1 : ಅದಕ್ಕೆ ಯೋಬನು ಪ್ರತ್ಯುತ್ತರವಾಗಿ
ಹೀಗೆಂದನು:
2 : “ಹೌದ್ಹೌದು ನೀವೇ ಮಹಾಜನ,
ನಿಮ್ಮೊಡನೆಯೇ ಸಾಯುವುದು ಸುಜ್ಞಾನ!
3 : ನಿಮ್ಮ ಹಾಗೆ ನಾನೂ ಬಲ್ಲವ
ನಿಮಗಿಂತ ನಾನೇನೂ ಕೀಳಲ್ಲ.
ಇದು ಯಾರಿಗೆ ತಾನೆ ತಿಳಿದಿಲ್ಲ?
4 : ನೀತಿವಂತನೂ ನಿರ್ದೋಷಿಯೂ ಆದ ನಾನು
ದೇವರನ್ನು ಪ್ರಾರ್ಥಿಸಿ ಪ್ರತ್ಯುತ್ತರಕ್ಕಾಗಿ
ಕಾದಿರಲು
ಗೆಳೆಯರ ಗೇಲಿಪರಿಹಾಸ್ಯಕ್ಕೆ ಗುರಿಯಾದೆನು.
5 : ದಲಿತರನ್ನು ಕಂಡರೆ ಸುಖಜೀವಿಗಳಿಗೆ ತಾತ್ಸಾರ
ಜಾರಿ ಬೀಳಲಿರುವವರಿಗೆ ಕಾದಿದೆ ತಿರಸ್ಕಾರ.
6 : ಸಮೃದ್ಧಿಯಾಗಿವೆ ಕಳ್ಳಕಾಕರ ಗುಡಾರಗಳು
ಸುರಕ್ಷಿತವಾಗಿರುವರು ದೇವರನ್ನೆ
ಕೆರಳಿಸುವವರು
ಅಂಗೈಯಲ್ಲಿರುವುದೇ ಅವರಿಗೆ ದೇವರು!
7 : ಮೃಗಗಳನ್ನು ಬೇಕಾದರೆ ಕೇಳು, ಅವು
ಕಲಿಸುವುವು
ಆಕಾಶದ ಪಕ್ಷಿಗಳನ್ನು ಕೇಳು, ಅವು ತಿಳಿಸುವುವು.
8 : ಕ್ರಿಮಿಕೀಟಗಳನ್ನು ಕೇಳು, ಅವು ನಿನಗೆ
ಬೋಧಿಸುವುವು
ಸಮುದ್ರದ ಮೀನುಗಳು ನಿನಗೆ ಉಪದೇಶ
ಮಾಡುವುವು.
9 : ಇವುಗಳೆಲ್ಲವನ್ನು ಮಾಡಿದ್ದು ಸರ್ವೇಶ್ವರನ
ಕೈಯೇ
ಇದು ತಿಳಿಯದಿರುವುದು ಯಾರಿಗೆ ತಾನೆ?
10 : ಆತನ ಕೈಯಲ್ಲಿದೆ ಎಲ್ಲ ಜೀವಿಗಳ ಪ್ರಾಣ
ಪ್ರತಿಯೊಬ್ಬ ನರಮಾನವನ ಶ್ವಾಸ.
11 : ನಾಲಿಗೆ ರುಚಿನೋಡುವಂತೆಯೆ
ಕಿವಿ ನುಡಿಯನು ವಿವೇಚಿಸುತ್ತದೆ.
12 : ಜ್ಞಾನವಿದೆ ವಯೋವೃದ್ಧರಲ್ಲಿ
ವಿವೇಕವಿದೆ ದೀರ್ಘಾಯುಷ್ಯರಲ್ಲಿ.
13 : ಆದರೆ ದೇವರಲ್ಲಿದೆ ಜ್ಞಾನದೊಡನೆ ಶಕ್ತಿಕೂಡ
ಆತನಲ್ಲಿದೆ ವಿವೇಕ ಮತ್ತು ಸನ್ಮತಿ ಸಹ.
14 : ಆತ ಕೆಡವಿದ್ದನ್ನು ಯಾರಿಂದಲೂ ಕಟ್ಟಲಾಗದು
ಆತ ಸೆರೆಹಿಡಿದವರನ್ನು ಯಾರಿಂದಲೂ
ಬಿಡಿಸಲಾಗದು.
15 : ಆತ ನೀರನ್ನು ತಡೆದರೆ, ಬತ್ತಿಹೋಗುತ್ತದೆ
ಬೆಳೆಯೆಲ್ಲ
ತೂಬೆತ್ತಿದರೆ ಮುಳುಗಿಹೋಗುತ್ತದೆ
ಇಳೆಯೆಲ್ಲ.
16 : ಸಾಮಥ್ರ್ಯ ಹಾಗು ವಿಜಯ ಆತನ ಲಕ್ಷಣ
ವಂಚಕ ಹಾಗು ವಂಚಿತ ಆತನಿಗೆ ಅಧೀನ.
17 : ಮಂತ್ರಿಗಳನು ಬರಿಬತ್ತಲೆಯಾಗಿ ನಡೆಸುತ್ತಾನೆ
ನ್ಯಾಯಾಧಿಪತಿಗಳನು
ಮೂರ್ಖರನ್ನಾಗಿಸುತ್ತಾನೆ.
18 : ಅರಸರು ಹಾಕಿದ ಬಂಧನವನ್ನು ಬಿಚ್ಚಿ
ಬಿಗಿಯುತ್ತಾನೆ ಅವರ ಸೊಂಟಕ್ಕೆ ಚಿಂದಿ.
19 : ಯಾಜಕರನ್ನು ಬರಿಬತ್ತಲೆಯಾಗಿ ನಡೆಸುತ್ತಾನೆ
ಅಚಲ ಶಕ್ತಿಶಾಲಿಗಳನ್ನು ಕೆಡವಿಬಿಡುತ್ತಾನೆ.
20 : ಮೂಕರನ್ನಾಗಿಸುತ್ತಾನೆ ವಾಕ್ ಚತುರರನ್ನು
ಹಿರಿಯರ ಧೀಮಂತಿಕೆಯನ್ನು ತೆಗೆದು
ಬಿಡುತ್ತಾನೆ.
21 : ಅಧಿಪತಿಗಳಿಗೆ ಉಂಟುಮಾಡುತ್ತಾನೆ
ಅವಮಾನವನ್ನು
ಬಿಚ್ಚಿಬಿಡುತ್ತಾನೆ ಬಲಾಢ್ಯರ ನಡುಕಟ್ಟನ್ನು.
22 : ಇರುಳಿನ ಆಳದಲ್ಲಿರುವವುಗಳನ್ನು
ಬೆಳಗಿಸುತ್ತಾನೆ
ಗಾಢಾಂಧಕಾರವನ್ನು ಪ್ರಕಾಶಗೊಳಿಸುತ್ತಾನೆ.
23 : ರಾಷ್ಟ್ರಗಳನ್ನು ಬೆಳೆಸುತ್ತಾನೆ, ಅಳಿಸುತ್ತಾನೆ
ಅವುಗಳನ್ನು ಹರಡುತ್ತಾನೆ,
ಹೊರದೂಡುತ್ತಾನೆ.
24 : ಭೂಪತಿಗಳನ್ನು ಬುದ್ಧಿಹೀನರನ್ನಾಗಿಸುತ್ತಾನೆ
ದಾರಿಕಾಣದ ಅರಣ್ಯದಲಿ ಅಲೆದಾಡಿಸುತ್ತಾನೆ.
25 : ಅಂಥವರು ಕತ್ತಲೊಳು ತಡಕಾಡುವರು
ಬೆಳಕಿಲ್ಲದೆ
ತಡವರಿಸುವರು ಕುಡಿದು
ಅಮಲೇರಿದವರಂತೆ.”