1 :
ಪುನಃ ದಾವೀದನು ಇಸ್ರಯೇಲರಲ್ಲಿ ಮೂವತ್ತು ಸಾವಿರ ಮಂದಿ ಶ್ರೇಷ್ಠ ಸೈನಿಕರನ್ನು ಆರಿಸಿಕೊಂಡು ದೇವರ ಮಂಜೂಷವನ್ನು ತರುವುದಕ್ಕಾಗಿ ಅವರೆಲ್ಲರ ಸಹಿತ ಜುದೇಯ ನಾಡಿನ ಬಾಳಾ ಎಂಬಲ್ಲಿಗೆ ಹೋದನು.
2 : ಆ ಮಂಜೂಷವು ದೇವನಾಮದಿಂದ, ಅಂದರೆ ‘ಕೆರೂಬಿಯರ ನಡುವೆ ಆಸೀನರಾಗಿರುವ ಸೇನಾಧೀಶ್ವರ ಸರ್ವೇಶ್ವರ’ ಎಂಬ ನಾಮದಿಂದ ಸುಪ್ರಸಿದ್ಧವಾಗಿತ್ತು.
3 : ದೇವರ ಆ ಮಂಜೂಷವನ್ನು ಗುಡ್ಡದ ಮೇಲಿರುವ ಅಬೀನಾದಾಬನ ಮನೆಯಿಂದ ಹೊರಗೆ ತಂದು ಅದನ್ನು ಒಂದು ಹೊಸ ಬಂಡಿಯ ಮೇಲೆ ಏರಿಸಿದರು. ಅಬೀನಾದಾಬನ ಮಕ್ಕಳಾದ ಉಜ್ಜನು ಹಾಗು ಅಹೀಯೋವನು ಆ ಬಂಡಿಯನ್ನು ನಡೆಸಿದರು.
4 : ಗುಡ್ಡದ ಮೇಲೆ ವಾಸವಾಗಿದ್ದ ಅಬೀನಾದಾಬನ ಮನೆಯಿಂದ ತೆಗೆಯಲಾದ ಆ ದೇವರ ಮಂಜೂಷದ ಮುಂದೆ ಅಹೀಯೋವನು ನಡೆಯುತ್ತಿದ್ದನು.
5 : ದಾವೀದನೂ ಎಲ್ಲ ಇಸ್ರಯೇಲರೂ ಕಿನ್ನರಿ, ಸ್ವರಮಂಡಲ, ತಮಟೆ, ಝಲ್ಲರಿ, ತಾಳ ಇವುಗಳನ್ನು ಬಾರಿಸಿಕೊಂಡು, ಪೂರ್ಣಾವೇಶದಿಂದ ಗೀತೆಗಳನ್ನು ಹಾಡುತ್ತಾ, ಸರ್ವೇಶ್ವರನ ಮುಂದೆ ನರ್ತನ ಮಾಡುತ್ತಾ ಹೋದರು.
6 : ಅವರು ನಾಕೋನನ ಕಣಕ್ಕೆ ಬಂದಾಗ ಎತ್ತುಗಳು ತಡವರಿಸಿದವು. ಉಜ್ಜನು ಕೈಚಾಚಿ ದೇವರ ಮಂಜೂಷವನ್ನು ಹಿಡಿದನು.
7 : ಆಗ ಸರ್ವೇಶ್ವರ ಉಜ್ಜನ ಮೇಲೆ ಕೋಪಗೊಂಡರು. ಅಂಥ ಅಗೌರವಕ್ಕಾಗಿ ಅವನನ್ನು ದಂಡಿಸಿದರು. ಅವನು ಅಲ್ಲೇ ದೇವರ ಮಂಜೂಷದ ಬಳಿ ಸತ್ತುಬಿದ್ದನು.
8 : ಸರ್ವೇಶ್ವರ ಉಜ್ಜನನ್ನು ಶಿಕ್ಷಿಸಿದ್ದರಿಂದ ದಾವೀದನು ಸಿಟ್ಟುಗೊಂಡು ಆ ಸ್ಥಳಕ್ಕೆ ‘ಪೆರೆಚುಜ್ಜಾ’ ಎಂಬ ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಅದೇ ಹೆಸರಿರುತ್ತದೆ.
9 : ಆ ದಿನ ದಾವೀದನು ಸರ್ವೇಶ್ವರನಿಗೆ ಭಯಪಟ್ಟನು; ಆ ಮಂಜೂಷವನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ ಎಂದು ಆಲೋಚಿಸಿದನು.
10 : ಅದನ್ನು ದಾವೀದ ನಗರಕ್ಕೆ ತರಲೊಲ್ಲದೆ ಗತ್ ಊರಿನ ಓಬೇದೆದೋಮನ ಮನೆಗೆ ಕಳುಹಿಸಿದನು.
11 : ಸರ್ವೇಶ್ವರನ ಮಂಜೂಷ ಗತ್ ಊರಿನ ಓಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇತ್ತು. ಆ ಅವಧಿಯಲ್ಲಿ ಸರ್ವೇಶ್ವರ ಅವನನ್ನೂ ಅವನ ಮನೆಯವರನ್ನೂ ಆಶೀರ್ವದಿಸಿದರು.
12 : ಹೀಗೆ ಸರ್ವೇಶ್ವರ ತಮ್ಮ ಮಂಜೂಷದ ಕಾರಣ ಓಬೇದೆದೋಮನನ್ನೂ ಅವನಿಗಿರುವುದೆಲ್ಲವನ್ನೂ ಆಶೀರ್ವದಿಸಿದ್ದಾರೆಂಬ ವರ್ತಮಾನ ದಾವೀದನಿಗೆ ಮುಟ್ಟಿತು. ಅವನು ಹೋಗಿ ಓಬೇದೆದೋಮನ ಮನೆಯಲ್ಲಿದ್ದ ದೇವರ ಮಂಜೂಷವನ್ನು ಉತ್ಸವದಿಂದ ದಾವೀದ ನಗರಕ್ಕೆ ತಂದನು.
13 : ಸರ್ವೇಶ್ವರನ ಮಂಜೂಷವನ್ನು ಹೊತ್ತವರು ಆರು ಹೆಜ್ಜೆ ನಡೆದ ನಂತರ ದಾವೀದನು ಒಂದು ಎತ್ತನ್ನೂ ಒಂದು ಕೊಬ್ಬಿದ ಕರುವನ್ನೂ ಬಲಿದಾನ ಮಾಡಿದನು.
14 : ದಾವೀದನು ಏಫೋದೆಂಬ ನಾರುಮಡಿಯನ್ನು ಮಾತ್ರ ಉಟ್ಟುಕೊಂಡು ಸರ್ವೇಶ್ವರನ ಸನ್ನಿಧಿಯಲ್ಲಿ ಪೂರ್ಣಾವೇಶದಿಂದ ಕುಣಿದಾಡಿದನು.
15 : ಹೀಗೆ ದಾವೀದನು ಹಾಗು ಎಲ್ಲ ಇಸ್ರಯೇಲರೂ ಜಯಕಾರಮಾಡುತ್ತಾ ತುತ್ತೂರಿ ಊದುತ್ತಾ ಸರ್ವೇಶ್ವರನ ಮಂಜೂಷವನ್ನು ತಂದನು.
16 : ಮಂಜೂಷವು ದಾವೀದನಗರದೊಳಗೆ ಬರುತ್ತಿರುವಾಗ ಸೌಲನ ಮಗಳಾದ ವಿೂಕಲಳು ಕಿಟಕಿಯಿಂದ ಇಣಿಕಿ ನೋಡಿ ದಾವೀದನು ಸರ್ವೇಶ್ವರನ ಮುಂದೆ ನಲಿದಾಡುತ್ತಾ ಕುಣಿಯುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲೇ ಅವನನ್ನು ತಿರಸ್ಕರಿಸಿದಳು.
17 : ಜನರು ಸರ್ವೇಶ್ವರನ ಮಂಜೂಷವನ್ನು ತಂದು ದಾವೀದನು ಕಟ್ಟಿಸಿದ್ದ ಗುಡಾರದೊಳಗೆ ನಿಯಮಿತ ಸ್ಥಳದಲ್ಲಿ ಇಟ್ಟರು; ಆಗ ದಾವೀದನು ಸರ್ವೇಶ್ವರನಿಗೆ ದಹನಬಲಿಗಳನ್ನೂ ಶಾಂತಿಸಮಾಧಾನ ಬಲಿಗಳನ್ನೂ ಸಮರ್ಪಿಸಿದನು.
18 : ಇದಾದ ಮೇಲೆ ಅವನು ಸೇನಾಧೀಶ್ವರ ಸರ್ವೇಶ್ವರನ ಹೆಸರಿನಲ್ಲಿ ಎಲ್ಲರನ್ನೂ ಆಶೀರ್ವದಿಸಿದನು.
19 : ನೆರೆದುಬಂದು ಸಭೆ ಸೇರಿದ್ದ ಇಸ್ರಯೇಲರಲ್ಲಿ ಪ್ರತಿಯೊಬ್ಬ ಗಂಡಸಿಗೂ ಹೆಂಗಸಿಗೂ ಒಂದು ರೊಟ್ಟಿಯನ್ನು, ಒಂದು ತುಂಡು ಮಾಂಸವನ್ನು ಹಾಗು ದ್ರಾಕ್ಷಿ ಹಣ್ಣಿನಿಂದ ಮಾಡಿದ ಉಂಡೆಯನ್ನು ಕೊಡಿಸಿದನು. ತರುವಾಯ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಹೋದರು.
20 : ಅನಂತರ ದಾವೀದನು ತನ್ನ ಮನೆಯವರನ್ನು ಆಶೀರ್ವದಿಸುವುದಕ್ಕೆ ಹೋದಾಗ ಸೌಲನ ಮಗಳಾದ ವಿೂಕಲಳು ಅವನೆದುರಿಗೆ ಬಂದಳು. “ಈ ದಿನ ಇಸ್ರಯೇಲರ ಅರಸರು ಎಂಥ ಅಗೌರವದಿಂದ ನಡೆದುಕೊಂಡರು! ಹುಚ್ಚರಲ್ಲಿ ಒಬ್ಬರಂತೆ ತಮ್ಮ ಜನಸಾಮಾನ್ಯರಾದ ದಾಸಿಯರ ಮುಂದೆ ಬೆತ್ತಲೆಯಾಗಿದ್ದರಲ್ಲಾ!” ಎಂದಳು.
21 : ಆಗ ದಾವೀದನು ಆಕೆಗೆ, “ನಾನು ಮಾಡಿದ್ದು ಸರ್ವೇಶ್ವರನ ಸನ್ನಿಧಿಯಲ್ಲಿ ಮಾತ್ರ; ನಿನ್ನ ತಂದೆಯನ್ನೂ ಅವನ ಮನೆಯವರೆಲ್ಲರನ್ನೂ ಬಿಟ್ಟುಬಿಟ್ಟು, ನನ್ನನ್ನೇ ಆರಿಸಿಕೊಂಡು, ತಮ್ಮ ಪ್ರಜೆಗಳಾದ ಇಸ್ರಯೇಲರ ಅರಸನನ್ನಾಗಿ ಮಾಡಿದ ಆ ಸರ್ವೇಶ್ವರನ ಮುಂದೆ ಇನ್ನೂ ಹೆಚ್ಚಾಗಿ ಕುಣಿದಾಡುವೆನು.
22 : ಇದಕ್ಕಿಂತಲು ಹೆಚ್ಚಾದ ತಿರಸ್ಕಾರ ಹೊಂದುವುದಕ್ಕೂ ನನ್ನನ್ನೇ ಅಲ್ಪನೆಂದು ಭಾವಿಸಿಕೊಳ್ಳುವುದಕ್ಕೂ ನಾನು ಸಿದ್ಧನು. ನೀನು ಹೇಳಿದ ದಾಸಿಯರಾದರೋ ನನ್ನನ್ನು ಹೇಗೂ ಸನ್ಮಾನಿಸುವರು!” ಎಂದನು.
23 : ಸೌಲನ ಮಗಳಾದ ಆ ವಿೂಕಲಳಿಗೆ ಜೀವದಿಂದಿರುವವರೆಗೂ ಮಕ್ಕಳೇ ಆಗಲಿಲ್ಲ.