1 : ಅದಕ್ಕೆ ಉತ್ತರವಾಗಿ ಯೋಬನು
ಹೀಗೆಂದನು:
2 : “ನನ್ನ ವಿಪತ್ತನು ತೂಕ ಮಾಡಿ ನೋಡಿದರೆ
ಒಳಿತು
ನನ್ನ ದುಃಖಗಳನು ತಕ್ಕಡಿಗೆ ಹಾಕಿದರೆ ಲೇಸು.
3 : ಆಗ ತಿಳಿಯುವುದು ನನ್ನ ವಿಪತ್ತು
ಕಡಲ ತೀರದ ಮರಳಿಗಿಂತ ಭಾರವೆಂದು.
ಎಂತಲೇ ನಾನಾಡಿದ ಮಾತು
ದುಡುಕಿನಿಂದ ಆಡಿದ ಮಾತುಗಳೆಂದು.
4 : ನನ್ನ ಮನದೊಳು ಸರ್ವಶಕ್ತನ ಬಾಣಗಳು
ನಾಟಿವೆ
ನನ್ನ ಅಂತರಂಗದೊಳು ಅವುಗಳ ವಿಷ
ಹೀರಲಾಗುತ್ತಿದೆ
ದೇವರಿಂದ ಬಂದ ಆತಂಕಗಳು ನನ್ನನು
ಸುತ್ತುವರೆದಿವೆ.
5 : ಹುಲ್ಲಿರಲು ಕಾಡುಕತ್ತೆ ಅರಚೀತೆ?
ಮೇವಿರಲು ಗೂಳಿ ಎತ್ತು ಗುಟುರೀತೆ?
6 : ಉಪ್ಪಿಲ್ಲದ ಸಪ್ಪೆಯನು ತಿನ್ನುತ್ತೇವೆಯೆ?
ಮೊಟ್ಟೆಯೊಳಗಿನ ಲೋಳೆಯಲಿ
ರುಚಿಯಿದೆಯೆ?
7 : ಮುಟ್ಟಲು ಕೂಡ ಅಸಹ್ಯವಾದುವು
ಕಾಯಿಲೆಯಲ್ಲಿ ನನಗೆ ಆಹಾರವಾದವು.
8 : ಅಯ್ಯೋ, ನನ್ನ ವಿಜ್ಞಾಪನೆ
ನೆರವೇರುವುದಿಲ್ಲವೇಕೆ?
ದೇವರು ನನ್ನ ಕೋರಿಕೆಯನ್ನು
ಈಡೇರಿಸುವುದಿಲ್ಲವೇಕೆ?
9 : ದೇವರು ನನ್ನನ್ನು ನಸುಕಿ ಬಿಡಬಾರದೆ?
ತನ್ನ ಕೈಯನ್ನು ಚಾಚಿ ಸಂಹರಿಸಿ ಬಿಡಬಾರದೆ?
10 : ಆಗ ನಾನು ಸಾಂತ್ವನ ಪಡೆಯುತ್ತಿದ್ದೆ
ಮಿತಿಯಿಲ್ಲದ ಯಾತನೆಯಲ್ಲೂ ಆದರ
ಹೊಂದುತ್ತಿದ್ದೆ
ಪರಮಪಾವನದ ಮಾತನು ಬಿಡದೆ
ಅನುಸರಿಸಿದೆನಲ್ಲವೆ? ಆಗ ನಾನು ಸಾಂತ್ವನ ಪಡೆಯುತ್ತಿದ್ದೆ
ಮಿತಿಯಿಲ್ಲದ ಯಾತನೆಯಲ್ಲೂ ಆದರ
ಹೊಂದುತ್ತಿದ್ದೆ
ಪರಮಪಾವನದ ಮಾತನು ಬಿಡದೆ
ಅನುಸರಿಸಿದೆನಲ್ಲವೆ?
11 : ನಾನು ನಿರೀಕ್ಷೆಯಿಂದಿರಲು ನನಗಾಧಾರವೇನು?
ನಾನು ತಾಳ್ಮೆಯಿಂದಿರಲು ನನ್ನ ಅಂತ್ಯ
ಸ್ಥಿತಿಯೇನು?
12 : ನನ್ನ ಬಲವು ಕಲ್ಲಿನ ಬಲವೊ?
ನನ್ನ ದೇಹ ಕಂಚಿನ ದೇಹವೊ?
13 : ನನಗೆ ಯಾವ ಸಹಾಯವೂ ಇಲ್ಲವಲ್ಲ!
ನನ್ನ ಪ್ರಾಣ ತೊಲಗಿ ಹೋಗಿದೆಯಲ್ಲಾ!
14 : ಸಂಕಟದಲ್ಲಿ ಆಗದಾ ನೆಂಟನಿಗೆ
ಸರ್ವಶಕ್ತನಲ್ಲಿ ಭಯಭಕ್ತಿ ಇರುವುದುಂಟೆ?
15 : ಹರಿದು ಓಡುವ ತೊರೆಯಂತೆ
ಉಕ್ಕಿ ಹರಿಯುವ ಪ್ರವಾಹದಂತೆ
ದ್ರೋಹವೆಸಗಿದ್ದಾರೆ ಸೋದರರು ನನಗೆ.
16 : ಕಪ್ಪಾಗಿದೆ ಆ ತೊರೆಗಳ ನೀರು ಮಂಜು
ಗಡ್ಡೆಯಿಂದ
ಕದಡಿಹೋಗಿವೆ ಹಿಮಗಡ್ಡೆಯಿಂದ.
17 : ಆ ತೊರೆಗಳು ಮಾಯವಾಗುತ್ತವೆ ಬೇಸಿಗೆ
ಬಂದಾಗ
ಬತ್ತಿಹೋಗುತ್ತವೆ ಸೆಕೆಯಾದಾಗ.
18 : ಪ್ರಯಾಣ ಮಾಡುವ ವರ್ತಕರು ಇಂಥ
ತೊರೆಗಳ ಮಾರ್ಗವಾಗಿ
ಮರಳುಗಾಡಿನಲ್ಲೆ ನಾಶವಾಗುವರು
ಅಲೆದಲೆದು ನೀರಿಗಾಗಿ.
19 : ಅವುಗಳಿಗಾಗಿ ಹಂಬಲಿಸುತ್ತದೆ ಆ ತೇಮದ
ಪ್ರಯಾಣಿಕರ ತಂಡ
ಅವುಗಳಿಗಾಗಿ ಹಾತೊರೆಯುತ್ತದೆ ಶೆಬದ
ವರ್ತಕರ ಪಂಗಡ.
20 : ಆಶಿಸಿದಷ್ಟೂ ಆಶಾಭಂಗ ಪಡುತ್ತಾರೆ
ಆ ಪ್ರಯಾಣಿಕರು
ನಂಬಿದಷ್ಟೂ ನಿರೀಕ್ಷೆಗೆಡುತ್ತಾರೆ ಆ ವರ್ತಕರು.
21 : ಅಂತೆಯೇ ನನ್ನ ವಿಷಯದಲ್ಲಿ ನೀವು
ವರ್ತಿಸುತ್ತೀರಿ
ನನ್ನ ಈ ವಿಪತ್ತನ್ನು ಕಂಡಕೂಡಲೇ
ಹಿಂಜರಿಯುತ್ತೀರಿ.
22 : ದಾನ ನೀಡಿರೆಂದು ನಿಮ್ಮನು ಬಿನ್ನವಿಸಿದೆನೋ?
ನಿಮ್ಮಾಸ್ತಿಯಿಂದ ಲಂಚವನು ಕೋರಿದೆನೋ?
23 : ವಿರೋಧಿಯ ಕೈಯಿಂದ ನನ್ನನು ಬಿಡಿಸಿರೆಂದು
ಕೇಳಿಕೊಂಡೆನೋ?
ಹಿಂಸಕರಿಂದ ನನ್ನನು ವಿಮೋಚಿಸಿರೆಂದು
ಬೇಡಿಕೊಂಡೆನೋ?
24 : ನಾನು ಮಾಡಿದ ತಪ್ಪೇನೆಂಬುದನು ತಿಳಿಸಿರಿ
ನನಗೆ
ನಾನು ಮೌನದಿಂದಿರುವೆನು, ಉಪದೇಶ
ಮಾಡಿರಿ ನನಗೆ.
25 : ನ್ಯಾಯವಾದ ಮಾತು ಎಷ್ಟೋ ಶಕ್ತಿಯುತ
ನಿಮ್ಮ ತರ್ಕವಾದರೋ ನಿರರ್ಥಕ.
26 : ಕೇವಲ ಮಾತುಗಳಿಂದ ಖಂಡಿಸ
ಬೇಕೆಂದಿರುವಿರೊ?
ದೆಸೆಗೆಟ್ಟವನ ಮಾತು
ಗಾಳಿಪಾಲಾಗತಕ್ಕದಲ್ಲವೊ?
27 : ಅನಾಥನನ್ನು ಕೊಂಡುಕೊಳ್ಳಲು ಚೀಟು
ಹಾಕುತ್ತೀರಿ
ಆಪ್ತನನ್ನು ಮಾರಿಬಿಡಲು ವ್ಯಾಪಾರ
ಮಾಡುತ್ತೀರಿ
28 : ಈಗ ದಯವಿಟ್ಟು ನೋಡಿ ನನ್ನ ಕಡೆಗೆ
ಸುಳ್ಳಾಡೆನು ನಿಮ್ಮ ಮುಖದೆದುರಿಗೆ.
29 : ದಯಮಾಡಿ ಮತ್ತೆ ಆಲೋಚಿಸಿರಿ
ಅನ್ಯಾಯವಾಗದಂತೆ
ಮರಳಿ ವಿಮರ್ಶಿಸಿರಿ ನನ್ನ ಸತ್ಯತೆ ತಿಳಿಯುವಂತೆ.
30 : ರುಚಿ ವಿಷಯದಲ್ಲಿ ನಾಲಿಗೆ ತಪ್ಪು
ಮಾಡುತ್ತದೆಯೇ?
ಸತ್ಯಾಸತ್ಯಗಳ ವಿವೇಚನೆ ನನಗಿಲ್ಲವೇ?”