1 : ಆಗ ತೇಮಾನ್ಯನಾದ ಎಲೀಫಜನು
ಮತ್ತೆ ಹೀಗೆಂದು ಹೇಳಿದನು:
2 : “ಬುದ್ಧಿವಂತನು ಗಾಳಿಮಾತನ್ನಾಡುವುದು
ಸರಿಯೆ?
ಸುಡುಗಾಳಿಯಿಂದ ಹೊಟ್ಟೆ
ತುಂಬಿಸಿಕೊಳ್ಳಬಹುದೇ?
3 : ಅಂಥವನು ನಿಷ್ಪ್ರಯೋಜಕವಾಗಿ
ವಾದಿಸುತ್ತಾನೆಯೆ?
ನಿರರ್ಥಕವಾಗಿ ವ್ಯಾಜ್ಯವಾಡುತ್ತಾನೆಯೆ?
4 : ನೀನಾದರೊ ದೇವರ ಭಯಭಕ್ತಿಯನ್ನು
ಕೆಡಿಸುತ್ತಿರುವೆ
ದೇವರ ಧ್ಯಾನಕ್ಕೆ ಅಡ್ಡಿಬರುತ್ತಿರುವೆ.
5 : ನಿನ್ನ ಪಾಪವೆ ನಿನಗೆ ಮಾತನು ಕಲಿಸಿಕೊಟ್ಟಿದೆ ಕಪಟಿಗಳಾಡುವ ನುಡಿಯನೇ ನೀನು ಆರಿಸಿಕೊಂಡಿರುವೆ.
6 : ನಾನಲ್ಲ, ನಿನ್ನ ಬಾಯೇ, ನಿನ್ನನು
ಅಪರಾಧಿಯನ್ನಾಗಿಸುತ್ತಿದೆ
ನಿನ್ನ ತುಟಿಗಳೇ ನಿನಗೆ ವಿರುದ್ಧ
ಸಾಕ್ಷಿಕೊಡುತ್ತಿವೆ.
7 : ನೀನು ಮನ್ಮಜರಿಗೆಲ್ಲ ಆದಿಪುರುಷನೋ?
ಬೆಟ್ಟಗಳಿಗಿಂತ ಮುಂಚಿತವಾಗಿ
ಹುಟ್ಟಿದವನೋ?
8 : ದೇವರ ಆಲೋಚನಾಸಭೆಯಲಿ ನೀನು
ಭಾಗವಹಿಸಿದ್ದೆಯೋ?
ಜ್ಞಾನವೆಂಬುದು ನಿನಗೆ ಮಾತ್ರ ಮೀಸಲೋ?
9 : ನಮಗೆ ತಿಳಿಯದಿರುವುದು ನಿನಗೆ ತಿಳಿದಿದೆಯೆ?
ನಮಗೆ ಅರ್ಥವಾಗದಿರುವುದು ನಿನಗೆ
ಅರ್ಥವಾಗಿದೆಯೆ?
10 : ನಮ್ಮಲ್ಲಿದ್ದಾರೆ ತಲೆನರೆತವರು,
ವಯೋವೃದ್ಧರು
ನಿಮ್ಮಪ್ಪನಿಗಿಂತಲೂ ಹೆಚ್ಚು
ಮುದುಕರಾದವರು.
11 : ಕೇವಲವಾಯಿತೋ ನಿನಗೆ ದೇವರಿತ್ತ ಸಾಂತ್ವನ?
ನಿನಗೆ ದೊರೆತ ಮೃದುವಾದ ಹಿತವಚನ?
12 : ನಿನ್ನ ಹೃದಯ ನಿನ್ನನ್ನು ದೂರ ಒಯ್ದಿದೆ, ಏಕೆ?
ನಿನ್ನ ಕಣ್ಣು ಕಿಡಿಕಾರುತ್ತಿದೆ ಏಕೆ?
13 : ದೇವರಿಗೆ ವಿರುದ್ಧ ಕುದಿಯುತ್ತಿರುವೆ ಏಕೆ?
ಬಾಯಿಂದ ಮಾತು ಹರಿಯುತ್ತಿವೆ ಏಕೆ?
14 : ನರನು ಎಷ್ಟರವನು? ಅವನು ಪರಿಶುದ್ಧನಿರಲು
ಸಾಧ್ಯವೆ?
ಸ್ತ್ರೀಯರಲ್ಲಿ ಹುಟ್ಟಿದವನು
ನೀತಿವಂತನಾಗಿರಬಹುದೆ?
15 : ದೇವರಿಗೋ, ತನ್ನ ದೂತರಲ್ಲೂ ನಂಬಿಕೆಯಿಲ್ಲ
ಆಕಾಶವೂ ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ
16 : ಇಂತಿರಲು, ಮತ್ತಷ್ಟೂ ಮಲಿನನಲ್ಲವೆ ನರಮಾನವನು? ಅಸಹ್ಯನು, ಅಕ್ರಮಿಯು, ಕೇಡನ್ನು ನೀರಿನಂತೆ ಕುಡಿಯುವವನು?
17 : ಕೇಳು ನಾನು ತಿಳಿಸುವ ಈ ಸಂಗತಿಯನು
ನಾನು ಕಂಡದ್ದನ್ನೇ ನಿನಗೆ ವಿವರಿಸುವೆನು:
18 : ಜ್ಞಾನಿಗಳು ತಮ್ಮ ಪೂರ್ವಜರಿಂದ ಕಲಿತಿದ್ದನು
ಮುಚ್ಚುಮರೆಯಿಲ್ಲದೆ ಪ್ರಕಟಿಸಿದವುಗಳನು
ಕೇಳು-ನಾನು ನಿನಗೆ ತಿಳಿಸುವೆನು:
19 : ಅವರು ತಮ್ಮ ನಾಡಿನ ಬಾಧ್ಯತೆಯನ್ನು
ಕಳೆದುಕೊಂಡವರಲ್ಲ
ಪರದೇಶೀಯರು ಅವರ ಮಧ್ಯೆ ಹಾದು
ಹೋಗುವಂತಿರಲಿಲ್ಲ.
20 : ಹಿಂಸಾತ್ಮಕನ ವರುಷಗಳು ಎಣಿಸಲಾಗಿವೆ
ಆ ದುಷ್ಟನು ಜೀವಮಾನವೆಲ್ಲ ಬಾಧೆ ಪೀಡಿತನೆ.
21 : ಭಯಹುಟ್ಟಿಸುವ ಅಪಾಯಗಳ ಸಪ್ಪಳ ಅವನ
ಕಿವಿಯಲ್ಲಿ
ಸೂರೆಗಾರನ ಧಾಳಿಯ ದಿಗಿಲು ಅವನು
ಸುಖವಿರುವಲ್ಲಿ.
22 : ಕತ್ತಲಿಂದ ಹಿಂದಿರುಗುವ ನಂಬಿಕೆ ಅವನಿಗಿಲ್ಲ
ಕತ್ತಿ ತನಗಾಗಿ ಕಾದಿದೆಯೆಂಬುದರಲ್ಲಿ
ಸಂದೇಹವಿಲ್ಲ.
23 : ಹೊಟ್ಟೆಪಾಡಿಗಾಗಿ ಹುಡುಕುತ್ತಾ
ಅಲೆದಾಡುತ್ತಾನೆ
ಆ ಕತ್ತಲ ದಿನ ಹತ್ತಿರವಿದೆಯೆಂದು
ಅರಿತಿದ್ದಾನೆ.
24 : ಸಂಕಟ-ಪೇಚಾಟ ಅವನನ್ನು ಕಾಡುತ್ತಿರುತ್ತವೆ
ಯುದ್ಧಸನ್ನದ್ಧ ರಾಜರಂತೆ ಅವನಿಗೆ ಸೋಲನು
ತರುತ್ತವೆ.
25 : ದೇವರಿಗೆ ವಿರುದ್ಧ ಅವನು
ಮುಷ್ಟಿ ತೋರಿದನಲ್ಲವೆ?
ಸರ್ವಶಕ್ತನನು ಧಿಕ್ಕರಿಸುತಾ ಶೂರನಂತೆ
ಮೆರೆದನಲ್ಲವೆ?
26 : ಗಟ್ಟಿಮುಟ್ಟಾದ ಗುರಾಣಿಯನ್ನು
ಹಿಡಿದುಕೊಂಡೇ
ಆತನ ಮೇಲೆ ಬೀಳಲು ತಲೆ ನಿಮಿರಿ
ಓಡಿದನಲ್ಲವೆ?
27 : ಕೊಬ್ಬೇರಿತ್ತು ಅವನ ಮೋರೆಯಲಿ
ಬೊಜ್ಜು ಬೆಳೆದಿತ್ತು ಅವನ ಸೊಂಟದಲಿ.
28 : ಹಾಳು ಮಾಡಿದ್ದ ಪಟ್ಟಣಗಳಲ್ಲೆ ಅವನು
ಸೇರಿಕೊಂಡಿದ್ದ
ಯಾರೂ ವಾಸಮಾಡದೆ ದಿಬ್ಬವಾಗಿ
ಮಾರ್ಪಟ್ಟಿದ್ದ
ಶಾಪಗ್ರಸ್ತ ಮನೆಗಳಲ್ಲಿ ವಾಸಮಾಡಿಕೊಂಡಿದ್ದ.
29 : ಇಂಥವನು ಸಿರಿವಂತನಾಗಿ ಉಳಿಯನು
ಅವನ ಆಸ್ತಿ ಸ್ಥಿರವಾಗಿ ನಿಲ್ಲದು
ಅವನು ಧರೆಯಲ್ಲಿ ಬೇರೂರಿ ಬೆಳೆಯನು.
30 : ಕತ್ತಲೊಳಗಿಂದ ಪಾರಾಗನವನು
ಸುಡುವುದು ಕಿಚ್ಚು ಅವನ ಕೊಂಬೆಯನು
ಬಡಿದೊಯ್ಯುವುದು ಗಾಳಿ ಅದರ ಫಲವನು.
31 : ವ್ಯರ್ಥವಾದುದನು ನಂಬಿ ಅವನು
ಮೋಸ ಹೋಗದಿರಲಿ
ಇಲ್ಲವಾದರೆ ಅವನಿಗೆ ಸಿಗುವ ಪ್ರತಿಫಲ
ವ್ಯರ್ಥವೇ ಸರಿ.
32 : ಅವನ ಬುಡ ಒಣಗುವುದು ಕಾಲಕ್ಕೆ ಮುಂಚೆ
ಪಚ್ಚೆಪಸಿರಾಗದು ಅವನ ಕೊಂಬೆ.
33 : ಅವನಾಗುವನು ಮಾಗದ ಹಣ್ಣನ್ನು ಕಳೆದು
ಕೊಂಡ ದ್ರಾಕ್ಷಿಬಳ್ಳಿಯಂತೆ
ಹೂಗಳನ್ನು ಉದುರಿಸಿಕೊಂಡ ಓಲಿವ್ ಎಣ್ಣೆ
ವ್ಮರದಂತೆ.
34 : ದುರುಳರ ಸಂಘವದು ಬರಡಾದುದು
ಸುಡುವುದು ಬೆಂಕಿ ಲಂಚಕೋರರ ಗುಡಾರವನು.
35 : ಉದರದಲ್ಲಿ ವಂಚನೆಯನ್ನು ಗರ್ಭಧರಿಸುವರು
ಕೇಡನು ಹಡೆವೆನೆಚಿದೆಣಿಸಿ ಶೂನ್ಯವ ಹೆರುವುದ
ನೋಡು.