Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನೆಹೆಮೀಯ


1 : ಕೆಲವು ದಿನಗಳ ನಂತರ ಜನಸಾಮಾನ್ಯರು ಹಾಗು ಅವರ ಹೆಂಡತಿಯರು ತಮ್ಮ ಬಂಧುಗಳಾದ ಯೆಹೂದ್ಯರಿಗೆ ವಿರುದ್ಧ ಕಟುವಾಗಿ ಗುಣುಗುಟ್ಟತೊಡಗಿದರು.
2 : ಕೆಲವರು, “ನಮಗೆ ಗಂಡುಹೆಣ್ಣು ಮಕ್ಕಳು ಬಹು ಮಂದಿ ಇದ್ದಾರೆ; ನಮ್ಮ ಜೀವನಕ್ಕಾಗಿ ಕಾಳುಕಡ್ಡಿಗಳಕೆಲವು ದಿನಗಳ ನಂತರ ಜನಸಾಮಾನ್ಯರು ಹಾಗು ಅವರ ಹೆಂಡತಿಯರು ತಮ್ಮ ಬಂಧುಗಳಾದ ಯೆಹೂದ್ಯರಿಗೆ ವಿರುದ್ಧ ಕಟುವಾಗಿ ಗುಣುಗುಟ್ಟತೊಡಗಿದರು. ನ್ನು ಹೇಗಾದರೂ ಸಂಪಾದಿಸಿ ಕೊಳ್ಳಬೇಕಾಗಿ ಇದೆ,” ಎಂದರು.
3 : ಇನ್ನು ಕೆಲವರು, “ನಮ್ಮ ಹೊಲ, ತೋಟ, ಮನೆಗಳನ್ನು ಅಡವು ಇಟ್ಟಾಯಿತು; ಹಾಗೆ ಮಾಡಿಯಾದರೂ ಈ ಬರಗಾಲದಲ್ಲಿ ಧಾನ್ಯವನ್ನು ಸಂಪಾದಿಸಿಕೊಳ್ಳಬೇಕಾಗಿದೆ,” ಎಂದರು.
4 : ಮತ್ತೆ ಕೆಲವರು, “ಸರಕಾರಕ್ಕೆ ಕಂದಾಯಕೊಡುವುದಕ್ಕಾಗಿ ನಮ್ಮ ಹೊಲ, ತೋಟಗಳ ಮೇಲೆ ಸಾಲ ತೆಗೆದುಕೊಳ್ಳಬೇಕಾಯಿತು;
5 : ಆ ನಮ್ಮ ಸಹೋದರರ ಕುಲಕ್ಕೂ ನಮ್ಮ ಕುಲಕ್ಕೂ ಅವರ ಮಕ್ಕಳಿಗೂ ನಮ್ಮ ಮಕ್ಕಳಿಗೂ ಏನು ಹೆಚ್ಚುಕಡಿಮೆ? ನೋಡಿ, ನಾವು ನಮ್ಮ ಗಂಡುಹೆಣ್ಣು ಮಕ್ಕಳನ್ನು ಪರರಿಗೆ ದಾಸರನ್ನಾಗಿ ಕೊಡಬೇಕಾಯಿತು; ನಮ್ಮ ಹೆಣ್ಣುಮಕ್ಕಳಲ್ಲಿ ಕೆಲವರನ್ನು ಈಗಾಗಲೇ ಅಪಹರಿಸಿದ್ದಾರೆ; ನಮ್ಮ ಪ್ರಯತ್ನವೇನೂ ಸಾಗುವುದಿಲ್ಲ; ನಮ್ಮ ಹೊಲತೋಟಗಳು ಪರಾಧೀನವಾಗಿವೆ,” ಎಂದು ಎಲ್ಲಾ ಗೊಣಗಿದರು.
6 : ಅವರ ಬೊಬ್ಬೆಯನ್ನೂ ಟೀಕೆಗಳನ್ನೂ ಕೇಳಿ ನನಗೆ ಬಹಳ ಸಿಟ್ಟು ಬಂದಿತು.
7 : ನಾನು ತುಸು ಆಲೋಚಿಸಿ ನೋಡಿದೆ. ಬಳಿಕ ಶ್ರೀಮಂತರನ್ನೂ ಅಧಿಕಾರಿಗಳನ್ನೂ ಖಂಡಿಸಿ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದು ಸರಿಯೆ?” ಎಂದು ಹೇಳಿ ಅವರೊಡನೆ ಬಹಳವಾಗಿ ವಾಗ್ವಾದಿಸಿ ಅವರಿಗೆ ವಿರೋಧವಾಗಿ ಮಹಾಸಭೆಯನ್ನು ಕೂಡಿಸಿದೆ.
8 : “ನಾವು ನಮ್ಮಿಂದ ಆಗುವಷ್ಟು ನಮ್ಮ ಸಹೋದರರಾದ ಯೆಹೂದ್ಯರಲ್ಲಿ ಅನ್ಯಜನರಿಗೆ ಮಾರಲಾದವರನ್ನು, ಹಣ ಕೊಟ್ಟು ಬಿಡಿಸುತ್ತಿದ್ದೆವು. ಈಗ ನೀವು ನಿಮ್ಮ ಸಹೋದರರನ್ನೇ ಮಾರಿಬಿಡುತ್ತಿದ್ದೀರಿ; ಆಮೇಲೆ ಅವರನ್ನು ನಾವು ಕೊಂಡುಕೊಳ್ಳಬೇಕೇನು?” ಎನ್ನಲು ಅವರು ಉತ್ತರಕೊಡದೆ ಸುಮ್ಮನೆ ಇದ್ದರು.
9 : ಆಮೇಲೆ ನಾನು ಅವರಿಗೆ, “ನೀವು ಮಾಡಿದ್ದು ಸರಿಯಲ್ಲ; ನಾವು ನಮ್ಮ ವಿರೋಧಿಗಳಾದ ಅನ್ಯಜನರ ನಿಂದೆಗೆ ಗುರಿಯಾಗದಂತೆ ದೇವರಲ್ಲಿ ಭಯಭಕ್ತಿಯುಳ್ಳವರಾಗಿ ನಡೆದುಕೊಳ್ಳಬೇಕಲ್ಲವೇ?
10 : ನಾನು, ನನ್ನ ಸಹೋದರರು, ಸೇವಕರು ಸಹ, ಅವರಿಗೆ ಹಣವನ್ನೂ ಧಾನ್ಯವನ್ನೂ ಬಡ್ಡಿಗೆ ಕೊಟ್ಟಿದ್ದೇವೆ. ಬಡ್ಡಿ ತೆಗೆದುಕೊಳ್ಳುವ ಪದ್ಧತಿಯನ್ನು ಬಿಟ್ಟುಬಿಡೋಣ.
11 : ಅವರ ಹೊಲ, ದ್ರಾಕ್ಷೀತೋಟ, ಎಣ್ಣೆಮರಗಳ ತೋಪು, ಮನೆ ಇವುಗಳನ್ನು ಹಿಂದಕ್ಕೆ ಕೊಟ್ಟು ಬಿಡಿ. ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೆ ಶೇಕಡಾ ಇಷ್ಟೆಂದು ವಸೂಲಿ ಮಾಡುವ ಹಕ್ಕನ್ನೂ ಕೂಡ ದಯವಿಟ್ಟು ಈ ದಿನವೇ ರದ್ದುಗೊಳಿಸಿ,” ಎಂದು ಹೇಳಿದೆ.
12 : ಅವರು, “ಹಿಂದಕ್ಕೆ ಕೊಡುತ್ತೇವೆ; ಅವರಿಂದ ಏನೂ ಕೇಳುವುದಿಲ್ಲ. ನೀವು ಹೇಳಿದಂತೆಯೇ ಮಾಡುತ್ತೇವೆ,” ಎಂದು ಉತ್ತರ ಕೊಟ್ಟರು. ಆಗ ನಾನು ಯಾಜಕರನ್ನು ಕರೆಯಿಸಿದೆ; ಯಾಜಕರ ಮುಂದೆ, ತಾವು ಕೊಟ್ಟ ಮಾತಿನಂತೆ ನಡೆಯುವುದಾಗಿ ಪ್ರಮಾಣ ಮಾಡಿಸಿದೆ.
13 : ಇದಲ್ಲದೆ, ನನ್ನ ನಡುಪಟ್ಟಿಯನ್ನು ಝಾಡಿಸಿಬಿಟ್ಟು, “ಈಗ ಕೊಟ್ಟ ಮಾತನ್ನು ಕೈಕೊಳ್ಳದೆ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ ಆಸ್ತಿಪಾಸ್ತಿಯಿಂದಲೂ ಈ ಪ್ರಕಾರವೇ ಝಾಡಿಸಿಬಿಡಲಿ; ಅವನು ನಡುಪಟ್ಟಿಯಂತೆಯೇ ಝಾಡಿಸಲ್ಪಟ್ಟು ಬರಿದಾಗಲಿ,” ಎಂದೆ. ಕೂಡಲೆ ಸಭೆಯವರೆಲ್ಲರು ‘ಹಾಗೆಯೇ ಆಗಲಿ’ ಎಂದು ಹೇಳಿ ಸರ್ವೇಶ್ವರನನ್ನು ಕೊಂಡಾಡಿ, ಕೊಟ್ಟ ಮಾತನ್ನು ಕೈಗೊಂಡರು.
14 : ಅರಸ ಅರ್ತಷಸ್ತನು ನನ್ನನ್ನು ಜುದೇಯ ನಾಡಿನ ರಾಜ್ಯಪಾಲನನ್ನಾಗಿ ನೇಮಿಸಿದಂದಿನಿಂದ ಹನ್ನೆರಡು ವರ್ಷಗಳವರೆಗೆ ಅಂದರೆ, ಅವನ ಆಳ್ವಿಕೆಯ ಇಪ್ಪತ್ತನೆಯ ವರ್ಷದಿಂದ ಮೂವತ್ತೆರಡನೆಯ ವರ್ಷದವರೆಗೆ, ನಾನಾಗಲಿ, ನನ್ನ ಸಹೋದರರಾಗಲಿ ರಾಜ್ಯಪಾಲನೆಗೆ ಸಲ್ಲತಕ್ಕ ಭತ್ಯದಿಂದ ಜೀವನ ಮಾಡಲಿಲ್ಲ.
15 : ನನಗಿಂತ ಮುಂಚೆಯಿದ್ದ ರಾಜ್ಯಪಾಲರು ಜನರ ಮೇಲೆ ಬಹಳ ತೆರಿಗೆ ಹೊರಿಸಿ, ಅವರಿಂದ ದಿನಕ್ಕೆ ನಾಲ್ವತ್ತು ಬೆಳ್ಳಿನಾಣ್ಯದ ಆಹಾರವನ್ನೂ ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಿದ್ದರು; ಅವರ ಸೇವಕರೂ ಜನರ ಮೇಲೆ ದೊರೆತನ ನಡೆಸುತ್ತ ಇದ್ದರು. ನಾನಾದರೋ ದೇವರಲ್ಲಿ ಭಯ ಭಕ್ತಿಯುಳ್ಳವನಾಗಿ ಹಾಗೆ ಮಾಡಿದೆ.
16 : ಆ ಗೋಡೆ ಕಟ್ಟುವುದರಲ್ಲೇ ನಿರತನಾಗಿದ್ದೆ; ಮತ್ತು ನನ್ನ ಎಲ ಸೇವಕರು ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆ. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.
17 : ಇದಲ್ಲದೆ, ಯೆಹೂದ್ಯರಲ್ಲಿ ನೂರೈವತ್ತು ಮಂದಿ ಅಧಿಕಾರಿಗಳು ಹಾಗು ಸುತ್ತಣ ಜನಾಂಗಗಳ ಮಧ್ಯೆಯಿಂದ ನಮ್ಮ ಬಳಿಗೆ ಬರುತ್ತಿದ್ದವರು ನನ್ನ ಪಂಕ್ತಿಯಲ್ಲೇ ಊಟಮಾಡುತ್ತಿದ್ದರು.
18 : ಪ್ರತಿದಿನ ಒಂದು ಹೋರಿ, ಆರು ಕೊಬ್ಬಿದ ಕುರಿ, ಕೆಲವು ಕೋಳಿಗಳು ನಮ್ಮ ಭೋಜನಕ್ಕಾಗಿ ಸಿದ್ಧ ಆಗುತ್ತಿದ್ದವು. ಹತ್ತು ದಿವಸಕ್ಕೊಮ್ಮೆ ನಾನು ಎಲ್ಲ ತರದ ದ್ರಾಕ್ಷಾರಸವನ್ನು ಬೇಕಾಗುವಷ್ಟು ಒದಗಿಸಿ ಕೊಡುತ್ತಿದ್ದೆ. ನನಗೆ ಇಷ್ಟೆಲ್ಲಾ ವೆಚ್ಚ ಆಗುತ್ತಿದ್ದರೂ, ಆ ಜನರು ಮಾಡಬೇಕಾಗಿದ್ದ ಕೆಲಸ ಬಹುಕಷ್ಟಕರವಾಗಿದ್ದುದರಿಂದ, ನಾನು ರಾಜಪಾಲನೆಗೆ ಸಲ್ಲತಕ್ಕ ಭತ್ಯವನ್ನು ವಸೂಲಿ ಮಾಡಲಿಲ್ಲ.
19 : ‘ನನ್ನ ದೇವರೇ, ನಾನು ಈ ಜನರಿಗೆ ಮಾಡಿದ ಉಪಕಾರವನ್ನು ನೆನೆಸಿಕೊಂಡು ನನಗೆ ಒಳಿತನ್ನು ಅನುಗ್ರಹಿಸಿ!’ ಎಂದು ಪ್ರಾರ್ಥಿಸಿದೆ.

· © 2017 kannadacatholicbible.org Privacy Policy