1 : “ಬೆಳ್ಳಿ ಸಿಕ್ಕುವ ಗಣಿಯುಂಟು
ಚಿನ್ನದ ಅದುರು ದೊರಕುವ
ಎಡೆಯುಂಟು.
2 : ಕಬ್ಬಿಣವನ್ನು ತೆಗೆಯುತ್ತಾರೆ ಮಣ್ಣಿನಿಂದ
ತಾಮ್ರವನ್ನು ಕಡೆಯುತ್ತಾರೆ ಕಲ್ಲನ್ನು
ಕರಗಿಸುತಾ.
3 : ಮಾನವರು ಹೊರದೂಡುತ್ತಾರೆ ಕತ್ತಲನು
ಕತ್ತಲು-ಕಾರ್ಗತ್ತಲಲ್ಲೂ ಹುಡುಕುತ್ತಾರೆ
ಲೋಹಗಳನು
ತೋಡುತ್ತಿರುತ್ತಾರೆ ಅವು ದೊರಕುವವರೆಗು.
4 : ಗಣಿಯನ್ನು ತೋಡಿತೋಡಿ
ಜನನಿವಾಸಿಗಳಿಗೆ ದೂರವಾಗಿ
ಮೇಲ್ಗಡೆ ನಡೆದಾಡುವವರನ್ನು ಮರೆತುಹೋಗಿ
ಅತ್ತಿತ್ತ ಅಲೆದಾಡುತ್ತಾರೆ ನರಲೋಕಕ್ಕೆ
ಅನ್ಯರಾಗಿ.
5 : ಭೂಮಿ ಕೊಡುತ್ತದೆ ಆಹಾರವನು
ಬೆಂಕಿಬಿದ್ದಂತೆ ಪಾಳಾಗಿರುತ್ತದೆ ಅದರ
ಅಡಿಭಾಗವು.
6 : ನೀಲಿರತ್ನಗಳು ಸಿಗುತ್ತವೆ ಭುವಿಯ ಕಲ್ಲುಗಳಲಿ
ಚಿನ್ನಚಿಗುರು ದೊರಕುತ್ತದೆ ಅದರ ಧೂಳಿನಲಿ.
7 : ಆ ದಾರಿ ತಿಳಿಯದು ಯಾವ ಹದ್ದಿಗೂ
ಅದು ಬಿದ್ದಿಲ್ಲ ಯಾವ ಗಿಡುಗದ ಕಣ್ಣಿಗೂ.
8 : ಕಾಡುಮೃಗಗಳು ಅದನ್ನು ತುಳಿದಿಲ್ಲ
ಸಿಂಹವು ಆ ಮಾರ್ಗದಲ್ಲಿ ಸುಳಿದಿಲ್ಲ.
9 : ಮಾನವನು ಕೈಮಾಡುತ್ತಾನೆ ಬಂಡೆಗಳ ಮೇಲೆ
ಬೆಟ್ಟಗಳನ್ನು ಕೆಡವಿಬಿಡುತ್ತಾನೆ ಬುಡಮಟ್ಟಕೆ.
10 : ಸುರಂಗಗಳನ್ನು ಕೊರೆಯುತ್ತಾನೆ ಬಂಡೆಗಳಲಿ
ಅಮೂಲ್ಯವಾದ ವಸ್ತುಗಳನ್ನು ಕಾಣುತ್ತಾನಲ್ಲಿ.
11 : ಕಂಡುಹಿಡಿಯುತ್ತಾನೆ ನದಿಗಳ ಮೂಲಗಳನು
ಬೆಳಕಿಗೆ ತರುತ್ತಾನೆ ಮರೆಯಾಗಿದ್ದ
ವಸ್ತುಗಳನು.
12 : ಆದರೆ ಸುಜ್ಞಾನ ಸಿಕ್ಕುವುದೆಲ್ಲಿ?
ವಿವೇಕ ವಾಸಮಾಡುವುದೆಲ್ಲಿ?
13 : ಸುಜ್ಞಾನದ ಕ್ರಯ ಯಾರಿಗೂ ಗೊತ್ತಿಲ್ಲ
ಜೀವಿತರಲ್ಲಿ ಅದನ್ನು ಕಂಡವರಿಲ್ಲ.
14 : ‘ಅದು ನನ್ನಲ್ಲಿಲ್ಲ’ ಎನ್ನುತ್ತದೆ ಪಾತಾಳ
‘ನನ್ನ ಬಳಿಯಲ್ಲಿಲ್ಲ’ ಎನ್ನುತ್ತದೆ ಸಮುದ್ರ.
15 : ಚೊಕ್ಕ ಬಂಗಾರಕೊಟ್ಟು ಅದನು
ಕೊಂಡುಕೊಳ್ಳಲಾಗದು
ಅದರ ಬೆಲೆಗೆ ಬೆಳ್ಳಿಯನು ತೂಕಮಾಡಲಾಗದು.
16 : ಓಫಿರ್ ದೇಶದ ಅಪರಂಜಿಯಿಂದಲೂ
ಅಮೂಲ್ಯ ಗೋಮೇಧಿಕ-
ಇಂದ್ರನೀಲದಿಂದಲೂ
ಸುಜ್ಞಾನದ ಮೌಲ್ಯವನ್ನು
ಗೊತ್ತು ಮಾಡಲಾಗದು.
17 : ಹೊನ್ನಾಗಲಿ, ಗಾಜಾಗಲಿ ಅದಕ್ಕೆ
ಸಮವಾದೀತೆ?
ಚಿನ್ನಾಭರಣಗಳನ್ನು ಅದಕ್ಕೆ ಅದಲುಬದಲು
ಮಾಡಿಕೊಡಲಾದೀತೆ?
18 : ಸುಜ್ಞಾನವಿರುವಲ್ಲಿ ಹವಳ-ಸ್ಫಟಿಕಗಳು
ನೆನಪಿಗೆ ಬಾರವು
ಮಾಣಿಕ್ಯಗಳ ಸಂಪಾದನೆಗಿಂತ ಅದರ
ಸಂಪಾದನೆ ಶ್ರೇಷ್ಠವು.
19 : ಕೂಷ್ ದೇಶದ ಪುಷ್ಯರಾಗವು ಅದಕ್ಕೆ
ಸಾಟಿಯಲ್ಲ
ಶುದ್ಧ ಕನಕದೊಡನೆ ಅದನು
ತೂಕಮಾಡಲಾಗುವುದಿಲ್ಲ.
20 : ಇಂತಿರಲು ಸುಜ್ಞಾನ ಬರುವುದು ಎಲ್ಲಿಂದ?
ವಿವೇಕ ದೊರಕುವುದು ಯಾವ ಸ್ಥಳದಿಂದ?
21 : ಅದು ಎಲ್ಲ ಜೀವಿಗಳ ಕಣ್ಣಿಗೆ ಅಗೋಚರ
ಆಕಾಶದ ಪಕ್ಷಿಗಳಿಗೂ ಅದು ಅಪರಿಚಿತ.
22 : ‘ನಮ್ಮ ಕಿವಿಗೆ ಬಿದ್ದಿದೆ ಅದರ ಸುದ್ದಿ ಮಾತ್ರ’
ಎನ್ನುತ್ತವೆ ಅಧೋಲೋಕ ಹಾಗು
ಮೃತ್ಯುಲೋಕ.
23 : ಸುಜ್ಞಾನದ ಮಾರ್ಗ ಬಲ್ಲವನು ದೇವರೇ
ಅದರ ಸ್ಥಳಗೊತ್ತಿದೆ ಆತನೊಬ್ಬನಿಗೆ.
24 : ಭೂಮಿಯ ಕಟ್ಟಕಡೆಯ ತನಕ
ದೃಷ್ಟಿಸಬಲ್ಲವನು ದೇವರೇ
ಆಕಾಶದ ಕೆಳಗಿನ ಸಮಸ್ತವನು ನೋಡ
ಬಲ್ಲವನು ಆತನೊಬ್ಬನೆ!
25 : ಗಾಳಿಗೆ ತಕ್ಕ ವೇಗವನು ನೇಮಿಸಿದಾಗ
ಜಲಕ್ಕೆ ತಕ್ಕ ಜಾಗವನು ನಿರ್ಣಯಿಸಿದಾಗ,
26 : ಮಳೆಗೆ ಕಟ್ಟಳೆಯನು ವಿಧಿಸಿದಾಗ
ಗುಡುಗು ಮಿಂಚಿಗೆ ಮಾರ್ಗವನ್ನೇರ್ಪಡಿಸಿದಾಗ,
27 : ದೇವರು ಆ ಜ್ಞಾನವನು ಕಂಡು ಪರಿಗಣಿಸಿದನು
ಅದನು ಪರಿಶೋಧಿಸಿ ಪ್ರತಿಷ್ಠಾಪಿಸಿದನು.
28 : ಬಳಿಕ ಮಾನವನಿಗೆ ಇಂತೆಂದನು:
‘ಸರ್ವೇಶ್ವರನಲ್ಲಿ ಭಯಭಕ್ತಿ ಇಡುವುದೇ
ಸುಜ್ಞಾನ
ದುಷ್ಟತನವನ್ನು ಬಿಟ್ಟುಬಿಡುವುದೇ ವಿವೇಕ’.”