1 : ಎಲೀಹುವನು ಮತ್ತೆ ಹೀಗೆಂದನು:
2 : “ಜ್ಞಾನಿಗಳೇ, ನನ್ನ ಮಾತನ್ನು
ಗಮನಿಸಿ:
ಮೇಧಾವಿಗಳೇ, ನನಗೆ ಕಿವಿಗೊಡಿ:
3 : ನಾಲಿಗೆ ಆಹಾರವನು ರುಚಿನೋಡುವಂತೆ
ಕಿವಿ ನುಡಿಮಾತುಗಳನು ವಿವೇಚಿಸುತ್ತದೆ.
4 : ಸರಿಯಾದುದನ್ನೇ ಆಯ್ದುಕೊಳ್ಳೋಣ
ಒಳಿತಾದುದನ್ನು ನಮ್ಮ ನಮ್ಮಲ್ಲೇ
ನಿಶ್ಚಯಿಸಿಕೊಳ್ಳೋಣ.
5 : ಇಂತಿದೆ ಯೋಬನ ವಾದ - ‘ನಾನು ಸತ್ಯವಂತ
ನನಗೆ ದೇವರಿಂದ ನ್ಯಾಯದೊರೆತಿಲ್ಲ.
6 : ನನ್ನಲ್ಲಿ ನ್ಯಾಯವಿದ್ದರೂ
ಸುಳ್ಳುಗಾರನೆನಿಸಿಕೊಂಡಿದ್ದೇನೆ
ನಿರ್ದೋಷಿಯಾಗಿದ್ದರೂ ನನಗೆ ದೇವರ ಪೆಟ್ಟು
ಬಾಣಬಿಟ್ಟಂತಿದೆ.’
7 : ಈ ಯೋಬನಂಥ ಮನುಜನು ಯಾರಿದ್ದಾನೆ?
ಇಗೋ, ದೇವದೂಷಣೆಯನು ನೀರಿನಂತೆ
ಕುಡಿಯುತ್ತಿದ್ದಾನೆ!
8 : ಇವನು ದುರ್ಜನರ ಸಂಗಡ ಸಂಚರಿಸುವವನು
ಕೆಡುಕರ ಸಂಗಡ ನಡೆದಾಡುವವನು.
9 : ದೇವರನು ಪ್ರೀತಿಸಿ ಬಾಳುವುದರಿಂದ
ಪ್ರಯೋಜನವಿಲ್ಲವೆಂಬುದು ಇವನ ವಾದ.
10 : ಹೀಗಿರಲು ಬುದ್ದಿವಂತರೇ, ನನ್ನ ಮಾತುಗಳಿಗೆ
ಕಿವಿಗೊಡಿ
ದೇವರು ಕೆಟ್ಟದ್ದನು ಮಾಡಿಯಾನೆಂಬ
ಯೋಚನೆ ದೂರವಿರಲಿ
ಸರ್ವಶಕ್ತನು ಅನ್ಯಾಯವನು ಎಸಗಿಯಾನೆಂಬ
ಭಾವನೆ ಬಾರದಿರಲಿ.
11 : ದೇವರು ನರನಿಗೆ ಅವನ ಕೃತ್ಯಗಳಿಗೆ ತಕ್ಕಂತೆ
ಪ್ರತಿಫಲವನ್ನೀಯುತ್ತಾನೆ
ಪ್ರತಿಯೊಬ್ಬನು ಅವನವನ ಕರ್ಮಕ್ಕೆ ತಕ್ಕಂತೆ
ಅನುಭವಿಸಮಾಡುತ್ತಾನೆ.
12 : ಹೌದು, ದೇವರು ಎಂದಿಗೂ ಕೆಡುಕನು ಮಾಡನು
ಸರ್ವಶಕ್ತನು ಎಂದಿಗೂ ನೇರವಾದುದನು
ಡೊಂಕುಮಾಡನು.
13 : ಭೂಲೋಕವನು ಆತನ ವಶಕ್ಕೆ ಕೊಟ್ಟವನುಂಟೆ?
ಆತನಲ್ಲದೆ ಭೂಮಂಡಲವನು
ಕ್ರಮಪಡಿಸಿದವನುಂಟೆ?
14 : ದೇವರು ಮನಸ್ಸುಮಾಡಿ ತನ್ನ ಆತ್ಮವನ್ನು
ಹಿಂದಕ್ಕೆ ತೆಗೆದುಕೊಂಡನಾದರೆ
ತನ್ನ ಶ್ವಾಸವನ್ನು ಹಿಂದಕ್ಕೆ
ಎಳೆದುಕೊಂಡನಾದರೆ,
15 : ಸಮಸ್ತ ಜನರು ಒಟ್ಟಾಗಿ ಅಳಿದು ಹೋಗುವರು
ಮರಳಿ ಮನುಷ್ಯರೆಲ್ಲರೂ ಮಣ್ಣಾಗಿ
ಮಾರ್ಪಡುವರು.
16 : ಬುದ್ದಿಯಿದ್ದರೆ ಇದನು ಕೇಳಿ
ನನ್ನ ಮಾತಿನ ದನಿಗೆ ಕಿವಿಗೊಡಿ.
17 : ನ್ಯಾಯವನ್ನು ದ್ವೇಷಿಸುವವನು, ಶಿಸ್ತನು
ಪಾಲಿಸುವನೋ?
ಸತ್ಯಸ್ವರೂಪಿ, ಸರ್ವಶಕ್ತ ಆದ ದೇವರನು
ಕೆಟ್ಟವನೆನ್ನುವಿಯೋ?
18 : ದೇವರು ರಾಜನಿಗೆ “ಮೂರ್ಖ” ಎಂದು
ಹೇಳಬಲ್ಲನು
ಪ್ರಭುಗಳನ್ನು “ದುಷ್ಟರು” ಎಂದು
ಕರೆಯಬಲ್ಲನು.
19 : ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು
ತೋರಿಸನು
ಬಡವ-ಬಲ್ಲಿದನೆಂಬ ಭೇದವನ್ನು ಮಾಡನು.
ಏಕೆಂದರೆ ಅವರೆಲ್ಲರು ಆ ದೇವನಿಂದಲೇ
ಸೃಷ್ಟಿಯಾದವರು.
20 : ಕ್ಷಣಮಾತ್ರದೊಳು, ನಡುರಾತ್ರಿಯೊಳು
ಸತ್ತುಹೋಗುವರು
ನಾಡಿನ ಪ್ರಜೆಗಳು ತಲ್ಲಣಗೊಂಡು ಇಲ್ಲದೆ
ಹೋಗುವರು
ಮನುಷ್ಯರ ಕೈಸೋಂಕದೆಯೆ ಪರಾಕ್ರಮಿಗಳು
ಮಾಯವಾಗುವರು.
21 : ದೇವರ ಕಣ್ಣು ಮನುಷ್ಯನ ಮಾರ್ಗಗಳ ಮೇಲೆ
ಅವನ ಹೆಜ್ಜೆಗಳೆಲ್ಲ ಗೋಚರವಾಗಿವೆ ಆತನಿಗೆ.
22 : ಆತನ ದೃಷ್ಟಿಯಿಂದ ದುರುಳರು
ಅಡಗಿಕೊಳ್ಳುವಂತಿಲ್ಲ
ಅಂಥವರನ್ನು ಅಡಗಿಸಬಲ್ಲ ಇರುಳಿಲ್ಲ,
ಕಾರಿರುಳೂ ಇಲ್ಲ.
23 : ದೇವರು ಮನುಷ್ಯನ ಮೇಲೆ ಹೆಚ್ಚು ಗಮನ
ಇಡಬೇಕಾಗಿಲ್ಲ
ಅವನನ್ನು ನ್ಯಾಯವಿಚಾರಣೆಗೆ ಕರೆಯುವ
ಅವಶ್ಯಕತೆ ಇಲ್ಲ.
24 : ವಿಚಾರಣೆ ಇಲ್ಲದೆಯೆ ಪರಾಕ್ರಮಿಗಳನು
ಸದೆಬಡಿಯುವನು
ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸಬಲ್ಲನು.
25 : ದುಷ್ಕಾರ್ಯಗಳು ಆತನಿಗೆ ತಿಳಿದಿರುವ ಕಾರಣ
ಇರುಳಲ್ಲೇ ದುರುಳರನು ಕೆಡವಿ ನಾಶಕ್ಕೆ
ಗುರಿಮಾಡುವನು.
26 : ಅಪರಾಧಿಗಳಂತೆ ಅವರನು ದಂಡಿಸುವನು
ಎಲ್ಲರು ನೋಡುವಂತೆ ಅವರನು
ಖಂಡಿಸುವನು.
27 : ದೇವರ ಮಾರ್ಗಗಳೆಲ್ಲವನು ಅವರು ಅಲಕ್ಷ್ಯ
ಮಾಡಿದರು
ಆತನಿಗೆ ವಿಧೇಯರಾಗದೆ ತಿರುಗಿಬಿದ್ದರು.
28 : ಬಡವರ ಗೋಳಾಟ ದೇವರಿಗೆ ಮುಟ್ಟುವಂತೆ
ಮಾಡಿದ್ದರು
ದಿಕ್ಕಿಲ್ಲದವರ ಗೋಗರೆತ ಆತನ ಕಿವಿಗೆ
ಬೀಳುವಂತೆ ಮಾಡಿದ್ದರು.
29 : ವ್ಯಕ್ತಿಯಾಗಿರಲಿ, ರಾಷ್ಟ್ರವಾಗಿರಲಿ,
ಯಾರಾಗಿದ್ದರೇನು?
ದೇವರು ಸುಮ್ಮನಿದ್ದರೆ ತಪ್ಪು
ಹೊರಿಸುವವರಾರು?
ವಿಮುಖನಾದರೆ ಆತನ ದರ್ಶನ
ಪಡೆಯಬಲ್ಲವರಾರು?
30 : ಭಕ್ತಿಹೀನನು ಜನರನು ಆಳಬಾರದು
ಅಂಥವನು ಜನರಿಗೆ ಉರುಲಾಗಬಾರದು.
31 : ಅಂಥ ಮನುಷ್ಯನು ದೇವರಿಗೆ:
‘ಪ್ರಾಯಶ್ಚಿತ್ತ ಮಾಡಿರುವೆ, ಇನ್ನು ಮುಂದೆ
ಪಾಪಮಾಡೆ.
32 : ಕಾಣದಿರುವ ಮಾರ್ಗವನ್ನು ತೋರೆನತೆ
ತಪ್ಪುಮಾಡಿದ್ದರೂ ಮತ್ತೆ ಮಾಡೆ’ ಎಂದು
ಹೇಳಿದ್ದಾದರೆ,
33 : ದೇವರು ಅಂಥವರನ್ನು
ದಂಡಿಸಬೇಕೆನ್ನುತ್ತೀಯೋ?
ಆತನ ತೀರ್ಪನ್ನು ನೀನೇ
ಅಲ್ಲಗಳೆದಿರುವೆಯಲ್ಲವೆ?
ಈಗ ನಾನು ಹೇಳಲಾರೆ, ನೀನೇ ಹೇಳು,
ನಿನ್ನ ಅಭಿಪ್ರಾಯವನು ನಮಗೆ ತಿಳಿಸು.
34 : ಬುದ್ಧಿವಂತರು, ನನ್ನನಾಲಿಸಿದ ಜ್ಞಾನಿಗಳು
ನಿನ್ನ ವಿಷಯವಾಗಿ ಹೇಳುವ ಮಾತುಗಳಿವು:
35 : ಯೋಬನು ತಿಳುವಳಿಕೆಯಿಲ್ಲದೆ ನುಡಿ
ದಿದ್ದಾನೆ
ಅವನ ಮಾತುಗಳಲ್ಲಿ ಬುದ್ದಿವಂತಿಕೆ ಇಲ್ಲ.
36 : ಅವನ ಪರಿಶೋಧನೆ ಇನ್ನೂ ಮುಂದುವರೆದರೆ
ಒಳಿತು
ಅವನು ಕೊಟ್ಟ ಉತ್ತರ ದುರುಳರಿಗೆ
ತಕ್ಕುದಾದುದು.
37 : ಅವನು ಅಪರಾಧಿ ಮಾತ್ರವಲ್ಲ,
ದೇವದ್ರೋಹವೆಸಗಿದ್ದಾನೆ
ನಮ್ಮ ಮಧ್ಯೆ ಸಂದೇಹವನು ಎಬ್ಬಿಸಿದ್ದಾನೆ
ದೇವರಿಗೆ ವಿರುದ್ಧವಾಗಿ ಅಧಿಕ
ಪ್ರಸಂಗಮಾಡುತ್ತಾನೆ’.”