Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಸಮು


1 : ಅನಂತರ ದಾವೀದನು ಹೋಗಿ ಫಿಲಿಷ್ಟಿಯರ ಮೇಲೆ ದಾಳಿಮಾಡಿ, ಅವರನ್ನು ಸೋಲಿಸಿದನು. ಅವರ ರಾಜಧಾನಿಯನ್ನು ತೆಗೆದುಕೊಂಡು, ಆಡಳಿತವನ್ನು ತನ್ನ ಸ್ವಾಧೀನದಲ್ಲಿಟ್ಟುಕೊಂಡನು.
2 : ಆಮೇಲೆ ಮೋವಾಬ್ಯರನ್ನು ಸೋಲಿಸಿದನು. ಸೆರೆಯಾಳುಗಳನ್ನು ನೆಲದಮೇಲೆ ಮಲಗಿಸಿ ಹಗ್ಗದಿಂದ ಅಳತೆಮಾಡಿಸಿ, ಎರಡು ಪಾಲು ಜನರನ್ನು ಕೊಲ್ಲಿಸಿ ಒಂದು ಪಾಲನ್ನು ಉಳಿಸಿದನು. ಮೋವಾಬ್ಯರು ದಾವೀದನಿಗೆ ಅಧೀನರಾಗಿ ಅವನಿಗೆ ಕಪ್ಪಕೊಡಬೇಕಾಯಿತು.
3 : ಬಳಿಕ ಯೂಫ್ರೆಟಿಸ್ ನದಿಯ ಸುತ್ತಣ ಪ್ರದೇಶದಲ್ಲಿ ತನ್ನ ರಾಜ್ಯಾಧಿಕಾರವನ್ನು ಸ್ಥಾಪಿಸುವುದಕ್ಕೆ ಹೋಗುತ್ತಿದ್ದ ರೆಹೋಬನ ಮಗನೂ ಚೋಬದ ಅರಸನೂ ಆದ ಹದದೆಜೆರನನ್ನು ದಾವೀದನು ಪರಾಭವಗೊಳಿಸಿದನು.
4 : ಸಾವಿರದ ಏಳುನೂರು ಮಂದಿ ರಾಹುತರನ್ನೂ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನೂ ಸೆರೆಹಿಡಿದು, ನೂರು ಕುದುರೆಗಳನ್ನಿಟ್ಟುಕೊಂಡು ಮಿಕ್ಕ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದುಬಿಟ್ಟನು.
5 : ದಮಸ್ಕದ ಸಿರಿಯಾದವರು ಜೋಬದ ಅರಸನಾದ ಹದದೆಜೆರನಿಗೆ ನೆರವಾಗಲು ಬಂದಾಗ ದಾವೀದನು ಅವರನ್ನೂ ಸೋಲಿಸಿ ಅವರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಸದೆ ಬಡಿದನು.
6 : ದಮಸ್ಕದ ಅರಾಮ್ ದೇಶದಲ್ಲಿ ಕಾವಲುದಂಡನ್ನಿರಿಸಿದನು. ಹೀಗೆ ಸಿರಿಯಾದವರು ಅವನಿಗೆ ಅಧೀನರಾಗಿ ಕಪ್ಪ ಕೊಡತೊಡಗಿದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿ ಹೋದರೂ ಜಯದೊರಕಿತು.
7 : ಅವನು ಹದದೆಜೆರನ ಸೇವಕರಿಗಿದ್ದ ಬಂಗಾರದ ಗುರಾಣಿಗಳನ್ನು ಕಿತ್ತುಕೊಂಡು ಜೆರುಸಲೇಮಿಗೆ ಒಯ್ದನು.
8 : ಇದಲ್ಲದೆ ಹದದೆಜೆರನ ಪಟ್ಟಣಗಳಿಂದ ಬೆಟಹದಿಂದಲೂ ಬೇರೋತೈಯಿಂದಲೂ ಅಪಾರ ತಾಮ್ರವನ್ನು ತೆಗೆದುಕೊಂಡು ಬಂದನು.
9 : ದಾವೀದನು ಹದದೆಜೆರನ ಸೈನ್ಯವನ್ನು ಸೋಲಿಸಿದನೆಂಬ ವರ್ತಮಾನ ಹಮಾತಿನ ಅರಸನಾದ ತೋವಿಗೆ ಮುಟ್ಟಿತು.
10 : ತೋವಿಗೂ ಹದದೆಜೆರನಿಗೂ ಹಗೆತನವಿತ್ತು. ದಾವೀದನು ಹದದೆಜೆರನ ಮೇಲೆ ದಾಳಿಮಾಡಿ ಅವನನ್ನು ಸೋಲಿಸಿದುದರಿಂದ ತೋವು ದಾವೀದನನ್ನು ಅಭಿನಂದಿಸುವುದಕ್ಕಾಗಿ ಹಾಗು ಹರಸುವುದಕ್ಕಾಗಿ ತನ್ನ ಮಗ ಯೋರಾಮನನ್ನು ಕಳುಹಿಸಿದನು. ಇವನು ಬರುವಾಗ ದಾವೀದನಿಗೆ ತಾಮ್ರ, ಬೆಳ್ಳಿ ಹಾಗು ಬಂಗಾರದ ಪಾತ್ರೆಗಳನ್ನು ತಂದನು.
11 : ಅರಸನಾದ ದಾವೀದನು ಈ ಕಾಣಿಕೆಗಳನ್ನು ಮಾತ್ರವಲ್ಲದೆ, ತನ್ನಿಂದ ಅಪಜಯಹೊಂದಿದ್ದ ಅರಾಮ್ಯರು, ಮೋವಾಬ್ಯರು, ಅಮ್ಮೋನಿಯರು, ಫಿಲಿಷ್ಟಿಯರು ಹಾಗು ಅಮಾಲೇಕ್ಯರು ಎಂಬ ಸುತ್ತ-ಮುತ್ತಿನ ಜನಾಂಗಗಳಿಂದಲೂ ಮತ್ತು ಚೋಬದ ಅರಸನಾದ ರೆಹೋಬನ ಮಗ ಹದದೆಜೆರನಿಂದಲೂ
12 : ಪಡೆದುಕೊಂಡ ಬೆಳ್ಳಿ ಬಂಗಾರವನ್ನೂ ಸರ್ವೇಶ್ವರನಿಗೆ ಪ್ರತಿಷ್ಠಾಪಿಸಿದನು.
13 : ಇದಲ್ಲದೆ ದಾವೀದನು ಹೋಗಿ ಉಪ್ಪಿನ ತಗ್ಗಿನಲ್ಲಿ ಎದೋಮ್ಯರ ಹದಿನೆಂಟು ಸಾವಿರ ಮಂದಿ ಸೈನಿಕರನ್ನು ಸೋಲಿಸಿಬಂದು ಅಂದಿನಿಂದ ಬಹಳ ಪ್ರಖ್ಯಾತಿಹೊಂದಿದನು.
14 : ಎದೋಮಿ ನಲ್ಲೆಲ್ಲಾ ಅವನು ಕಾವಲು ದಂಡುಗಳನ್ನಿರಿಸಿದನು. ಹೀಗೆ ಎದೋಮ್ಯರೆಲ್ಲರೂ ದಾವೀದನ ಅಡಿಯಾಳುಗಳಾದರು. ಸರ್ವೇಶ್ವರನ ಅನುಗ್ರಹದಿಂದ ದಾವೀದನಿಗೆ ಎಲ್ಲಿಹೋದರೂ ಜಯ ಉಂಟಾಯಿತು.
15 : ದಾವೀದನು ಸಮಸ್ತ ಇಸ್ರಯೇಲಿಗೂ ಅರಸನಾಗಿ ಪ್ರಜೆಗಳೆಲ್ಲರನ್ನೂ ಧರ್ಮಾನುಸಾರ ನ್ಯಾಯಯುತವಾಗಿ ನಡೆಸುತ್ತಿದ್ದನು.
16 : ಚೆರೂಯಳ ಮಗ ಯೋವಾಬನು ಅವನ ಸೇನಾಪತಿ ಆಗಿದ್ದನು. ಅಹೀಲೂದನ ಮಗ ಯೆಹೋಷಾಫಟನು ಅವನ ಮಂತ್ರಿ ಆಗಿದ್ದನು.
17 : ಅಹೀಟೂಬನ ಮಗ ಚಾದೋಕನೂ ಹಾಗು ಅಹೀಮೆಲೆಕನ ಮಗನಾದ ಅಬ್ಯಾತಾರನೂ ಅವನ ಯಾಜಕರಾಗಿದ್ದರು; ಸರಾಯನು ಅವನಿಗೆ ಲೇಖಕ ಆಗಿದ್ದನು.
18 : ಯೆಹೋಯಾದಾವನ ಮಗ ಬೆನಾಯನು ‘ಕೆರೇತ್ಯ’, ‘ಪೆಲೇತ್ಯ’ ಎಂಬ ಕಾವಲು ದಂಡುಗಳ ಮುಖ್ಯಸ್ಥನಾಗಿದ್ದನು. ದಾವೀದನ ಮಕ್ಕಳೂ ಯಾಜಕರಾಗಿದ್ದರು.

· © 2017 kannadacatholicbible.org Privacy Policy