1 : ಯೋಬನಿಗೆ ಸರ್ವೇಶ್ವರ ಮತ್ತೆ
ಇಂತೆಂದರು:
2 : “ಸರ್ವಶಕ್ತನೊಡನೆ ವ್ಯಾಜ್ಯವಾಡುವುದನು
ಈಗಲಾದರು ನಿಲ್ಲಿಸುವೆಯಾ?
ದೇವರೊಡನೆ ತರ್ಕಮಾಡುವಂಥ ನೀನು ಉತ್ತರ
ಕೊಡುವೆಯಾ?”
3 : ಆಗ ಯೋಬನು ಸರ್ವೇಶ್ವರಸ್ವಾಮಿಗೆ
ಇಂತೆಂದನು:
4 : “ಅಯ್ಯೋ, ನಾನು ಅಲ್ಪನೇ ಸರಿ
ತಮಗೇನು ಪ್ರತ್ಯುತ್ತರ ಹೇಳಲಿ?
ಬಾಯ ಮೇಲೆ ಕೈಯಿಡುವೆ ಮೌನತಾಳಿ.
5 : ಒಮ್ಮೆ ಮಾತಾಡಿದೆ, ಮತ್ತೆ ಮಾತಾಡೆನು
ಹೌದು, ಇನ್ನೊಮ್ಮೆ ಮಾತಾಡಿದೆ, ಹೆಚ್ಚು
ಮಾತಾಡೆನು.”
6 : ಸರ್ವೇಶ್ವರ ಬಿರುಗಾಳಿಯೊಳಗಿಂದ
ಯೋಬನಿಗೆ ಕೊಟ್ಟ ಪ್ರತ್ಯುತ್ತರವಿದು:
7 : “ಶೂರನಂತೆ ನಡುಕಟ್ಟಿಕೊಂಡು
ನನ್ನ ಪ್ರಶ್ನೆಗೆ ಉತ್ತರ ಕೊಡು:
8 : ಏನು, ನನ್ನ ನಿರ್ಣಯವನ್ನು ನೀನು
ಖಂಡಿಸುತ್ತೀಯೋ?
ನೀನು ನಿರ್ದೋಷಿಯೆನಿಸಿಕೊಳ್ಳಲು
ನನ್ನನ್ನು ದೋಷಿಯನ್ನಾಗಿಸುತ್ತೀಯೋ?
9 : ದೇವರಾದ ನನಗಿರುವಂಥ ಭುಜಬಲ
ನಿನಗಿದೆಯೋ?
ನನ್ನ ಧ್ವನಿಗೆ ಸಮನಾಗಿ ನೀನು
ಗುಡುಗಬಲ್ಲೆಯೋ?
10 : ಮಹಿಮೆ ಘನತೆಗಳಿಂದ ಅಲಂಕರಿಸಿಕೊ!
ಗೌರವ ಪ್ರಭಾವಗಳನು ಧರಿಸಿಕೊ!
11 : ನಿನ್ನ ಕಡುಕೋಪವನು ಎಲ್ಲೆಡೆಯೂ ಹರಡಿಸು
ಕಣ್ಣಿಟ್ಟು ಗರ್ವಿಷ್ಠರೆಲ್ಲರನು ತಗ್ಗಿಸು.
12 : ಹೌದು, ಕಣ್ಣಿಟ್ಟು ಗರ್ವಿಷ್ಠರೆಲ್ಲರನು ಕುಗ್ಗಿಸು
ದುಷ್ಟರನು ನಿಂತಲ್ಲೇ ತುಳಿದುಬಿಡು.
13 : ಅವರೆಲ್ಲರನು ದೂಳಿನಲ್ಲಿ ಒಟ್ಟಿಗೆ ಅಡಗಿಸಿಬಿಡು
ಅವರ ಮುಖಕ್ಕೆ ಅಧೋಲೋಕದಲಿ
ಮುಸುಕುಹಾಕು.
14 : ಆಗ ನಿನ್ನ ಬಲ ನಿನ್ನನ್ನು ರಕ್ಷಿಸಬಲ್ಲದೆಂದು
ನಾನೇ ಒಪ್ಪಿಕೊಳ್ಳುವೆನು.
15 : ಸೃಷ್ಟಿಮಾಡಿದೆನು ನೀರಾನೆಯನು ನಿನ್ನ ಹಾಗೆ
ಅದು ಹುಲ್ಲನು ಮೇಯುತ್ತದೆ ಎತ್ತಿನ ಹಾಗೆ.
16 : ಅದರ ಬಲ ಇರುವುದು ಸೊಂಟದಲಿ
ಅದರ ತ್ರಾಣ ಹೊಟ್ಟೆಯ ನರಗಳಲಿ.
17 : ಬಾಲವನ್ನು ಬಾಗಿಸುತ್ತದೆ ದೇವದಾರು
ಮರದಂತೆ
ಅದರ ನರಗಳೋ ಹೆಣೆದುಕೊಂಡಿವೆ.
18 : ಅದರ ಮೂಳೆಗಳಿವೆ ಕಂಚಿನ ನಳಿಕೆಗಳಂತೆ
ಅದರ ಎಲುಬುಗಳಿವೆ ಕಬ್ಬಿಣದ ಹಾರೆಗಳಂತೆ.
19 : ದೈವ ಸೃಷ್ಟಿಗಳಲ್ಲಿ ಅದು ಮುಖ್ಯವಾದುದು
ಸೃಷ್ಟಿಕರ್ತನು ಅದಕ್ಕೆ
ಕೊಟ್ಟಿರುವನು ಕೋರೆಹಲ್ಲಿನ ಖಡ್ಗವನ್ನು.
20 : ಅದಕ್ಕೆ ಮೇವು ಕೊಡುತ್ತವೆ ಬೆಟ್ಟಗುಡ್ಡಗಳು
ಅಲ್ಲಿ ಅಲೆದಾಡುತ್ತಿರುತ್ತವೆ ಕಾಡು ಮೃಗಗಳು.
21 : ಅದು ಮಲಗುತ್ತದೆ ತಾವರೆ ಗಿಡಗಳಡಿಯಲಿ
ವಿಶ್ರಮಿಸುತ್ತದೆ ಆಪಿನ ಮರೆಯಲಿ,
ಕೆಸರು ಭೂಮಿಯಲಿ.
22 : ಅದಕ್ಕೆ ನೆರಳನ್ನೀಯುತ್ತವೆ ತಾವರೆ ಎಲೆಗಳು
ಅದರ ಸುತ್ತಲಿರುತ್ತವೆ ನದಿಯ
ನೀರವಂಜಿಗಳು.
23 : ಹೊಳೆ ಉಕ್ಕಿ ಬಂದರೂ ಅದು ಹೆದರುವುದಿಲ್ಲ
ನೋಡು
ಜೋರ್ಡನ್ ನದಿ ಅದರ ಬಾಯೊಳಗೆ
ನುಗ್ಗಿದರೂ ಧೈರ್ಯದಿಂದಿರುವುದು!
24 : ಅದು ನೋಡುವಾಗ ಯಾವನಾದರು ಅದನು
ಹಿಡಿಯಬಲ್ಲನೆ?
ಗಾಳದಿಂದ ಯಾವನಾದರು ಅದರ ಮೂಗನು
ಚುಚ್ಚಬಲ್ಲನೆ?”