Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಯೋಬ


1 : ಸರ್ವಶಕ್ತಸ್ವಾಮಿ ಕಾಲರಾಶಿಯನ್ನೇಕೆ ನೇಮಿಸಿಟ್ಟುಕೊಂಡಿಲ್ಲ? ಆತನನ್ನು ಅರಿತವರಿಗೆ ಆತನ ದಿನಗಳೇಕೆ ಗೋಚರವಾಗುವುದಿಲ್ಲ?
2 : ಎಲ್ಲೆ ಮೇರೆಗಳನ್ನು ಸರಿಸಿಕೊಳ್ಳುವವರುಂಟು ಅಪಹರಿಸಿಕೊಂಡ ದನಕುರಿಗಳನ್ನು ಸಾಕಿಕೊಳ್ಳುವವರುಂಟು.
3 : ಅನಾಥರ ಕತ್ತೆಗಳನು ಹೊಡೆದುಕೊಂಡು ಹೋಗುತ್ತಾರೆ ವಿಧವೆಯರ ಎತ್ತುಗಳನು ಒತ್ತೆಯಾಗಿ ತೆಗೆದುಕೊಳ್ಳುತ್ತಾರೆ
4 : ದಿಕ್ಕಿಲ್ಲದವರನು ದಾರಿತಪ್ಪಿಸುತ್ತಾರೆ ನಾಡಿನ ಬಡವರನು ಅಡಗಿಸಿಬಿಡುತ್ತಾರೆ.
5 : ಆ ಬಡವರ ಪಾಡು ಅಡವಿಯ ಕಾಡುಕತ್ತೆಗಳಿಗೆ ಸಮಾನ ಹೊಟ್ಟೆಪಾಡಿಗಾಗಿ ಕೂಳನ್ನು ಹುಡುಕುತ್ತಾರೆ ಬೆಳಗಿನಿಂದ ಅವರ ಮಕ್ಕಳಿಗೆ ಆಹಾರ ಒದಗಿಸುತ್ತದೆ ಅರಣ್ಯ.
6 : ಹೊಟ್ಟೆಗಾಗಿ ಸೊಪ್ಪುಸದೆ ಕೊಯ್ದುಕೊಳ್ಳುತ್ತಾರೆ ಬಯಲಿನಲಿ ಹಕ್ಕಲನ್ನು ಆಯ್ದುಕೊಳ್ಳುತ್ತಾರೆ ದುಷ್ಟನ ದ್ರಾಕ್ಷಿತೋಟದಲಿ.
7 : ಬೆತ್ತಲೆಯಾಗಿ ಮಲಗುತ್ತಾರೆ ಬಟ್ಟೆಯಿಲ್ಲದೆ ಚಳಿಗಾಲವನ್ನು ಕಳೆಯುತ್ತಾರೆ ಹೊದಿಕೆಯಿಲ್ಲದೆ.
8 : ಮಲೆನಾಡಿನ ಭಾರಿಮಳೆಯಿಂದ ನೆನೆದುಹೋಗುತ್ತಾರೆ ಮರೆಯಿಲ್ಲದೆ ಕಲ್ಲುಬಂಡೆಗಳನು ಆಶ್ರಯಿಸುತ್ತಾರೆ.
9 : ತಂದೆಯಿಲ್ಲದ ಮಗುವನು ಕಿತ್ತುಕೊಳ್ಳುತ್ತಾರೆ ತಾಯಮೊಲೆಯಿಂದ. ಮಕ್ಕಳನು ಅಡವಾಗಿ ಪಡೆಯುತ್ತಾರೆ ಬಡವರಿಂದ.
10 : ಬಡವರೋ ಬಟ್ಟೆಯಿಲ್ಲದೆ ಅಲೆಯುತ್ತಾರೆ ಬೆತ್ತಲೆಯಾಗಿ ಸಿವುಡುಗಳನ್ನು ಹೊರುತ್ತಾರೆ ಹಸಿದವರಾಗಿ.
11 : ದಾಹಗೊಂಡೇ ದ್ರಾಕ್ಷಿಯನ್ನು ತುಳಿಯುತ್ತಾರೆ ತೊಟ್ಟಿಗಳಲ್ಲಿ ಎಣ್ಣೆಗಾಣವನ್ನು ಆಡಿಸುತ್ತಾರೆ ಕೋಟೆಗಳಲ್ಲಿ.
12 : ನಗರಗಳಲ್ಲಿ ನರಳುವವರಿದ್ದಾರೆ ಗಾಯಗೊಂಡವರು ಮೊರೆಯಿಡುತ್ತಾರೆ ಆದರೆ ದೇವರು ಕಿವಿಗೊಡದಿದ್ದಾನೆ.
13 : ಬೆಳಕನ್ನು ಪ್ರತಿಭಟಿಸುವವರಿದ್ದಾರೆ ಅದರ ಮಾರ್ಗವನ್ನು ತಿಳಿಯದೆ ಅದರ ಹಾದಿಯನ್ನು ಕೈಗೊಳ್ಳದೆ.
14 : ಕೊಲೆಪಾತಕ ಏಳುತ್ತಾನೆ ಮುಂಜಾನೆಯೇ ದೀನದಲಿತರನ್ನು ಕೊಂದುಹಾಕುತ್ತಾನೆ ರಾತ್ರಿಯಲ್ಲಿ ವರ್ತಿಸುತ್ತಾನೆ ಕಳ್ಳನಂತೆ.
15 : ವ್ಯಭಿಚಾರಿ ಸಂಜೆಯನೇ ಎದುರು ನೋಡುತ್ತಿರುತ್ತಾನೆ ಯಾರೂ ತನ್ನನ್ನು ಕಾಣದಂತೆ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಾನೆ.
16 : ಕಳ್ಳರು ಕತ್ತಲಲ್ಲಿ ಮನೆಗೆ ನುಗ್ಗುತ್ತಾರೆ ಕನ್ನ ಕೊರೆದು ಬೆಳಕು ಕಾಣದೆ ಇರುತ್ತಾರೆ ಹಗಲಲ್ಲಿ ಅವಿತುಕೊಂಡು.
17 : ಅಂಥವರಿಗೆ ಕಾರ್ಗತ್ತಲೇ ಬೆಳಗಿನ ಜಾವ ಕಾರ್ಗತ್ತಲಿನ ಅಪಾಯಗಳೇ ಅವರಿಗೆ ಪರಿಚಯ.
18 : “ದುರುಳನನು ಕೊಚ್ಚಿಕೊಂಡು ಹೋಗುವುದು ಪ್ರವಾಹ ಪೊಡವಿಯಲ್ಲಿನ ಅವನ ಆಸ್ತಿ ಶಾಪಗ್ರಸ್ತ ಅವನು ದ್ರಾಕ್ಷಿತೋಟಗಳ ಕಡೆಗೂ ಸುಳಿಯಲಾರ.
19 : ಬರಗಾಲ-ಬೇಸಿಗೆ ಹಿಮವನು ಹೀರಿಕೊಳ್ಳುವಂತೆ ಪಾತಾಳದ ಕೂಪ ಪಾಪಿಯನು ಸೆಳೆದುಕೊಳ್ಳುತ್ತದೆ.
20 : ಹೆತ್ತಕರುಳೇ ಅವನನು ಮರೆತುಬಿಡುವುದು ಹುಳು ಅವನ ಹೆಣವನು ಆಸೆಯಿಂದ ಕಬಳಿಸುವುದು. ಇನ್ನು ಅವನ ನೆನಪು ಯಾರಿಗೂ ಇರದು ಅಕ್ರಮವು ಮುರಿದು ಬಿದ್ದ ಮರದಂತಾಗುವುದು.
21 : ಮಕ್ಕಳಿಲ್ಲದ ಬಂಜೆಯನ್ನು ಅವನು ಬಾಧಿಸಿದ ವಿಧವೆಯರನು ಉದ್ದರಿಸದೇ ಹೋದ.
22 : ದೇವರಂತು ತನ್ನ ಶಕ್ತಿಯಿಂದ ಬಲಿಷ್ಠರನ್ನು ಉಳಿಸುತ್ತಾನೆ ತಮ್ಮ ಜೀವ ಇನ್ನುಳಿಯದು ಎಂದಿದ್ದರೂ ಅವರು ಉದ್ಧಾರವಾಗುತ್ತಾರೆ.
23 : ಅವರು ಆಧರಿಸಿ ನಿಂತಿರುವುದು ದೇವರಿತ್ತ ಅಭಯದ ನಿಮಿತ್ತ ಆತನ ಕಟಾಕ್ಷ ಅವರ ಮಾರ್ಗದತ್ತ.
24 : ಅವರು ಮೇಲೇರಿ ಮಾಯವಾಗುತ್ತಾರೆ ಕೊಂಚಕಾಲದ ಮೇಲೆ ಕೊಯ್ಯಲ್ಪಡುತ್ತಾರೆ ಸುಗ್ಗಿಯ ತೆನೆಗಳಂತೆ ಕೂಡಿಸಲ್ಪಡುತ್ತಾರೆ ಕೆಳಗೆ ಬಿದ್ದ ಕಾಳಿನಂತೆ.
25 : ಈ ಮಾತು ಅಬದ್ಧವೆಂದು ಯಾರು ಸ್ಥಾಪಿಸಬಲ್ಲರು? ನಾನು ಸುಳ್ಳುಗಾರನೆಂದು ನಿಮ್ಮಲ್ಲಿ ಯಾರು ತೋರಿಸಬಲ್ಲನು?”

· © 2017 kannadacatholicbible.org Privacy Policy