Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೋಬ


1 : “ಇಂತಿರಲು, ಯೋಬನೇ, ನನ್ನ ಮಾತುಗಳಿಗೆ ಕಿವಿಗೊಡು: ನಾನು ಹೇಳುವುದನ್ನೆಲ್ಲಾ ಗಮನವಿಟ್ಟು ಕೇಳು.
2 : ಇಗೋ, ಮಾತಾಡಲು ತೊಡಗಿದ್ದೇನೆ ನನ್ನ ನಾಲಿಗೆ ಬಾಯಲ್ಲಿ ತುಡುಕುತ್ತಿದೆ.
3 : ನನ್ನ ನುಡಿ ವ್ಯಕ್ತಪಡಿಸುತ್ತದೆ ಹೃದಯದ ಯಥಾರ್ಥತೆಯನು ನನ್ನ ತುಟಿ ನುಡಿಯುತ್ತದೆ ಸತ್ಯವೆಂದು ಅರಿತವುಗಳನು.
4 : ನಾನು ನಿರ್ಮಿತನಾಗಿದ್ದೇನೆ ದೇವರಾತ್ಮನಿಂದ ನನಗೆ ಜೀವ ಉಂಟಾಗಿದೆ ಸರ್ವಶಕ್ತನ ಶ್ವಾಸದಿಂದ.
5 : ನಿನಗೆ ಸಾಮಥ್ರ್ಯವಿದ್ದರೆ ನನಗೆ ಉತ್ತರ ಕೊಡು ನನ್ನ ಎದುರಿನಲ್ಲೇ ನಿಂತು ವಾದಮಾಡು.
6 : ನೋಡು, ನಾನು ಕೂಡ ಜೇಡಿಮಣ್ಣಿನಿಂದ ರೂಪಿತನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇರುವವನು.
7 : ಆದ್ದರಿಂದ ನೀನು ನನಗೆ ಅಂಜಬೇಕಾಗಿಲ್ಲ ನನ್ನ ಕೈ ಬಲ ನಿನಗೆ ಹೊರೆಯಾಗಿರುವುದಿಲ್ಲ
8 : ನನಗೆ ಸ್ಪಷ್ಟವಾಗಿ ಕೇಳಿಸುವಂತೆ ನೀನು ಮಾತಾಡಿರುವೆ ನನ್ನ ಕಿವಿಗೆ ಬಿದ್ದ ಈ ಮಾತುಗಳು ನಿನ್ನವೇ ಆಗಿವೆ.
9 : ‘ನಾನು ಪರಿಶುದ್ಧನು, ನಿರ್ದೋಷಿ ನಾನು ನಿರ್ಮಲನು, ನಿರಪರಾಧಿ.
10 : ‘ಆದರೂ ನನ್ನಲ್ಲಿ ದೇವರು ತಪ್ಪುಕಂಡು ಹಿಡಿಯಬೇಕೆಂದಿದ್ದಾನೆ ನನ್ನನ್ನು ತನ್ನ ಶತ್ರುವೆಂದೇ ಭಾವಿಸಿದ್ದಾನೆ.
11 : ‘ನನ್ನ ಕಾಲುಗಳಿಗೆ ಕೋಳತೊಡಿಸಿದ್ದಾನೆ ನನ್ನ ಎಲ್ಲ ಹಾದಿಗಳನ್ನು ಕಂಡುಕೊಂಡಿದ್ದಾನೆ.’
12 : ಹೀಗೆ ನೀನು ನುಡಿದದ್ದು ಸರಿಯಲ್ಲವೆಂಬುದೇ ನನ್ನ ಉತ್ತರ; ದೇವರು ಮನುಷ್ಯರಿಗಿಂತ ದೊಡ್ಡವನು ಎಂಬುದೇ ಇದಕ್ಕೆ ಆಧಾರ.
13 : ಆತ ನಿನ್ನ ಯಾವ ಮಾತಿಗೂ ಉತ್ತರ ಕೊಡಲಿಲ್ಲ ಎಂದ ಮಾತ್ರಕ್ಕೆ ನೀನು ಆತನೊಡನೆ ವ್ಯಾಜ್ಯವಾಡುವುದು ಸರಿಯಲ್ಲ.
14 : ದೇವರು ಪದೇ ಪದೇ ಮಾತನಾಡಿದರೂ ನರಮಾನವನು ಗ್ರಹಿಸಿಕೊಳ್ಳುವುದಿಲ್ಲ.
15 : ಮಾನವನಿಗೆ ಗಾಢನಿದ್ರೆ ಬಂದಾಗ ಹಾಸಿಗೆಮೇಲೆ ಮಲಗಿರುವಾಗ ಸ್ವಪ್ನಬಿದ್ದಾಗ, ಕನಸುಕಾಣುವಾಗ,
16 : ದೇವರು ಅವನ ಕಿವಿಗಳನ್ನು ತೆರೆಯುತ್ತಾನೆ ಉಪದೇಶಮಾಡಿ ಎಚ್ಚರಿಕೆ ನೀಡುತ್ತಾನೆ.
17 : ಹೀಗೆ ದುಷ್ಕಾರ್ಯದಿಂದ ಮನುಷ್ಯನನ್ನು ತಪ್ಪಿಸುತ್ತಾನೆ ಅವನ ಅಹಂಕಾರ ಗರ್ವವನು ಅಡಗಿಸುತ್ತಾನೆ.
18 : ಅವನ ಆತ್ಮ ಅಧೋಲೋಕಕ್ಕಿಳಿಯದಂತೆ ತಡೆಯುತ್ತಾನೆ ಅವನ ಪ್ರಾಣ ಕತ್ತಿಗೆ ತುತ್ತಾಗದಂತೆ ಕಾಪಾಡುತ್ತಾನೆ.
19 : ಇದಲ್ಲದೆ, ಮಾನವ ವ್ಯಾಧಿಯಿಂದ ಹಾಸಿಗೆ ಹಿಡಿದಿರುವಾಗ ಅವನನ್ನು ತಿದ್ದುತ್ತಾನೆ ಅವನ ದೇಹ ನರಳುತ್ತಿರುವಾಗ.
20 : ಅವನಿಗೆ ಆಹಾರವೂ ಬೇಸರವಾಗುವುದು ಮೃಷ್ಟಾನ್ನವೂ ಅಸಹ್ಯವಾಗುವುದು.
21 : ಅವನ ಮಾಂಸಖಂಡ ಕರಗಿಹೋಗುವುದು ಅವನ ಅಸ್ಥಿಪಂಜರ ಎದ್ದು ಕಾಣುವುದು.
22 : ಅವನ ಆತ್ಮ ಅಧೋಲೋಕವನ್ನು ಸಮೀಪಿಸುವುದು ಅವನ ಪ್ರಾಣ ಮೃತ್ಯುದೂತರಿಗೆ ಹತ್ತಿರವಾಗುವುದು.
23 : ಆದರೆ ಸಹಸ್ರ ದೂತರಲ್ಲೊಬ್ಬ ಮಧ್ಯಸ್ಥನಾಗಿ ಅವನ ಪಕ್ಕದಲ್ಲಿ ನಿಂತು ಅವನ ಕರ್ತವ್ಯವೇನೆಂದು ತಿಳಿಸಿ,
24 : ‘ಇವನನ್ನು ಕಾಪಾಡಿ; ಅಧೋಲೋಕಕ್ಕೆ ತಳ್ಳಬೇಡಿ, ಬಿಡುಗಡೆ ಬೇಕಾದ ಈಡು ಇದೋ ಇಲ್ಲಿ!’ ಎಂದು ಹೇಳಿದರೆ,
25 : ಅವನ ದೇಹ ಬಾಲ್ಯಕಿಂತಲೂ ಕೋಮಲವಾಗುವುದು ಎಳೆತನದ ಚೈತನ್ಯವನ್ನು ಮತ್ತೆ ಅನುಭವಿಸುವನು.
26 : ಆಗ ಅವನು ದೇವರಿಗೆ ಪ್ರಾರ್ಥನೆ ಮಾಡುವನು ಆತನ ಒಲುಮೆಗೆ ಪಾತ್ರನಾಗುವನು. ಹರ್ಷೋದ್ಗಾರದಿಂದ ಆತನ ಸನ್ನಿಧಿಗೆ ಬರುವನು ಮತ್ತೆ ಆತನಿಂದ ಸತ್ಯಂತ ಎನಿಸಿಕೊಳ್ಳುವನು.
27 : ಆಗ ಅವನು ಜನರ ಮುಂದೆ ಈ ಪರಿ ಹಾಡುವನು: ‘ಪಾಪ ಮಾಡಿದೆ; ಸನ್ಮಾರ್ಗ ಬಿಟ್ಟು ನಡೆದೆ ಆದರೂ ದಂಡಿಸಲಿಲ್ಲ ದೇವರು ನನ್ನ ಪಾಪಕ್ಕೆ ತಕ್ಕಂತೆ.
28 : ವಿಮೋಚಿಸಿದ್ದಾನೆ ನನ್ನ ಆತ್ಮ ಅಧೋಲೋಕ ಸೇರದಂತೆ ನನ್ನ ಜೀವವು ಜ್ಯೋತಿಯನು ಕಾಣುವಂತೆ.’
29 : ಇದನ್ನೆಲ್ಲ ನೀಡುವವನು ಆ ದೇವರೇ ಇಮ್ಮಡಿ ಮುಮ್ಮಡಿಯಾಗಿ ನೀಡುವನು ಮನುಜನಿಗೆ.
30 : ಅವನ ಆತ್ಮವನು ಅಧೋಲೋಕದಿಂದ ಹಿಂದಿರುಗಿಸುವನು ಜೀವಲೋಕದ ಬೆಳಕನು ಅನುಭವಿಸುವಂತೆ ಮಾಡುವನು.
31 : ಯೋಬನೇ, ನನ್ನ ಮಾತಿಗೆ ಕಿವಿಗೊಡು, ಮೌನದಿಂದ ಕೇಳು, ನಾನೇ ಮಾತಾಡಲಿರುವೆ:
32 : ಏನಾದರೂ ಹೇಳಬೇಕೆಂದಿದ್ದರೆ ಹೇಳು, ಉತ್ತರಕೊಡು ನನಗೆ, ನೀನು ಸತ್ಯವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಬಯಕೆ.
33 : ಇಲ್ಲವಾದರೆ ಸುಮ್ಮನಿದ್ದು ಕಿವಿಗೊಡು ನಿನಗೆ ಬೋಧಿಸುವೆನು ಸುಜ್ಞಾನವನು.”

· © 2017 kannadacatholicbible.org Privacy Policy