1 :
ಅಬ್ನೇರನು ಹೆಬ್ರೋನಿನಲ್ಲಿ ಸತ್ತನೆಂಬ ವರ್ತಮಾನ ಸೌಲನ ಮಗನಾದ ಈಷ್ಬೋಶೆತನಿಗೆ ಮುಟ್ಟಿತು; ಅವನ ಕೈಗಳು ಜೋಲುಬಿದ್ದಂತಾದವು; ಇಸ್ರಯೇಲರೆಲ್ಲರು ಕಳವಳಕ್ಕೆ ಈಡಾದರು.
2 : ಸೌಲನ ಮಗನಿಗೆ ಬಾಣ ಹಾಗು ರೇಕಾಬ್ ಎಂಬ ಇಬ್ಬರು ಸೇನಾಪತಿಗಳು ಇದ್ದರು. ಇವರು ಬೆನ್ಯಾವಿೂನ್ ಕುಲದ ಬೇರೋತಿನವನಾದ ರಿಮ್ಮೋನನ ಮಕ್ಕಳು. (ಈ ಬೇರೋತ್ ಎಂಬುದು ಬೆನ್ಯಾವಿೂನ್ಯರಿಗೆ ಸೇರಿದ ಗ್ರಾಮ;
3 : ಆದರೆ ಬೇರೋತ್ಯರು ಗಿತ್ತಯಿಮಿಗೆ ಓಡಿ ಹೋಗಿ ಅಂದಿನವರೆಗೂ ಅಲ್ಲೇ ಪ್ರವಾಸಿಗಳಾಗಿ ಇದ್ದರು.)
4 : ಸೌಲನ ಮಗ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಕುಂಟ ಮಗನಿದ್ದನು. ಅವನು ಕುಂಟನಾದದ್ದು ಹೀಗೆ: ಸೌಲ ಹಾಗು ಯೋನಾತಾನರು ಸತ್ತರೆಂಬ ವರ್ತಮಾನ ಜೆಸ್ರೀಲಿನಿಂದ ಬಂದಾಗ ಐದು ವರ್ಷದವನಾಗಿದ್ದ ಅವನನ್ನು ಅವನ ದಾದಿ ತೆಗೆದುಕೊಂಡು ಅವಸರದಿಂದ ಓಡಿ ಹೋಗುವಾಗ ಅವನು ಬಿದ್ದು ಕಾಲು ಮುರಿದುಕೊಂಡನು.
5 : ಈಷ್ಬೋಶೆತನು ಮಧ್ಯಾಹ್ನದ ಬಿಸಿಲು ಹೊತ್ತಿನಲ್ಲಿ ಮನೆಯೊಳಗೆ ಮಲಗಿರುವಾಗ ಬೇರೋತಿನ ರಿಮ್ಮೋನನ ಮಕ್ಕಳಾದ ರೇಕಾಬ್ ಹಾಗು ಬಾಣ ಎಂಬವರು ಅವನ ಮನೆಯ ಬಳಿಗೆ ಹೋದರು.
6 : ಆಗ ಬಾಗಿಲು ಕಾಯುವವಳು ಗೋಧಿ ಕೇರುತ್ತಿದ್ದು ಹಾಗೆಯೇ ತೂಗಡಿಸಿ ನಿದ್ರೆ ಮಾಡುತ್ತಿರುವುದನ್ನು ಕಂಡು ಅವರು ಗುಟ್ಟಾಗಿ ಒಳಗೆ ಜಾರಿಕೊಂಡರು.
7 : ಒಳಕೋಣೆಯಲ್ಲಿ ಮಂಚದ ಮೇಲೆ ಮಲಗಿದ್ದ ಅರಸನನ್ನು ಹೊಡೆದು ಕೊಂದರು. ತಲೆಯನ್ನು ತೆಗೆದುಕೊಂಡರು. ರಾತ್ರಿಯೆಲ್ಲಾ ಅರಾಬಾ ತಗ್ಗಿನಲ್ಲಿ ಪ್ರಯಾಣಮಾಡಿ
8 : ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನ ಬಳಿಗೆ ಬಂದು ಆ ತಲೆಯನ್ನು ಅವನಿಗೆ ತೋರಿಸಿದರು; “ಇಗೋ, ನಿಮ್ಮ ಜೀವತೆಗೆಯಬೇಕೆಂದಿದ್ದ ನಿಮ್ಮ ಶತ್ರುವಾದ ಸೌಲನ ಮಗ ಈಷ್ಬೋಶೆತನ ತಲೆ; ಅರಸರಾದ ನಮ್ಮ ಒಡೆಯರಿಗಾಗಿ ಸರ್ವೇಶ್ವರಸ್ವಾಮಿ ಸೌಲನಿಗೂ ಅವನ ಸಂತಾನಕ್ಕೂ ಈ ಹೊತ್ತು ಸೇಡುತೀರಿಸಿದ್ದಾರೆ,” ಎಂದರು.
9 : ದಾವೀದನು ಬೇರೋತಿನ ರಿಮ್ಮೋನನ ಮಕ್ಕಳು ಆದ ಆ ರೇಕಾಬ್ ಹಾಗು ಬಾಣ ಎಂಬವರಿಗೆ,
10 : ಸೌಲನ ಮರಣವಾರ್ತೆಯನ್ನು ತಿಳಿಸುವುದು ಶುಭಕರವೆಂದು ಭಾವಿಸಿ ಬಂದು ನನಗೆ ಹೇಳಿದ ಅವನನ್ನು ಹಿಡಿದು ನಾನು ದಂಡಿಸಿದೆ. ಅವನಿಗೆ ಚಿಕ್ಲಗಿನಲ್ಲಿ ಮರಣ ದಂಡನೆಯೆಂಬ ಬಹುಮಾನವನ್ನು ಸಲ್ಲಿಸಿದೆ, ಎಂಬುದು ನಿಮಗೆ ಗೊತ್ತಿಲ್ಲವೆ?
11 : ಮಹಾದುಷ್ಟರಾದ ನೀವು ನೀತಿವಂತನ ಮನೆಹೊಕ್ಕು ಅವನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದ ಮೇಲೆ ಆ ರಕ್ತಾಪರಾಧಕ್ಕಾಗಿ ನಿಮಗೆ ಮುಯ್ಯಿ ತೀರಿಸುವುದು ಎಷ್ಟೋ ಅಗತ್ಯವಾಗಿದೆ. ನನ್ನ ಪ್ರಾಣವನ್ನು ಎಲ್ಲಾ ಇಕ್ಕಟ್ಟುಗಳಿಂದ ಬಿಡಿಸಿದ ಸರ್ವೇಶ್ವರನಾಣೆ, ನಿಮ್ಮನ್ನು ಭೂಲೋಕದಿಂದ ತೆಗೆದೇ ಬಿಡುವೆನು,” ಎಂದು ಹೇಳಿದನು.
12 : ಅಂತೆಯೇ ತನ್ನ ಆಳುಗಳಿಗೆ ಆಜ್ಞಾಪಿಸಿದನು. ಅವರು ಇವರನ್ನು ಕೊಂದು ಕೈಕಾಲುಗಳನ್ನು ಕತ್ತರಿಸಿ ಶವಗಳನ್ನು ಹೆಬ್ರೋನಿನ ಕೆರೆಯ ಬಳಿಯಲ್ಲಿ ನೇತುಹಾಕಿದರು. ಈಷ್ಬೋಶೆತನ ತಲೆಯನ್ನು ಹೆಬ್ರೋನಿನಲ್ಲಿದ್ದ ಇಬ್ನೇರನ ಸಮಾಧಿಯಲ್ಲಿ ಹೂಳಿದರು.