1 : ಬಿರುಗಾಳಿಯೊಳಗಿಂದ ಸರ್ವೇಶ್ವರ
ಯೋಬನಿಗೆ ಕೊಟ್ಟ
ಪ್ರತ್ಯುತ್ತರ ಇದು:
2 : “ಅಜ್ಞಾನದ ಮಾತುಗಳನ್ನಾಡಿ
ಸತ್ಯಾಲೋಚನೆಯನು ಮಂಕುಮಾಡುವ
ನೀನಾರು?
3 : ಶೂರನಂತೆ ನಡುಕಟ್ಟಿ ನಿಲ್ಲು
ನಾನು ಹಾಕುವ ಪ್ರಶ್ನೆಗೆ ಉತ್ತರ ನೀಡು:
4 : ನಾನು ಭೂಮಿಗೆ ಅಸ್ತಿವಾರ ಹಾಕಿದಾಗ
ನೀನೆಲ್ಲಿದ್ದೆ?
ಉತ್ತರ ಕೊಡು, ನೀನು ಅಷ್ಟು
ಜ್ಞಾನಿಯಾಗಿದ್ದರೆ.
5 : ಅದರಳತೆಯನ್ನು ಗೊತ್ತುಮಾಡಿದವನಾರೆಂದು
ನಿನಗೆ ತಿಳಿದಿದೆಯೆ?
ಅದರ ಮೇಲೆ ನೂಲು ಹಿಡಿದವನಾರೆಂದು ನಿನಗೆ
ಗೊತ್ತಿದೆಯೆ?
6 : ಉದಯ ನಕ್ಷತ್ರಗಳ ಜಯಕಾರದ ನಡುವೆ
ದೇವದೂತರೆಲ್ಲರ ಆನಂದಘೋಷಣೆಯ
ಮಧ್ಯೆ.
7 : ಭೂಮಿಗೆ ಮೂಲೆಗಲ್ಲನು ಹಾಕಿದವನಾರು?
ಅದರ ಅಡಿಗಲ್ಲು ಯಾವುದರ ಮೇಲೆ
ನಿಂತಿದೆ?”
8 : “ಭೂಗರ್ಭವನ್ನು ಭೇದಿಸಿಕೊಂಡು ಬಂದ
ಸಮುದ್ರವನು
ದ್ವಾರಗಳಿಂದ ಬಂಧಿಸಿ ಮುಚ್ಚಿದವನಾರು?
9 : ಅದಕ್ಕೆ ಮೋಡಗಳನು ತೊಡಿಸಿ,
ಕಾರ್ಗತ್ತಲನು ಉಡಿಸಿದವನು ಯಾರು?
10 : ಅದಕ್ಕೆ ಸರಹದ್ದನು ನಿಯಮಿಸಿ
ಕದಗಳನೂ ಅಗುಳಿಗಳನೂ ಇಟ್ಟವನಾರು?
11 : ‘ಇಲ್ಲಿಯತನಕ ಬರಬಹುದು, ಇದನು ಮೀರಿ
ಬರಕೂಡದು’
‘ಮೊರೆವ ನಿನ್ನ ತೆರೆಗೆ ಇಲ್ಲಿಗೇ ತಡೆ’ ಎಂದು
ವಿಧಿಸಿದವನು ನಾನು.
12 : ನಿನ್ನ ಜೀವಮಾನದಲಿ ಎಂದಾದರೂ
‘ಅರುಣೋದಯವಾಗಲಿ’ ಎಂದು
ಆಜ್ಞಾಪಿಸಿರುವೆಯಾ?
13 : ‘ಧರಣಿಯ ಅಂಚುಗಳನು ಹಿಡಿದು ದುರುಳರನ್ನು
ಅದರೊಳಗಿಂದ ಒದರಿಬಿಡು’ ಎಂದು ಅದಕ್ಕೆ
ಅಪ್ಪಣೆಮಾಡಿದೆಯಾ?
14 : ಮುದ್ರೆಒತ್ತಿದ ಜೇಡಿಮಣ್ಣಿನಂತೆ ಭೂಮಿ
ರೂಪತಾಳುತ್ತದೆ
ಅದು ನೆರಿಗೆ ಕಟ್ಟಿದ ಉಡಿಗೆಯಂತೆ
ಕಾಣಿಸುತ್ತದೆ.
15 : ದುರುಳರಿಂದ ಬೆಳಕನು
ಹಿಂತೆಗೆದುಕೊಳ್ಳಲಾಗುವುದು
ಅವರು ಎತ್ತಿದ ಕೈಯನು ಮುರಿಯಲಾಗುವುದು.
16 : ನೀನೆಂದಾದರು ಸಮುದ್ರದ ಬುಗ್ಗೆಗಳೊಳಗೆ
ಸೇರಿದ್ದೆಯೋ?
ಸಾಗರದ ತಳಹದಿಯಲ್ಲಿ
ತಿರುಗಾಡಿರುವೆಯೋ?
17 : ಮರಣದ ದ್ವಾರಗಳು ನಿನಗೆ
ಗೋಚರವಾಗಿರುವುವೋ?
ಘೋರಾಂಧಕಾರದ ಕದಗಳನ್ನು ನೀನು
ಕಂಡಿರುವೆಯೋ?
18 : ಭೂವಿಸ್ತಾರವನ್ನು ಗ್ರಹಿಸಿರುವೆಯೋ? ಇದೆಲ್ಲವು ನಿನಗೆ ತಿಳಿದಿದ್ದರೆ ಹೇಳು, ನೋಡೋಣ!
19 : ಬೆಳಕಿನ ನಿವಾಸಕ್ಕೆ ಹೋಗುವ ಮಾರ್ಗವೆಲ್ಲಿ? ಕತ್ತಲು ವಾಸಮಾಡುವ ಸ್ಥಳವೆಲ್ಲಿ?
20 : ನೀನು ಅವುಗಳನು ಅವುಗಳ ಪ್ರಾಂತ್ಯಕ್ಕೆ ಕರೆದೊಯ್ಯಬಲ್ಲೆಯಾ? ಅವುಗಳ ನಿವಾಸಕೆ ಹಾದಿಯನು ಕಂಡುಹಿಡಿಯಬಲ್ಲೆಯಾ?
21 : ಇದನ್ನು ಬಲ್ಲೆಯಾದರೆ ನೀನು ಆಗಲೇ
ಹುಟ್ಟಿದ್ದಿರಬೇಕು
ಮತ್ತು ಈಗ ಬಹಳ ವೃದ್ಧನಾಗಿರಬೇಕು!
22 : ಹಿಮದ ಭಂಡಾರವನು ಹೊಕ್ಕಿರುವೆಯಾ?
ಕಲ್ಮಳೆಯ ಬೊಕ್ಕಸವನು ನೋಡಿರುವೆಯಾ?
23 : ಇಕ್ಕಟ್ಟಿನ ಕಾಲಕ್ಕಾಗಿ ಅವುಗಳನು ನಾನು
ಇಟ್ಟಿರುವೆನು
ಯುದ್ಧಕದನಗಳ ದಿನಗಳಿಗಾಗಿ ಅವುಗಳನು
ಕಾದಿಟ್ಟಿರುವೆನು.
24 : ಬೆಳಕು ಏರಿಬರುವ ಜಾಗವೆಲ್ಲಿ
ಬಿಸಿಗಾಳಿ ಬೀಸಿಬರುವ ಮಾರ್ಗವೆಲ್ಲಿ?
25 : ಮನುಜರಿಲ್ಲದ ಕಾಡಿನಲ್ಲೂ ನಿರ್ಜನ
ಪ್ರದೇಶದಲ್ಲೂ
ಮಳೆಯನು ಹೊಯ್ದು,
26 : ಹಾಳುಬೀಳಾದ ಭೂಮಿಯನು
ತೋಯಿಸಲೆಂದು
ಪಚ್ಚೆಪಸಿರಾದ ಹುಲ್ಲನು ಬೆಳೆಯಿಸಲೆಂದು,
27 : ವೃಷ್ಟಿಯ ಪ್ರವಾಹಕ್ಕೆ ಕಾಲುವೆಯನು
ಕಡಿದವರಾರು?
ಗರ್ಜಿಸುವ ಸಿಡಿಲಿಗೆ ದಾರಿಯನು
ಮಾಡಿದವರಾರು?
28 : ಮಳೆಗೆ ತಂದೆಯೊಬ್ಬನಿದ್ದಾನೆಯೆ?
ಮಂಜಿನ ಹನಿಗೆ ಹೆತ್ತವಳಿದ್ದಾಳೆಯೆ?
29 : ಹಿಮಗಡ್ಡೆ ಹೊರಡುವುದು ಯಾರ ಗರ್ಭದಿಂದ?
ಆಕಾಶದ ಇಬ್ಬನಿ ಜನಿಸುವುದು ಯಾವ
ತಾಯಿಂದ?
30 : ಕಲ್ಲಿನಂತೆ ನೀರು ಗಟ್ಟಿಯಾಗುತ್ತದೆ
ಸಾಗರದ ಮೇಲ್ಭಾಗ ಹೆಪ್ಪುಗಟ್ಟುತ್ತದೆ.
31 : ಕೃತ್ತಿಕೆಯ ಸರಪಣಿಯನು ನೀನು ಬಿಗಿಯ
ಬಲ್ಲೆಯಾ?
ಮೃಗಶಿರದ ಸಂಕೋಲೆಯನು ಬಿಚ್ಚಬಲ್ಲೆಯಾ?
32 : ಆಯಾಯ ಕಾಲಕ್ಕೆ ನಕ್ಷತ್ರರಾಶಿಗಳನು
ಬರಮಾಡುವೆಯಾ?
ಸಪ್ತರ್ಷಿತಾರೆಗಳನು ಪರಿವಾರದೊಡನೆ
ನಡೆಸುವೆಯಾ?
33 : ಖಗೋಳದ ನಿಯಮಗಳನ್ನು ತಿಳಿದಿರುವೆಯಾ?
ಅದರ ಆಳ್ವಿಕೆಯನು ಇಳೆಯೊಳು
ಸ್ಥಾಪಿಸಿರುವೆಯಾ?
34 : ನಿನ್ನಾಜ್ಞೆ ಮೋಡ ಮುಟ್ಟಿದ ಮಾತ್ರಕೆ
ಹೇರಳವಾದ ನೀರು ನಿನ್ನನು ಆವರಿಸುವುದೊ?
35 : ನಿನ್ನ ಅಪ್ಪಣೆಯಂತೆ ಸಿಡಿಲುಗಳು ಹೋಗಿಬಂದು
‘ಇದೋ ಬಂದಿದ್ದೇವೆ’ ಎಂದು ನಿನಗೆ
ಹೇಳುತ್ತವೆಯೊ?
36 : ಜ್ಞಾನವನು ದಯಪಾಲಿಸಿದವನಾರು ಇಬಿಸ್
ಪಕ್ಷಿಗೆ?
ವಿವೇಕವನು ಅನುಗ್ರಹಿಸಿದವನಾರು
ಕೋಳಿಹುಂಜಕ್ಕೆ
37 : ಯಾರಿಗಿದೆ ಮೋಡಗಳನು ಲೆಕ್ಕಿಸುವ ಶಕ್ತಿ?
ಆಕಾಶದಲ್ಲಿನ ಬುದ್ದಲಿಗಳನು
ಮೊಗಚಿಹಾಕುವ ಬುದ್ದಿಶಕ್ತಿ?
38 : ದೂಳುಮಣ್ಣನು ಒತ್ತಟ್ಟಿಗೆ
ಸೇರಿಸಬಲ್ಲವನಾರು?
ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆ
ಮಾಡಬಲ್ಲವನಾರು?
39 : ಗುಹೆಯಲ್ಲಿ ಮಲಗಿರುವ ಸಿಂಹಕೆ
ಬೇಟೆಯಾಡಿ ಊಟ ಒದಗಿಸಬಲ್ಲೆಯಾ ನೀನು?
40 : ಪೊದೆಯಲ್ಲಿ ಹೊಂಚುಕೂತಿರುವ
ಯುವಸಿಂಹಕೆ
ಹಸಿವನು ನೀಗಿಸಬಲ್ಲೆಯಾ ನೀನು?
41 : ಆಹಾರವನು ಒದಗಿಸುವವರಾರು ತಾಯಿ
ಕಾಗೆಗೆ
ಅದರ ಹಸಿದ ಮರಿಗಳು ಕೊಕ್ಕೆತ್ತಿ
ದೇವರಿಗೆ ಮೊರೆಯಿಡುವಾಗ?