Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ನೆಹೆಮೀಯ


1 : ನಾನು ರಾಜನ ಪಾನಸೇವಕನಾಗಿದ್ದೆ. ಅರ್ತಷಸ್ತರಾಜನ ಇಪ್ಪತ್ತನೆಯ ವರ್ಷದ ಚೈತ್ರಮಾಸದಲ್ಲಿ, ರಾಜನು ದ್ರಾಕ್ಷಾರಸ ಪಾನಮಾಡುವ ಹೊತ್ತಿನಲ್ಲಿ, ದ್ರಾಕ್ಷಾರಸವನ್ನು ತಂದುಕೊಟ್ಟೆ. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ.
2 : ರಾಜ ನನಗೆ, “ನೀನು ಕಳೆಗುಂದಿದವನಾಗಿರುವೆ, ಏಕೆ? ನಿನ್ನ ದೇಹಾರೋಗ್ಯ ಚೆನ್ನಾಗಿದೆಯಲ್ಲವೆ? ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣ ಇರಲಾರದು,” ಎಂದು ಹೇಳಿದ. ನನಗೆ ಮಹಾಭೀತಿಯುಂಟಾಯಿತು.
3 : ನಾನು ರಾಜನಿಗೆ, “ರಾಜಾಧಿರಾಜರು ಚಿರಂಜೀವಿಯಾಗಿರಲಿ! ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಹೀಗಿರುವಲ್ಲಿ, ನನ್ನ ಮುಖ ಕಳೆಗುಂದದೆ ಇರಲು ಸಾಧ್ಯವೆ?,” ಎಂದು ಹೇಳಿದೆ.
4 : ಆಗ ರಾಜ, :ನಿನ್ನ ಆಶೆಯೇನು?,” ಎಂದು ಕೇಳಿದನು. ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ, ಅವನಿಗೆ, “ರಾಜರ ಚಿತ್ತವಿರುವುದಾದರೆ,
5 : ಮತ್ತು ತಮ್ಮ ಸೇವಕನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ, ನನ್ನ ಪಿತೃಗಳ ಸಮಾಧಿಗಳಿರುವ ಪಟ್ಟಣವನ್ನು ಮರಳಿ ಕಟ್ಟುವುದಕ್ಕೆ ಜುದೇಯ ನಾಡಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು,” ಎಂದು ಹೇಳಿದೆ.
6 : ರಾಜರ ಹತ್ತಿರದಲ್ಲೇ ಕುಳಿತು ಕೊಂಡಿದ್ದಳು ರಾಣಿ. ರಾಜ, “ಪ್ರಯಾಣಕ್ಕೆ ನಿನಗೆ ಎಷ್ಟು ಕಾಲಬೇಕು? ಯಾವಾಗ ಹಿಂದಿರುಗುವೆ,” ಎಂದು ವಿಚಾರಿಸಿದ. ನಾನು ಕಾಲವನ್ನು ಸೂಚಿಸಿದೆ. ಅವನು ಒಪ್ಪಿಕೊಂಡು ಹೋಗಿಬರಲು ಅಪ್ಪಣೆಕೊಟ್ಟ.
7 : ತರುವಾಯ ನಾನು ರಾಜನಿಗೆ, “ನದಿ ಆಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳಲ್ಲಿ ಹಾದು ಜುದೇಯ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡಬೇಕಾಗುತ್ತದೆ.
8 : ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಿಲುಗಳನ್ನೂ ಪಟ್ಟಣದ ಪೌಳಿ ಗೋಡೆಯನ್ನೂ ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡಬೇಕಾಗುತ್ತದೆ; ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು,” ಎಂದು ಬಿನ್ನವಿಸಿದೆ. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ ರಾಜನು ಅವುಗಳನ್ನು ನನಗೆ ಕೊಟ್ಟನು.
9 : ಅದೂ ಅಲ್ಲದೆ ನನ್ನನ್ನು ಸಾಗಕಳುಹಿಸುವುದಕ್ಕೆ ಸೇನಾಧಿಪತಿಗಳನ್ನೂ ರಾಹುತರನ್ನೂ ಕಳುಹಿಸಿದನು. ಹೀಗೆ ನಾನು ನದಿಯಾಚೆಯ ದೇಶಾಧಿಪತಿಗಳ ಬಳಿಗೆ ಬಂದು ರಾಜನ ಪತ್ರಗಳನ್ನು ಅವರಿಗೆ ತೋರಿಸಿದೆ.
10 : ಇಸ್ರಯೇಲರ ಹಿತಚಿಂತಕನು ಒಬ್ಬನು ಬಂದನೆಂಬ ಸಮಾಚಾರ ಹೋರೋನಿನ ಸನ್ಬಲ್ಲಟನಿಗೂ ಅಮ್ಮೋನ್ ದೇಶದವನಾದ ತೊಬೀಯ ಎಂಬ ಅಧಿಕಾರಿಗೂ ಮುಟ್ಟಿತು. ಅವರು ತುಂಬ ಹೊಟ್ಟೆಕಿಚ್ಚುಪಟ್ಟರು.
11 : ಅನಂತರ ಜೆರುಸಲೇಮಿಗೆ ಬಂದೆ. ಅಲ್ಲಿ ಮೂರು ದಿನಗಳಿದ್ದೆ.
12 : ಆಮೇಲೆ ಜೆರುಸಲೇಮಿಗಾಗಿ ಮಾಡತಕ್ಕ ಕಾರ್ಯದ ಬಗ್ಗೆ ನನ್ನ ದೇವರು ನನ್ನಲ್ಲಿ ಯಾವ ಆಲೋಚನೆಯನ್ನು ಹುಟ್ಟಿಸಿದ್ದಾರೆಂದು ಯಾರಿಗೂ ತಿಳಿಸದೆ, ರಾತ್ರಿಯಲ್ಲೆದ್ದು ಕೆಲವು ಜನರನ್ನು ಮಾತ್ರ ಕರೆದುಕೊಂಡು ಹೊರಟೆ. ನನ್ನ ವಾಹನಪಶುವಿನ ಹೊರತು ಬೇರೆ ಯಾವ ಪಶುವೂ ನನ್ನೊಂದಿಗಿರಲಿಲ್ಲ.
13 : ನಾನು ರಾತ್ರಿ ವೇಳೆಯಲ್ಲಿ ಕಣಿವೆಯ ಬಾಗಿಲಿನಿಂದ ಹೊರಟು, ಹಾಳುಬಿದ್ದ ಜೆರುಸಲೇಮಿನ ಗೋಡೆಗಳನ್ನೂ ಬೆಂಕಿಯಿಂದ ಸುಡಲಾಗಿದ್ದ ಅದರ ಬಾಗಿಲುಗಳನ್ನೂ ನೋಡುತ್ತಾ ಹೆಬ್ಬಾವು ಬುಗ್ಗೆಯ ಮಾರ್ಗವಾಗಿ ತಿಪ್ಪೆಬಾಗಿಲಿಗೆ ಹೋದೆ.
14 : ಅಲ್ಲಿಂದ ಬುಗ್ಗೆಬಾಗಿಲನ್ನು ಹಾದು ಅರಸನ ಕೊಳಕ್ಕೆ ಹೋದೆ.
15 : ನನ್ನ ವಾಹನಪಶುವಿಗೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮಾರ್ಗವಿಲ್ಲದ್ದರಿಂದ ನಾನು ರಾತ್ರಿಯಲ್ಲಿ ಹಳ್ಳದ ಮಾರ್ಗದಿಂದ ಹತ್ತುತ್ತಾ ಗೋಡೆಯನ್ನು ಪರೀಕ್ಷಿಸಿದೆ. ಆಮೇಲೆ ಪುನಃ ಕಣಿವೆಯ ಬಾಗಿಲಿನಿಂದ ಮನೆಗೆ ಬಂದೆ.
16 : ನಾನು ಆವರೆಗೆ ಯೆಹೂದ್ಯರಿಗೂ ಯಾಜಕರಿಗೂ ಶ್ರೀಮಂತರಿಗೂ ಅಧಿಕಾರಿಗಳಿಗೂ ಹಾಗು ಕೆಲಸ ನಡೆಸತಕ್ಕ ಇತರರಿಗೂ ಏನೂ ತಿಳಿಸದೆ ಇದ್ದುದರಿಂದ, ನಾನು ಎಲ್ಲಿ ಹೋಗಿದ್ದೆ, ಏನು ಮಾಡಿದೆ ಎಂಬುದು ಅಧಿಕಾರಿಗಳಿಗೆ ಗೊತ್ತಿರಲಿಲ್ಲ.
17 : ಬಳಿಕ ನಾನು ಅವರಿಗೆ, “ನಮ್ಮ ದುರವಸ್ಥೆ ನಿಮ್ಮ ಕಣ್ಣ ಮುಂದಿರುತ್ತದಲ್ಲವೇ? ಜೆರುಸಲೇಮ್ ಪಟ್ಟಣ ಹಾಳು ಬಿದ್ದಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಬನ್ನಿ, ಜೆರುಸಲೇಮಿನ ಗೋಡೆಯನ್ನು ಕಟ್ಟೋಣ, ಹೀಗೆ ಮಾಡಿದರೆ ನಮ್ಮ ಮೇಲಿನ ನಿಂದೆ ನೀಗುವುದು,” ಎಂದು ಹೇಳಿದೆ.
18 : ಇದಲ್ಲದೆ, ನನ್ನ ದೇವರ ಕೃಪಾಹಸ್ತ ನನ್ನನ್ನು ಹೇಗೆ ನಡೆಸಿತೆಂಬುದನ್ನೂ ರಾಜನು ನನಗೆ ಹೇಳಿದ್ದನ್ನೂ ಅವರಿಗೆ ವಿವರಿಸಿದೆ. ಆಗ ಅವರು, “ಬನ್ನಿ, ಕಟ್ಟೋಣ” ಎಂದು ಹೇಳಿ ಆ ಒಳ್ಳೇ ಕೆಲಸಕ್ಕೆ ಕೈಹಾಕಲು ಧೈರ್ಯಗೊಂಡರು.
19 : ಹೋರೋನಿನವನಾದ ಸನ್ಬಲ್ಲಟನೂ ಅಮ್ಮೋನ್ ದೇಶದವನಾದ ಟೋಬೀಯ ಎಂಬ ಅಧಿಕಾರಿಯೂ ಅರೇಬಿಯನಾದ ಗೆಷೆಮನೂ ಈ ಸಮಾಚಾರವನ್ನು ಕೇಳಿದಾಗ ನಮ್ಮನ್ನು ತಿರಸ್ಕರಿಸಿ ಗೇಲಿಮಾಡಿದರು. “ನೀವು ಇಲ್ಲಿ ಮಾಡುವುದೇನು? ಅರಸನಿಗೆ ವಿರೋಧವಾಗಿ ದಂಗೆ ಏಳಬೇಕೆಂದಿದ್ದೀರೋ?” ಎಂದು ಕೇಳಿದರು.
20 : ನಾನು ಅವರಿಗೆ, “ಪರಲೋಕ ದೇವರು ನಮಗೆ ಸಫಲತೆಯನ್ನು ಅನುಗ್ರಹಿಸುವರು. ಆದುದರಿಂದ ಅವರ ದಾಸರಾದ ನಾವು ಕೋಟೆಯ ಗೋಡೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದೇವೆ. ನಿಮಗಾದರೋ ಜೆರುಸಲೇಮಿನಲ್ಲಿ ಪಾಲಾಗಲಿ, ಹಕ್ಕಾಗಲಿ, ಸ್ಮಾರಕವಾಗಲಿ ಇರುವುದಿಲ್ಲ,” ಎಂದು ಉತ್ತರಕೊಟ್ಟೆ.

· © 2017 kannadacatholicbible.org Privacy Policy