1 : ಆಗ ಯೋಬನು
2 : “ನನ್ನ ದುಃಖಪ್ರಲಾಪ ಈಗಲೂ
ಕಟುವಾಗಿದೆ
ನಾನು ನಿಟ್ಟುಸಿರಿಡುವಾಗಲೂ ದೇವರ
ಹಸ್ತ ಭಾರವಾಗಿದೆ.
3 : ಆಹಾ! ಆತನ ದರ್ಶನ ನನಗೆ ದೊರಕುವುದೆಲ್ಲಿ?
ನಾನು ಸೇರಬಹುದಿತ್ತಲ್ಲಾ ಆತನ
ಸನ್ನಿಧಿಯಲ್ಲಿ !
4 : ನನ್ನ ನ್ಯಾಯವನ್ನು ಆತನ ಮುಂದೆ
ವಿವರಿಸಬಹುದಿತ್ತು
ಬಾಯ್ತುಂಬಾ ಆತನೊಡನೆ
ವಾದಿಸಬಹುದಿತ್ತು.
5 : ಆತನ ಹೇಳಿಕೆಗಳನ್ನು ವಿವೇಚಿಸಬಹುದಿತ್ತು
ಆತನ ಪ್ರತ್ಯುತ್ತರಗಳನ್ನು
ತಿಳಿದುಕೊಳ್ಳಬಹುದಾಗಿತ್ತು.
6 : ಆತ ನನ್ನೊಡನೆ ವ್ಯಾಜ್ಯವಾಡುವನೋ
ಶಕ್ತಿಸಾಮಥ್ರ್ಯದಿಂದ?
ಇಲ್ಲ, ಆಲಿಸುವನು ನನ್ನ ವಿಜ್ಞಾಪನೆಯನು
ಗಮನದಿಂದ.
7 : ಅಲ್ಲಿ ಸಜ್ಜನನಿಗೆ ಮಾತ್ರ ವಾದಿಸಲು ಸಾಧ್ಯ.
ನಿತ್ಯವಾದ ಬಿಡುಗಡೆ ಆ ನ್ಯಾಯಾಧೀಶನಿಂದ
ನನಗೆ ಲಭ್ಯ.
8 : ಮುಂದೆ ಹೋದರೂ ದೇವರು ನನಗೆ
ಕಾಣಸಿಗನಯ್ಯಾ
ಹಿಂದೆ ಬಂದರೂ ಆತ ನನಗೆ
ಕಾಣಸಿಗುವುದಿಲ್ಲವಯ್ಯಾ!
9 : ಎಡಗಡೆ ಹುಡುಕಿದರೂ ನೋಡಲಾಗದಯ್ಯಾ
ಬಲಗಡೆ ತಿರುಗಿದರೂ ಗೋಚರವಾಗದಯ್ಯಾ!
10 : ಆತನಾದರೊ ಬಲ್ಲ ನಾನು ಹಿಡಿವ ದಾರಿಯನು
ಆತ ನನ್ನನು ಶೋಧಿಸಿದರೆ ಚೊಕ್ಕ
ಬಂಗಾರವಾಗುವೆನು.
11 : ಆತನ ಹೆಜ್ಜೆಯ ಜಾಡಿನಲ್ಲೇ ನಾನು ಕಾಲಿಟ್ಟೆ
ಓರೆಯಾಗದೆ ಆತನ ದಾರಿಯನ್ನೇ ಹಿಡಿದೆ.
12 : ನಾ ಬಿಟ್ಟಗಲಲಿಲ್ಲ ಆತನ ತುಟಿಯಿಂದ ಹೊರಟ
ಆಜ್ಞೆಗಳನು
ನನ್ನೆದೆಯಲಿ ನಿಧಿಯಾಗಿಟ್ಟೆ ಆತನ ಬಾಯಿಂದ
ಬಂದ ಮಾತುಗಳನ್ನು.
13 : ಆತನದು ಏಕಚಿತ್ತ; ಅದನು
ಬದಲಾಯಿಸಲಸಾಧ್ಯ
ಆತ ಬಯಸಿದ್ದೆ ಸಿದ್ದಿಯಾದಕಾರ್ಯ.
14 : ನನಗೆ ವಿಧಿತವಾದುವುಗಳನೆ ಕಾರ್ಯ
ಗೊಳಿಸುತ್ತಾನೆ
ಈ ಪರಿಯ ಹಲವಾರು ಯೋಜನೆಗಳು
ಆತನಲ್ಲಿವೆ.
15 : ಈ ಕಾರಣ ಆತನ ಸನ್ನಿಧಿಯಲಿ ನಾನು
ಅಂಜುಬುರುಕ
ಇದನ್ನು ನೆನೆದು ಮನದಲಿ ನಾನು ಭಯಪೀಡಿತ.
16 : ದೇವರೇ ನನ್ನ ಶಕ್ತಿಯನು ಕುಂದಿಸಿಹನು
ಸರ್ವಶಕ್ತ ನನ್ನನು ಆತಂಕಗೊಳಿಸಿಹನು.
17 : ನನ್ನ ವಿನಾಶಕ್ಕೆ ಈ ಅಂಧಕಾರವು ನಿಮಿತ್ತವಲ್ಲ
ನನ್ನ ಮುಖಕ್ಕೆ ಕವಿದಿರುವ ಈ ಕಾರ್ಗತ್ತಲು
ಕಾರಣವಲ್ಲ.