1 : ಆಗ ಯೋಬನು ಸರ್ವೇಶ್ವರ
ಸ್ವಾಮಿಗೆ ಕೊಟ್ಟ ಉತ್ತರ ಇದು:
2 : “ತಾವು ಎಲ್ಲಾ ಕಾರ್ಯಗಳನು ನಡೆಸಲು
ಶಕ್ತರೆಂದು ನಾನು ಬಲ್ಲೆ
ಯಾವ ಯೋಜನೆಯು ನಿಮಗೆ
ಅಸಾಧ್ಯವಿಲ್ಲವೆಂದು ನಾನು ಅರಿತಿರುವೆ.
3 : ‘ಅಜ್ಞಾನದ ಮಾತುಗಳನ್ನಾಡುವ ನೀನು
ಯಾರು?’
‘ಸತ್ಯಾಲೋಚನೆಗಳನು ಮಂಕುಮಾಡುವ
ನೀನಾರು?’
ಈ ನಿಮ್ಮ ನುಡಿಯಂತೆ ಅರ್ಥಹೀನ
ಮಾತುಗಳನು ನಾನಾಡಿದೆ
ನನ್ನ ಬುದ್ದಿಗೆಟುಕದ ಪವಾಡಗಳನ್ನು ಟೀಕಿಸಿದೆ.
4 : ‘ನಾನಾಡುವುದನು ಕಿವಿಗೊಟ್ಟು ಕೇಳು
ನನ್ನ ಪ್ರಶ್ನೆಗೆ ಉತ್ತರ ನೀಡು’
ಎಂದು ನೀವು ಕೊಟ್ಟಿರಿ ಅಪ್ಪಣೆಯನು.
5 : ಈವರೆಗೆ ನಿಮ್ಮನು ಕುರಿತು ನಾನು ಕೇಳಿದ್ದು
ಬೇರೆಯವರಿಂದ
ಈಗಲಾದರೊ ನಿಮ್ಮನು ಕಂಡಿದ್ದೇನೆ ನನ್ನ
ಕಣ್ಣುಗಳಿಂದ.
6 : ಆದುದರಿಂದ ನಾನು ಹೇಳಿದ್ದೆಲ್ಲಕ್ಕಾಗಿ
ವಿಷಾದಿಸುತ್ತೇನೆ
ಬೂದಿಯಲು, ದೂಳಿನಲು ಕುಳಿತು ಪಶ್ಚಾತ್ತಾಪ
ಪಡುತ್ತೇನೆ.”
7 : ಸರ್ವೇಶ್ವರಸ್ವಾಮಿ ಈ ಮಾತುಗಳನ್ನು ಯೋಬನಿಗೆ ಹೇಳಿದ ಮೇಲೆ ತೇಮಾನ್ಯನಾದ ಎಲೀಫಜನಿಗೆ, “ನಿನ್ನ ಮೇಲೂ ನಿನ್ನ ಗೆಳೆಯರಿಬ್ಬರ ಮೇಲೂ ನನಗೆ ಕೋಪವಿದೆ! ನನ್ನ ದಾಸ ಯೋಬನಂತೆ ನೀವು ನನ್ನ ವಿಷಯವಾಗಿ ಸರಿಯಾದುದನ್ನು ಆಡಲಿಲ್ಲ.
8 : ಆದುದರಿಂದ ನೀವು ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ತೆಗೆದುಕೊಂಡು ನನ್ನ ದಾಸ ಯೋಬನ ಬಳಿಗೆ ಬನ್ನಿರಿ; ನಿಮ್ಮ ದೋಷಪರಿಹಾರಕ್ಕಾಗಿ ದಹನಬಲಿಯನ್ನು ಅರ್ಪಿಸಿರಿ. ನನ್ನ ದಾಸ ಯೋಬ ನಿಮ್ಮ ಪರವಾಗಿ ಪ್ರಾರ್ಥನೆ ಮಾಡುವನು; ನಾನು ಅವನ ವಿಜ್ಞಾಪನೆಯನ್ನು ಆಲಿಸಿ ನಿಮ್ಮ ನಿಮ್ಮ ಮೂರ್ಖತನಕ್ಕೆ ತಕ್ಕ ದಂಡನೆಯನ್ನು ವಿಧಿಸುವುದಿಲ್ಲ. ನನ್ನ ದಾಸ ಯೋಬನು ನನ್ನ ವಿಷಯದಲ್ಲಿ ಸತ್ಯವನ್ನು ನುಡಿದಂತೆ ನೀವು ನುಡಿಯಲಿಲ್ಲ,” ಎಂದರು.
9 : ಆಗ ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು ಮತ್ತು ನಾಮಾಥ್ಯನಾದ ಚೋಫರನು ಹೋಗಿ ಸರ್ವೇಶ್ವರ ತಮಗೆ ಆಜ್ಞಾಪಿಸಿದಂತೆ ಮಾಡಿದರು. ಸರ್ವೇಶ್ವರ ಯೋಬನ ವಿಜ್ಞಾಪನೆಯನ್ನು ಆಲಿಸಿದರು.
10 : ಯೋಬನು ತನ್ನ ಮಿತ್ರರಿಗೋಸ್ಕರ ಪ್ರಾರ್ಥಿಸಿದ ಬಳಿಕ ಸರ್ವೇಶ್ವರಸ್ವಾಮಿ ಅವನ ದುಸ್ಥಿತಿಯನ್ನು ಹೋಗಲಾಡಿಸಿದರು. ಅವನ ಆಸ್ತಿ ಪಾಸ್ತಿಯನ್ನು ಮೊದಲಿಗಿಂತ ಇಮ್ಮಡಿಯಾಗಿಸಿದರು.
11 : ಅವನ ಎಲ್ಲಾ ಅಣ್ಣತಮ್ಮಂದಿರು, ಅಕ್ಕತಂಗಿಯರು, ಹಿಂದಿನ ಪರಿಚಿತರು ಅವನನ್ನು ಕಾಣಬಂದು ಔತಣದಲ್ಲಿ ಭಾಗವಹಿಸಿದರು. ಅವನಿಗೆ ಸರ್ವೇಶ್ವರನಿಂದ ಒದಗಿದ್ದ ಆಪತ್ತಿಗಾಗಿ ಅನುತಾಪ ವ್ಯಕ್ತಪಡಿಸಿ, ಸಂತೈಸಿದರು. ಪ್ರತಿಯೊಬ್ಬರೂ ಒಂದೊಂದು ಬೆಳ್ಳಿ ನಾಣ್ಯವನ್ನೂ ಒಂದೊಂದು ಚಿನ್ನದ ಉಂಗುರವನ್ನೂ ಅವನಿಗೆ ಕೊಟ್ಟರು.
12 : ಸರ್ವೇಶ್ವರ ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಅಧಿಕಗೊಳಿಸಿ ಆಶೀರ್ವದಿಸಿದರು.
13 : ಅವನಿಗೆ ಹದಿನಾಲ್ಕು ಸಾವಿರ ಕುರಿಗಳು, ಆರು ಸಾವಿರ ಒಂಟೆಗಳು, ಒಂದು ಸಾವಿರ ಜೋಡಿ ಎತ್ತುಗಳು, ಒಂದು ಸಾವಿರ ಕತ್ತೆಗಳು ದೊರಕಿದವು.
14 : ಅಲ್ಲದೆ ಏಳು ಮಂದಿ ಗಂಡು ಮಕ್ಕಳು, ಮೂರು ಮಂದಿ ಹೆಣ್ಣು ಮಕ್ಕಳು ಹುಟ್ಟಿದರು. ಮೊದಲನೆಯವಳಿಗೆ ಯೆಮೀಮ, ಎರಡನೆಯವಳಿಗೆ ಕೆಚೀಯ, ಮೂರನೆಯವಳಿಗೆ ಕೆರೆನ್ಹಪ್ಪೂಕ್ ಎಂದು ಹೆಸರಿಟ್ಟನು.
15 : ಯೋಬನ ಮಕ್ಕಳಷ್ಟು ಸುಂದರವಾದ ಹೆಣ್ಣುಗಳು ಆ ನಾಡಿನಲ್ಲೆಲ್ಲೂ ಸಿಕ್ಕುತ್ತಿರಲಿಲ್ಲ. ಅವರ ತಂದೆ, ಅವರ ಅಣ್ಣತಮ್ಮಂದಿರಿಗೆ ಕೊಟ್ಟ ಹಾಗೆ ಅವರಿಗೂ ಸೊತ್ತನ್ನು ಹಂಚಿದನು.
16 : ತರುವಾಯ ಯೋಬನು ನೂರನಾಲ್ವತ್ತು ವರ್ಷಬಾಳಿದನು. ನಾಲ್ಕು ತಲೆಮಾರು ತನಕ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಕಂಡನು.
17 : ಹಣ್ಣು ಹಣ್ಣು ಮುದುಕನಾಗಿ ಸತ್ತನು.