Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೋಬ


1 : “ಇದನ್ನು ನೋಡಿದಾಗ ನನ್ನ ಎದೆ ತತ್ತರಗೊಳ್ಳುತ್ತದೆ. ನನ್ನ ಗುಂಡಿಗೆ ಎದೆಬಿಟ್ಟು ಮಿಡಿಯುತ್ತದೆ.
2 : ದೇವರ ಧ್ವನಿಯ ಗರ್ಜನೆಯನು ಕಿವಿಗೊಟ್ಟು ಕೇಳು ಆತನ ಬಾಯಿಂದ ಹೊರಡುವ ಮಾತನು ಆಲಿಸು.
3 : ಅದನ್ನು ಗಗನಮಂಡಲದೊಳು ಹರಡುತ್ತಾನೆ ಜಗದ ಅಂಚಿನ ತನಕ ಮಿಂಚು ಹೊಳೆಯುವಂತೆ ಮಾಡುತ್ತಾನೆ.
4 : ಮಿಂಚಿನ ಬಳಿಕ ಕೇಳಿಬರುವುದು ಗರ್ಜನೆಯ ಶಬ್ದ ಗುಡುಗಿನಂಥ ಗಂಭೀರವಾದ ಆತನ ಕಂಠನಾದ ಆತನ ಸ್ವರ ಕೇಳುವಾಗ ನಿಲ್ಲದು ಮಿಂಚಿನ ಹೊಳೆತ.
5 : ದೇವರಕಂಠ ತನ್ನ ಅದ್ಭುತಕಾರ್ಯಗಳನು ಘೋಷಿಸುತ್ತದೆ ನಮ್ಮಿಂದರಿಯಲಾಗದ ಮಹಾಕಾರ್ಯಗಳನು ಎಸಗುತ್ತಾನೆ.
6 : ಹಿಮಕ್ಕೆ, ‘ಹದವಾಗಿ ಭೂಮಿಗೆ ಬೀಳು’ ಎನ್ನುತ್ತಾನೆ ಭಾರಿಮಳೆಗೆ, ‘ರಭಸದಿಂದ ಸುರಿ’ ಎನ್ನುತ್ತಾನೆ.
7 : ಹೀಗೆ ಜನರೆಲ್ಲರು ಕೆಲಸ ನಿಲ್ಲುವಂತೆ ಮಾಡುತ್ತಾನೆ ತನ್ನ ಕಾರ್ಯವನ ಅರಿಯುವಂತೆ ಮಾಡುತ್ತಾನೆ.
8 : ಆತ ಮೃಗಗಳು ಗುಹೆ ಸೇರುತ್ತವೆ ಪ್ರಾಣಿಗಳು ಬಿಲಗಳಲೇ ತಂಗುತ್ತವೆ.
9 : ದೇವರ ಭಂಡಾರದಿಂದ ಬಿರುಗಾಳಿ ಬೀಸುತ್ತದೆ ಉತ್ತರ ದಿಕ್ಕಿನಿಂದ ಚಳಿ ಹೊರಬರುತ್ತದೆ.
10 : ದೇವರ ಉಸಿರಿನಿಂದ ನೀರು ಹಿಮಗಡ್ಡೆಯಾಗುತ್ತದೆ ಸವಿಸ್ತಾರದ ಜಲವು ಕೂಡ ಮಂಜುಗಡ್ಡೆಯಾಗುತ್ತದೆ.
11 : ಮೋಡಗಳ ಮೇಲೆ ಮಂಜನು ಹೇರುತ್ತಾನೆ ಮೇಘಮಂಡಲವು ಆತನ ಮಿಂಚನು ಹರಡುತ್ತದೆ.
12 : ಜಗದೊಳೆಲ್ಲ ಆತ ವಿಧಿಸಿದಂತೆ ಜರುಗಬೇಕೆಂದು ಸುತ್ತಮುತ್ತಲು ಸಿಡಿಲುಗಳು ಸಂಚರಿಸುವಂತೆ ಮಾಡುತ್ತಾನೆ.
13 : ಜನರ ಶಿಕ್ಷಣಕ್ಕೆ, ಧರೆಯ ಹಿತಕೆ ತಮ್ಮ ಪ್ರೀತಿಯನ್ನು ತೋರುವುದಕೆ ಇದೆಲ್ಲ ಆಗುವಂತೆ ಮಾಡುತ್ತಾನೆ.
14 : ಯೋಬನೇ, ಈ ಮಾತುಗಳನು ಕೇಳು ದೇವರ ಅದ್ಭುತಗಳನು ಮೌನದಿಂದ ಧ್ಯಾನಿಸು:
15 : ದೇವರು ಹೇಗೆ ಮೋಡಗಳನು ನಿಯಂತ್ರಿಸುತ್ತಾನೆಂದು ಅರಿತಿರುವೆಯಾ? ಅವುಗಳಿಂದ ಸಿಡಿಲು ಹೇಗೆ ಹೊಳೆದು ಬರುತ್ತದೆಂದು ತಿಳಿದಿರುವೆಯಾ?
16 : ಮೋಡಗಳ ತೇಲಾಟವನು ಬಲ್ಲೆಯಾ? ಜ್ಞಾನಪೂರ್ಣನಾ ಅದ್ಭುತಕಾರ್ಯಗಳನು ಗ್ರಹಿಸಿರುವೆಯಾ?
17 : ತೆಂಕಣಗಾಳಿಯಿಂದ ಪೊಡವಿ ತಪಿಸಿ ಸ್ತಬ್ದವಿರುವಾಗಲೆ ನಿನ್ನ ಬಟ್ಟೆಬರೆ ಬಿಸಿಯಿರುವಾಗಲೆ ಆ ಅರಿವು ನಿನಗಿರುತ್ತದೆಯೇ?
18 : ದೇವರಂತೆ ಆಕಾಶಮಂಡಲವನು ನಿನ್ನಿಂದ ನಿರ್ಮಿಸಲಾದೀತೆ? ಎರಕ ಹೊಯ್ದ ಕನ್ನಡಿಯಂತೆ ಅದನು ಗಟ್ಟಿಮಾಡಲಾದೀತೆ?
19 : ಆತನಿಗೆ ಹೇಳಬೇಕಾದ ಉತ್ತರವನು ನಮಗೆ ತಿಳಿಸು ಅಂಧಕಾರದಲ್ಲಿರುವ ನಮ್ಮಿಂದ ಏನೊಂದನೂ ಹೇಳಲಾಗದು.
20 : ನಾನು ಮಾತಾಡಬೇಕೆಂದು ದೇವರಿಗೆ ಹೇಳಿಕಳಿಸಲಾದೀತೆ? ಹಾಗೆ ಮಾಡುವವನು ತನ್ನನ್ನೆ ನಿರ್ಮೂಲ ಮಾಡಿಕೊಂಡಂತೆ!
21 : ಗಾಳಿಬೀಸಿ ಗಗನವನು ಶುಭ್ರಗೊಳಿಸಲು ಅಲ್ಲಿ ಪ್ರಜ್ವಲಿಸುವ ಬೆಳಕನು ದೃಷ್ಟಿಸಲಾಗದು.
22 : ಉತ್ತರದಿಂದ ಹೊನ್ನಿನ ಹೊಳಪು ಹೊರಡುವುದು ದೇವರು ವಿಸ್ಮಯಕರ ತೇಜಸ್ಸನು ಧರಿಸಿರುವನು.
23 : ಕಂಡುಹಿಡಿಯಲಾಗದು ಇಂಥ ಸರ್ವಶಕ್ತನನು ನಮ್ಮಿಂದ ಶಕ್ತಿಯಲೂ ಸತ್ಯದಲೂ ಪರಮ ಪರಾಕ್ರಮಿ ಆತ ನ್ಯಾಯಪೂರ್ಣನಾದ ಆತ ದಬ್ಬಾಳಿಕೆ ನಡೆಸುವವನಲ್ಲ ನ್ಯಾಯಕ್ಕಾಗಲೀ ಧರ್ಮಕ್ಕಾಗಲೀ ಆತ ಧಕ್ಕೆ ತರುವವನಲ್ಲ.
24 : ಎಂತಲೇ ಜನರಿಗೆ ಆತನಲ್ಲಿದೆ ಭಯಭಕ್ತಿ ತಾವೇ ಜ್ಞಾನಿಗಳೆಂದುಕೊಳ್ಳುವವರಲಿ ದೇವರಿಗಿಲ್ಲ ಲಕ್ಷ್ಯ.”

· © 2017 kannadacatholicbible.org Privacy Policy