Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೋಬ


1 : ಎಲೀಹುವನು ಮತ್ತೆ ಹೀಗೆಂದು ಹೇಳಿದನು:
2 : “ ‘ಸಜ್ಜನನಾಗಿ ಬಾಳಿ ನನಗಾದ ಪ್ರಯೋಜನವೇನು? ಪಾಪರಹಿತನಾಗಿ ಜೀವಿಸಿ ನನಗೆ ಬಂದ ಲಾಭವೇನು’
3 : ಈ ರೀತಿ ನೀನು ನುಡಿಯುವುದು ನ್ಯಾಯವೆಂದು ಊಹಿಸುತ್ತೀಯೋ? ನಿನ್ನ ನೀತಿ ದೇವರ ನೀತಿಗಿಂತ ಮಿಗಿಲಾದುದೆನ್ನುತ್ತೀಯೋ?
4 : ನಾನು ನಿನಗೆ ಉತ್ತರ ಕೊಡುತ್ತೇನೆ ನಿನ್ನ ಮಿತ್ರರಿಗೂ ಪ್ರತ್ಯುತ್ತರ ನೀಡುತ್ತೇನೆ.
5 : ಗಗನ ಮಂಡಲವನು ಕಣ್ಣೆತ್ತಿ ನೋಡು ನಿನಗೂ ಎಷ್ಟೋ ಎತ್ತರವಾದ ಮೇಘ ಮಾರ್ಗವನು ದಿಟ್ಟಿಸಿ ನೋಡು.
6 : ನೀನು ಪಾಪಮಾಡದಿದ್ದರೆ ದೇವರಿಗೇನು ಮಾಡಿದಂತಾಯಿತು? ನಿನ್ನ ದ್ರೋಹಗಳು ಹೆಚ್ಚಿದರೆ ಅವರಿಗಾದ ನಷ್ಟವೇನು?
7 : ನೀನು ಸಜ್ಜನನಾಗಿದ್ದರೆ ಅವರಿಗೇನು ಕೊಟ್ಟಂತಾಯಿತು? ನಿನ್ನ ಕೈಯಿಂದ ಅವರಿಗೆ ದೊರಕಿದ ಲಾಭ ಯಾವುದು?
8 : ನಿನ್ನ ನೀಚತನದಿಂದ ನಿನ್ನಂಥವನಿಗೇ ನಷ್ಟ ನಿನ್ನ ಸಜ್ಜನಿಕೆಯಿಂದ ನರಜನ್ಮದವನಿಗೇ ಲಾಭ.
9 : ಅಪಾರ ಹಿಂಸೆಗಳಿಗೆ ಒಳಪಟ್ಟವರು ಮೊರೆಯಿಡುತ್ತಾರೆ. ಬಲಿಷ್ಠರ ಭುಜಬಲದಿಂದ ಪೀಡಿತರು ಕಿರಿಚಿಕೊಳ್ಳುತ್ತಾರೆ.
10 : ಆದರೆ ‘ನಮ್ಮನ್ನು ಸೃಷ್ಟಿಸಿದ ಕರ್ತನೆಲ್ಲಿ? ಕತ್ತಲಲ್ಲೂ ಕೀರ್ತನೆ ಹಾಡಬಲ್ಲವನೆಲ್ಲಿ?
11 : ಕಾಡುಮೃಗಗಳಿಗಿಂತ ನಮಗೆ ಹೆಚ್ಚು ಜ್ಞಾನವನ್ನೀಯುವವನೆಲ್ಲಿ? ಆಕಾಶದ ಪಕ್ಷಿಗಳಿಗಿಂತ ನಮಗೆ ಹೆಚ್ಚು ಬುದ್ಧಿಕಲಿಸುವನೆಲ್ಲಿ?’ ಎನ್ನುವುದೇ ಇಲ್ಲ.
12 : ಎಂತಲೆ ದುರುಳರ ಸೊಕ್ಕನ್ನು ಮುಂದಿಟ್ಟು ಗೋಳಿಟ್ಟರೂ ದೇವರು ಅವರಿಗೆ ಉತ್ತರ ಕೊಡುವುದಿಲ್ಲ.
13 : ದೇವರು ಪೊಳ್ಳುಮಾತಿಗೆ ಕಿವಿಗೊಡನು ಸರ್ವಶಕ್ತನು ಅದಕ್ಕೆ ಎಂದಿಗೂ ಲಕ್ಷ್ಯಕೊಡನು.
14 : ಇಂತಿರಲು ನೀನು, ‘ಆತ ಕಾಣನು, ನನ್ನ ವ್ಯಾಜ್ಯ ಆತನ ಮುಂದಿದೆ ಆತನಿಗಾಗಿ ಕಾದಿರುವೆ’ ಎಂದುಕೊಂಡರೂ ಆತ ಕೇಳಿಯಾನೆ?
15 : ‘ದೇವರು ಸಿಟ್ಟುಗೊಂಡು ಶಿಕ್ಷಿಸುವುದಿಲ್ಲ ದ್ರೋಹಗಳನ್ನು ಅಷ್ಟಾಗಿ ಗಣನೆಗೆ ತಂದುಕೊಳ್ಳುವುದಿಲ್ಲ’
16 : ಎಂದು ಹೇಳುತ್ತಾ ಯೋಬನು ಬಾಯಿತೆರೆಯುತ್ತಾನೆ ವ್ಯರ್ಥವಾಗಿ ತಿಳುವಳಿಕೆಯಿಲ್ಲದೆ ಮಾತಾಡುತ್ತಾನೆ ಬಹಳವಾಗಿ.”

· © 2017 kannadacatholicbible.org Privacy Policy