Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಅರಸನು ಹಾಮಾನನೊಡನೆ ಔತಣಕ್ಕಾಗಿ ಎಸ್ತೇರಳ ಮನೆಗೆ ಬಂದನು.
2 : ಅರಸನು ಈ ಎರಡನೆಯ ದಿನದಲ್ಲೂ ದ್ರಾಕ್ಷಾರಸ ಪಾನಮಾಡುತ್ತಿರುವಾಗ ಎಸ್ತೇರಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಯಾವುದು ಹೇಳು; ಅದನ್ನು ನಾನು ನೆರವೇರಿಸುವೆನು. ನನ್ನ ರಾಜ್ಯದ ಅರ್ಧ ಭಾಗವನ್ನು ಕೇಳಿದರೂ ಸರಿ, ನಾನದನ್ನು ನಿನಗೆ ಕೊಡುವೆನು,” ಎನ್ನಲು
3 : ಎಸ್ತೇರಳು ಪ್ರತ್ಯುತ್ತರವಾಗಿ, “ಅರಸರು ನನ್ನ ಮೇಲೆ ಕೃಪಾಕಟಾಕ್ಷವನ್ನಿಟ್ಟು ಈಡೇರಿಸುವುದಾದರೆ ನನ್ನ ವಿಜ್ಞಾಪನೆಯನ್ನು, ಪ್ರಾರ್ಥನೆಯನ್ನು ಆಲಿಸಿ, ನನ್ನ ಪ್ರಾಣವನ್ನು ಹಾಗು ನನ್ನ ಜನರ ಪ್ರಾಣವನ್ನು ಉಳಿಸಬೇಕು.
4 : ಜನರು ನಮ್ಮನ್ನು ಕೊಂದು, ಸಂಹರಿಸಿ, ನಿರ್ನಾಮಗೊಳಿಸುವ ಹಾಗೆ ನಮ್ಮನ್ನು ಮಾರಲಾಯಿತು. ಬರೀ ಮಾರಾಟವಾಗಿದ್ದರೆ ಈ ದುರಂತ ಪರಿಸ್ಥಿತಿಯ ವಿಷಯದಲ್ಲಿ ಅರಸರಿಗೆ ತೊಂದರೆ ಪಡಿಸುವುದು ಸರಿಯಲ್ಲವೆಂದು ಸುಮ್ಮನಿದ್ದು ಬಿಡುತ್ತಿದ್ದೆ,” ಎಂದಳು.
5 : ಆಗ ಅರಸನು “ಇಂಥ ದುಷ್ಕøತ್ಯವನ್ನು ಎಸಗಲು ಸಂಚು ನಡೆಸಿದ ಕೇಡಿಗನು ಯಾರು? ಎಲ್ಲಿದ್ದಾನೆ ಅವನು?” ಎಂದು ಕೇಳಲು
6 : ಆಕೆ, “ನಮ್ಮ ವೈರಿಯೂ ಶತ್ರುವೂ ಬೇರಾರೂ ಅಲ್ಲ; ಇಗೋ, ಈ ಹಾಮಾನನೇ ಆ ದುಷ್ಟ,” ಎಂದಳು. ಇದನ್ನು ಕೇಳಿದೊಡನೆ ಹಾಮಾನನು ಅರಸನ ಮತ್ತು ರಾಣಿಯ ಮುಂದೆ ಭಯದಿಂದ ನಡುಗಿದನು.
7 : ರೌದ್ರಾವೇಶಗೊಂಡ ಅರಸ ದ್ರಾಕ್ಷಾರಸ ಪಾನ ಮಾಡುವುದನ್ನು ಬಿಟ್ಟೆದ್ದು, ತೋಟಕ್ಕೆ ಹೋದನು. ಅರಸನಿಂದ ತನಗೆ ಶಿಕ್ಷೆ ನಿಶ್ಚಿತವೆಚಿದರಿತ ಹಾಮಾನನು ಎಸ್ತೇರ್ ರಾಣಿಯ ಮುಂದೆ ಪ್ರಾಣಭಿಕ್ಷೆಗಾಗಿ ಅಂಗಲಾಚಿ ಬೇಡುತ್ತಾ ನಿಂತನು.
8 : ಅರಸನು ಅರಮನೆಯ ತೋಟದಿಂದ, ತಾನು ದ್ರಾಕ್ಷಾರಸ ಸೇವಿಸುತ್ತಿದ್ದ ಕೊಠಡಿಗೆ ಹಿಂದಿರುಗಿ ಬಂದಾಗ ಎಸ್ತೇರಳು ಒರಗಿಕೊಂಡಿದ್ದ ಸುಖಾಸನದತ್ತ ಹಾಮಾನನು ಬಾಗಿರುವುದನ್ನು ಕಂಡು, “ಇದೇನು? ಇವನು ನನ್ನ ಮುಂದೆಯೇ, ನನ್ನ ಅರಮನೆಯಲ್ಲಿಯೇ ರಾಣಿಯ ಮೇಲೆ ಬಲಾತ್ಕಾರ ಮಾಡಲು ಹೊರಟಿರುವನೆ?” ಎಂದನು. ಅರಸನ ಬಾಯಿಂದ ಈ ಮಾತುಗಳು ಹೊರಬಿದ್ದದ್ದೇ ತಡ ಸೇವಕರು ಹಾಮಾನನ ಮುಖದ ಮೇಲೆ ಮುಸುಕನ್ನು ಎಳೆದರು.
9 : ಇದಲ್ಲದೆ, ಅರಸನ ಸೀಮೆಯಲ್ಲಿದ್ದ ಕಂಚುಕಿಗಳಲ್ಲೊಬ್ಬನಾದ ಹರ್ಬೋನನು, “ಇಗೋ, ಅರಸನ ಪ್ರಾಣವನ್ನು ರಕ್ಷಿಸಲು ಸಮಾಚಾರವನ್ನು ತಿಳಿಸಿದ ಮೊರ್ದೆಕೈಯನ್ನು ಕೊಲ್ಲುವುದಕ್ಕಾಗಿ ಹಾಮಾನನು ಸಿದ್ಧಮಾಡಿಸಿದ ಇಪ್ಪತ್ತೆರಡು ಮೀಟರ್ ಎತ್ತರದ ನೇಣುಗಂಬವಿದೆಯಲ್ಲ,” ಎನ್ನಲು ಅರಸನು, “ಇವನನ್ನು ಅದಕ್ಕೆ ನೇತುಹಾಕಿರಿ,” ಎಂದು ಆಜ್ಞಾಪಿಸಿದನು.
10 : ಮೊರ್ದೆಕೈಗೋಸ್ಕರ ಹಾಮಾನನು ಸಿದ್ಧಮಾಡಿದ್ದ ಅದೇ ಗಲ್ಲಿಗೆ ಅವನನ್ನು ಏರಿಸಿದರು. ಅರಸನ ಕೋಪವು ಶಾಂತವಾಯಿತು.

· © 2017 kannadacatholicbible.org Privacy Policy