1 : “ನನಗೆ ಉಸಿರು ಕಟ್ಟುತ್ತಿದೆ
ನನ್ನ ದಿನಗಳು ಮುಗಿದಿವೆ
ಸಮಾಧಿ ನನಗಾಗಿ ಕಾದಿದೆ.
2 : ಚೇಷ್ಟೆಗಾರರಿದ್ದಾರೆ ನನ್ನ ಸುತ್ತಮುತ್ತ
ನನ್ನ ಕಣ್ಮುಂದಿದೆ ಸದಾ ಅವರ ಕೆಣಕಾಟ.
3 : ಓ ದೇವರೇ, ನೀನೆ ನನಗೆ ಈಡು ಕೊಡುವವನು
ನಿನ್ನನ್ನು ಬಿಟ್ಟರೆ ನನಗಿಲ್ಲ
ಒಪ್ಪಂದಮಾಡುವವರಾರು.
4 : ಜ್ಞಾನ ಪ್ರವೇಶಿಸದಂತೆ ನೀ ಅವರ ಮನಸ್ಸನು
ಮುಚ್ಚಿರುವೆ
ಹೀಗೆ ಅವರು ಜಯಶೀಲರಾಗದಂತೆ
ತಡೆದಿರುವೆ.
5 : ಯಾವನು ಸ್ವಾರ್ಥಕ್ಕಾಗಿ ಮಿತ್ರನ ಮೇಲೆ
ಹೊರಿಸುತ್ತಾನೋ ದೂರು
ಅಂಥವನ ಮಕ್ಕಳ ಕಣ್ಣುಗಳು
ಮಂಕಾಗಿಹೋಗದಿರವು.
6 : ದೇವರು ನನ್ನನು ಈಡಾಗಿಸಿದ್ದಾನೆ ಅನ್ಯರ
ಕಟ್ಟುಗಾದೆಗೆ
ನನ್ನ ಮುಖ ಗುರಿಯಾಗಿದೆ ಜನರ
ಉಗುಳಾಟಕ್ಕೆ.
7 : ನನ್ನ ಕಣ್ಣು ದುಃಖದಿಂದ ಮೊಬ್ಬಾಗಿವೆ
ಅಂಗಗಳೆಲ್ಲ ನೆರಳಂತೆ ನಿಸ್ಸಾರವಾಗಿವೆ.
8 : ಇದನ್ನು ಕಂಡು ಸಜ್ಜನರು ನಿಬ್ಬೆರಗಾಗಿದ್ದಾರೆ
ದುರ್ಜನರ ಬಗ್ಗೆ ನಿರಪರಾಧಿ
ಎಚ್ಚರಗೊಂಡಿದ್ದಾನೆ.
9 : ಸನ್ಮಾರ್ಗದಲ್ಲಿ ಮುಂದುವರೆವವನು ಸಜ್ಜನನು
ಬಲಗೊಳ್ಳುತ್ತಲೇ ಇರುವನು ಶುದ್ಧಹಸ್ತನು.
10 : ನೀವೆಲ್ಲರೂ ಮತ್ತೆ ಬನ್ನಿ ವಾದಕ್ಕೆ
ನಿಮ್ಮಲ್ಲಿ ಜ್ಞಾನಿಯೊಬ್ಬನನ್ನೂ ನಾ ಕಾಣೆ.
11 : ಮುಗಿದುಹೋದವು ನನ್ನ ದಿನಗಳು
ಭಂಗವಾದವು ನನ್ನ ಗುರಿಧ್ಯೇಯಗಳು.
12 : ಇರುಳನ್ನು ಹಗಲೆಂದು ಸಾಧಿಸುತ್ತಿರುವರು
ಕತ್ತಲಿಂದಲೇ ಬೆಳಕು ಬೇಗ ಬರಲಿದೆ
ಎನ್ನುತ್ತಿರುವರು.
13 : ಪಾತಾಳವನ್ನೇ ನನ್ನ ಮನೆಯೆಂದು ನಾನು
ಭಾವಿಸಿದೆನಾದರೆ
ಕತ್ತಲಲ್ಲೇ ನನ್ನ ಹಾಸಿಗೆಯನ್ನು
ಹಾಕಿಕೊಂಡೆನಾದರೆ,
14 : ಸಮಾಧಿಯನ್ನೇ ‘ನನ್ನ ತಾಯಿ, ನನ್ನ ತಂಗಿ’
ಎಂದೆನಾದರೆ.
15 : ನನ್ನ ನಂಬಿಕೆ-ನಿರೀಕ್ಷೆ ಎಲ್ಲಿಯದು?
ನನ್ನ ಭಾಗ್ಯವನ್ನು ಯಾರು ನೋಡಿಯಾರು?
16 : ಇವು ನನ್ನ ಸಂಗಡ ಪಾತಾಳಕ್ಕೆ ಬರಲಾದೀತೆ?
ನಾವು ಜೊತೆಯಾಗಿ ಮಣ್ಣಿಗೆ ಸೇರಲಾದೀತೆ?”