1 : ಸೆರೆಯಿಂದ ಮರಳಿ ಬಂದವರು ಇಸ್ರಯೇಲ್ ದೇವರಾದ ಸರ್ವೇಶ್ವರನಿಗೆ ಮಂದಿರವನ್ನು ಕಟ್ಟುತ್ತಿದ್ದಾರೆಂಬ ಸಮಾಚಾರ ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ವಿರೋಧಿಗಳಿಗೆ ಮುಟ್ಟಿತು.
2 : ಅವರು ಜೆರುಬ್ಬಾಬೆಲನ ಬಳಿಗೂ ಗೋತ್ರಪ್ರಧಾನರ ಬಳಿಗೂ ಬಂದು, “ನಿಮ್ಮೊಡನೆ ಕಟ್ಟುವುದಕ್ಕೆ ನಮಗೂ ಅಪ್ಪಣೆಯಾಗಲಿ; ಏಕೆಂದರೆ ನಿಮ್ಮಂತೆ ನಾವೂ ನಿಮ್ಮ ದೇವರ ಭಕ್ತರು; ನಮ್ಮನ್ನು ಇಲ್ಲಿ ತಂದಿರಿಸಿದ ಅಸ್ಸೀರಿಯದ ಅರಸ ಏಸರ್ಹದ್ದೋನನ ಕಾಲದಿಂದ ನಾವು ಆ ದೇವರಿಗೇ ಬಲಿಯರ್ಪಣೆ ಮಾಡುತ್ತಾ ಬಂದಿದ್ದೇವೆ,” ಎಂದು ಹೇಳಿದರು.
3 : ಆಗ ಜೆರುಬ್ಬಾಬೆಲ್, ಯೇಷೂವ ಹಾಗು ಬೇರೆ ಇಸ್ರಯೇಲ್ ಗೋತ್ರಪ್ರಧಾನರು ಅವರಿಗೆ, “ನಮ್ಮ ದೇವರ ಆಲಯವನ್ನು ಕಟ್ಟುವುದರಲ್ಲಿ ನೀವು ನಮ್ಮೊಡನೆ ಸೇರಲೇ ಕೂಡದು; ಪರ್ಷಿಯ ರಾಜ ಸೈರಸನಿಂದ ನಮಗಾದ ಅಪ್ಪಣೆಯ ಮೇರೆಗೆ ನಾವೇ ಇಸ್ರಯೇಲ್ ದೇವರಾದ ಸರ್ವೇಶ್ವರನ ಆಲಯವನ್ನು ಕಟ್ಟಬೇಕು,” ಎಂದು ಉತ್ತರಕೊಟ್ಟರು.
4 : ಆಗ ಆ ದೇಶನಿವಾಸಿಗಳು ಯೆಹೂದ್ಯರನ್ನು ನಿರಾಶೆಗೊಳಿಸಿ ಅದನ್ನು ಕಟ್ಟದ ಹಾಗೆ ಬೆದರಿಸಿದರು.
5 : ಅವರ ಉದ್ದೇಶವನ್ನು ತಡೆಗಟ್ಟಲು ಹಣಕೊಟ್ಟು ವಕೀಲರನ್ನು ಇಟ್ಟರು. ಈ ಪ್ರಕರಣ ಪರ್ಷಿಯ ರಾಜ ದಾರ್ಯಾವೆಷನ ಆಳ್ವಿಕೆಯವರೆಗೂ ನಡೆಯಿತು.
6 : ಇದಲ್ಲದೆ, ಅಹಷ್ಟೇರೋಷನ ಆಳ್ವಿಕೆಯ ಆರಂಭದಲ್ಲಿ ಅವರು ಜುದೇಯ ಹಾಗು ಜೆರುಸಲೇಮಿನಲ್ಲಿ ವಾಸಿಸುತ್ತಿದ್ದವರಿಗೆ ವಿರುದ್ಧ ಆಪಾದನ ಪತ್ರವನ್ನು ಬರೆದರು.
7 : ಪರ್ಷಿಯ ರಾಜ ಅರ್ತಷಸ್ತನ ಕಾಲದಲ್ಲಿ ಬಿಷ್ಲಾಮ್, ಮಿತ್ರದಾತ, ಟಾಬೆಯೇಲ್, ಈ ಮೊದಲಾದವರು ಅರ್ತಷಸ್ತನಿಗೆ ಪತ್ರ ಬರೆದರು. ಆ ಪತ್ರ ಅರಮಾಯಿಕ್ ಲಿಪಿಯಲ್ಲೂ ಅರಮಾಯಿಕ್ ಭಾಷೆಯಲ್ಲೂ ಇತ್ತು.
8 : ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಜೆರುಸಲೇಮಿಗೆ ವಿರೋಧವಾಗಿ ಈ ಕೆಳಗೆ ಕಂಡಂತೆ ಕಾಗದವನ್ನು ಬರೆದು ಅರ್ತಷಸ್ತನಿಗೆ ಕಳುಹಿಸಿದ್ದರು.
9 : “ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರು, ಅವರ ಜೊತೆಗಾರರಾದ ದಿನಾಯರು, ಅಪರ್ಸತ್ಯಾಯರು, ಟರ್ಪಲಾಯರು, ಅಪಾರ್ಸಾಯರು, ಯೆರೆಕ್ಯರು, ಬಾಬಿಲೋನಿನವರು, ಶೊಷನಿನವರು.
10 : ದೆಹಾಯರು, ಏಲಾಮ್ಯರು ಹಾಗು ಮಹಾ ಶ್ರೀಮತ್ ಆಸೆನಪ್ಪರನು P್ಪರೆದುತಂದು ಸಮಾರಿಯ ಪಟ್ಟಣದಲ್ಲಿ ಮತ್ತು ನದಿಯ ಈಚೆಗಿರುವ ಬೇರೆ ಊರುಗಳಲ್ಲಿ ಇರಿಸಿದ ಇತರ ಜನರು, ಬರೆಯುವುದು ಏನೆಂದರೆ:
11 : ಅವರು ಅರಸನಿಗೆ ಕಳುಹಿಸಿದ ಪತ್ರದ ಪ್ರತಿ ಈ ರೀತಿಯಿತ್ತು: ಅರ್ತಷಸûರಾಜರಿಗೆ, ತಮ್ಮ ಸೇವಕರಾದ ನದಿಯ ಈಚೆಯವರು:
12 : ಅದಾಗಿ, ತಮ್ಮ ಸನ್ನಿಧಿಯಿಂದ ನಮ್ಮ ಬಳಿಗೆ ಬಂದ ಯೆಹೂದ್ಯರು ಜೆರುಸಲೇಮನ್ನು ಸೇರಿ ರಾಜ ಕಂಟಕವಾದ ಆ ದುಷ್ಟಪಟ್ಟಣವನ್ನೂ ಅದರ ಪೌಳಿಗೋಡೆಯನ್ನೂ ಮತ್ತೆ ಕಟ್ಟುವುದಕ್ಕೆ ಪ್ರಾರಂಭಿಸಿ, ಪೌಳಿಗೋಡೆಯ ಅಸ್ತಿವಾರವನ್ನು ಮುಗಿಸಿದ್ದಾರೆ ಎಂಬುದಾಗಿ ನಾವು ರಾಜರಿಗೆ ಅರಿಕೆಮಾಡಿಕೊಳ್ಳುತ್ತೇವೆ.
13 : ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಕಟ್ಟುವುದು ಮುಗಿದರೆ ಅವರು ಕಪ್ಪ, ತೆರಿಗೆ, ಸುಂಕಗಳನ್ನು ಕೊಡುವುದಿಲ್ಲ; ಕಡೆಯಲ್ಲಿ ಅರಸರಿಗೆ ನಷ್ಟವುಂಟಾಗುವುದೆಂದು ತಮಗೆ ತಿಳಿದಿರಲಿ.
14 : ನಾವಾದರೋ ಅರಮನೆಯ ಉಪ್ಪನ್ನು ತಿನ್ನುವವರು; ಅರಸರಿಗೆ ಅಪಮಾನವಾಗುವುದನ್ನು ನೋಡಿ ಸುಮ್ಮನೆ ಇರುವುದು ಉಚಿತವಲ್ಲವೆಂದು ತಿಳಿದು ತಮಗೆ ಈ ಪತ್ರದ ಮೂಲಕ ಸುದ್ದಿ ಕಳುಹಿಸಿದ್ದೇವೆ.
15 : ಈ ವಿಷಯವಾಗಿ ತಾವು ತಮ್ಮ ತಂದೆತಾತಂದಿರ ಚರಿತ್ರಗ್ರಂಥದಲ್ಲಿ ಪರಿಶೋಧಿಸಬೇಕೆಂಬುದು ನಮ್ಮ ಅಭಿಪ್ರಾಯ. ಆ ಪಟ್ಟಣ ರಾಜಕಂಟಕವಾದ ಪಟ್ಟಣ. ಅರಸರಿಗೂ ಸಂಸ್ಥಾನಗಳಿಗೂ ತೊಂದರೆ ಹುಟ್ಟಿಸುವಂಥ ಪಟ್ಟಣ. ಇದು ಪೂರ್ವಕಾಲದಿಂದಲೂ ದಂಗೆಯೆಬ್ಬಿಸುತ್ತಾ ಬಂದಿದೆ ಎಂದೂ ಹಾಗು ಆ ಕಾರಣದಿಂದಲೇ ನೆಲಸಮ ವಾಯಿತೆಂದೂ ಆ ಚರಿತ್ರಗ್ರಂಥದಲ್ಲಿ ಕಂಡು ಬರುತ್ತದೆ.
16 : ಆ ಪಟ್ಟಣವನ್ನೂ ಅದರ ಗೋಡೆಗಳನ್ನೂ ಪುನಃ ಕಟ್ಟುವುದಾದರೆ ತಮಗೆ ನದಿಯ ಈಚೆಯಲ್ಲಿ ಒಂದು ಅಂಗುಲವೂ ಉಳಿಯದು ಎಂಬುದಾಗಿ ಅರಸರಿಗೆ ಅರಿಕೆ ಮಾಡಿಕೊಳ್ಳುತ್ತೇವೆ.”
17 : ಈ ಪತ್ರಕ್ಕೆ ಅರಸ ಅವರಿಗೆ ಕೊಟ್ಟ ಉತ್ತರ: “ರಾಜ್ಯಪಾಲ ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಅವರಿಗೂ ಸಮಾರಿಯದಲ್ಲಿರುವ ಅವರ ಜೊತೆಗಾರರಿಗೂ ನದಿಯ ಆಚೆಯಲ್ಲಿರುವ ಅವರ ಜೊತೆಗಾರರಿಗೂ ನದಿಯ ಆಚೆಯಲ್ಲಿರುವ ಇತರರಿಗೂ ಕ್ಷೇಮಭಿಲಾಶೆಗಳು;
18 : ನೀವು ಕಳುಹಿಸಿದ್ದ ಪತ್ರವನ್ನು ನನ್ನ ಸನ್ನಿಧಿಯಲ್ಲಿ ಸ್ಪಷ್ಟವಾಗಿ ಓದಲಾಯಿತು.
19 : ನನ್ನ ಆಜ್ಞಾನುಸಾರ ವಿಚಾರಣೆಯಾದಾಗ, ಆ ಪಟ್ಟಣದವರು ಪೂರ್ವಕಾಲದಿಂದಲೇ ಅರಸರಿಗೆ ವಿರೋಧವಾಗಿ ಪ್ರತಿಭಟಿಸುತ್ತಾ, ದ್ರೋಹಮಾಡುತ್ತಾ
20 : ದಂಗೆಯೆಬ್ಬಿಸುತ್ತಾ ಬಂದಿದ್ದಾರೆ; ಇದಲ್ಲದೆ ಜೆರುಸಲೇಮಿನಲ್ಲಿ ಬಲಿಷ್ಠ ರಾಜರು ಆಳುತ್ತಾ, ನದಿಯಾಚೆಯ ಎಲ್ಲ ಪ್ರದೇಶಗಳಲ್ಲಿ ಅಧಿಕಾರ ನಡೆಸುತ್ತಾ, ಕಪ್ಪ, ತೆರಿಗೆ, ಸುಂಕಗಳನ್ನು ತೆಗೆದುಕೊಳ್ಮ್ಳತ್ತಿದ್ದರೆಂದು ಕಂಡುಬಂದಿದೆ.
21 : ಆದುದರಿಂದ ಆ ಜನರನ್ನು ತಡೆಯಬೇಕೆಂತಲೂ, ನನ್ನ ಅಪ್ಪಣೆಯಾಗುವವರೆಗೆ ಆ ಪಟ್ಟಣವನ್ನು ಕಟ್ಟಿಬಿಡಬಾರದೆಂತಲೂ ಪ್ರಕಟಿಸಿರಿ.
22 : ರಾಜರಿಗೆ ಹಾನಿಯುಂಟಾಗದ ಹಾಗೆ ಜಾಗರೂಕತೆಯಿಂದ ಇರಿ, ಉದಾಸೀನರಾಗಿರಬೇಡಿ.”
23 : ಅರಸ ಅರ್ತಷಸ್ತನ ಈ ಪತ್ರವನ್ನು ರೆಹೂಮ್ ಹಾಗು ಕಾರ್ಯದರ್ಶಿ ಶಿಂಷೈ ಇವರ ಮುಂದೆ ಮತ್ತು ಇವರ ಜೊತೆಗಾರರ ಮುಂದೆ ಓದಲಾಯಿತು. ಕೂಡಲೆ ಅವರು ಜೆರುಸಲೇಮಿಗೆ ಶೀಘ್ರವಾಗಿ ಹೋಗಿ, ಬಲಾತ್ಕಾರದಿಂದ ಹಾಗು ಅಧಿಕಾರದಿಂದ ಯೆಹೂದ್ಯರನ್ನು ತಡೆದರು.
24 : ಅಂದಿನಿಂದ ಪರ್ಷಿಯ ರಾಜ ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದವರೆಗೂ ಜೆರುಸಲೇಮಿನ ದೇವಾಲಯವನ್ನು ಕಟ್ಟುವ ಕೆಲಸ ನಿಂತುಹೋಯಿತು.