Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಆ ದಿನದಂದೇ ಅರಸ ಅಹಷ್ಟೇರೋಷನು, ಯೆಹೂದ್ಯರ ಶತ್ರುವಾದ ಹಾಮಾನನು ವಾಸವಾಗಿದ್ದ ನಿವಾಸವನ್ನು ರಾಣಿ ಎಸ್ತೇರಳಿಗೆ ಕೊಟ್ಟನು. ಆಕೆ ತನಗೂ ಮೊರ್ದೆಕೈಗೂ ಇದ್ದ ನಿಜ ಸಂಬಂಧವನ್ನು ಅರಸನಿಗೆ ತಿಳಿಸಿದಳು.
2 : ಆಗ ಅರಸನು ಮೊರ್ದೆಕೈಯನ್ನು ಗೌರವದಿಂದ ಸ್ವಾಗತಿಸಿ ಹಾಮಾನನಿಂದ ತೆಗೆಸಿದ ತನ್ನ ಮುದ್ರೆ ಉಂಗುರವನ್ನು ಅವನಿಗೆ ತೊಡಿಸಿದನು. ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಮೊರ್ದೆಕೈಯನಿಗೆ ವಹಿಸಿದಳು.
3 : ಎಸ್ತೇರಳು ಪುನಃ ಅರಸನ ಮುಂದೆ ಹೋಗಿ ಅವನ ಪಾದಗಳಿಗೆರಗಿ, ಅಳುತ್ತಾ, ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಹೂಡಿದ್ದ ದುಷ್ಟ ಯೋಜನೆಯನ್ನು ರದ್ದುಪಡಿಸುವಂತೆ ವಿಜ್ಞಾಪಿಸಿದಳು.
4 : ಅರಸನು ತನ್ನ ಸ್ವರ್ಣದಂಡವನ್ನು ಆಕೆಯ ಕಡೆಗೆ ಚಾಚಲು, ಆಕೆ ಅವನ ಮುಂದೆ ಎದ್ದು ನಿಂತು,
5 : “ತಾವು ನನ್ನ ಮೇಲೆ ಕೃಪಾಕಟಾಕ್ಷವಿರಿಸಿ, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಸಮಂಜಸವಾದುದೆಂದು ಎಣಿಸಿ, ಅದಕ್ಕೆ ಸಮ್ಮತಿಸುವುದಾದರೆ, ತಮ್ಮ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ಸಲುವಾಗಿ ಆಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನು ಬರೆಸಿದ ಪತ್ರಗಳನ್ನು ರದ್ದುಗೊಳಿಸಲು ಆಜ್ಞೆ ಹೊರಡಿಸಬೇಕು.
6 : ನನ್ನ ಜನರಿಗೆ ಕೇಡು ಸಂಭವಿಸುವುದನ್ನು ಕಣ್ಣಾರೆ ಕಂಡು ನಾನು ಹೇಗೆ ತಾನೆ ಸಹಿಸಲಿ? ನನ್ನ ಕುಲನಾಶವನ್ನು ಕಂಡು ಸುಮ್ಮನಿರುವುದಾದರೂ ಹೇಗೆ?” ಎಂದು ಬಿನ್ನವಿಸಿದಳು.
7 : ಆಗ ಅರಸನು, ರಾಣಿ ಎಸ್ತೇರಳಿಗೂ ಯೆಹೂದ್ಯನಾದ ಮೊರ್ದೆಕೈಗೂ “ಹಾಮಾನನು ಯೆಹೂದ್ಯರ ವಿರುದ್ಧ ಕೈಯೆತ್ತಿದ್ದರಿಂದ ಅವನನ್ನುಗಲ್ಲಿಗೇರಿಸಿ ಅವನ ಮನೆಯನ್ನು ಎಸ್ತೇರಳಿಗೆ ದಾನ ಮಾಡಿದೆನಲ್ಲವೆ?
8 : ಅರಸನ ಹೆಸರಿನಲ್ಲಿ ಬರೆಯಲಾದ ಹಾಗು ರಾಜಮುದ್ರೆಯನ್ನು ಹೊಂದಿರುವ ಲೇಖನವನ್ನು ಯಾರೂ ರದ್ದುಮಾಡಲಾಗದು. ಆದ್ದರಿಂದ ಯೆಹೂದ್ಯರ ವಿಷಯದಲ್ಲಿ ನಿಮಗೆ ಸರಿತೋರಿದಂತೆ ಅರಸನ ಹೆಸರಿನಲ್ಲಿ ನೀವೂ ಪತ್ರ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ,” ಎಂದು ಹೇಳಿದನು.
9 : ಆಗ ರಾಜಲೇಖಕರನ್ನು ಕರೆಯಿಸಲಾಯಿತು. ಇವರು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತಮೂರನೇ ದಿನದಲ್ಲಿ ಬಂದು ಮೊರ್ದೆಕೈಯ ಆಜ್ಞಾನುಸಾರ, ಯೆಹೂದ್ಯರಿಗೂ ಭಾರತ ಮೊದಲ್ಗೊಂಡು ಕೂಷಿನವರೆಗೂ ಹರಡಿರುವ ನೂರಿಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ ದೇಶಾಧಿಪತಿಗಳಿಗೂ ಅಧಿಕಾರಿಗಳಿಗೂ, ಆಯಾ ಸಂಸ್ಥಾನಗಳ ಲಿಪಿಯಲ್ಲೂ ಆಯಾ ಜನಾಂಗಗಳ ಭಾಷೆಯಲ್ಲೂ ಪತ್ರಗಳನ್ನು ಬರೆದರು.
10 : ಅರಸನ ಹೆಸರಿನಲ್ಲಿ ಬರೆಯಲಾದ ಈ ಪತ್ರಗಳಿಗೆ ಮೊರ್ದೆಕೈ ರಾಜಮುದ್ರೆಯನ್ನು ಒತ್ತಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದ ಸವಾರಿ ಕುದುರೆಗಳನ್ನೇರಿ ಹೊರಟ ಅಂಚೆಯವರ ಮುಖಾಂತರ ಕಳುಹಿಸಿದನು.
11 : ಆ ಪತ್ರಗಳಲ್ಲಿ ಅರಸನ ರಾಜಾಜ್ಞೆ ಹೀಗೆಂದು ಬರೆಯಲಾಗಿತ್ತು: ‘ಅರಸ ಅಹಷ್ಟೇರೋಷನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿರುವ ಎಲ್ಲಾ ಯೆಹೂದ್ಯರು ಒಂದೇ ದಿನದಲ್ಲಿ
12 : ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿ, ತಮ್ಮ ಪ್ರಾಣರಕ್ಷಣೆಗಾಗಿ ದಂಗೆಯೆದ್ದು, ತಮಗೆ ವಿರೋಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ ಸಂಸ್ಥಾನಗಳವರನ್ನೂ ಮಕ್ಕಳು ಮಹಿಳೆಯರೆನ್ನದೆ ಎಲ್ಲರನ್ನೂ, ಕೊಂದು ಸಂಹರಿಸಿ,
13 : ನಿರ್ನಾಮಗೊಳಿಸಿ ಅವರ ಆಸ್ತಿ ಪಾಸ್ತಿಯನ್ನೆಲ್ಲಾ ಸೂರೆಮಾಡಬೇಕು; ಈ ಪತ್ರದ ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜಾಜ್ಞೆಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು. ಆ ದಿನಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳ ಮೇಲೆ ಮುಯ್ಯಿ ತೀರಿಸಿಕೊಳ್ಳುವುದಕ್ಕೂ ಸನ್ನದ್ಧರಾಗಿರಬೇಕು.’
14 : ಅರಸನ ಈ ರಾಜಾಜ್ಞೆ ಶೂಷನ್ ನಗರದಲ್ಲಿ ಪ್ರಕಟವಾದ ಕೂಡಲೆ ಅದರಿಂದ ಪ್ರೇರಿತರಾದ ಅಂಚೆಯವರು ಅರಮನೆಯ ಸವಾರಿ ಕುದುರೆಗಳನ್ನೇರಿ ಅತಿ ಶೀಘ್ರವಾಗಿ ಧಾವಿಸಿದರು.
15 : ಮೊರ್ದೆಕೈಯಾದರೋ ನೀಲ ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿ, ಬಂಗಾರದ ದೊಡ್ಡ ಪಟ್ಟಿಯನ್ನು ಹಣೆಗೆ ಕಟ್ಟಿಕೊಂಡು, ರಕ್ತವರ್ಣದ ನಾರಿನ ಶಾಲನ್ನು ಹೊದ್ದು ರಾಜ ಸನ್ನಿಧಿಯಿಂದ ಹೊರಟನು. ಶೂಷನ್ ನಗರದಲ್ಲಿ ಹರ್ಷೋದ್ಗಾರ ಮೊಳಗಿತು.
16 : ಅಲ್ಲಿನ ಯೆಹೂದ್ಯರು ಹರ್ಷಾನಂದ ಪ್ರಭಾವಗಳಿಂದ ಪುಳಕಿತರಾದರು.
17 : ರಾಜನಿರ್ಣಯ ಶಾಸನಗಳು ಪ್ರಕಟವಾದ ಸಂಸ್ಥಾನಗಳಲ್ಲೂ ನಗರಗಳಲ್ಲೂ ವಾಸಿಸುತ್ತಿದ್ದ ಯೆಹೂದ್ಯರೆಲ್ಲರಿಗೆ ಶುಭದಿನ ಉದಯವಾಯಿತು. ಅವರು ಅದನ್ನು ಸಂತೋಷದ ಹಾಗೂ ಸಂಭ್ರಮದ ದಿನವನ್ನಾಗಿ ಆಚರಿಸಿದರು. ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.

· © 2017 kannadacatholicbible.org Privacy Policy