Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಸ್ತೇರಳು


1 : ಇದಾದನಂತರ ಅರಸ ಅಹಷ್ಟೇರೋಷನು ಆಗಾಗನ ವಂಶದವನೂ ಹಮ್ಮೆದಾತನ ಮಗನೂ ಆದ ಹಾಮಾನನನ್ನು ಉನ್ನತ ಪದವಿಗೇರಿಸಿ ಅವನನ್ನು ಹಿರಿಯ ಅಧಿಕಾರಿಯನ್ನಾಗಿ ಮಾಡಿ ತನ್ನ ಎಲ್ಲಾ ಪದಾಧಿಕಾರಿಗಳಲ್ಲಿ ಅವನಿಗೆ ಪ್ರಥಮಸ್ಥಾನವನ್ನು ಅನುಗ್ರಹಿಸಿದನು
2 : ಅರಸನ ಆಜ್ಞಾನುಸಾರ ಅರಮನೆಯಲ್ಲಿದ್ದ ಪರಿಚಾರಕರೆಲ್ಲರೂ ಅವನಿಗೆ ನಮಸ್ಕರಿಸುತ್ತಿದ್ದರು. ಆದರೆ ಮೊರ್ದೆಕೈ ಮಾತ್ರ ಹಾಗೆ ಮಾಡುತ್ತಿರಲಿಲ್ಲ.
3 : ಪರ್ಷಿಯ ಮತ್ತು ಮೇದ್ಯ ದೇಶಗಳ ದಂಡನಾಯಕರೂ ಪದಾಧಿಕಾರಿಗಳೂ ಸಂಸ್ಥಾನದ ಅಧಿಕಾರಿಗಳೂ ಅರಸನ ಮುಂದೆ ಉಪಸ್ಥಿತರಿದ್ದರು.
4 : ಹೀಗೆ ಅವರು ಪ್ರತಿದಿನ ಅವನಿಗೆ ಹೇಳಿದರೂ ಅವನು ಅವರ ಮಾತಿಗೆ ಕಿವಿಗೊಡಲಿಲ್ಲ. ತಾನು ಯೆಹೂದ್ಯನೆಂದು ಹೇಳಿಕೊಳ್ಳುತ್ತಿದ್ದ ಮೊರ್ದೆಕೈಯ ಹಟವು ಎಲ್ಲಿಯವರೆಗೆ ಸಾಗುವುದೊ ನೋಡಿಯೇ ಬಿಡಬೇಕೆಂದು ಅವನ ಈ ವರ್ತನೆಯ ಬಗ್ಗೆ ಹಾಮಾನನಿಗೆ ದೂರು ಹೇಳಿದರು.
5 : ಮೊರ್ದೆಕೈಯು ತನಗೆ ಬಾಗಿ ನಮಸ್ಕಾರ ಮಾಡದಿದ್ದುದನ್ನು ಕಂಡು ಹಾಮಾನನು ಅವನ ಮೇಲೆ ಕಡುಗೋಪಗೊಂಡನು.
6 : ಅವನು ಮೊರ್ದೆಕೈ ಒಬ್ಬನ ಮೇಲೆ ಕೈಮಾಡುವುದು ಸಾಲದೆಂದೆಣಿಸಿ ಇವನು ಯೆಹೂದ್ಯ ಜನಾಂಗದವನೆಂದು ಕೇಳಿದ ಮೇಲೆ ಅಹಷ್ಟೇರೋಷನ ರಾಜ್ಯದಲ್ಲಿದ್ದ ಇವನ ಬಂದುಬಳಗದವರನ್ನೆಲ್ಲಾ, ಅಂದರೆ ಎಲ್ಲಾ ಯೆಹೂದ್ಯರನ್ನು ಸಂಹರಿಸಲು ತೀರ್ಮಾನಿಸಿದನು.
7 : ಅರಸ ಅಹಷ್ಟೇರೋಷನ ಆಳ್ವಿಕೆಯ ಹನ್ನೆರಡನೆಯ ವರ್ಷದ ಮೊದಲನೆಯ ತಿಂಗಳು ಆದ ಚೈತ್ರಮಾಸದಲ್ಲಿ ಹಾಮಾನನ ಮುಂದೆ ಶುಭ ಮಾಸವೂ ಶುಭದಿನವೂ ಯಾವುದು ಎಂದು ತಿಳಿದುಕೊಳ್ಳಲು ‘ಪೂರ’ನ್ನು ಅಂದರೆ ಚೀಟನ್ನು ಹಾಕಲು ಚೀಟು ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನಕ್ಕೆ ಬಿತ್ತು.
8 : ಹಾಮಾನನು ಅರಸ ಅಹಷ್ಟೇರೋಷನಿಗೆ ಹೀಗೆಂದನು: “ನಿಮ್ಮ ರಾಜ್ಯದ ಎಲ್ಲಾ ಸಂಸ್ಥಾನಗಳಲ್ಲಿ ವಾಸಿಸುವ ಒಂದು ಜನಾಂಗವಿದೆ. ಅದು ಇತರ ಜನಾಂಗಗಳ ಮಧ್ಯೆ ಹರಡಿಕೊಂಡಿದ್ದರೂ ತನ್ನ ರೀತಿನೀತಿಗಳಲ್ಲಿ ಅವರಿಂದ ಪ್ರತ್ಯೇಕವಾಗಿಯೇ ಉಳಿಯುತ್ತದೆ. ಅರಸರ ನಿಯಮಗಳನ್ನಂತೂ ಈ ಜನಾಂಗದವರು ಅನುಸರಿಸುವುದೇ ಇಲ್ಲ. ಹೀಗಿರುವಲ್ಲಿ ಇಂಥವರನ್ನು ಅರಸರು ಸುಮ್ಮನೆ ಬಿಡುವುದು ಸರಿಯಲ್ಲ.
9 : ಅರಸರಿಗೆ ಸಮ್ಮತಿ ಆದರೆ ಅವರನ್ನು ನಿರ್ಮೂಲಮಾಡುವಂತೆ ಆಜ್ಞೆ ಒಂದನ್ನು ಹೊರಡಿಸಬೇಕು. ಹಾಗೆ ಮಾಡಿದ್ದಲ್ಲಿ, ನಾನು ರಾಜಭಂಡಾರಕ್ಕಾಗಿ 340,000 ಕಿಲೋಗ್ರಾಂ ಬೆಳ್ಳಿಯನ್ನು ಖಜಾಂಚಿಯರ ಕೈಗೊಪ್ಪಿಸುವೆನು,” ಎಂದು ಹೇಳಿದನು.
10 : ಇದನ್ನು ಕೇಳಿದ ಅರಸನು ತನ್ನ ಕೈಬೆರಳಿನಲ್ಲಿದ್ದ ಮುದ್ರೆ ಉಂಗುರವನ್ನು ತೆಗೆದು ಆಗಾನನ ವಂಶಸ್ಥನೂ ಹೆಮ್ಮೆದಾತನ ಮಗನೂ ಯೆಹೂದ್ಯರ ಕಡುವೈರಿಯೂ ಆದ ಹಾಮಾನನಿಗೆ ಕೊಟ್ಟು,
11 : “ಆ ಬೆಳ್ಳಿ ನಿನ್ನಲ್ಲೇ ಇರಲಿ: ಆ ಜನರಿಗಾದರೋ ನಿನಗೆ ಉಚಿತವೆಂದು ಕಂಡುಬಂದ ರೀತಿಯಲ್ಲಿ ನೀನು ಮಾಡಬಹುದು,” ಎಂದು ಹೇಳಿದನು.
12 : ಮೊದಲನೇ ತಿಂಗಳ ಹದಿಮೂರನೆಯ ದಿನ ರಾಜಲೇಖಕರನ್ನು ಕರೆಸಲಾಯಿತು. ಇವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ ಆಯಾಸಂಸ್ಥಾನಾಧಿಕಾರಿಗಳಿಗೂ ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಅವರವರ ಸ್ವದೇಶಿ ಲಿಪಿಗಳಲ್ಲೂ ಭಾಷೆಗಳಲ್ಲೂ ಬರೆದರು. ಅರಸ ಅಹಷ್ಟೇರೋಷನ ಹೆಸರಿನಲ್ಲೇ ಲಿಖಿತವಾದ ಈ ಪತ್ರಗಳು ಅಧಿಕೃತ ರಾಜಮುದ್ರೆಯನ್ನು ಹೊಂದಿದ್ದವು.
13 : ಪತ್ರಗಳನ್ನು ಅಂಚೆಯವರ ಮುಖಾಂತರ ಎಲ್ಲಾ ರಾಜಸಂಸ್ಥಾನಗಳಿಗೆ ಕಳಿಸಲಾಯಿತು. ಅವುಗಳಲ್ಲಿ ಈ ರೀತಿ ಬರೆದಿತ್ತು: “ಒಂದೇ ದಿನದಲ್ಲಿ, ಅಂದರೆ, ಹನ್ನೆರಡನೆ ತಿಂಗಳಾದ ಫಾಲ್ಗುಣ ಮಾಸದ ಹದಿಮೂರನೆಯ ದಿನದಲ್ಲಿ ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರೆನ್ನದೆ ನಿಮ್ಮ ಮಧ್ಯೆ ವಾಸಿಸುವ ಎಲ್ಲಾ ಯೆಹೂದ್ಯರನ್ನು ಕೊಂದುಹಾಕಿ, ನಿರ್ಮೂಲ ಮಾಡಿ, ನಿರ್ನಾಮಗೊಳಿಸಿ.
14 : ಅವರ ಆಸ್ತಿಯನ್ನು ಕೊಳ್ಳೆಹೊಡೆಯಿರಿ. ಎಲ್ಲರೂ ಆ ದಿನಕ್ಕೆ ಸಿದ್ಧರಾಗಿರುವಂತೆ ಈ ಪತ್ರದ ಪ್ರತಿಯು ಪ್ರತಿಯೊಂದು ಸಂಸ್ಥಾನದಲ್ಲೂ ರಾಜಾಜ್ಞೆಯಂತೆ ಪ್ರಕಟವಾಗಲಿ.”
15 : ಈ ನಿರ್ಣಯವು ಶೂಷನ್ ಅರಮನೆಯಲ್ಲಿ ಪ್ರಕಟವಾದ ಕೂಡಲೆ ಅಂಚೆಯವರು ರಾಜಾಜ್ಞೆಯ ಮೇರೆಗೆ ತ್ವರಿತವಾಗಿ ಹೊರಟರು. ಅರಸನಾದರೋ ಹಾಮಾನನೊಡನೆ ಮದ್ಯಪಾನ ಮಾಡಲು ಕುಳಿತುಕೊಂಡನು. ಅತ್ತ ಶೂಷನ್ ನಗರದಲ್ಲಿ ಎಲ್ಲೆಲ್ಲೂ ತಳಮಳ ಉಂಟಾಯಿತು.

· © 2017 kannadacatholicbible.org Privacy Policy