1 : “ಈಗಲಾದರೊ ನನಗಿಂತ ಚಿಕ್ಕವರು
ನನ್ನನ್ನು ಪರಿಹಾಸ್ಯಮಾಡುತ್ತಾರೆ.
ಇವರ ಹೆತ್ತವರು ನನ್ನ ಮುಂದೆ
ನಾಯಿಗಳೊಡನೆ ಇರಲೂ ಅಯೋಗ್ಯರು
ಎಂದೆಣಿಸಿದ್ದೆ.
2 : ಅವರ ಭುಜಬಲದಿಂದ ನನಗೇನಾಗುತ್ತಿತ್ತು?
ಆಗ ಅವರ ಪುಷ್ಟಿಯು ಕುಗ್ಗಿಹೋಗಿತ್ತು!
3 : ಕೊರತೆಯಿಂದ, ಬರದಿಂದ ಅವರು ಸೊರಗಿ
ಹೋಗಿದ್ದರು
ನಿನ್ನೆಯವರೆಗೂ ಹಾಳುಬೀಳಾದ ನೆಲವನ್ನು
ನೆಕ್ಕುತ್ತಿದ್ದರು.
4 : ಚಕ್ಕೋತ ಸೊಪ್ಪುಗಳನ್ನು ಪೊದೆಗಳಿಂದ
ಕಿತ್ತು ತಿನ್ನುತ್ತಿದ್ದರು
ಜಾಲಿಯ ಬೇರೇ ಅವರಿಗೆ ಆಹಾರವಾಗಿತ್ತು.
5 : ಜನರು ಅವರನ್ನು ತಳ್ಳಿಬಿಟ್ಟಿದ್ದರು
ಕಳ್ಳರನ್ನೋ ಎಂಬಂತೆ ಕೂಗಿ ಅಟ್ಟಿಬಿಟ್ಟಿದ್ದರು.
6 : ವಾಸಮಾಡುತ್ತಿದ್ದರವರು ಭೀಕರ
ಡೊಂಗರುಗಳಲಿ,
ನೆಲದ ಬಿಲಗಳಲಿ, ಬಂಡೆಗಳ ಸಂದುಗಳಲ್ಲಿ.
7 : ಅರಚಿಕೊಳ್ಳುತ್ತಿದ್ದರು ಪೊದೆಗಳ ನಡುವೆ
ಕೂಡಿಕೊಳ್ಳುತ್ತಿದ್ದರು ಮುಳ್ಳುಗಿಡಗಳ ಕೆಳಗೆ.
8 : ಮೂರ್ಖರ ಮಕ್ಕಳು, ನೀಚ ಜಾತಿಯವರು
ನಾಡಿನಿಂದ ಹೊರದೂಡಲ್ಪಟ್ಟವರು
ಅವರಾಗಿದ್ದರು.
9 : ಅಂಥವರ ಪಾವಣಿಗೆ ನಾನೀಗ ಗುರಿಯಾದೆ
ಅವರ ಕಟ್ಟುಕತೆಗಳಿಗೆ ಅಡ್ಡಹೆಸರಾದೆ.
10 : ನನಗೆ ಅಸಹ್ಯಪಟ್ಟು ದೂರಸರಿಯುತ್ತಾರೆ
ನನ್ನ ಮೇಲೆ ಉಗುಳುವುದಕ್ಕೂ
ಹಿಂಜರಿಯದಿದ್ದಾರೆ.
11 : ದೇವರು ನನ್ನ ಬಿಲ್ಲನು ಸಡಿಲಗೊಳಿಸಿ
ಪೆಟ್ಟಿಗೀಡಾಗಿಸಿದ್ದಾರೆ
ಅವರೋ ಕಡಿವಾಣವಿಲ್ಲದ ಕುದುರೆಗಳಂತೆ
ನನ್ನ ಮುಂದಿದ್ದಾರೆ.
12 : ಕಲಹಗಾರರು ಎದ್ದಿದ್ದಾರೆ ನನ್ನ ಬಲಗಡೆಗೆ
ನನ್ನ ಕಾಲುಗಳನು ನೂಕುತ್ತಿದ್ದರೆ ಹಿಂದಕೆ
ಸಂಚುಹೂಡುತ್ತಿದ್ದಾರೆ ನನ್ನನ್ನು
ನಾಶಮಾಡಲಿಕೆ.
13 : ನನ್ನ ಹಾದಿಯನು ಕಡಿದು ಹಾಕಿದ್ದಾರೆ
ನನ್ನ ಉಪದ್ರವವನ್ನು ಹೆಚ್ಚಿಸಿದ್ದಾರೆ
ಅವರನ್ನು ತಡೆಯಲು ಯಾರೂ ಇಲ್ಲದಿದ್ದಾರೆ.
14 : ಅಗಲವಾದ ಕೋಟೆಬಿರುಕುಗಳಲಿ ನುಗ್ಗಿ
ಬರುತ್ತಿದ್ದಾರೆ
ಹಾಳುಬೀಳಿನಲಿ ನಿಂತಿರುವ ನನ್ನ ಮೇಲೆ
ಉರುಳಿಬೀಳಲಿದ್ದಾರೆ.
15 : ಅಡ್ಡಿ ಆತಂಕಗಳು ನನ್ನನು ಸುತ್ತುವರೆದಿವೆ
ನನ್ನ ಮಾನಮರ್ಯಾದೆ ತೂರಿಹೋಗುತ್ತಿದೆ
ಗಾಳಿಯಂತೆ
ನನ್ನ ಯೋಗಕ್ಷೇಮ ತೇಲಿಹೋಗುತ್ತಿದೆ
ಮೋಡದಂತೆ.
16 : ನನ್ನ ಮನ ಕರಗಿ ನೀರಾಗಿದೆ
ಬಾಧೆಗಳು ನನ್ನನು ಬಿಗಿಹಿಡಿದಿವೆ.
17 : ಇರುಳು ನನ್ನೆಲುಬುಗಳನು ಕೊರೆದು ಕೀಳುತ್ತಿದೆ
ಸಂಕಟಗಳು ನನ್ನನು ಎಡೆಬಿಡದೆ ತಿನ್ನುತ್ತಿವೆ.
18 : ನನ್ನ ಬಟ್ಟೆಯನು ಗಟ್ಟಿಯಾಗಿ ಹಿಡಿದಿದ್ದಾರೆ
ಕೊರಳಪಟ್ಟಿಯಂತೆ ಹಿಸುಕಿ ಹಿಂಡುತ್ತಿದ್ದಾರೆ.
19 : ನನ್ನನು ಕೆಸರಿನಲ್ಲಿ ಕೆಡವಿದ್ದಾರೆ ನನ್ನನು ಭಸ್ಮಕ್ಕೆ ಸಮಾನನನ್ನಾಗಿಸಿದ್ದಾರೆ.
20 : ದೇವರೇ, ನಾನು ಮೊರೆಯಿಟ್ಟರೂ ಉತ್ತರಕೊಡದಿರುವೆ ನಾನೆದ್ದು ನಿಂತರೂ ನೀನು ಸುಮ್ಮನೆ ನೋಡುತ್ತಿರುವೆ.
21 : ನನಗೆ ನೀನು ಕ್ರೂರನಾಗಿಬಿಟ್ಟಿರುವೆ
ನಿನ್ನ ಭುಜಬಲದಿಂದ ಹಿಂಸಿಸುತ್ತಿರುವೆ.
22 : ನನ್ನನು ಎತ್ತಿ ತೂರಿಬಿಟ್ಟಿರುವೆ ಬಿರುಗಾಳಿಗೆ
ತೊಳಲಾಡುತ್ತಿರುವೆನು ತುಫಾನಿನ ಆರ್ಭಟಕ್ಕೆ.
23 : ನನ್ನನು ಮರಣಕ್ಕೆ ಗುರಿಮಾಡುವೆಯೆಂದು
ತಿಳಿದಿದೆ
ಸಮಸ್ತಜೀವಿಗಳು ತೆರಳುವ ಮಂದಿರಕ್ಕೆ
ಸೇರಿಸುವೆಯೆಂದು ಗೊತ್ತೇ ಇದೆ.
24 : ಆದರೂ ಕೇಡಿಗೆ ಈಡಾದವನು
ಕೈಚಾಚುವುದಿಲ್ಲವೆ ಸಹಾಯಕ್ಕಾಗಿ?
ಆಪತ್ತಿಗೆ ಗುರಿಯಾದವನು
ಕೂಗಿಕೊಳ್ಳುವುದಿಲ್ಲವೆ ನೆರವಿಗಾಗಿ?
25 : ಕಷ್ಟಾನುಭವಿಯನು ಕಂಡು ನಾನು
ಕಣ್ಣೀರಿಡಲಿಲ್ಲವೆ?
ದಟ್ಟದರಿದ್ರರಿಗೋಸ್ಕರ ನಾನು
ದುಃಖಪಡಲಿಲ್ಲವೆ?
26 : ನಾನು ಒಳಿತನು ನಿರೀಕ್ಷಿಸಿದಾಗ ಕೇಡು
ಬಂದೊದಗಿತು
ಬೆಳಕನು ಎದುರು ನೋಡುವಾಗ ಕತ್ತಲು
ಕವಿಯಿತು.
27 : ಕರುಳು ಕುದಿಯುತ್ತಿದೆ ಅಶಾಂತಿಯಿಂದ
ಬಂದೊದಗಿದೆ ನನಗೆ ಬಾಧೆಯ ದಿನ.
28 : ಸಂತೈಸುವ ಸೂರ್ಯನಿಲ್ಲದೆ ಅಲೆಯುತ್ತಿರುವೆ
ಮಂಕು ಕವಿದು
ಅಂಗಲಾಚುತ್ತಿರುವೆ ಸಭೆಯ ಮಧ್ಯೆ ನಿಂತು.
29 : ನರಿಗಳಿಗೆ ಸಹೋದರನಾಗಿರುವೆ
ಗೂಬೆಗಳಿಗೆ ನಾನು ಗೆಳೆಯನಾಗಿರುವೆ.
30 : ನನ್ನ ಚರ್ಮ ಉದುರುತ್ತಿದೆ ಕರ್ರಗಾಗಿ
ನನ್ನೆಲುಬು ಉರಿಯುತ್ತಿದೆ ತಾಪಕ್ಕೊಳಗಾಗಿ.
31 : ಅಳುವ ಧ್ವನಿ ಕೇಳಿಸುತ್ತಿದೆ ನನ್ನ ಕೊಳಲಿನಲಿ
ಗೋಳಾಟದ ಸ್ವರವಿದೆ ನನ್ನ ಕಿನ್ನರಿಯಲಿ.”