1 : “ನನ್ನ ಬಾಳೇ ನನಗೆ ಬೇಸರವಾಗಿದೆ
ಎದೆ ಬಿಚ್ಚಿ ಮೊರೆಯಿಡುತ್ತಿರುವೆ
ಕಹಿ ಮನದಿಂದ ನುಡಿಯುತ್ತಿರುವೆ.
2 : ನಾನು ದೇವರಿಗೆ ಇಂತೆನ್ನುವೆ:
‘ನನ್ನನು ನಿರ್ಣಯಿಸಬೇಡ ಅಪರಾಧಿಯೆಂದು
ನನ್ನ ಮೇಲೆ ನಿನಗಿರುವ ಆಪಾದನೆಯನು
ತಿಳಿಸಿಬಿಡು.
3 : ದುರುಳರ ಯೋಜನೆಯನು ನೀನು
ಪುರಸ್ಕರಿಸಬಹುದೆ?
ನಿನ್ನ ಕೈಕೃತಿಯಾದ ನನ್ನನು ತಿರಸ್ಕರಿಸಿ
ಬಾಧಿಸುವುದು ಸರಿಯೆ?
4 : ಮನುಜರಂಥ ಕಣ್ಣುಗಳು ನಿನಗಿದೆಯೋ?
ಮನುಷ್ಯರಂತೆ ನೀನು ನೋಡುತ್ತೀಯೋ?
5 : ನಿನ್ನ ದಿನಗಳು ಮನುಷ್ಯನ
ಅಲ್ಪದಿನಗಳಂತಿವೆಯೋ?
ನಿನ್ನ ವರುಷಗಳು ಮಾನವನ
ವರುಷಗಳಷ್ಟೆಯೋ?
6 : ನನ್ನ ತಪ್ಪುಗಳನ್ನು ಹುಡುಕುವ ನಿನಗೆ
ನನ್ನ ಪಾಪಗಳನ್ನು ವಿಚಾರಿಸುವ ನಿನಗೆ
7 : ನಾನು ಅಪರಾಧಿಯಲ್ಲವೆಂದು
ತಿಳಿದಿದೆಯಲ್ಲವೆ?
ನಿನ್ನ ಕೈಯಿಂದ ಬಿಡಿಸಬಲ್ಲವರಾರೂ
ಇಲ್ಲವಲ್ಲವೆ?
8 : ನನ್ನನ್ನು ನಿರ್ಮಿಸಿ ರೂಪಿಸಿದಾತ ನೀನು
ಆದರೆ ಈಗ ಮುಗಿಸಿಬಿಡುವಿಯೋ
ಮನಸಾಂತರಗೊಂಡು?
9 : ಜೇಡಿಮಣ್ಣಿನಿಂದ ನನ್ನನ್ನು ಮಾಡಿದೆಯೆಂದು
ನೆನೆಸಿಕೊ
ಆದರೆ ಈಗ ಮರಳಿ ಮಣ್ಣಾಗುವಂತೆ
ಮಾಡುವಿಯೋ?
10 : ನನ್ನನ್ನು ಸುರಿಸಿದೆ ಹಾಲಿನಂತೆ ಹೆಪ್ಪುಗಟ್ಟಿಸಿದೆ ಮೊಸರಿನಂತೆ;
11 : ನನ್ನನ್ನು ಹೆಣೆದೆ ಎಲುಬು ನರಗಳಿಂದ
ನನ್ನನ್ನು ಹೊದಿಸಿದೆ ಮಾಂಸ ಚರ್ಮಗಳಿಂದ;
12 : ಜೀವವಿತ್ತು ಅಚಲ ಪ್ರೀತಿ ತೋರಿಸಿದೆ
ನಿನ್ನ ಪರಾಮರಿಕೆಯಿಂದ ನನ್ನ ಪ್ರಾಣವನ್ನು
ಕಾಪಾಡಿದೆ.
13 : ಆದರೂ ನನಗೆ ಚೆನ್ನಾಗಿ ಗೊತ್ತಿತ್ತು;
ನಿನ್ನ ಹೃದಯದಲ್ಲಿ ಗುಟ್ಟಾದ
ಯೋಜನೆಯೊಂದು ಹುದುಗಿತ್ತು;
14 : ನಾನು ತಪ್ಪುಮಾಡಿದರೆ ಅದನು ಕಂಡುಹಿಡಿದು
ಆ ದೋಷಕ್ಕೆ ಕ್ಷಮೆ ನೀಡಕೂಡದೆಂದು.
15 : ನಾನು ದುರ್ಮಾರ್ಗಿಯಾದರಂತೂ
ನನಗಿಲ್ಲ ಗತಿ
ಸನ್ಮಾರ್ಗಿಯಾದರೂ ಕೂಡ ನಡೆವಂತಿಲ್ಲ
ತಲೆಯೆತ್ತಿ
ಏಕೆಂದರೆ ನಾಚಿ ನಿಂತಿರುವೆ, ಯಾತನೆಯ
ಹೊರೆ ಹೊತ್ತಿ.
16 : ನಾನು ತಲೆಯೆತ್ತಿದರೆ ಬೇಟೆಯಾಡುವೆ ನನ್ನನ್ನು
ಸಿಂಹದಂತೆ
ಮತ್ತೆ ನಿನ್ನ ಶಕ್ತಿ ಸಾಮಥ್ರ್ಯವನ್ನು
ನನ್ನ ಮೇಲೆ ಪ್ರಯೋಗಿಸುವೆ.
17 : ನನಗೆ ವಿರುದ್ಧ ಹೊಸಹೊಸ ಸಾಕ್ಷಿಗಳನ್ನು
ಬರಮಾಡುವೆ
ನನ್ನ ಮೇಲೆ ಹೆಚ್ಚುಹೆಚ್ಚಾಗಿ ಸಿಟ್ಟುಗೊಳ್ಳುವೆ
ಅಲೆಅಲೆಯಾಗಿ ಹಗೆಗಳನ್ನು ನನ್ನ ಮೇಲೆ
ಧಾಳಿಮಾಡ ಬಿಡುವೆ.
18 : ತಾಯ ಗರ್ಭದಿಂದ ನನ್ನನ್ನೇಕೆ ಹೊರತೆಗೆದೆ? ನಾನು ಸತ್ತು ಹೋಗಬಹುದಿತ್ತು ಯಾರೂ ನೋಡುವುದಕ್ಕೆ ಮುಂಚೆ!
19 : ಆಗ ನಾನು ಇಲ್ಲದವನಾಗುತ್ತಿದ್ದೆ
ಗರ್ಭದಿಂದಲೆ ಸಮಾಧಿ ಸೇರುತ್ತಿದ್ದೆ.
20 : ನನಗುಳಿದಿರುವ ದಿನಗಳು ಕೆಲವೇ
ಕಿಂಚಿತ್ತು ವಿಶ್ರಮಿಸಲು ನನ್ನನು
ಬಿಟ್ಟುಬಿಡಬಾರದೆ?
21 : ಮರಳಿ ಹಿಂದಿರುಗಲಾಗದ ನಾಡನು ನಾನು ಸೇರಲಿರುವೆ ಅಂಧಕಾರವೂ ಗಾಢಾಂಧಕಾರವೂ ಅಲ್ಲಿ ತುಂಬಿವೆ.
22 : ಕಾರ್ಗತ್ತಲೂ ಗಾಡಾಂಧಕಾರವೂ ಅಲ್ಲಿವೆ ಅರಾಜಕತೆಯೂ ಕಾರಿರುಳೂ ಅದನು ಆವರಿಸಿವೆ ಬೆಳಕೇ ಕಾರಿರುಳಾಗಿ ಆ ನಾಡನ್ನು ಕವಿದಿದೆ.”