1 : “ಕಾಡುಮೇಕೆ ಈಯುವ ವೇಳೆಯನು
ತಿಳಿದಿರುವೆಯಾ?
ಹುಲ್ಲೆಗಳ ಹೆರಿಗೆಯನು ಗ್ರಹಿಸಿರುವೆಯಾ?
2 : ಎಣಿಸಿರುವೆಯಾ ಅವು ಗರ್ಭ ಹೊರುವ
ತಿಂಗಳನು?
ಗೊತ್ತುಹಚ್ಚಿರುವೆಯಾ ಅವು ಈಯುವ
ವೇಳೆಯನು?
3 : ಅವು ಬಗ್ಗಿ ಮರಿಹಾಕುತ್ತವೆ
ಒಡನೆಯೆ ವೇದನೆಯನು ಮರೆತುಬಿಡುತ್ತವೆ.
4 : ಅವುಗಳ ಮರಿಗಳು ಪುಷ್ಟಿಯಾಗಿ ಬಯಲಿನಲ್ಲಿ
ಬೆಳೆಯುತ್ತವೆ
ತಾಯಿಯನ್ನು ಅಗಲಿದ ಬಳಿಕ ಅವು ಮರಳಿ
ಬರುವುದಿಲ್ಲ.
5 : ಕಾಡುಕತ್ತೆಗೆ ಸ್ವಾತಂತ್ರ್ಯವನು ಕೊಟ್ಟವರಾರು?
ಅದರ ಕಟ್ಟನು ಬಿಚ್ಚಿದವರಾರು?
6 : ಅದಕ್ಕೆ ಅಡವಿಯನೆ ಮನೆಯನ್ನಾಗಿಸಿದವನು
ನಾನು
ಸವಳುಬಯಲನೇ ಅದರ ನಿವಾಸವಾಗಿಸಿದವನು
ನಾನು.
7 : ಅದು ಧಿಕ್ಕರಿಸುತ್ತದೆ ಊರಗದ್ದಲವನು
ಅದು ಕೇಳಿದ್ದಿಲ್ಲ ಓಡಿಸುವವನ ಕೂಗನು.
8 : ಎತ್ತರವಾದ ಬೆಟ್ಟಗಳೇ ಅದರ ಕಾವಲು
ಹಸಿರೆಲ್ಲಿದ್ದರೂ ಅದುವೆ ಅದರಸುವ ಮೇವು.
9 : ಕಾಡುಕೋಣ ಒಪ್ಪಿದೆಯೇ ನಿನಗೆ
ಸೇವೆಮಾಡಲು?
ನಿನ್ನ ಗೋದಲಿಯ ಹತ್ತಿರವೇ ತಂಗಿರಲು?
10 : ಕಟ್ಟಬಲ್ಲೆಯಾ ಅದನು ಹಗ್ಗದಿಂದ ನೇಗಿಲ
ಸಾಲಿಗೆ
ಕುಂಟೆ ಎಳೆಯಲು ಅದು ನಿನ್ನ ಹಿಂದೆ?
11 : ಬಲವಿದೆಯೆಂದು ಅದರಲಿ
ನಂಬಿಕೆಯಿಡುವೆಯಾ?
ಬಲಿಷ್ಠಕಾರ್ಯಗಳನು ಅದಕ್ಕೆ
ಒಪ್ಪಿಸಿಬಿಡುವೆಯಾ?
12 : ಬೆಳೆಯನು ಅದು ನಿನಗೆ ಹೊತ್ತು ತರುವುದೆಂದು
ನಂಬುವೆಯಾ?
ಕಣದಲಿ ನಿನಗೆ ಕಾಳನು ಕೂಡಿಸುವುದೆಂಬ
ನಂಬಿಕೆ ನಿನvದೆಯಾ?
13 : ಉಷ್ಟ್ರಪಕ್ಷಿ ಲವಲವಿಕೆಯಿಂದ ರೆಕ್ಕೆ
ಬಡಿಯುತ್ತದೆ.
ಆದರೆ ಪ್ರೀತಿವ್ಯಾಮೋಹವಿದೆಯೆ ಅದರ ರೆಕ್ಕೆ
ಗರಿಗಳಿಗೆ?
14 : ಮೊಟ್ಟೆಗಳನು ಭೂಮಿಯಮೇಲೆ
ಬಿಟ್ಟುಬಿಡುವಾ ಪಕ್ಷಿ,
ಕೇವಲ ದೂಳಿನಿಂದ ಅವಕ್ಕೆ ಕಾವು ಕೊಡುತ್ತದೆ,
ಅಲ್ಲವೆ?
15 : ಆ ಮೊಟ್ಟೆಗಳನು ಜನರು ಕಾಲಿನಿಂದ
ಮೆಟ್ಟಿಯಾರು
ಕಾಡುಮೃಗ ಅವುಗಳನು ತುಳಿದೀತು
ಎಂಬ ಯೋಚನೆ ಅದನು ಕಾಡದು.
16 : ತನ್ನ ಮರಿ ತನ್ನದೇ ಅಲ್ಲ ಎಂಬಷ್ಟು ಕ್ರೂರತೆ
ಅದರದು
ತನ್ನ ಹೆರಿಗೆ ನಿಷ್ಫಲವಾಯಿತೆಂಬ ಸಂಕಟ
ಅದಕ್ಕಿರದು.
17 : ಅದಕ್ಕೆ ನಾನು ಕೊಡಲಿಲ್ಲ ಜ್ಞಾನವನು
ದಯಪಾಲಿಸಲಿಲ್ಲ ಗ್ರಹಿಕೆಯನು.
18 : ಆದರೂ ಅದು ರೆಕ್ಕೆ ಬಡಿದು
ದೌಡಾಯಿಸುವಾಗಲಂತು
ಕುದುರೆ ರಾಹುತರನೂ ಅಣಕಿಸಬಲ್ಲದು.
19 : ಕುದುರೆಗೆ ಶಕ್ತಿಕೊಟ್ಟವನು ನೀನೋ?
ಅದರ ಕೊರಳಿಗೆ ಜುಟ್ಟುಗುಡುಗನ್ನು
ಕಟ್ಟಿದವನು ನೀನೋ?
20 : ಮಿಡತೆಯ ಹಾಗೆ ಅದು ಜಿಗಿಯಮಾಡಿದವನು
ನೀನೋ?
ಅದರ ಕೆನೆತದ ಪ್ರಭಾವ ಭೀತಿಯನು ತರುತ್ತದೆ,
ನೋಡು!
21 : ನೆಲವನು ಕೆರೆಯುತ್ತಾ, ತನ್ನ ಶಕ್ತಿಗಾಗಿ
ಹಿಗ್ಗುತ್ತಾ
ಸನ್ನದ್ಧ ಸೈನ್ಯವನು ಇದಿರಿಸುತ್ತಾ ನುಗ್ಗುತ್ತದೆ
ನೋಡು!
22 : ಖಡ್ಗಕ್ಕೆ ಹಿಂದೆಗೆಯದೆ, ಕಳವಳಗೊಳ್ಳದೆ
ಭಯಭೀತಿಗೆ ಹೆದರದೆ ನಗುತ್ತದೆ!
23 : ಅದರ ಮೇಲಿನ ಬತ್ತಳಿಕೆ ಜಣಜಣಿಸುತ್ತದೆ
ಈಟಿ ಭರ್ಜಿಗಳು ಥಳಥಳಿಸುತ್ತವೆ.
24 : ಕಹಳೆಯ ನಾದಕೇಳಿ ನಿಲ್ಲದದು ಸುಮ್ಮನೆ
ಉದ್ರೇಕಗೊಂಡು ದೌಡಾಯಿಸುತ್ತದೆ
ವೇಗವನೇ ನುಂಗುವಂತೆ.
25 : ರಣಕಹಳೆ ಮೊಳಗಿದಾಗಲೆ ಕೆನೆಯುತ್ತದೆ
ಕಾಳಗ, ಆರ್ಭಟ, ದಳಪತಿಗಳ ಗರ್ಜನೆ
ಇವುಗಳನ್ನೆಲ್ಲಾ ದೂರದಿಂದಲೆ ಮೂಸುತ್ತದೆ.
26 : ಗಿಡುಗವು ರೆಕ್ಕೆ ಹರಡುವುದನು
ದಕ್ಷಿಣದಿಕ್ಕಿಗೆ ಹಾರಿ ವಸಲೆ ಹೋಗುವುದನು
ನಿನ್ನಿಂದ ಕಲಿತದೆಂತು?
27 : ರಣಹದ್ದಿಗೆ ನಿನ್ನಪ್ಪಣೆ ಬೇಕೋ ಮೇಲೆ
ಹಾರುವುದಕೆ?
ನಿನ್ನ ಸಮ್ಮತಿ ಬೇಕೋ ಉನ್ನತ ಸ್ಥಳದಲ್ಲಿ
ಗೂಡು ಕಟ್ಟುವುದಕೆ?
28 : ಅದು ವಾಸಮಾಡುತ್ತದೆ ಕಲ್ಲು ಬಂಡೆಮೇಲೆ
ಅದು ತಂಗುತ್ತದೆ ಶಿಲಾಶಿಖರದ ದುರ್ಗ
ದೊಳಗೆ.
29 : ಬೇಟೆಯನು ನೋಡುತ್ತದೆ ಅಲ್ಲಿಂದಲೆ
ಅದನ್ನು ಕಂಡು ಹಿಡಿಯುತ್ತದೆ ದೂರದಿಂದಲೆ.
30 : ಹಣ ಬಿದ್ದಲ್ಲಿ ರಣಹದ್ದು
ಅದರ ಮರಿಗಳೂ ಹೀರುತ್ತವೆ ರಕ್ತವನು.”