Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನೆಹೆಮೀಯ


1 : ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿನ, ಇಸ್ರಯೇಲರು ಉಪವಾಸವಾಗಿದ್ದು ಗೋಣೀ ತಟ್ಟನ್ನು ಕಟ್ಟಿಕೊಂಡು, ತಲೆಯ ಮೇಲೆ ಮಣ್ಣುಸುರಿದುಕೊಂಡು, ನೆರೆದುಬಂದರು.
2 : ಇಸ್ರಯೇಲ್ ಸಂತಾನದವರು, ಎಲ್ಲ ಅನ್ಯಕುಲದವರಿಂದ ತಮ್ಮನ್ನು ಬೇರ್ಪಡಿಸಿಕೊಂಡು ನಿಂತು, ತಮ್ಮ ಪಾಪಗಳನ್ನೂ ತಮ್ಮ ಪಿತೃಗಳ ಪಾಪಗಳನ್ನೂ ಅರಿಕೆಮಾಡಿದರು.
3 : ಅವರು ಮೂರು ತಾಸುಗಳವರೆಗೂ ತಮ್ಮ ತಮ್ಮ ಸ್ಥಳದಲ್ಲೇ ನಿಂತು, ತಮ್ಮ ದೇವರಾದ ಸರ್ವೇಶ್ವರನ ಧರ್ಮಶಾಸ್ತ್ರ ಗ್ರಂಥವನ್ನು ಪಾರಾಯಣ ಮಾಡಿಸಿದರು. ತರುವಾಯ ಇನ್ನೂ ಮೂರು ತಾಸು ತಮ್ಮ ದೇವರಾದ ಸರ್ವೇಶ್ವರನಿಗೆ ಅಡ್ಡಬಿದ್ದು ಪಾಪಗಳನ್ನು ಅರಿಕೆಮಾಡಿದರು.
4 : ಯೇಷೂವ, ಬಾನೀ, ಕದ್ಮೀಯೇಲ್, ಶೆಬನ್ಯ, ಬುನ್ನೀ, ಶೇರೇಬ್ಯ, ಬಾನೀ, ಕೆನಾನೀ ಎಂಬವರು ಲೇವಿಯರ ಮೆಟ್ಟಲುಗಳ ಮೇಲೆ ನಿಂತು, ಸ್ವರವೆತ್ತಿ ತಮ್ಮ ದೇವರಾದ ಸರ್ವೇಶ್ವರನಿಗೆ ಮೊರೆಯಿಟ್ಟರು.
5 : ಆಮೇಲೆ ಲೇವಿಯರಾದ ಯೇಷೂವ, ಕದ್ಮೀಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು, “ಏಳಿ, ನಮ್ಮ ದೇವರಾದ ಸರ್ವೇಶ್ವರನಿಗೆ ಯುಗ ಯುಗಕ್ಕೂ ಸ್ತುತಿಸ್ತೋತ್ರ ಎನ್ನಿ,” ಎಂದು ಹೇಳಿ ಹೀಗೆ ಪ್ರಾರ್ಥಿಸಿದರು: “ಸರ್ವೇಶ್ವರಾ, ಸ್ತುತಿಸ್ತೋತ್ರ ನಿಮ್ಮ ಮಹಿಮಾ ಮಯ ನಾಮಕೆ ಮಿಗಿಲಾದುದು ಆ ಶ್ರೀ ನಾಮ ಸರ್ವಸ್ತುತಿ ಕೀರ್ತನೆಗೆ.
6 : ಹೇ ಸರ್ವೇಶ್ವರಾ, ನೀವೊಬ್ಬರೇ ದೇವರು; ಉನ್ನತೋನ್ನತ ಆಕಾಶವನು, ಅದರ ಪರಿವಾರಗಳನು ಬುವಿಯನು, ಕಡಲನು, ಅದರ ಸರ್ವಜಲಚರಗಳನು ಸೃಷ್ಟಿಸಿದಾತ ನೀವು; ಸಮಸ್ತ ಪ್ರಾಣಿಗಳಿಗು ಜೀವಾಧಾರ ನೀವು; ಆರಾಧಿಸುತ್ತವೆ ನಿಮ್ಮನು ಆಕಾಶದ ಪರಿವಾರಗಳು.
7 : ಸರ್ವೇಶ್ವರಾ, ಅಬ್ರಾಮನನು ನೀವು ಆರಿಸಿಕೊಂಡಿರಿ ಬಾಬಿಲೋನಿನ ‘ಊರ್’ ನಗರದಿಂದ ಆತನನು ಬರಮಾಡಿದಿರಿ ದೇವರಾದ ನೀವೇ ಆತನಿಗೆ ‘ಅಬ್ರಹಾಮ’ ಎಂದು ಹೆಸರಿಟ್ಟಿರಿ.
8 : ಆತ ಪ್ರಾಮಾಣಿಕ ವ್ಯಕ್ತಿಯೆಂದು ಗುರುತಿಸಿದಿರಿ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಪೆರಿಜ್ಜೀಯರ, ಯೆಬೂಸಿರ, ಗಿರ್ಗಾಷಿಯರ ನಾಡನು ಆತನ ಸಂತಾನದವರಿಗೆ ವಾಗ್ದಾನ ಮಾಡಿದಿರಿ. ಅಂತೆಯೇ ಸತ್ವ ಸ್ವರೂಪರಾದ ನೀವು ಅದನು ಈಡೇರಿಸಿದಿರಿ.
9 : ನೋಡಿದಿರಿ ಈಜಿಪ್ಟಿನಲಿ ನಮ್ಮ ಪಿತೃಗಳು ಪಟ್ಟ ಕಷ್ಟವನು ಆಲಿಸಿದಿರಿ ಕೆಂಪುಸಮುದ್ರದ ಬಳಿ ಅವರಿಟ್ಟ ಮೊರೆಯನು.
10 : ಈಜಿಪ್ಟಿನವರು ಅವರನು ದರ್ಪದಿಂದ ದಮನಮಾಡುವಲ್ಲಿ ಎಸಗಿದಿರಿ ಅದ್ಭುತಕಾರ್ಯಗಳನು ಸೂಚಕ ಕಾರ್ಯಗಳನು ಫರೋಹನಲಿ, ಅವನ ಸೇವಕರಲಿ, ಆ ನಾಡಿನ ಜನರಲಿ. ಉಳಿಸಿಕೊಂಡಿರಿ ಇಂದಿಗೂ ಅಂದು ಸಾಧಿಸಿದ ಕೀರ್ತಿಯನು
11 : ಕಡಲನು ಸೀಳಿ, ಆ ಪಿತೃಗಳ ನಡೆಸಿದಿರಿ ಒಣನೆಲದಲೋ ಎಂಬಂತೆ ಅವರ ಬೆನ್ನಟ್ಟಿ ಬಂದವರನು ಜಲರಾಶಿಯ ತಳಮುಟ್ಟಿಸಿದಿರಿ ಕಲ್ಲಂತೆ.
12 : ಹಗಲಲಿ ಅವರ ಮುಂದೆ ಸಾಗಿದಿರಿ ಮೇಘಸ್ತಂಭದಂತೆ ಇರುಳಲ್ಲಿ ದಾರಿತೋರಿದಿರಿ ಬೆಳಕನೀವ ಅಗ್ನಿಸ್ತಂಭದಂತೆ.
13 : ಸೀನಾಯಿ ಬೆಟ್ಟದ ಮೇಲೆ ಇಳಿದು ಬಂದು ಆಕಾಶ ಕಡೆಯಿಂದ ಅವರೊಡನೆ ಮಾತಾಡಬಂದು ಅವರಿಗನುಗ್ರಹಿಸಿದಿರಿ ನೀತಿನಿಯಮಗಳನು ಸತ್ಯಧರ್ಮೋಪದೇಶವನು, ಶ್ರೇಷ್ಠ ಆಜ್ಞಾವಿಧಿಗಳನು.
14 : ಕಲಿಸಿದಿರಿ ಅವರಿಗೆ ಆಜ್ಞಾವಿಧಿ ಧರ್ಮಗಳನು ಪ್ರಕಟಿಸಿದಿರಿ ನಿಮಗೆ ಮೀಸಲಾದ ವಿಶ್ರಾಂತಿದಿನವನು; ನಿಮ್ಮ ದಾಸ ಮೋಶೆಯ ಮುಖಾಂತರ ಸಾಧಿಸಿದಿರಿದನು.
15 : ಹಸಿದಿದ್ದಾಗ ಅವರಿಗಿತ್ತಿರಿ ಉಣವನು ಆಗಸದಿಂದ ಬಾಯಾರಿದ್ದಾಗ ನೀರ ಬರಮಾಡಿದಿರಿ ಬಂಡೆಯೊಳಗಿಂದ ವಾಗ್ದತ್ತ ನಾಡಸೇರಿ ಸ್ವಾಧೀನಪಡಿಸಿಕೊಂಡರು ನಿಮ್ಮಾಜ್ಞೆಯಿಂದ.
16 : ಇಷ್ಟಾದರೂ ಗರ್ವಿಗಳಾದರು, ನಮ್ಮೀ ಪಿತೃಗಳು ಹಟಹಿಡಿದು ಅವಿಧೇಯರಾದರು ಉಲ್ಲಂಘಿಸಿ ನಿಮ್ಮಾಜ್ಞಾವಿಧಿಗಳನು.
17 : ಮರೆತುಬಿಟ್ಟರು ನೀವೆಸಗಿದ ಮಹಾತ್ಕಾರ್ಯಗಳನು ಹಟಹಿಡಿದರು ತಮಗೊಬ್ಬ ನಾಯಕನ ನೇಮಿಸಿಕೊಳ್ಳಲು; ಈಜಿಪ್ಟಿಗೆ ತೆರಳಲಿದ್ದರು ಮರಳಿ ಗುಲಾಮರಾಗಲು. ನೀವಾದರೋ ಪಾಪಿಗಳನು ಕ್ಷಮಿಸುವವರು ದಯಾಪೂರಿತರು, ದೀರ್ಘಶಾಚಿತರು, ಕೃಪಾಳು ದೇವರು, ಅವರನು ಕೈಬಿಡದೆ ಕಾಪಾಡಿ ನಡೆಸಿದವರು.
18 : ಅವರಾದರೋ ಎರಕದ ಹೋರಿಕರುವನು ಮಾಡಿಕೊಂಡರು ತಮ್ಮನು ಈಜಿಪ್ಟಿನಿಂದ P್ಪರೆತಂದುದು ಅದೇ ಎಂದುಕೊಂಡರು. ಈ ಪರಿಯ ವರ್ತನೆಯಿಂದ ನಿಮ್ಮ
19 : ಹೀಗಿದ್ದರು ನೀವಾದಿರಿ ಅವರಿಗೆ ಕರುಣಾನಿಧಿ ತೊರೆದುಬಿಡಲಿಲ್ಲ ನೀವವರನು ಮರುಭೂಮಿಯಲಿ. ಬಿಟ್ಟುಹೋಗಲಿಲ್ಲ ದಾರಿತೋರಿದಾ ಮೇಘ ಸ್ತಂಭ ಹಗಲಲಿ ಮುನ್ನಡೆಯಿತು ಬೆಳಕನೀಯುತಾ ಅಗ್ನಿಸ್ತಂಭ ಇರುಳಲಿ.
20 : ಅವರಿಗಿತ್ತಿರಿ ಉಪದೇಶಿಸಲು ಸತ್ಯಾತ್ಮವನು ಅವರ ಬಾಯಿಂದ ಹಿಂದೆಗೆಯಲಿಲ್ಲ ಮನ್ನವನು ಬಾಯಾರಿದ್ದಾಗ ಕುಡಿಯಲಿತ್ತಿರಿ ಅವರಿಗೆ ನೀರನು.
21 : ಈ ಪರಿ ಸಲಹಿದಿರಿ ಮರುಭೂಮಿಯಲಿ ನಾಲ್ವತ್ತು ವರ್ಷ ಅಲ್ಲವರಿಗಿರಲಿಲ್ಲ ಯಾವುದೊಂದು ಸಂಕಷ್ಟ. ಊದಿಹೋಗಲಿಲ್ಲ ಕಾಲು, ಹರಿದುಹೋಗಲಿಲ್ಲ ಅವರ ವಸ್ತ್ರ.
22 : ರಾಜ್ಯಗಳನು, ಜನಾಂಗಗಳನು, ವಶಪಡಿಸಿದಿರಿ ಅವರಿಗೆ ಹಂಚಿಕೊಟ್ಟಿರಿ ಆ ರಾಷ್ಟಗಳ ಸೊತ್ತುಗಳನೆ ಹೆಷ್ಬೋನಿನ ಅರಸ ಸೀಹೋನನಿಗೆ, ಬಾಷಾನಿನ ಅರಸ ಓಗನಿಗೆ, ಸೇರಿದ ಪ್ರಾಂತ್ಯಗಳಿಗೆ ಸ್ವಾಧೀನಪಡಿಸಿಕೊಂಡರಲ್ಲವೆ?
23 : ಹೆಚ್ಚಿಸಿದಿರಿ ಅವರ ಮಕ್ಕಳನು ಆಗಸದ ನಕ್ಷತ್ರಗಳಷ್ಟೆ; ಬರಮಾಡಿದಿರಿ ಆ ಮಕ್ಕಳನು ವಾಗ್ದತ್ತ ನಾಡಿಗೆ ‘ಅದ ಸೇರಿ, ವಶಮಾಡಿಕೊಳ್ಳಿ’ ಎಂದು ಹೇಳಿದಿರಾ ಪಿತೃಗಳಿಗೆ.
24 : ಅಂತೆಯೇ ಸೇರಿ ಸ್ವಾಧೀನಮಾಡಿಕೊಂಡರು ಆ ನಾಡನು ಅವರಿಗಧೀನಪಡಿಸಿದಿರಿ ಅದರ ರಾಜರನು, ಪ್ರಜೆಗಳನು, ನಿವಾಸಿಗಳನು, ಆ ಕಾನಾನ್ಯರನು, ತಮಗಿಷ್ಟಾನುಸಾರ ನಡೆಸಲು.
25 : ವಶಮಾಡಿಕೊಂಡರು ಕೋಟೆಕೊತ್ತಲುಗಳುಳ್ಳ ಪಟ್ಟಣಗಳನು ಸಾರವತ್ತಾದ ಹೊಲಗಳನು, ಧಾನ್ಯ ತುಂಬಿದ ಮನೆಗಳನು, ತೋಡಿದ ಬಾವಿಗಳನು ದ್ರಾಕ್ಷೀತೋಟಗಳನು, ಎಣ್ಣೇಮರ ತೋಪುಗಳನು, ನಾನಾಫಲವೃಕ್ಷಗಳನು. ತಿಂದುತೃಪ್ತರಾದರು, ಕೊಬ್ಬಿದರು, ನೀವಿತ್ತ ಸಮೃದ್ಧಿಯಲಿ ನಲಿದಾಡಿದರು.
26 : ಬಳಿಕ ಅವಿಧೇಯರಾದರು, ನಿಮಗೆ ವಿರುದ್ಧ ದಂಗೆ ಎದ್ದರು; ನಿಮ್ಮ ಉಪದೇಶವನು ಉಲ್ಲಂಘಿಸಿದರು, ನಿಮ್ಮ ಪ್ರವಾದಿಗಳನು ಕೊಂದರು; ಹೌದು, ನಿಮಗೆ ಅಭಿಮುಖರಾಗಲು ಎಚ್ಚರಿಸಿದವರನೆ ಕೊಂದರು. ಕಡೆಗೆ ನಿಮ್ಮನ್ನೇ ಅಸಡ್ಡೆಮಾಡಿ, ಘೋರ ಅಪರಾಧಿಗಳಾದರು.
27 : ಎಂದೇ ನೀವಿತ್ತಿರಿ ಅವರನು ಕ್ರೂರ ಶತ್ರುಗಳ ವಶಕೆ ಆದರೆ ಸಂಕಟದಲಿ ಮೊರೆಯಿಡಲು, ಪರದಿಂದ ಕಿವಿಗೊಟ್ಟಿರವರಿಗೆ ! ರಕ್ಷಕರನು ಕಳುಹಿಸಿದಿರಿ ಕರುಣಾತಿಶಯದಿಂದ ಈ ಪರಿ ಬಿಡಿಸಿದಿರಿ ವಿರೋಧಿಗಳ ಕೈಯಿಂದ.
28 : ಶಾಂತಿ ಸವಿದದ್ದೇ ದ್ರೋಹಿಗಳಾಗಿ ನಡೆದರು ಮತ್ತೆ ನೀವಿತ್ತಿರವರನು ದೊರೆತನ ನಡೆಸುವ ವೈರಿಗಳ ಕೈಗೆ. ಪಶ್ಚಾತ್ತಾಪಪಟ್ಟು ಕೂಗಿಕೊಳ್ಳಲು, ಆಲಿಸಿದಿರಿ ಪರದಿಂದ ರಕ್ಷಿಸಿದಿರಿ ಪದೇ ಪದೇ ಅಪರಿಮಿತ ಕರುಣೆಯಿಂದ
29 : ‘ಧರ್ಮೋಪದೇಶಕೆ ಮರಳಿ ಮನವೊಲಿದು ಬನ್ನಿ’ ಎಂದು ನೀವೆಷ್ಟೋ ಸಾರಿ ಅವರನ್ನೆಚ್ಚರಿಸಿದಿರಿ ಖಚಿತವಾಗಿ ಆದರೂ ಆಲಿಸಲಿಲ್ಲಾ ಗರ್ವಿಗಳು, ಅವಿಧೇಯರು, ಪಾಪಿಗಳು. ಜೀವಾಧಾರವಾದ ನಿಮ್ಮಾ ವಿಧಿನಿಯಮಗಳನು ಮೀರಿದರು ಮೊಂಡುಬಿದ್ದು ನಿಮ್ಮ ನೊಗಕೆ ಕೊರಳೊಡ್ಡದೆ ಹೋದರು.
30 : ತಾಳಿಕೊಂಡಿರಿ ಅವರನು ನೀವೆಷ್ಟೋ ವರ್ಷಗಳ ತನಕ ಎಚ್ಚರಿಸಿದಿರಿ ನಿಮ್ಮಾತ್ಮ ಪ್ರೇರಣೆಯಿಂದ, ಪ್ರವಾದಿಗಳ ಮೂಲಕ ಕಿವಿಗೊಡದಾ ಜನರನು ಹೊರದೂಡಿದಿರಿ ಅನ್ಯದೇಶದ ಪರಿಯಂತ.
31 : ಆದರೆ, ನೀವು ದಯಾಪೂರಿತರು, ಕರುಣಾಮಯ ದೇವರು ! ನಿಮ್ಮ ಮಹಾಕೃಪಾನುಸಾರ, ಕೈಬಿಡಲಿಲ್ಲ, ನಾಶಮಾಡಲಿಲ್ಲ ಅವರನು.
32 : ಓ ನಮ್ಮ ದೇವರೇ, ನೀವು ಮಹೋನ್ನತರು, ಶಕ್ತಿಸಾಮಥ್ರ್ಯರು, ಭಯಭಕ್ತಿಗೆ ಪಾತ್ರರು, ಕೃಪಾವಾಗ್ದಾನಗಳ ನೆರವೇರಿಸುವವರು. ಅಲ್ಪವೆಂದೆಣಿಸಬೇಡಿ - ನಮ್ಮ ರಾಜರು, ರಾಜ್ಯಪಾಲರು. ಯಾಜಕರು, ಪ್ರವಾದಿಗಳು, ಹಿರಿಯರು, ಪ್ರಜೆಗಳು ಸಹಿಸಬೇಕಾಗಿ ಬಂದಿರುವ
33 : ನಮ್ಮ ಮೇಲೆ ನೀವೆಷ್ಟೇ ಕೇಡನು ಬರಮಾಡಿದರೂ ನೀವು ನ್ಯಾಯವಂತರು, ಸತ್ಯಸ್ವರೂಪಿ, ನಾವೋ ದುಷ್ಟರು!
34 : ನಮ್ಮ ಮೇಲೆ ನೀವೆಷ್ಟೇ ಕೇಡನು ಬರಮಾಡಿದರೂ ನೀವು ನ್ಯಾಯವಂತರು, ಸತ್ಯಸ್ವರೂಪಿ, ನಾವೋ ದುಷ್ಟರು!
35 : ಅವರಿದ್ದರು ನೀವೇ ಅನುಗ್ರಹಿಸಿದ ಸ್ವರಾಜ್ಯದಲಿ ನಲಿದಾಡಿದರು ನೀವು ಕರುಣಿಸಿದ ಸಮೃದ್ಧಿಯಲಿ ವಾಸಿಸಿದರು ಸಾರವತ್ತಾದ ಸವಿಸ್ತಾರನಾಡಿನಲಿ. ಆದರೂ ಮಾಡಲಿಲ್ಲ ನಿಮ್ಮ ಸೇವೆ, ಬಿಡಲಿಲ್ಲ ತಮ್ಮ ದುರ್ನಡತೆ ನಮಗೊದಗಿರುವ ಗುಲಾಮಗಿರಿ, ಇದರ ಪರಿಣಾಮವಲ್ಲವೆ?
36 : ನಮ್ಮ ಪಿತೃಗಳಿಗೆ ನೀವೆಂದಿರಿ ‘ಸವಿಯಿರಿ ನಾಡಿನ ಫಲವನು, ಸಮೃದ್ಧಿಯನು’. ಆದರಿದೋ ಅನುಭವಿಸುತ್ತಿರುವೆವು ಈ ನಾಡಿನಲಿ ಗುಲಾಮಗಿರಿಯನು!
37 : ನಮ್ಮ ಪಾಪದ ನಿಮಿತ್ತ ಅಧೀನರಾಗಿಸಿದಿರಿ ಅನ್ಯರಾಜರಿಗೆ ಈ ನಾಡಿನ ಸಿರಿಸಂಪತ್ತು ಹರಿದುಹೋಗುತ್ತಿದೆ ಆ ಅರಸರಿಗೆ ನಮ್ಮೊಡಲು, ದನಕರುಗಳು, ಈಡಾಗಿವೆ ಅವರ ದಬ್ಬಾಳಿಕೆಗೆ ಅಕಟಕಟ, ನಾವು ಸಿಕ್ಕಿಕೊಂಡಿದ್ದೇವೆ, ಮಹಾಸಂಕಟಕೆ!”
38 : ಈ ಎಲ್ಲ ಕಾರಣಗಳಿಂದ ನಾವು ಲೇಖನ ರೂಪವಾದ ಪ್ರತಿಜ್ಞೆಯನ್ನು ಮಾಡಿದೆವು. ಅದಕ್ಕೆ ನಮ್ಮ ಮುಖಂಡರು, ಲೇವಿಯರು ಹಾಗು ಯಾಜಕರು ಸಹಿಮಾಡಿ, ಮುದ್ರೆ ಹಾಕಿದರು.

· © 2017 kannadacatholicbible.org Privacy Policy