1 : ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದ ಇಸ್ರಯೇಲರು, ಏಳನೆಯ ತಿಂಗಳಿನಲ್ಲಿ ಏಕ ಮನಸ್ಸಿನಿಂದ ಜೆರುಸಲೇಮಿಗೆ ಕೂಡಿಬಂದರು.
2 : ದೈವಪುರುಷ ಮೋಶೆಯ ಧರ್ಮಶಾಸ್ತ್ರದಲ್ಲಿ ಬರೆದಿರುವ ಪ್ರಕಾರ ದಹನ ಬಲಿಗಳನ್ನು ಸಮರ್ಪಿಸುವುದಕ್ಕಾಗಿ ಯೋಚಾದಾಕನ ಮಗ ಯೇಷೊವನೂ ಯಾಜಕರಾದ ಅವನ ಬಂಧುಗಳೂ ಹಾಗು ಶೆಯಲ್ತೀಯೇಲನ ಮಗ ಜೆರುಬ್ಬಾಬೆಲನೂ ಅವನ ಬಂಧುಗಳೂ ಇಸ್ರಯೇಲ್ ದೇವರ ಬಲಿಪೀಠವನ್ನು ಪುನಃ ಕಟ್ಟುವುದಕ್ಕೆ ಆಗ ಆರಂಭಿಸಿದರು.
3 : ಸುತ್ತ ಮುತ್ತಲಿನ ಜನರಿಗೆ ಅವರು ಹೆದರಿದರು. ಈ ಕಾರಣ ಪೀಠವನ್ನು ಅದರ ಸ್ಥಳದಲ್ಲೇ ಕಟ್ಟಿ, ಅದರ ಮೆಲೆ ಸರ್ವೇಶ್ವರನಿಗೆ, ಬೆಳಿಗ್ಗೆ ಹಾಗು ಸಂಜೆ ವೇಳೆಯ ದಹನಬಲಿ ದಾನಗಳನ್ನು ಅರ್ಪಿಸಿದರು.
4 : ಇದಲ್ಲದೆ ಶಾಸ್ತ್ರದಲ್ಲಿ ಬರೆದಿರುವಂತೆ ಅವರು ಪರ್ಣಕುಟೀರಗಳ ಜಾತ್ರೆಯನ್ನು ಆಚರಿಸಿ, ದಿನಕ್ಕೆ ಇಷ್ಟಿಷ್ಟೆಂಬ ವಿಧಿಗನುಸಾರ ಪ್ರತಿದಿನವೂ ದಹನಬಲಿಗಳನ್ನರ್ಪಿಸಿದರು.
5 : ಅಂದಿನಿಂದ ನಿತ್ಯ ದಹನಬಲಿ ಮತ್ತು ಅಮಾವಾಸ್ಯೆ ಬಲಿ, ಸರ್ವೇಶ್ವರನ ಎಲ್ಲ ಉತ್ಸವದಿನಗಳಿಗೆ ನೇಮಕವಾದ ದಹನಬಲಿ ಹಾಗು, ಜನರು ಸ್ವಂತ ಇಚ್ಛೆಯಿಂದ ತಂದುಕೊಟ್ಟ ಬಲಿದಾನಗಳು, ಇವು ಸರ್ವೇಶ್ವರನಿಗೆ ಸಮರ್ಪಣೆಯಾಗುತ್ತಾ ಬಂದವು.
6 : ಏಳನೆಯ ತಿಂಗಳಿನ ಮೊದಲನೆಯ ದಿನದಿಂದ ಹೀಗೆ ಸರ್ವೇಶ್ವರನಿಗೆ ದಹನಬಲಿಗಳನ್ನು ಅರ್ಪಿಸತೊಡಗಿದರು.
ಆಗ ಸರ್ವೇಶ್ವರನ ಆಲಯದ ಅಸ್ತಿವಾರವನ್ನು ಇನ್ನೂ ಹಾಕಿರಲಿಲ್ಲ.
7 : ಆದರೆ ಪರ್ಷಿಯ ರಾಜನಾದ ಸೈರಸನಿಂದ ಪಡೆದುಕೊಂಡ ಅಪ್ಪಣೆಯ ಮೇರೆಗೆ ಜನರು ಕಲ್ಲುಕುಟಿಗನಿಗೆ ಹಾಗು ಬಡಗಿಗೆ ಹಣವನ್ನು ಕೊಟ್ಟಿದ್ದರು. ಅಂತೆಯೇ ಲೆಬನೋನಿನಿಂದ ಸಮುದ್ರ ಮಾರ್ಗವಾಗಿ, ಜೊಪ್ಪಕ್ಕೆ ದೇವದಾರು ಮರಗಳನ್ನು ತರತಕ್ಕ ಸಿದೋನ್ಯರಿಗೆ ಹಾಗು ಟೈರಿನವರಿಗೆ ಅನ್ನಪಾನಗಳನ್ನೂ ಎಣ್ಣೆಯನ್ನೂ ಕೊಟ್ಟಿದ್ದರು.
8 : ಹೀಗೆ ಜನರು ಜೆರುಸಲೇಮಿನ ದೇವಾಲಯಕ್ಕೆ ಬಂದ ಎರಡನೆಯ ವರ್ಷದ ಎರಡನೆಯ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್, ಯೋಚಾದಾಕನ ಮಗ ಯೇಷೂವ, ಇವರೂ ಇವರ ಸಹೋದರರಾದ ಇತರ ಯಾಜಕರು, ಲೇವಿಯರು, ಸೆರೆಯಿಂದ ಜೆರುಸಲೇಮಿಗೆ ಮರಳಿ ಬಂದ ಬೇರೆ ಎಲ್ಲರು ದೇವಾಲಯವನ್ನು ಕಟ್ಟುವುದಕ್ಕೆ ಪ್ರಾರಂಭಿಸಿದರು. ಇಪ್ಪತ್ತು ಮತ್ತು ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳ ಲೇವಿಯರನ್ನು ಸರ್ವೇಶ್ವರನ ಆಲಯವನ್ನು ಕಟ್ಟುವವರ ಮೇಲ್ವಿಚಾರಣೆಗೆ ನೇಮಿಸಲಾಯಿತು.
9 : ಕೂಡಲೆ ಲೇವಿಯರಲ್ಲಿ ಹೋದವ್ಯನ ಸಂತಾನದವರಾದ ಯೇಷೂವನು, ಅವನ ಮಕ್ಕಳು, ಸಹೋದರರು, ಕದ್ಮೀಯೇಲನು, ಅವನ ಮಕ್ಕಳು, ಹೇನಾದಾದನ ಮಕ್ಕಳು, ಅವರ ಮಕ್ಕಳು, ಬಂಧುಗಳು, ಇವರು ಎಲ್ಲರು ಕೂಡಿಬಂದು ದೇವಾಲಯ ಕಟ್ಟುವವರ ಮೇಲ್ವಿಚಾರಕರಾಗಿ ನಿಂತರು.
10 : ಕಟ್ಟುವವರು ಸರ್ವೇಶ್ವರನ ಮಂದಿರದ ಅಸ್ತಿವಾರವನ್ನು ಹಾಕಿದಾಗ, ಇಸ್ರಯೇಲರ ಅರಸ ದಾವೀದನು ನೇಮಿಸಿದ ಕ್ರಮಕ್ಕನುಸಾರ, ಸರ್ವೇಶ್ವರನನ್ನು ಸಂಕೀರ್ತಿಸಿದರು. ಇದಕ್ಕಾಗಿ ದೀಕ್ಷಾವಸ್ತ್ರ ಭೂಷಿತರಾದ ಯಾಜಕರು ತುತೂರಿಗಳೊಡನೆ ಹಾಗು ಆಸಾಫನ ಮಕ್ಕಳಾದ ಲೇವಿಯರು ತಾಳಗಳೊಡನೆ ನಿಂತುಕೊಂಡು,
11 : ಪರಸ್ಪರವಾಗಿ ಹಾಡುತ್ತಾ ಸರ್ವೇಶ್ವರನನ್ನು ಕೀರ್ತಿಸಿದರು. “ಸರ್ವೇಶ್ವರ ಒಳ್ಳೆಯವರು! ಅವರ ಅಚಲಪ್ರೀತಿ ಇಸ್ರಯೇಲರ ಮೇಲೆ ಶಾಶ್ವತ!” ಎಂದು ಕೃತಜ್ಞತಾ ಸ್ತುತಿಮಾಡಿದರು. ಈ ಸ್ತುತಿ ಕೀರ್ತನೆ ಕೇಳಿಸಿದ ಕೂಡಲೆ ಸರ್ವೇಶ್ವರನ ಆಲಯಕ್ಕೆ ಅಸ್ತಿವಾರ ಹಾಕಲಾಯಿತೆಂದು ಜನರೆಲ್ಲರು ಉತ್ಸಾಹಧ್ವನಿಯಿಂದ ಆರ್ಭಟಿಸಿದರು.
12 : ಯಾಜಕರಲ್ಲೂ ಲೇವಿಯರಲ್ಲೂ ಗೋತ್ರ ಪ್ರಧಾನರಲ್ಲೂ ಅನೇಕರು ಅಂದರೆ, ಹಿಂದಿನ ದೇವಾಲಯವನ್ನು ನೋಡಿದ್ದ ಮುದುಕರು, ತಮ್ಮ ಕಣ್ಣು ಮುಂದೆ ದೇವಾಲಯದ ಅಸ್ತಿವಾರ ಹಾಕಲಾದುದನ್ನು ನೋಡಿದಾಗ, ಬಹಳವಾಗಿ ಅತ್ತರು; ಬೇರೆ ಹಲವರು ಹರ್ಷಧ್ವನಿಯಿಂದ ಆರ್ಭಟಿಸಿದರು.
13 : ಜನರು ಹೀಗೆ ಮಹಾಧ್ವನಿಯಿಂದ ಆರ್ಭಟಿಸುತ್ತಾ ಇದ್ದುದರಿಂದ ಹರ್ಷಧ್ವನಿ ಯಾವುದು ಅಳುವವರ ಧ್ವನಿ ಯಾವುದು ಎಂದು ಹೇಳಲಾಗಲಿಲ್ಲ. ಗದ್ದಲವು ಬಹು ದೂರದವರೆಗೂ ಕೇಳಿಸುತ್ತಿತ್ತು.