1 : ಆಗ ಪ್ರವಾದಿಗಳಾದ ಹಗ್ಗಾಯ ಮತ್ತು ಇದ್ದೋವಿನ ಮಗ ಜೆಕರ್ಯ ಎಂಬವರು ಇಸ್ರಯೇಲ್ ದೇವರಿಂದ ಪ್ರೇರಿತರಾಗಿ, ಅವರ ಹೆಸರಿನಲ್ಲಿ ಜುದೇಯದ ಮತ್ತು ಜೆರುಸಲೇಮಿನ ಯೆಹೂದ್ಯರನ್ನು ಪ್ರಬೋಧಿಸಿದರು.
2 : ಅದನ್ನು ಕೇಳಿದ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್, ಯೋಚಾದಾಕನ ಮಗ ಯೇಷೂವ ಇವರು ಜೆರುಸಲೇಮಿನ ದೇವಾಲಯವನ್ನು ಕಟ್ಟಿಸುವುದಕ್ಕೆ ಪ್ರಾರಂಭಿಸಿದರು. ದೇವಪ್ರವಾದಿಗಳು ಅವರೊಡನೆ ಇದ್ದು ಅವರಿಗೆ ಸಹಾಯಮಾಡುತ್ತ ಇದ್ದರು.
3 : ಅದೇ ಸಮಯಕ್ಕೆ, ನದಿಯ ಈಚೆಯ ಪ್ರಚೇಶಗಳ ಅಧಿಪತಿಯಾಗಿದ್ದ ತತ್ತನೈಯು ಹಾಗು ಶತರ್ಬೋಜೆನೈಯು ಮತ್ತು ಇವರ ಜೊತೆಗಾರರು ಅವರ ಬಳಿಗೆ ಬಂದು, “ಈ ಅಸ್ತಿವಾರವನ್ನು ಸರಿಪಡಿಸಿ ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು?” ಎಂದು ಕೇಳಿದರು.
4 : ಅಲ್ಲದೆ, ಕಟ್ಟಡವನ್ನು ಕಟ್ಟಿಸುವವರ ಹೆಸರುಗಳಾವುದೆಂದು ವಿಚಾರಿಸಿದರು.
5 : ಆದರೆ ದೇವರ ಕೃಪಾಹಸ್ತವು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆದುದರಿಂದ ವಿಚಾರಿಸುವುದಕ್ಕೆ ಬಂದವರು, ಅವರಿಗೆ ಅಡ್ಡಿಮಾಡದೆ, “ತಾವು ಇದರ ವಿಷಯವಾಗಿ ದಾರ್ಯಾವೆಷನಿಗೆ ಸಮಾಚಾರ ಮುಟ್ಟಿಸಿ ಅನಂತರ ಉತ್ತರವನ್ನು ಬರೆದು ಕಳುಹಿಸುತ್ತೇವೆ,” ಎಂದು ಹೇಳಿ ಹೊರಟು ಹೋದರು.
6 : ನದಿಯ ಈಚೆಯ ಪ್ರದೇಶಗಳ ಅಧಿಪತಿಯಾದ ತತ್ತೆನೈಯ ಮತ್ತು ಶತರ್ಬೋಜೆನೈಯ ಹಾಗು ನದಿಯ ಈಚೆಯಲ್ಲಿ ಅವನ ಜೊತೆಗಾರರಾದ ಅಪರ್ಸತ್ಕಾಯರು ಅರಸ ದಾರ್ಯಾವೆಷನಿಗೆ ಪತ್ರ ಕಳುಹಿಸಿದರು.
7 : ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಹೀಗಿದೆ:
8 : “ದಾರ್ಯಾವೆಷ ರಾಜರಿಗೆ ಸರ್ವಥಾ ಕ್ಷೇಮ! ನಾವು ಜುದೇಯನಾಡಿಗೆ ಹೋಗಿ ಮಹೋನ್ನತ ದೇವರ ಆಲಯವನ್ನು ನೋಡಿದೆವು. ಇದನ್ನು ರಾಜರಿಗೆ ಈ ಮೂಲಕ ಅರಿಕೆ ಮಾಡುತ್ತಿದ್ದೇವೆ: ಆ ಆಲಯವನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಿದ್ದಾರೆ. ಗೋಡೆಗಳ ಮೇಲೆ ತೊಲೆಗಳನ್ನಿಡುತ್ತಿದ್ದಾರೆ. ಈ ಕೆಲಸ ಜಾಗರೂಕತೆಯಿಂದ ಮುಂದುವರೆದಿದೆ; ಅವರ ಶ್ರಮೆಯಿಂದ ವೇಗವಾಗಿ ಬೆಳೆಯುತ್ತಿದೆ.
9 : ಅಲ್ಲಿನ ಹಿರಿಯರನ್ನು, ‘ಈ ಅಸ್ತಿವಾರವನ್ನು ಹಾಕಿ ಈ ಆಲಯವನ್ನು ಕಟ್ಟುವುದಕ್ಕೆ ನಿಮಗೆ ಅಪ್ಪಣೆಕೊಟ್ಟವರು ಯಾರು?’ ಎಂದು ವಿಚಾರ ಮಾಡಿದೆವು
10 : ಮತ್ತು ಅವರಲ್ಲಿ ಮುಖ್ಯಸ್ಥರು ಇಂಥಿಂಥವರೆಂದು ತಮಗೆ ಬರೆದು ತಿಳಿಸುವುದಕ್ಕಾಗಿ ಅವರ ಹೆಸರುಗಳನ್ನು ಕೇಳಿದೆವು.
11 : ಅವರು ನಮಗೆ, ನಾವು ಪರಲೋಕ ಭೂಲೋಕಗಳ ದೇವರ ದಾಸರು. ಅನೇಕಾನೇಕ ವರ್ಷಗಳ ಹಿಂದೆ ಕಟ್ಟಿದ್ದ ಆಲಯವನ್ನು ತಿರುಗಿ ಕಟ್ಟುತ್ತಿದ್ದೇವೆ. ಇಸ್ರಯೇಲರ ಒಬ್ಬ ಮಹಾರಾಜನು ಇದನ್ನು ಕಟ್ಟಿಮುಗಿಸಿದ್ದನು.
12 : ಆದರೆ ನಮ್ಮ ಪೂರ್ವಿಕರು ಪರಲೋಕ ದೇವರನ್ನು ರೇಗಿಸಿದ್ದರಿಂದ ಆ ದೇವರು ಅವರನ್ನು ಬಾಬಿಲೋನಿನ ಕಸ್ದೀಯ ರಾಜನಾದ ನೆಬೂಕದ್ನೆಚ್ಚರನ ಕೈಗೆ ಒಪ್ಪಿಸಿಕೊಟ್ಟರು. ಅವನು ಈ ಆಲಯವನ್ನು ಹಾಳು ಮಾಡಿ, ಜನರನ್ನು ಸೆರೆಹಿಡಿದು ಬಾಬಿಲೋನಿಗೆ ಒಯ್ದನು.
13 : ಆದರೆ ಬಾಬಿಲೋನಿನ ಅರಸ ಸೈರಸನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲೆ ಈ ದೇವಾಲಯವನ್ನು ಮತ್ತೆ ಕಟ್ಟುವುದಕ್ಕೆ ಅಪ್ಪಣೆ ಕೊಟ್ಟನು
14 : ಅದು ಮಾತ್ರವಲ್ಲ, ನೆಬೂಕದ್ನೆಚ್ಚರನು ಜೆರುಸಲೇಮಿನ ದೇವಾಲಯದಿಂದ ತೆಗೆದುಕೊಂಡು ಹೋಗಿ ಬಾಬಿಲೋನಿನ ದೇವಾಲಯದಲ್ಲಿಟ್ಟಿದ್ದ ಬೆಳ್ಳಿಬಂಗಾರದ ದೇವಸ್ಥಾನ ಪಾತ್ರೆಗಳನ್ನು ಅಲ್ಲಿಂದ ತೆಗೆಯಿಸಿ, ತಾನು ರಾಜ್ಯಪಾಲನೆಗಾಗಿ ನೇಮಿಸಿದ್ದ ಶೆಷ್ಪಚ್ಚರನೆಂಬ ವನವಶಕ್ಕೆ ಕೊಟ್ಟನು.
15 : ಅವನಿಗೆ, ‘ಈ ಸಾಮಗ್ರಿಗಳನ್ನು ಜೆರುಸಲೇಮಿನ ದೇವಾಲಯದಲ್ಲಿಡುವುದಕ್ಕಾಗಿ ತೆಗೆದುಕೊಂಡು ಹೋಗಿ ಆ ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟಿಸು,’ ಎಂದು ಆಜ್ಞಾಪಿಸಿದನು.
16 : ಆಗ ಆ ಶೆಷ್ಪಚ್ಚರನು ಬಂದು ಜೆರುಸಲೇಮಿನ ದೇವಾಲಯದ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ. ಇನ್ನೂ ಮುಗಿಯಲಿಲ್ಲ.
17 : “ಅರಸರಿಗೆ ಸರಿತೋರುವುದಾದರೆ, ಜೆರುಸಲೇಮಿನ ಈ ದೇವಾಲಯವನ್ನು ಮರಳಿ ಕಟ್ಟುವುದಕ್ಕೆ ಅರಸ ಸೈರಸನ ಅಪ್ಪಣೆದೊರಕಿದ್ದು ಸತ್ಯವೋ ಎಂಬುದರ ಬಗ್ಗೆ ಬಾಬಿಲೋನಿನ ರಾಜಭಂಡಾರದಲ್ಲಿ ಹುಡುಕಿ ನೋಡಬೇಕು. ಈ ಸಂಗತಿಯನ್ನು ಕುರಿತು ರಾಜರ ಚಿತ್ತವೇನೆಂಬುದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರ ಕೊಟ್ಟರು.