1 : “ ‘ಲಿವ್ಯತಾನ್’ ಮೊಸಳೆಯನು
ಗಾಳದಿಂದ ಎಳೆಯಬಲ್ಲೆಯಾ?
ಅದರ ನಾಲಿಗೆಯನು ಹಗ್ಗದಿಂದ
ಬಿಗಿಯಬಲ್ಲೆಯಾ?
2 : ಅದರ ಮೂಗಿಗೆ ಆಪನು ಪೋಣಿಸಬಲ್ಲೆಯಾ?
ಅದರ ದವಡೆಗೆ ಮುಳ್ಳನು ಚುಚ್ಚಬಲ್ಲೆಯಾ?
3 : ಅದು ನಿನ್ನ ಸಂಗಡ ಸವಿ ಮಾತಾಡೀತೆ?
ನಿನಗೆ ವಿನಮ್ರ ವಿಜ್ಞಾಪನೆ ಮಾಡೀತೆ?
4 : ನೀನದನ್ನು ನಿನ್ನ ಚಿರದಾಸನನ್ನಾಗಿಸಿ
ಕೊಳ್ಳುವಂತೆ
ನಿನ್ನೊಡನೆ ಅದು ಒಪ್ಪಂದ ಮಾಡಿಕೊಂಡೀತೆ?
5 : ಅದನು ಹಕ್ಕಿಯಂತೆ ಆಡಿಸಬಲ್ಲೆಯಾ?
ಆಟಕ್ಕೆಂದು ಹುಡುಗಿಯರಿಗೆ
ಹಿಡಿದುಕೊಡಬಲ್ಲೆಯಾ?
6 : ಬೆಸ್ತರು ಅದನು ವ್ಯಾಪಾರಕ್ಕೆ ಇಡುವರೇ?
ಪಾಲುಮಾಡಿಕೊಂಡು ಅದನು ವರ್ತಕರಿಗೆ
ಮಾರುವರೆ?
7 : ಅದರ ಚರ್ಮವನು ಕೊಂಡಿಗಳಿಂದ
ಚುಚ್ಚಬಲ್ಲೆಯಾ?
ಅದರ ತಲೆಯನು ಮೀನು ಹಿಡಿಯುವ
ಭರ್ಜಿಯಿಂದ ತಿವಿಯಬಲ್ಲೆಯಾ?
8 : ಅದರ ಮೇಲೆ ಒಮ್ಮೆ ಕೈಹಾಕಿ ನೋಡು!
ಆಗ ನಡೆಯಬಹುದಾದ ಕದನವನು
ನೆನೆಸಿಕೊಂಡರೆ ಸಾಕು!
ನೀನು ಮತ್ತೆ ಮುಟ್ಟಹೋಗಲಾರೆ ಅದನು.
9 : ಅದನು ಹಿಡಿಯಬಹುದೆಂಬ ನಂಬಿಕೆ ವ್ಯರ್ಥ
ಹಿಡಿಯಬಂದವನು ನೋಡಿದ್ದೇ
ಬಿದ್ದುಹೋದ.
10 : ಅದನು ಕೆಣಕಲು ಧೈರ್ಯಗೊಂಡಾಗ ಅದು
ಉಗ್ರವಾಗುತ್ತದೆ
‘ನನ್ನ ಮುಂದೆ ನಿಲ್ಲಬಲ್ಲವರಾರು?’ ಎನ್ನುತ್ತದೆ.
11 : ಅದನ್ನೆದುರಿಸಿ ಸುರಕ್ಷಿತವಾಗಿ
ಇರಬಲ್ಲವನಾರು?
ಗಗನದ ಕೆಳಗಿರುವ ಯಾರಿಂದಲೂ ಅದಾಗದು.
12 : ಅದರ ಅಂಗಗಳನು, ಶಕ್ತಿಯನು, ಸೊಬಗನು
ನಾನು ವರ್ಣಿಸದೆ ಮುಚ್ಚಿಡಲಾಗದು.
13 : ಅದರ ಹೊರ ಕವಚವನು ಬಿಚ್ಚಬಲ್ಲವರಾರು?
ಅದರ ಜೊಡುದವಡೆಗಳಲಿ
ನುಗ್ಗಬಲ್ಲವರಾರು?
14 : ಅದರ ಮುಖದ ಕದಗಳನು ತೆರೆಯ
ಬಲ್ಲವರಾರು?
ಅದರ ಹಲ್ಲುಗಳ ಸುತ್ತಲೂ ಭಯಭೀತಿ
ಆವರಿಸಿರುವುದು.
15 : ಬೆನ್ನಿನ ಅಡ್ಡಣಗಳು ಅದಕ್ಕೆ ಕೊಟ್ಟಿವೆ ಕೆಚ್ಚನು
ಒತ್ತಿದ ಮುದ್ರೆಯಂತೆ ಬಿಗಿದಿವೆ ಅದನು.
16 : ಗಾಳಿ ಕೂಡ ನುಗ್ಗದಂತೆ ಆ ಅಡ್ಡಣಗಳು
ಹೊಂದಿಕೊಂಡಿವೆ ಒಂದಕ್ಕೊಂದು.
17 : ಪ್ರತ್ಯೇಕಿಸಲಾಗದಂತೆ ಅಂಟಿಕೊಂಡಿವೆ
ವಿಂಗಡಿಸಲಾಗದಂತೆ ಹಿಡಿದುಕೊಂಡಿವೆ.
18 : ಅದರ ಸೀನಿನ ತುಂತುರುಗಳು ಥಳಥಳಿಸುತ್ತವೆ
ಅದರ ಕಣ್ಣುಗಳು ಅರುಣನೇತ್ರಕ್ಕೆ
ಸಮಾನವಾಗಿವೆ.
19 : ಅದರ ಬಾಯಿಯೊಳಗಿಂದ ಕೊಳ್ಳಿಗಳು ಹೊರ
ಬರುತ್ತವೆ
ಅದರಿಂದ ಬೆಂಕಿಕಿಡಿಗಳು ಹಾರಿ ಬರುತ್ತವೆ.
20 : ಹುಲ್ಲುಹಾಕಿ ಕಾಸಿದ ಕೊಪ್ಪರಿಗೆಯಿಂದಲೋ
ಎಂಬಂತೆ
ಅದರ ಮೂಗಿನ ಹೊಳ್ಳೆಗಳಿಂದ ಹೊಗೆ
ಹಾಯುತ್ತದೆ.
21 : ಇದ್ದಿಲನು ಹೊತ್ತಿಸಲು ಅದರ ಉಸಿರೇ ಸಾಕು
ಅದರ ಬಾಯಿಂದ ಹೊರಹೊಮ್ಮುವುದು
ಜ್ವಾಲೆಯು.
22 : ಅದರ ಬಲ ನೆಲೆಗೊಂಡಿದೆ ಕುತ್ತಿಗೆಯಲಿ
ಭಯವು ತಾಂಡವಾಡುತ್ತದೆ ಅದರ
ಮುಂಗಡೆಯಲಿ.
23 : ಅಂಟಿಕೊಂಡಿದೆ ಅದರ ಮಾಂಸದ ಮಡಿಕೆಗಳು
ಗಟ್ಟಿಯಾಗಿ
ಅದರ ಮಾಂಸಖಂಡ ನಿಬಿಡವಾಗಿ.
24 : ಅದರ ಹೃದಯ ಬಂಡೆಯಂತೆ
ಅದು ಗಟ್ಟಿ, ಬೀಸುವ ಕೆಳಗಲ್ಲಿನಂತೆ.
25 : ಬಲಿಷ್ಠರೂ ಭಯಪಡುತ್ತಾರೆ ಅದು ಎದ್ದರೆ
ಭಯಭ್ರಾಂತರಾಗಿ ತತ್ತರಿಸುತ್ತಾರೆ ಅದು
ಬಡಿದರೆ.
26 : ಕತ್ತಿಯಿಂದ ಹೊಡೆದರೆ ಅದಕ್ಕೇನೂ ಆಗದು
ಭರ್ಜಿ, ಬಾಣ, ಈಟಿಗಳಿಂದ ಏನೂ ಆಗದು.
27 : ಬ್ಬಿಣ ಅದಕ್ಕೆ ಒಣ ಹುಲ್ಲಿನಂತೆ
ಕಂಚು ಅದಕ್ಕೆ ಟೊಳ್ಳು ವ್ಮರದಂತೆ.
28 : ಅದನು ಬಿಲ್ಲು ಬಾಣಗಳಿಂದ ಓಡಿಸಲು
ಅಸಾಧ್ಯ
ಕಣಿವೆಯ ಕಲ್ಲು ಅದಕ್ಕೆ ಹೊಟ್ಟಿಗೆ ಸಮಾನ.
29 : ದೊಣ್ಣೆಗಳು ಅದಕ್ಕೆ ಹುಲ್ಲುಕಡ್ಡಿಯ ಹಾಗೆ
ಅದು ನಗುತ್ತದೆ ಸರ್ರನೆ ಬರುವ ಈಟಿಗೆ.
30 : ಅದರ ಹೊಟ್ಟೆಯ ಅಡಿಭಾಗವು
ಬೋಕಿಬಿಲ್ಲೆಗಳಂತೆ ಚೂಪು
ಹಲಿವೆಯ ಹಾಗೆ ಕೆಸರಿನ ಮೇಲೆ ಮೈ
ಚಾಚಿಕೊಂಡಿರುವುದು.
31 : ಜಲನಿಧಿಯನು ಅದು ಕುದಿಸುತ್ತದೆ ಹಂಡೆಯ
ನೀರಿನಂತೆ
ಸಮುದ್ರವನು ಕಲಕಿಸುತ್ತದೆ ತೈಲದ
ಕುಡಿಕೆಯಂತೆ.
32 : ಸಾಗರಕ್ಕೆ ನೆರೆಬಂತೋ ಎಂಬ ಹಾಗೆ
ಶುಭ್ರಗೊಳಿಸುತ್ತದೆ ತಾನು ಬಂದ
ಹಾದಿಯನ್ನೇ.
33 : ಜಗದಲ್ಲೆಲ್ಲೂ ಸಿಗದು ಇದಕ್ಕೆ ಸಾಟಿ
ಭಯಭೀತಿಯಿಲ್ಲದ್ದು ಈ ಸೃಷ್ಟಿ
34 : ದಿಟ್ಟಿಸಿ ನೋಡುತ್ತದೆ ಘನಪ್ರಾಣಿಗಳನ್ನೆಲ್ಲಾ
ರಾಜನಾಗಿರುತ್ತದೆ ಸೊಕ್ಕಿನ ಮೃಗಗಳಿಗೆಲ್ಲಾ!