಲ್ಲು
ಮೊಳೆಯುವುದುಂಟೆ?
12 : ಆದರೂ ಮಿಕ್ಕ ಎಲ್ಲ ಸಸಿಗಳಿಗಿಂತ ಬಲು
ಮುಂಚಿತವಾಗಿಯೆ
ಒಣಗಿ ಹೋಗುತ್ತವೆ ಅವು ಯಾರೂ
ಕೊಯ್ಯದೆಯೆ.
13 : ದೇವರನ್ನು ಮರೆಯುವವರೆಲ್ಲರ ಗತಿ ಇದುವೆ
ಭಕ್ತಿಹೀನನ ನಿರೀಕ್ಷೆ ನಿರರ್ಥಕವೆ.
14 : ಅಂಥವನ ಭರವಸೆ ಭಂಗವಾಗುವುದು
ಅವನ ನಿವಾಸ ಜೇಡರ ಗೂಡಿನಂತಾಗುವುದು.
15 : ಒರಗಿಕೊಂಡರೆ ಆ ಮನೆ ನಿಲ್ಲದು
ಹಿಡಿದುಕೊಂಡರೆ ಅದು ಬಿಗಿಯಿರದು.
16 : ಅಂಥವನು ಬಿಸಿಲಿನಲ್ಲೂ ಹಸಿರಾಗಿರುವ
ಬಳ್ಳಿಯಂತೆ
ಹರಡಿಕೊಳ್ಳುವನು ತೋಟದೊಳಗೆ
ಕವಲೊಡೆದು;
17 : ಕಲ್ಲುಕುಪ್ಪೆಯ ಮೇಲೂ ಬೇರುಗಳನ್ನು
ಹೆಣೆದುಕೊಳ್ವನು
ಕಲ್ಲಿನ ಸಂದಿಗೊಂದಿಗಳ ನಡುವೆ
ನುಗ್ಗಬಲ್ಲನು ಅವನು;
18 : ಅಲ್ಲಿಂದ ಅವನನ್ನು ಕಿತ್ತುಹಾಕಿದ್ದೇ ಆದರೆ
ಅವನನ್ನು ಕಂಡದ್ದೇ ಇಲ್ಲ ಎಂದು
ಬೊಂಕುವುದು ಆ ಸ್ಥಳ.
19 : ಇದುವೇ ಅಂಥವನಿಗೆ ಗಿಟ್ಟುವ ಸುಖ
ಬೇರೆಯವರು ಮೊಳೆವರು ಅವನಿದ್ದ ಆ
ನೆಲದಿಂದ.
20 : ದೇವರು ನಿರ್ದೋಷಿಯನ್ನು ತ್ಯಜಿಸಿ
ಬಿಡುವುದಿಲ್ಲ
ಕೆಡುಕರಿಗೆ ನೆರವಾಗಲು ಆತ ಕೈ ನೀಡುವುದಿಲ್ಲ.
21 : ತುಂಬಿಸುವನಾತ ನಿನ್ನ ಬಾಯನು ನಗೆಯಿಂದ
ನಿನ್ನ ತುಟಿಗಳನ್ನು ಉತ್ಸಾಹ ಧ್ವನಿಯಿಂದ.
22 : ಅವಮಾನ ಮುಸುಕುವುದು ನಿನ್ನ ಹಗೆಗಳನ್ನು
ದುರುಳರಾ ನಿವಾಸವಾದರೋ
ನಿರ್ಮೂಲವಾಗುವುದು.”