1 : ಯೋಬನು ಮತ್ತೆ ಪ್ರಸ್ತಾಪವೆತ್ತಿ
ಇಂತೆಂದನು:
2 : “ಕಳೆದುಹೋದ ದಿನಗಳಲಿ ಇದ್ದಂತೆ
ಈಗಲೂ ಇದ್ದಿದ್ದರೆ ಎಷ್ಟೋ
ಚೆನ್ನಾಗಿರುತ್ತಿತ್ತಲ್ಲವೆ!
ಆಗ ದೇವರು ನನ್ನನ್ನು ಕಪಾಡುತ್ತಿದ್ದನಲ್ಲವೆ?
3 : ಆಗ ಬೆಳಗುತ್ತಿತ್ತು ಆತನ ದೀಪ ತಲೆಯಮೇಲೆ
ಇರುಳಲ್ಲೂ ಸಂಚರಿಸುತ್ತಿದ್ದೆ ಆತನ ಬೆಳಕಿನಲೇ.
4 : ಆ ದಿನಗಳು ನನ್ನ ಜೀವಮಾನದ
ಸುಗ್ಗಿಕಾಲವಾಗಿತ್ತು
ದೇವರ ಪ್ರೀತಿ ನನ್ನ ಗುಡಾರವನ್ನು ಆವರಿಸಿತ್ತು.
5 : ಸರ್ವಶಕ್ತನು ಆಗ ನನ್ನ ಸಂಗಡವಿದ್ದನು
ನನ್ನ ಸುತ್ತಲೂ ನನ್ನ ಮಕ್ಕಳು ಇರುತ್ತಿದ್ದರು.
6 : ಹಾಲುತುಪ್ಪದಲ್ಲಿ ಪಾದ ತೊಳೆಯುತ್ತಿದ್ದೆ
ಎಣ್ಣೆಯನು ನದಿಯಂತೆ ಹರಿಸುತ್ತಿತ್ತಾ ದಿಣ್ಣೆ.
7 : ನಾನು ಊರ ಮುಂದಿನ ಜಾವಡಿಗೆ ಹೋದಾಗ
ಚೌಕದ ಪೀಠದಲ್ಲಿ ಕುಳಿತುಕೊಂಡಾಗ,
8 : ಯುವಕರು ಸರಿಯುತ್ತಿದ್ದರು ಪಕ್ಕಕ್ಕೆ
ಮುದುಕರು ಎದ್ದು ನಿಲ್ಲುತ್ತಿದ್ದರು ತಟ್ಟನೆ;
9 : ಮಂತ್ರಿಗಳೂ ಕೈಯಿಟ್ಟು ಬಾಯ ಮೇಲೆ
ಮೌನತಾಳುತ್ತಿದ್ದರು ಮಾತೆತ್ತದೆ;
10 : ಗಣ್ಯ ವ್ಯಕ್ತಿಗಳೂ ನಿಶ್ಯಬ್ದವಾಗುತ್ತಿದ್ದರು
ಅವರ ನಾಲಿಗೆ ಅಂಗುಳಕ್ಕೆ ಅಂಟಿರುತ್ತಿತ್ತು.
11 : ಕೇಳಿದ ಕಿವಿ ನನ್ನನು ಧನ್ಯನೆನ್ನುತ್ತಿತ್ತು
ನೋಡಿದ ಕಣ್ಣು ನನ್ನನು ಗೌರವಿಸುತ್ತಿತ್ತು.
12 : ಏಕೆಂದರೆ ಮೊರೆಯಿಡುತ್ತಿದ್ದ ಬಡವನನು
ಗತಿಯಿಲ್ಲದ ಅನಾಥನನು
ಆದರಿಸುತ್ತಿದ್ದೆ ನಾನು.
13 : ಸಾಯುತ್ತಿದ್ದವನು ಹರಸುತ್ತಿದ್ದುದು ನನ್ನನೇ
ವಿಧವೆಯ ಹೃದಯ ನಲಿಯುವಂತೆ
ಮಾಡುತ್ತಿದ್ದುದು ನಾನೇ.
14 : ಧರ್ಮವನ್ನು ನಾನು ಧರಿಸಿಕೊಂಡೆ; ಅದು ನನಗೆ
ಅಂಬರವಾಗಿತ್ತು
ನ್ಯಾಯನೀತಿ ನನಗೆ ನಿಲುವಂಗಿಯೂ ಪೇಟವೂ
ಆಗಿತ್ತು.
15 : ಕುರುಡನಿಗೆ ನಾನು ಕಣ್ಣಾಗಿದ್ದೆ
ಕುಂಟನಿಗೆ ನಾನು ಕಾಲಾಗಿದ್ದೆ.
16 : ದರಿದ್ರನಿಗೆ ತಂದೆಯಾಗಿದ್ದೆ
ಅಪರಿಚಿತರ ವ್ಯಾಜ್ಯವನು ತೀರಿಸುತ್ತಿದ್ದೆ.
17 : ದುರ್ಜನರ ದವಡೆಯನು ಮುರಿಯುತ್ತಿದ್ದೆ.
ಅವರ ಹಲ್ಲುಗಳಿಂದಲೂ ಬೇಟೆಯನು
ಬಿಡಿಸುತ್ತಿದ್ದೆ.
18 : ಆಗ ನಾನಿಂತೆಂದೆ: ‘ನನ್ನ ಗೂಡಿನಲ್ಲೇ
ಹಾಯಾಗಿ ಸಾಯುವೆ
ನನ್ನ ದಿನಗಳು ಮರಳಿನಂತೆ
ಅಸಂಖ್ಯಾತವಾಗಿರುತ್ತವೆ.’
19 : ‘ನನ್ನ ಬೇರುಗಳು ನೀರಿನವರೆಗೆ
ವ್ಯಾಪಿಸಿಕೊಂಡಿವೆ
ನನ್ನ ರೆಂಬೆಗಳ ಮೇಲೆ ರಾತ್ರಿಯೆಲ್ಲ
ಇಬ್ಬನಿ ಬಿದ್ದಿರುತ್ತದೆ.
20 : ‘ನನ್ನ ಪ್ರತಿಷ್ಠತೆ ಹೊಸಹೊಸದಾಗಿ ಇರುತ್ತದೆ
ನನ್ನ ಕೈಯಲ್ಲಿ ಬಿಲ್ಲು ಬಲಗೊಳ್ಳುತ್ತಾ
ಇರುತ್ತದೆ’
21 : ಜನರು ನನ್ನ ಮಾತಿಗೆ ಕಿವಿಗೊಡಲು
ಕಾದಿರುತ್ತಿದ್ದರು
ನನ್ನಾಲೋಚನೆಯನು ಅರಿಯಲು
ನಿಶ್ಯಬ್ದವಾಗಿರುತ್ತಿದ್ದರು.
22 : ನಾನು ಮಾತಾಡಿದ ಮೇಲೆ ಅವರು
ಮಾತೆತ್ತುತ್ತಿರಲಿಲ್ಲ
ನನ್ನ ಮಾತು ಹನಿಹನಿಯಾಗಿ ಅವರ ಕಿವಿಗೆ
ಬೀಳುತ್ತಿತ್ತು.
23 : ನನ್ನನ್ನು ಮಳೆಯಂತೆ ಎದುರುನೋಡುತ್ತಿದ್ದರು
ಮುಂಗಾರಿಗೋ ಎಂಬಂತೆ
ಬಾಯ್ದೆರೆಯುತ್ತಿದ್ದರು.
24 : ಅವರು ಎದೆಗೆಟ್ಟಾಗ ನಾನು ನಗೆಬೀರುತ್ತಿದ್ದೆ
ನನ್ನ ಮುಖಕಾಂತಿಯಿಂದ ಹುರಿದುಂಬಿಸುತ್ತಿದ್ದೆ.
25 : ನಾನು ಅವರಿಗೆ ಮಾರ್ಗದರ್ಶಕನಾಗಿದ್ದೆ
ಸೇನೆಗಳ ಮಧ್ಯೆ ರಾಜನಂತೆ ಮಂಡಿಸಿದ್ದೆ
ದುಃಖಿತರನು ಸುಧಾರಕನಂತೆ ಸಂತೈಸುತ್ತಿದ್ದೆ.