1 : ಆಗ ಯೋಬನು ಕೊಟ್ಟ ಉತ್ತರ:
2 : “ಇಂಥ ಎಷ್ಟೋ ಮಾತುಗಳನ್ನು
ಕೇಳಿದ್ದೇನೆ
ನೀವೆಲ್ಲರು ಆದರಿಸುವವರಲ್ಲ,
ಬಾಧಿಸುವವರೇ.
3 : ನಿಮ್ಮ ಗಾಳಿ ಮಾತುಗಳಿಗೆ ಇತಿಮಿತಿ
ಬೇಡವೇನು?
ಇಂಥ ಉತ್ತರ ಕೊಡಲು ನಿಮ್ಮನ್ನು
ಒತ್ತಾಯಪಡಿಸಿದ್ದೇನೆ?
4 : ನನ್ನ ಸ್ಥಿತಿಯಲ್ಲಿ ನೀವಿದ್ದಿದ್ದರೆ
ನಾನೂ ಮಾತಾಡಬಹುದಿತ್ತು ನಿಮ್ಮಂತೆ.
ನಿಮಗೆ ವಿರುದ್ಧ ನಾನೂ ಮಾತು
ಬೆಳೆಸಬಹುದಿತ್ತು
ನಿಮ್ಮ ವಿಷಯದಲ್ಲಿ ನಾನೂ
ತಲೆಯಾಡಿಸಬಹುದಿತ್ತು.
5 : ನಾನು ನಿಮಗೆ ಬಾಯಿಮಾತಿನಿಂದ ಧೈರ್ಯ
ಹೇಳಬಹುದಿತ್ತು
ತುಟಿಮಾತುಗಳಿಂದ ಆದರಿಸಿ ಸಾಂತ್ವನ
ನೀಡಬಹುದಿತ್ತು.
6 : ನಾನು ಮಾತಾಡಿದರೆ ನನ್ನ ನೋವು
ನಿವಾರಣೆಯಾಗದು
ನಾನು ಸುಮ್ಮನಿದ್ದರೆ ನನ್ನ ಕಷ್ಟ
ಪರಿಹಾರವಾಗದು.
7 : ದೇವರೇ, ದುಃಖದಿಂದ ನೀ ನನ್ನನ್ನು ಸವೆಸಿರುವೆ
ನನ್ನ ಬಂಧುಬಳಗದವರನ್ನು ಸದೆಬಡಿದಿರುವೆ.
8 : ನನ್ನ ಮುಖವೆಲ್ಲ ಸುಕ್ಕು ಹಿಡಿದಿದೆ
ನನ್ನ ಸಣಕಲುತನವೆ ನನಗೆ ವಿರುದ್ಧ
ಸಾq್ಷಯಾಗಿದೆ.
9 : ದೇವರ ಸಿಟ್ಟು ಸೀಳಿ ಹಾಳುಮಾಡುತ್ತಿದೆ
ಆತ ನನ್ನನ್ನು ನೋಡಿ ಹಲ್ಲುಕಡಿದಿದ್ದಾನೆ
ನನ್ನ ವೈರಿ ನನ್ನನ್ನು ದುರುಗುಟ್ಟಿ
ನೋಡುತ್ತಿದ್ದಾನೆ.
10 : ಜನರು ಬಾಯಿಕಿಸಿದು ನನ್ನನು ಅಣಕಿಸುತ್ತಾರೆ
ಛೀಮಾರಿ ಹಾಕಿ ನನ್ನ ದವಡೆಗೆ ಬಡಿದಿದ್ದಾರೆ
ನನಗೆ ವಿರುದ್ಧವಾಗಿ ಗುಂಪುಕಟ್ಟಿದ್ದಾರೆ.
11 : ದೇವರು ನನ್ನನ್ನೊಪ್ಪಿಸಿಬಿಟ್ಟಿದ್ದಾನೆ ತುಂಟರಿಗೆ
ನನ್ನನ್ನು ಎಸೆದು ಬಿಟ್ಟಿದ್ದಾನೆ ದುಷ್ಟರ ಕೈಗೆ.
12 : ನೆಮ್ಮದಿಯಾಗಿದ್ದ ನನ್ನನು ಒಡೆದು
ಬಡಿದುಹಾಕಿದ್ದಾನೆ
ಕುತ್ತಿಗೆ ಹಿಸುಕಿ ನನ್ನನು ತುಂಡಾಗಿಸಿದ್ದಾನೆ.
ಬಾಣಬಿಡಲು ನನ್ನನು
ಗುರಿಹಲಗೆಯಾಗಿಸಿಕೊಂಡಿದ್ದಾನೆ.
13 : ಮುತ್ತಿಕೊಂಡಿವೆ ನನ್ನನು ಆತನ ಬಾಣಗಳು
ನಿರ್ದಯೆಯಿಂದ ಅಂತರಂಗವನ್ನು
ಇರಿಯುತ್ತಿಹನು
ನೆಲದ ಮೇಲೆ ನನ್ನ ಪಿತ್ತವನು ಸುರಿಸುತ್ತಿಹನು.
14 : ಪೆಟ್ಟಿನ ಮೇಲೆ ಪೆಟ್ಟು ಕೊಟ್ಟು ನನ್ನನು ಬಡಕಲಾಗಿಸಿಹನು ಯುದ್ಧಶೂರನಂತೆ ಓಡಿಬಂದು ಮೇಲೆ ಬೀಳುತ್ತಿಹನು.
15 : ಗೋಣಿತಟ್ಟನ್ನು ಹೊಲಿದು ಮೈಗೆ
ಹಾಕಿಕೊಂಡಿರುವೆ
ನನ್ನ ಕೊಂಬನ್ನು ಬೂದಿಯೊಳಗೆ
ಬಾಗಿಸಿಟ್ಟಿರುವೆ.
16 : ಕಣ್ಣೀರು ಸುರಿಸಿ ನನ್ನ ಮುಖ ಕೆಂಪೇರಿದೆ
ನನ್ನ ಕಣ್ಣುಗಳಿಗೆ ಕಾರಿರುಳು ಕವಿದಿದೆ.
17 : ಆದರೂ ನಾನು ಹಿಂಸಾಚಾರಕ್ಕೆ ಕೈಹಾಕಿಲ್ಲ
ನಾನು ಮಾಡುವ ಪ್ರಾರ್ಥನೆ ನಿರ್ಮಲ.
18 : ಪೊಡವಿಯೇ, ನನ್ನ ನೆತ್ತರನ್ನು ನೀ ಮುಚ್ಚಬೇಡ
ನಾನು ಮಾಡುತ್ತಿರುವ ಮೊರೆಯನ್ನು
ನಿಲ್ಲಿಸಬೇಡ.
19 : ಇಗೋ, ನನ್ನ ಕಡೆಯ ಸಾಕ್ಷಿ ಸ್ವರ್ಗದಲ್ಲಿರುವನು
ನನ್ನ ಪರವಾದಿ ಮೇಲಣ ಲೋಕದಲ್ಲಿರುವನು.
20 : ಗೆಳೆಯರು ನನ್ನನ್ನು ಹೀಗಳೆಯುತ್ತಿರುವರು
ನಾನೋ ಸುರಿಸುತ್ತಿರುವೆ ದೇವರ ಮುಂದೆ
ಕಣ್ಣೀರು.
21 : ಇದು ನನಗೆ ನ್ಯಾಯ ದೊರಕಿಸಲಿ, ದೇವರ
ಮುಂದೆ
ತನ್ನ ಮಿತ್ರನಿಗಾಗಿ ಒಬ್ಬನು ವಾದಿಸುವಂತೆ.
22 : ನನ್ನ ವರ್ಷಗಳು ಕಳೆದು ಹೋಗುತ್ತಿವೆ
ಹಿಂತಿರುಗಲಾಗದ ಹಾದಿಯನು ನಾನು
ಹಿಡಿಯಲಿರುವೆ.