1 : ಆಗ ಶೂಹ್ಯನಾದ ಬಿಲ್ದದನು ಹೀಗೆಂದು ಉತ್ತರಿಸಿದ:
2 : “ಯೋಬನೇ, ಇನ್ನೆಷ್ಟರವರೆಗೆ ಮಾತುಗಳಿಗಾಗಿ
ಹೊಂಚುಹಾಕುತ್ತಿರುವೆ?
ಮೊದಲು ಆಲೋಚಿಸಿನೋಡು, ಆಮೇಲೆ ಬಾ
ಮಾತುಕತೆಗೆ.
3 : ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ?
ನಿನ್ನ ದೃಷ್ಟಿಯಲಿ ನಾವೇನು ಅಷ್ಟು ದಡ್ಡರೆ?
4 : ಸಿಟ್ಟಿನಿಂದ ನಿನ್ನನ್ನೆ ಸೀಳಿಕೊಳ್ಳುತ್ತಿರುವವನೇ,
ನಿನ್ನ ನಿಮಿತ್ತ ಇಡೀ ಲೋಕ ಬಿಕೋ ಎನ್ನಬೇಕೆ?
ಬೆಟ್ಟಗುಡ್ಡಗಳು ಸ್ಥಳಬಿಟ್ಟು ಜರುಗಬೇಕೆ?
5 : ಹೌದು, ದುರುಳನ ದೀಪ ಆರಿಹೋಗುವುದು
ಅವನ ಒಲೆಯು ಉರಿಯದೆ ಹೋಗುವುದು.
6 : ಅವನ ಗುಡಾರದ ಬೆಳಕು ಕತ್ತಲಾಗುವುದು
ಅವನ ಮೇಲಣ ಸೊಡರು ನಂದಿಹೋಗುವುದು.
7 : ಅವನ ಬಿರುಸಾದ ಹೆಜ್ಜೆಗಳು ಜಡವಾಗುವುವು
ಅವನು ಹಾಕಿದ ಯೋಜನೆಗಳು ಅವನನ್ನೆ ಕೆಡವಿ
ಹಾಗುವುವು.
8 : ಅವನನ್ನು ಅವನ ಕಾಲುಗಳೆ ಬಲೆಗೆ
ಬೀಳಿಸುವುವು
ಅವನನ್ನು ಪಾಳುಗುಂಡಿಯ ಮೇಲೆ ನಡೆಸುವುವು.
9 : ಕತ್ತರಿಬೋನು ಅವನ ಹಿವ್ಮ್ಮಡಿಯನ್ನು
ಕಚ್ಚುವುದು
ಆ ಕಳ್ಳಉರುಲು ಅವನನ್ನು ಸಿಕ್ಕಿಸಿಕೊಳ್ಳುವುದು.
10 : ಅವನಿಗಾಗಿ ಜಾಲವನ್ನು ಅವಿತಿಡಲಾಗಿದೆ
ದಾರಿಯಲಿ
ಅವನಿಗಾಗಿ ಪಾಶವನ್ನು ಹೂತಿಡಲಾಗಿದೆ
ನೆಲದಲಿ.
12 : ಕುಂದಿ ಹೋಗುವುದು ಅವನ ಕಿಮ್ಮತ್ತು
ಅವನು ಬೀಳುವುದನ್ನೇ ಕಾದಿದೆ ಆಪತ್ತು.
13 : ರೋಗರುಜಿನಗಳು ಅವನ ಚರ್ಮವನು
ಚೂರುಚೂರಾಗಿ ತಿಂದುಬಿಡುವುವು
ಅಂಗಾಂಗವಾಗಿ ಮೃತ್ಯುಕಾರಕ ರೋಗವು
ಅವನನ್ನು ನುಂಗಿಬಿಡುವುದು.
14 : ನೆಮ್ಮದಿಯ ಗುಡಾರದಿಂದ ಅವನನ್ನು
ಎಳೆದು ಹಾಕುವುದು ಹೊರಗೆ
ಸಾಗಿಸಿಕೊಂಡು ಹೋಗುವುದವನನ್ನು
ಅತಿಭಯಂಕರ ರಾಜನೆಡೆಗೆ.
15 : ಅನ್ಯಜನರು ವಾಸಮಾಡುವರು ಅವನ
ಗುಡಾರದೊಳಗೆ
ಗಂಧಕವನ್ನು ಸುರಿಸಲಾಗುವುದು ಅವನ
ಮನೆಯ ಮೇಲೆ.
16 : ಒಣಗುವುದು ಅವನ ಬುಡ ಕೆಳಗಡೆ
ಬಾಡುವುದು ಅವನ ರೆಂಬೆ ಮೇಲ್ಗಡೆ.
17 : ಅವನ ಸ್ಮರಣೆ ಅಳಿದು ಹೋಗುವುದು ಜಗದಲಿ
ಇಲ್ಲವಾಗುವುದು ಅವನ ಹೆಸರು ನಾಡಿನಲಿ.
18 : ಅವನನ್ನು ಬೆಳಕಿನಿಂದ ತಳ್ಳುವರು ಕತ್ತಲಿಗೆ
ಅಟ್ಟಿಬಿಡುವರು ಅವನನ್ನು ಲೋಕದಿಂದಲೆ.
19 : ಅವನ ಮಗ, ಮೊಮ್ಮಗರಾರೂ ಇರರು
ಸ್ವಜನರಲಿ
ಯಾರೂ ಉಳಿಯರು ಅವನು ವಾಸಿಸಿದ
ಸ್ಥಳದಲಿ.
20 : ಅವನ ಗತಿಯನು ಕೇಳಿ ಚಕಿತಗೊಳ್ವರು
ಪಡುವಣದವರು
ಅಂತೆಯೇ ಭಯಭ್ರಾಂತರಾಗುವರು
ಮೂಡಣದವರು.
21 : ಕೇಡಿಗರ ನಿವಾಸಗಳ ಗತಿ ಹೀಗೆಯೇ
ದೇವರನು ಅಲಕ್ಷಿಸುವವನ ಸ್ಥಿತಿ ಇದುವೇ.”