Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೋಬ


1 : ಯೋಬನು ಮತ್ತೆ ಪ್ರಸ್ತಾಪವೆತ್ತಿ ಹೀಗೆಂದನು:
2 : “ನನಗೆ ನ್ಯಾಯ ದೊರಕಿಸದ ಜೀವಂತ ದೇವರಾಣೆ, ನನ್ನ ಮನಸ್ಸನು ಕಹಿಯಾಗಿಸಿದ ಸರ್ವಶಕ್ತನಾಣೆ,
3 : ನನ್ನಲ್ಲಿ ಜೀವ ಉಸಿರಾಡುತ್ತಿರುವವರೆಗೆ, ನನ್ನ ಮೂಗಲ್ಲಿ ದೇವರು ಊದಿದ ಶ್ವಾಸವಿರುವವರೆಗೆ,
4 : ನನ್ನ ತುಟಿ ಅನ್ಯಾಯವನು ನ್ಮಡಿಯದು ನನ್ನ ನಾಲಿಗೆ ಎಷ್ಟುಮಾತ್ರಕ್ಕೂ ಮೋಸದ ಮಾತನಾಡದು.
5 : ನೀವು ನ್ಯಾಯವಂತರೆಂದು ನಾನು ಒಪ್ಪಿದರೆ ನನಗಿರಲಿ ಧಿಕ್ಕಾರ! ನಾನು ಸತ್ಯತೆಯನ್ನು ಕಳೆದುಕೊಳ್ಳಲಾರೆ ಸಾಯುವ ತನಕ.
6 : ನ್ಯಾಯನೀತಿಯನ್ನು ಬಿಡದೆ ಹಿಡಿವೆನು ಭದ್ರವಾಗಿ ನನ್ನ ಬಾಳಿನ ಯಾವ ದಿನದಂದೂ ನಿಂದಿಸಿದ್ದಿಲ್ಲ ನನ್ನ ಮನಸ್ಸಾಕ್ಷಿ.
7 : ನನ್ನ ಹಗೆಗೆ ದುಷ್ಟತನ ಗತಿಯಾಗಲಿ ಅನೀತಿವಂತನ ಪಾಡು ನನ್ನ ವಿರೋಧಿಗೆ ಒದಗಲಿ.
8 : ದೇವರೇ ದುಷ್ಟನ ಪ್ರಾಣ ತೆಗೆವ ಕಾಲಕ್ಕೆ ಅವನಿಗೆಲ್ಲಿಂದ ಬಂದೀತು ಭರವಸೆ!
9 : ಅವನಿಗೆ ಕಷ್ಟದುಃಖ ಬಂದೊದಗಲು ದೇವರು ಆಲೈಸುವನೆ ಅವನ ಮೊರೆಯನು?
10 : ಅವನು ಆನಂದಿಸುವನೆ ಸರ್ವಶಕ್ತನಲಿ? ಪ್ರಾರ್ಥನೆ ಮಾಡುವನೆ ಸರ್ವದಾ ಆತನಲಿ?
11 : ದೇವರ ಹಸ್ತಬಲವನು ಕುರಿತು ಬೋಧಿಸುವೆನು ಸರ್ವಶಕ್ತನ ಯೋಜನೆಯನು ನಿಮಗೆ ಮರೆಮಾಚೆನು.
12 : ಇಗೋ, ನೀವೆಲ್ಲರೂ ಇದನು ನೋಡಿದ್ದೀರಿ ಖುದ್ದಾಗಿ ಮತ್ತೆ ಏಕೆ ವಾದಿಸುತ್ತೀರಿ ವ್ಯರ್ಥವಾಗಿ?”
13 : “ಹೀಗಿರುತ್ತವೆ ದುಷ್ಟನಿಗೆ ದೇವರಿಂದ ದೊರಕುವ ಪಾಲು ಹಿಂಸಾಚಾರಿಗೆ ಸರ್ವಶಕ್ತನಿಂದ ಸಿಗುವ ಸೊತ್ತು:
14 : ಅವನಿಗೆ ಮಕ್ಕಳು ಹೆಚ್ಚಿದರೂ ಕತ್ತಿಗೆ ತುತ್ತಾಗುವರು ಅವನ ಸಂತತಿಯವರಿಗೆ ಊಟದ ಕೊರತೆ ತಪ್ಪದು.
15 : ಅವನ ಮನೆಯವರಲ್ಲಿ ಉಳಿದವರು ಗುಳಿಸೇರುವರು ವ್ಯಾಧಿಯಿಂದ ಅವನ ವಿಧವೆಯರು ಅವನಿಗೆ ನೆರವಾಗುವರು ಉತ್ತರಕ್ರಿಯೆಗಳಿಂದ.
16 : ಅವನು ಬೆಳ್ಳಿಯನ್ನು ಕೂಡಿಸಿಟ್ಟಿದ್ದರೂ ಧೂಳಿನಷ್ಟು, ವಸ್ತ್ರಗಳನು ಗುಡ್ಡೆ ಮಾಡಿಟ್ಟಿದ್ದರೂ ಮಣ್ಣಿನಷ್ಟು.
17 : ಸಜ್ಜನರು ಧರಿಸಿಕೊಳ್ಳುವರು ಆ ವಸ್ತ್ರಗಳನು ನಿರ್ದೋಷಿಗಳು ಹಂಚಿಕೊಳ್ಳುವರು ಆ ಬೆಳ್ಳಿಯನು.
18 : ಜೇಡರ ಹುಳದ ಗೂಡಿನಂತೆ ಕವಲುಗಾರನ ಗುಡಿಸಿಲಂತೆ ಬಡಕಲಾಗುವುದು ಅವನು ಕಟ್ಟಿಕೊಂಡ ಮನೆ.
19 : ಅವನು ನಿದ್ರಿಸ ಹೋಗುತ್ತಾನೆ ಹಣವಂತನಾಗಿ ಕಣ್ಣು ತೆರೆಯುತ್ತಲೆ ಇಲ್ಲವಾಗಿರುತ್ತದೆ ಆಸ್ತಿ! ಮತ್ತೆ ಇರುತ್ತಾನೆ ನಿದ್ರೆಕಾಣದವನಾಗಿ.
20 : ವಿಪತ್ತುಗಳು ಅವನನ್ನು ಹಿಂದಟ್ಟಿ ಹಿಡಿಯುವುವು ಹೊಳೆಯಂತೆ ಬಿರುಗಾಳಿ ಅವನನ್ನು ಅಪಹರಿಸುವುದು ರಾತ್ರಿಯಲ್ಲೆ.
21 : ಅವನು ತೂರಿಹೋಗದಿರನು ಮೂಡಣಗಾಳಿ ಬಡಿಯುವುದರಿಂದ ಅವನನ್ನು ಹೊಡೆದು ಹಾರಿಸಿಬಿಡುವುದು ಅವನಿರುವ ಜಾಗದಿಂದ.
22 : ಅವನ ಮೇಲೆ ಅದು ಬೀಸುತ್ತದೆ ನಿರ್ದಾಕ್ಷಿಣ್ಯ ದಿಂದ ತಪ್ಪಿಸಿಕೊಳ್ಳಲು ಅವನು ಯತ್ನಿಸುತ್ತಾನೆ ಅದರ ಹೊಡೆತದಿಂದ.
23 : ಜನರು ಹಾಸ್ಯಮಾಡುತ್ತಾರೆ ಚಪ್ಪಾಳೆ ತಟ್ಟಿ ಅವನನ್ನು ಹೊರಗಟ್ಟುತ್ತಾರೆ ಛೀಮಾರಿ ಹಾಕಿ.”

· © 2017 kannadacatholicbible.org Privacy Policy