Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೋಬ


1 : “ಕೂಗಿ ನೋಡು, ಯಾರಿದ್ದಾರೆ ಉತ್ತರ ಕೊಡುವವರು ನಿನಗೆ? ಈಗ ಯಾರ ಕಡೆಗೆ, ಯಾವ ದೇವದೂತರ ಕಡೆಗೆ ತಿರುಗುವೆ?
2 : ಮೂರ್ಖನಿಗೆ ನಾಶ ಕೋಪದಿಂದ ಮೂಢನಿಗೆ ಮರಣ ರೋಷದಿಂದ.
3 : ಮೂರ್ಖನು ಬೇರೂರುವುದನು ನೋಡಿದೆ ಕೂಡಲೆ ಅವನ ನಿವಾಸ ಶಾಪಕ್ಕೀಡಾಗುವುದನು ಕಂಡೆ.
4 : ಆಶ್ರಯ ಎಂಬುದು ಅವನ ಮಕ್ಕಳಿಗಿಲ್ಲ ನ್ಯಾಯಸ್ಥಾನದಲ್ಲಿ ಗೆಲುವು ಅವರಿಗಿಲ್ಲ ಅವರನ್ನು ಬಿಡಿಸತಕ್ಕವರಾರೂ ಇಲ್ಲ.
5 : ಹಸಿದವರು ಅವನ ಬೆಳೆಯನು ತಿಂದು ಬಿಡುವರು ಮುಳ್ಳುಬೇಲಿ ಹಾಕಿದ್ದರೂ ಅದನು ತಿಂದುಬಿಡುವರು ಅವನ ಸೊತ್ತನು ನುಂಗಲು ಬಾಯ್ದೆರೆದು ಕಾದಿರುವರು.
6 : ಕೇಡುಹುಟ್ಟುವುದು ಮಣ್ಣಿನಿಂದಲ್ಲ ದುಃಖಮೊಳೆವುದು ಭೂಮಿಯಿಂದಲ್ಲ.
7 : ಜ್ವಾಲೆಗಳು ಏರುವುದು ಮೇಲಕೆ ಜನರು ಹುಟ್ಟಿರುವುದು ದುಃಖಕೆ.
8 : ನಾನು ನೀನಾಗಿದ್ದರೆ ದೇವರಿಗೆ ಮೊರೆಯಿಡುತ್ತಿದ್ದೆ ನನ್ನ ವಿಷಯವನು ಆತನ ಕೈಗೆ ಬಿಡುತ್ತಿದ್ದೆ.
9 : ದೇವರೆಸಗುತ್ತಾನೆ ಅಸಾಧ್ಯ ಅತಿಶಯಗಳನು ಅಸಂಖ್ಯವಾದ ಅದ್ಭುತ ಕಾರ್ಯಗಳನು.
10 : ಮಳೆಗರೆಯುತ್ತಾನೆ ಭೂಮಿಯ ಮೇಲೆ ನೀರೊದಗಿಸುತ್ತಾನೆ ಹೊಲಗದ್ದೆಗಳಿಗೆ.
11 : ಉನ್ನತಿಗೇರಿಸುತ್ತಾನೆ ದೀನದಲಿತರನು ಸುರಕ್ಷತೆಗೊಯ್ಯುತ್ತಾನೆ ದುಃಖಿತರನು. ಭಂಗಪಡಿಸುತ್ತಾನೆ ವಂಚಕರ
12 : ಭಂಗಪಡಿಸುತ್ತಾನೆ ವಂಚಕರ ಉಪಾಯಗಳನು ಕೈಗೂಡಗೊಳಿಸನು ಅವರ ಪ್ರಯತ್ನಗಳನು.
13 : ನಿರರ್ಥಕಗೊಳಿಸುತ್ತಾನೆ ವಕ್ರಿಗಳ ತಂತ್ರೋಪಾಯಗಳನು ಸಿಕ್ಕಿಸಿಬಿಡುತ್ತಾನೆ ಅವರವರ ಯೋಜನೆಗಳಲ್ಲೆ ಜ್ಞಾನಿಗಳನು.
14 : ಕತ್ತಲು ಅಂಥವರನು ಸುತ್ತುವರೆದಿರುತ್ತದೆ ಹಾಡುಹಗಲಲ್ಲೆ ರಾತ್ರಿಯಲ್ಲೋ ಎಂಬಂತೆ ತಡಕಾಡುತ್ತಾರೆ ಅವರು ನಡುಹಗಲಲ್ಲೇ.
15 : ದಿಕ್ಕಿಲ್ಲದವರನು ರಕ್ಷಿಸುತ್ತಾನೆ ದೇವರು ಅಂಥವರ ಬಾಯಿಗತ್ತಿಯಿಂದ ಬಿಡಿಸುತ್ತಾನೆ ಅವರನ್ನು ಬಲಾಢ್ಯರ ಕೈಯಿಂದ.
16 : ಎಂತಲೇ ಬಡವನಿಗೆ ನಿರೀಕ್ಷೆ ಇರುತ್ತದೆ. ಅನ್ಯಾಯ ಆಡುವ ಬಾಯಿ ಮುಚ್ಚಿಕೊಳ್ಳುತ್ತದೆ.
17 : ದೇವರು ಯಾರನ್ನು ತಿದ್ದುತ್ತಾನೋ ಅವನು ಧನ್ಯನು ಅಲಕ್ಷ್ಯ ಮಾಡಬೇಡ ನೋಡು, ಸರ್ವಶಕ್ತನ ದಂಡನೆಯನು
18 : ಗಾಯಮಾಡುವವನೂ ಗಾಯಕಟ್ಟುವವನೂ ದೇವರೇ ಹೊಡೆಯುವುದೂ, ಗುಣಪಡಿಸುವುದೂ ಆತಮ ಕೈಯೇ.
19 : ಐದಾರು ಇಕ್ಕಟ್ಟುಗಳಿಂದ ನಿನ್ನನು ಬಿಡಿಸುವನು ಏಳನೆಯದು ಬಂದರೂ ನಿನ್ನನು ಕೇಡು ಮುಟ್ಟದು.
20 : ಬರಗಾಲದಲ್ಲಿ ಮರಣದಿಂದ ಕಾಪಾಡುವನು ಯುದ್ಧಕಾಲದಲ್ಲಿ ಕತ್ತಿಯಿಂದ ರಕ್ಷಿಸುವನು.
21 : ನಾಲಿಗೆಯೆಂಬ ಚಾಟಿಹೊಡೆತಕ್ಕೆ ಮರೆಯಾಗಿರುವೆ ಪರಿವಿನಾಶ ಬಂದರೂ ನೀನು ಹೆದರದಿರುವೆ.
22 : ಕ್ಷಾಮಡಾಮರದಲ್ಲೂ ನೀನು ನಗುತ್ತಿರುವೆ ಕಾಡುಮೃಗಗಳಿಗೂ ನೀನು ಅಂಜದಿರುವೆ.
23 : ಹೊಲದ ಕಲ್ಲು ಬಂಡೆಗಳೊಡನೆ ಒಪ್ಪಂದ ಮಾಡಿಕೊಳ್ಳುವೆ ಆ ಕಾಡುಪ್ರಾಣಿಗಳೊಂದಿಗೆ ನೆಮ್ಮದಿಯಿಂದ ಬಾಳುವೆ.
24 : ನಿನ್ನ ಗುಡಾರಕ್ಕೆ ಗಂಡಾಂತರವಿಲ್ಲವೆಂಬ ನೆಮ್ಮದಿ ನಿನಗಿರುವುದು ನಿನ್ನ ಮಂದೆಯನು ನೀನು ನೋಡಬಂದಾಗ ಕೊರತೆ ಕಾಣಬರದು.
25 : ನಿನ್ನ ಸಂತತಿ ದೊಡ್ಡದೆಂಬುದನು ನೀನು ತಿಳಿಯುವೆ ಅದು ಇಳೆಯ ಹುಲ್ಲಿನಂತೆ ಹುಲುಸಾಗಿ ಬೆಳೆವುದನು ಕಾಣುವೆ.
26 : ಸುಗ್ಗಿ ಕಾಲದಲ್ಲಿ ಕಾಳುತೆನೆ ಕಣ ಸೇರುವಂತೆ ವೃದ್ಧಾಪ್ಯ ಕಳೆದ ಮೇಲೆ ನೀನು ಸಮಾಧಿ ಸೇರುವೆ.
27 : ಇದನು ನಾವು ಪರಿಶೋಧಿಸಿದ್ದೇವೆ, ಇದು ಯಥಾರ್ಥ ಇದನು ಕೇಳಿ ತಿಳಿದುಕೊ - ಇದು ನಿನಗೆ ಹಿತಕರ.”

· © 2017 kannadacatholicbible.org Privacy Policy