1 : ಆಮೇಲೆ ತೇಮಾನ್ಯನಾದ ಎಲೀಫಜನು
ಮತ್ತೆ ಹೀಗೆಂದನು.
2 : “ನರಮಾನವನಿಂದ ದೇವರಿಗೇನು
ಪ್ರಯೋಜನ?
ಬುದ್ಧಿವಂತನಾಗಿ ನಡೆದುಕೊಂಡರೆ ಅದು
ಅವನಿಗೇ ಪ್ರಯೋಜನ.
3 : ನೀನು ಸಜ್ಜನನಾಗಿದ್ದರೆ ಅದರಿಂದ
ಸರ್ವಶಕ್ತನಿಗೆ ಸುಖವೇ?
ನಿನ್ನ ನಿರ್ದೋಷ ನಡತೆಯಿಂದ ಆತನಿಗೆ
ಲಾಭವೇ?
4 : ನಿನ್ನ ಭಯಭಕ್ತಿಗಾಗಿ ಆತ ನಿನ್ನನ್ನು
ಶಿಕ್ಷಿಸುತ್ತಾನೆಯೇ?
ಅದಕ್ಕಾಗಿ ನಿನ್ನನು ನ್ಯಾಯತೀರ್ಪಿಗೆ
ಗುರಿಪಡಿಸುತ್ತಾನೆಯೆ?
5 : ಇಲ್ಲ, ಹಾಗೆಮಾಡುವುದು ನಿನ್ನ ಕೆಟ್ಟತನ
ಹೆಚ್ಚಿದುದಕ್ಕಾಗಿ.
ನಿನ್ನ ಪಾಪಗಳಿಗೆ ಮಿತಿಯಿಲ್ಲದುದಕ್ಕಾಗಿ.
6 : ನೀನು ನಿನ್ನ ಸೋದರನಿಂದ ಬಟ್ಟೆಯನು
ಒತ್ತೆಯಾಗಿ ಪಡೆದೆ
ಬಟ್ಟೆಕಿತ್ತುಕೊಂಡು ಅವನನ್ನು
ಬೆತ್ತಲೆಯಾಗಿಸಿದೆ.
7 : ದಣಿದವನಿಗೆ ನೀ ಕೊಡಲಿಲ್ಲ ಪಾನ
ಹಸಿದವನಿಗೆ ಬಡಿಸಲಿಲ್ಲ ಅನ್ನ.
8 : ನಿನ್ನನಿಸಿಕೆಯಂತೆ ಬಲಿಷ್ಠನಿಗೆ ನಾಡಿನೊಡೆತನ
ಘನವಂತನಿಗೇ ಅಲ್ಲಿ ಮನೆತನ.
9 : ವಿಧವೆಯರನ್ನು ಬರಿಗೈಯಲ್ಲಿ ಕಳಿಸಿಬಿಟ್ಟೆ ತಬ್ಬಲಿಯ ಕೈಗಳನು ನೀನು ಮುರಿದುಬಿಟ್ಟೆ.
10 : ನಿನ್ನ ಸುತ್ತಲು ಊರುಲುಗಳು ಕಾದಿವೆ
ಈ ಕಾರಣ ನಿನ್ನನು ತಲ್ಲಣಗೊಳಿಸಲಿದೆ
ಭಯಭ್ರಾಂತಿ ತಟ್ಟನೆ.
11 : ನಿನಗೆ ದಾರಿಕಾಣದಿರಲು ಬೆಳಕೆ ಕತ್ತಲಾಗಿದೆ
ನಿನ್ನನು ಮುಳುಗಿಸಲು ಜಲಪ್ರವಾಹವಿದೆ.
12 : ದೇವರು ಉನ್ನತ ಆಕಾಶದಲ್ಲಿ ಇದ್ದಾನಲ್ಲವೇ?
ನಕ್ಷತ್ರಗಳನ್ನು ನೋಡು, ಎಷ್ಟು ಗಹನವಾಗಿವೆ!
13 : ಈ ನಿಮಿತ್ತ ನೀನು, ‘ದೇವರಿಗೇನು ಗೊತ್ತು?
ನ್ಯಾಯ ತೀರಿಸಬಲ್ಲನೆ ಕಾರ್ಗತ್ತಲು
ಅಡ್ಡವಿರಲು?
14 : ಆತ ನೋಡಲಾಗದಂತೆ ದಟ್ಟವಾದ ಮೋಡಗಳ
ಪರದೆ ಇದೆ
ಆತನ ನಡೆದಾಟವೆಲ್ಲ ಆಕಾಶದ
ಮೇಲ್ಗಡೆಯಲ್ಲವೆ?’ ಎಂದೆ.
15 : ನೀನು ಹಿಡಿದಿರುವುದು ಪುರಾತನ ಹಾದಿಯನೇ
ದುರ್ಜನರು ನಡೆದುಬಂದ ಆ ಬೀದಿಯನೇ.
16 : ಅವರನ್ನು ಅಕಾಲ ಮರಣ ಅಪಹರಿಸಿತು
ಅವರಿಗಿದ್ದ ಅಡಿಪಾಯ ನೀರುಪಾಲಾಯಿತು.
17 : ದೇವರು ಅವರ ಮನೆಗಳನ್ನು ಸಂಪತ್ತಿನಿಂದ
ತುಂಬಿಸಿದ್ದರೂ
ಅವರು ಆತನಿಗೆ, ‘ತೊಲಗಿಹೋಗು ನಮ್ಮಿಂದ’
ಎಂದರು.
18 : ಅಲ್ಲದೆ, ‘ಸರ್ವಶಕ್ತ ನಮಗೇನು ಮಾಡಬಲ್ಲ?’
ಎಂದುಕೊಂಡರು
ಅಕಟ, ನನ್ನಿಂದ ದೂರ ಇರಲಿ! ದುರುಳರ ಈ
ಮಾತು.
19 : ದುರುಳರ ದುರ್ಗತಿಯನು ನೋಡಿ ಸಜ್ಜನರು
ಹಿಗ್ಗುವರು
ನಿರ್ದೋಷಿಗಳು ಅವರನು ಈ ಪರಿ ಅಣಕಿಸಿ
ಹಾಸ್ಯಮಾಡುವರು:
20 : ‘ನೋಡಿ, ನಮ್ಮ ವೈರಿಗಳು ಹೇಗೆ ಹಾಳಾಗಿ
ಹೋದರು!
ಅವರು ಬಿಟ್ಟುಹೋದ ಆಸ್ತಿ ಬೆಂಕಿಯಿಂದ
ಭಸ್ಮವಾಯಿತು!’
21 : ದೇವರ ಚಿತ್ತಕ್ಕೆ ಮಣಿದು ಸಮಾಧಾನದಿಂದಿರು
ಇದರಿಂದ ನಿನಗೆ ಶುಭವಾಗುವುದು.
22 : ಆತನ ಬಾಯಿಂದ ಬುದ್ಧಿ ಕಲಿತುಕೊ
ಆತನ ಮಾತನು ಹೃದಯದಲ್ಲಿಟ್ಟುಕೊ
23 : ಸರ್ವಶಕ್ತನ ಕಡೆಗೆ ಹಿಂದಿರುಗಿದೆಯಾದರೆ
ನಿನ್ನ ಗುಡಾರಗಳಿಂದ ಅನ್ಯಾಯವನು
ತೊರೆದೆಯಾದರೆ, ನೀನು ಉದ್ದಾರವಾಗುವೆ.
24 : ಎಸೆದುಬಿಡು ನಿನ್ನ ಬಂಗಾರವನು ಧೂಳಿಗೆ
ಓಫೀರ್ ನಾಡಿನ ಅಪರಂಜಿಯನು ನದಿತೀರದ
ಕಲ್ಲುಗಳಿಗೆ.
25 : ಸರ್ವಶಕ್ತನಾದ ಸ್ವಾಮಿಯೇ ನಿನಗೆ
ಬಂಗಾರವಾಗಿರಲಿ
ಆತನೇ ನಿನಗೆ ಬೆಳ್ಳಿಯ ರಾಶಿಯಾಗಿರಲಿ.
26 : ಆಗ ನೀನು ಸರ್ವಶಕ್ತನಲಿ ಆನಂದಿಸುವೆ
ತಲೆಯೆತ್ತಿ ದೇವರಿಗೆ ಅಭಿಮುಖಿಯಾಗುವೆ.
27 : ಆತನನು ಪ್ರಾರ್ಥಿಸುವೆ, ಆತ ಆಲಿಸುವನು
ತೀರಿಸುವೆ ಆತನಿಗೆ ನೀ ಹೊತ್ತ ಹರಕೆಗಳನು.
28 : ನಿನ್ನ ಯೋಜನೆಗಳು ಸಫಲವಾಗುವುವು
ನಿನ್ನ ಮಾರ್ಗಗಳು ಪ್ರಜ್ವಲಿಸುವುವು.
29 : ದೇವರು ಕೆಳಕ್ಕೆ ದಬ್ಬುತ್ತಾನೆ ಗರ್ವಿಗಳನು
ಉದ್ಧರಿಸುತ್ತಾನೆ ದೀನ ಮನಸ್ಕರನು.
30 : ಆತ ವಿಮೋಚಿಸುತ್ತಾನೆ ನಿರ್ದೋಷಿಗಳನು
ನಿನ್ನ ಕೈ ಶುದ್ಧವಿರಲಿ ವಿಮೋಚಿಸುವನು
ನಿನ್ನನು.