Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಸಮು


1 : ಸರ್ವೇಶ್ವರಸ್ವಾಮಿ ದಾವೀದನನ್ನು ಸೌಲನ ಕೈಗೂ ಇತರ ಶತ್ರುಗಳ ಕೈಗೂ ಸಿಕ್ಕದಂತೆ ತಪ್ಪಿಸಿದರು. ಈ ಕಾರಣ ಅವನು ಸರ್ವೇಶ್ವರಸ್ವಾಮಿಯನ್ನು ಕೀರ್ತಿಸುತ್ತಾ ಈ ಜಯಗೀತೆಯನ್ನು ಹಾಡಿದನು:
2 : ಸರ್ವೇಶ್ವರನೇ ನನಗೆ ಪೊರೆಬಂಡೆ, ನನ್ನ ಕಲ್ಲು ಕೋಟೆ, ಆತನೇ ವಿಮೋಚಕ ನನಗೆ.
3 : ಆತನೇ ನನಗೆ ದೇವರು, ನನ್ನಾಶ್ರಯಗಿರಿ, ನನ್ನ ರಕ್ಷಣಾಶೃಂಗ, ನನ್ನ ದುರ್ಗ, ನನ್ನ ಗುರಾಣಿ.
4 : ಸರ್ವೇಶ್ವರನು ಸ್ತುತ್ಯಾರ್ಹನು ಶತ್ರುಗಳಿಂದ ಕಾಪಾಡುವ£ು, ನಾನವಗೆ ಮೊರೆಯಿಡಲು.
5 : ಕುತ್ತಿಗೆಗೆ ಬಂದಿದ್ದವು ಸಾವಿನ ಅಲೆಗಳು ನಡುಕ ಹುಟ್ಟಿಸಿದ್ದವು ವಿನಾಶಪ್ರವಾಹಗಳು.
6 : ಸುತ್ತಿಕೊಂಡಿದ್ದವು ಪಾತಾಳಪಾಶಗಳು ನನ್ನ ಕಣ್ಮುಂದಿದ್ದವು ಮರಣಕರ ಉರುಲುಗಳು.
7 : ಇಂಥಾ ದುಸ್ಥಿತಿಯಲಿ ನಾ ಮೊರೆಯಿಟ್ಟೆ ದೇವನಿಗೆ ಪ್ರಾರ್ಥನೆ ಮಾಡಿದೆ ಆ ಸರ್ವೇಶ್ವರನಿಗೆ. ನನ್ನ ಕೂಗು ಕೇಳಿಸಿತು ಆತನ ಮಂದಿರದಲಿ ನನ್ನ ಪ್ರಾರ್ಥನೆ ಬಿದ್ದಿತು ಆತನ ಕಿವಿಯಲಿ.
8 : ಆಗ ಕಂಪಿಸಿತು ಭೂಮಿ ಗಡಗಡನೆ ಕದಲಿದವು ಆಗಸದಸ್ತಿವಾರಗಳು ಮಿಲಮಿಲನೆ ಏಕೆನೆ ಸಿಟ್ಟೇರಿತು ಆತನಿಗೆ.
9 : ಹೊರಬಂದಿತು ಹೊಗೆ ಆತನ ವೂಗಿನಿಂದ ಹೊರಟಿತು ಅಗ್ನಿಜ್ವಾಲೆ ಆತನ ಬಾಯಿಂದ ಕಾದುಕೆಂಡವಾಯಿತು ಅದಕ್ಕೆದುರಿಗೆ ಸಿಕ್ಕಿದುದೆಲ್ಲ
10 : ಆಕಾಶವನೆ ಬಾಗಿಸಿ ಆತನಿಳಿದು ಬರಲು ಸೇರಿತು ಆತನ ಕಾಲಡಿ ಕಾರ್ಮುಗಿಲು
11 : ಬಂದಿಳಿದನು ‘ಕೆರೂಬಿ’ ವಾಹನಾರೂಢನಾಗಿ ಕಾಣಿಸಿಕೊಂಡನು ವಾಯುರೆಕ್ಕೆಗಳ ವೇಗದಲಿ.
12 : ಕತ್ತಲನು, ಜಲಮಯ ಮೇಘಗಳನು ಸುತ್ತಲು ಕವಿಸಿಕೊಂಡನು ಛತ್ರಾಂಬರದೊಳು.
13 : ಉರಿಗೆಂಡಗಳು ಹೊರಟುಬರುತ್ತಿದ್ದವು ಅಷ್ಟು ಪ್ರಜ್ವಲವಾಗಿತ್ತು. ಆತನ ಸಾನ್ನಿಧ್ಯವು.
14 : ಗುಡುಗಿದನು ಸರ್ವೇಶ್ವರ ಗಗನ ಮಂಡಲದಿಂದ ಮೊಳಗಿತು ವಾಣಿ ಆ ಪರಮೋನ್ನತನಿಂದ.
15 : ಚದರಿಸಿದನು ಶತ್ರುಗಳನು ಬಾಣಗಳನೆಸೆದು ತಳಮಳಗೊಳಿಸಿದನವರನು ಸಿಡಿಲನು ಹೊಡೆದು.
16 : ಆತನಾ ಗದರಿಕೆಗೆ, ಆತನಾ ಶ್ವಾಸಭರಕ್ಕೆ ಕಾಣಿಸಿಕೊಂಡಿತು ಇಂಗಿಹೋದ ಸಮುದ್ರದ ತಳ ತೋರಿಬಂದಿತು ಭೂಲೋಕದ ಅಸ್ತಿವಾರ.
17 : ಮೇಲಣಾಲೋಕದಿಂದ ಹಿಡಿದುಕೊಂಡ ಎನ್ನನು ಕೈಚಾಚಿ ಸೆಳೆದುಕೊಂಡ ಆ ಜಲರಾಶಿಗಳಿಂದೆನ್ನನು ಕೈನೀಡಿ.
18 : ನನ್ನ ಬಿಡಿಸಿ ರಕ್ಷಿಸಿದನು ಶತ್ರುಗಳಿಂದ ನನಗಿಂತ ಪುಷ್ಟ, ಬಲಿಷ್ಟ ಹಗೆಗಳಿಂದ.
19 : ನನ್ನ ಮೇಲೆರಗಿದ್ದರಾ ಹಗೆಗಳು ದುರಂತ ಕಾಲದಲಿ ನನಗುದ್ಧಾರಕನಾದ ಸರ್ವೇಶ್ವರನು, ಆ ವಿಪತ್ಕಾಲದಲಿ.
20 : ಬಿಕ್ಕಟ್ಟಿನಿಂದ ಬಿಡಿಸಿ ತಂದನು ಬಯಲಿಗೆ ಅಕ್ಕರೆಯಿಂದ ಮೆಚ್ಚಿ ನನಗಾದನು ರಕ್ಷೆ.
21 : ನನಗೊಳಿತು ಮಾಡಿದನಾತ ಸನ್ನಡತೆಗೆ ತಕ್ಕಂತೆ ಪ್ರತಿಫಲವನಿತ್ತನು ನನ್ನ ಹಸ್ತಶುದ್ಧತೆಗೆ ತಕ್ಕಹಾಗೆ.
22 : ದೇವರನು ತೊರೆದು ದುರುಳನಾಗದೆ ನಾನನುಸರಿಸಿದೆ ಸರ್ವೇಶ್ವರನ ಮಾರ್ಗವನೆ.
23 : ಆತನ ವಿಧಿನಿಯಮಗಳನ್ನು ಕೈಬಿಡದೆ ಆತನಾಜ್ಞೆಗಳನಿಟ್ಟೆ ಸದಾ ನನ್ನ ಕಣ್ಣಮುಂದೆ.
24 : ಪಾಪದಲಿ ಬೀಳದೆ ನಡೆದೆ ಎಚ್ಚರಿಕೆಯಾಗಿ ಆತನ ದೃಷ್ಟಿಯಲ್ಲಿದ್ದೆ ನಿರ್ದೋಷಿಯಾಗಿ.
25 : ನಾ ನೀತಿವಂತ, ನಿರಪರಾಧಿಯೆಂದರಿತು ನನಗಿತ್ತನಾ ಸರ್ವೇಶ್ವರ ತಕ್ಕ ಪ್ರತಿಫಲವನು.
26 : ಕರುಣೆಯುಳ್ಳವನಿಗಾತ ಕರುಣಾಮಯಿ ದೋಷರಹಿತನಿಗಾತ ನಿರ್ದೋಷಿ
27 : ಶುದ್ಧನಿಗಾತ ಪರಿಶುದ್ಧನು ಮೂರ್ಖನಿಗಾತ ಮಹಾವಕ್ರನು.
28 : ದೀನದಲಿತರನು ಉದ್ಧರಿಸುವನು ಗರ್ವಿಗಳನು ಗುರುತಿಸಿ ತಗ್ಗಿಸುವನು.
29 : ಹೇ ಸರ್ವೇಶ್ವರಾ, ನೀನೆನಗೆ ಜ್ಯೋತಿ ಕತ್ತಲನು ನೀಗಿಸಿ, ಬೆಳಕನು ನೀಡುತಿ.
30 : ನಿನ್ನ ಶಕ್ತಿಯಿದ್ದಲ್ಲಿ ನಾ ದಂಡಿನಮೇಲೆ ಬೀಳ ಬಲ್ಲೆ ದೈವನೆರವಿದ್ದಲ್ಲಿ ನಾ ಕೋಟೆಕೊತ್ತಲನೆ ಹಾರಬಲ್ಲೆ.
31 : ದೇವರ ಮಾರ್ಗ ದೋಷರಹಿತ ಸರ್ವೇಶ್ವರನ ವಚನ ಪರಮಪುನೀತ ಆಶ್ರಿತರೆಲ್ಲರಿಗಾತ ರಕ್ಷಣಾಕವಚ.
32 : ಸರ್ವೇಶ್ವರನಲ್ಲದೆ ಇನ್ನಾವ ದೇವರುಂಟು? ನಮ್ಮ ದೇವನಲ್ಲದೆ ಉದ್ಧಾರಕನೆಲ್ಲುಂಟು?
33 : ದೇವನೇ ನನಗೆ ಭದ್ರವಾದ ದುರ್ಗ ಆತನಿಂದಲೇ ಸರಾಗ ನನ್ನ ಮಾರ್ಗ.
34 : ನನಗಿತ್ತನಾತ ಹುಲ್ಲೆಯಂಥ ಮೊನೆಗಾಲು ಎನ್ನ ಬಿಗಿನಿಲ್ಲಿಸಿದ ಮಲೆಗಳ ಮೇಲೂ.
35 : ಯುದ್ಧವಿದ್ಯೆಯ ಕಲಿತೆ ಆತನಿಂದಲೆ ಎಂದೇ ನಾ ಕಂಚಿನ ಬಿಲ್ಲನೆ ಬಗ್ಗಿಸಬಲ್ಲೆ.
36 : ನನ್ನ ಪರ ನೀನೇ ಗುರಾಣಿ ಹಿಡಿದು ರಕ್ಷಿಸಿದೆ ನಿನ್ನ ಕೃಪಾವರ ತಂದಿತು ನನಗೆ ದೊಡ್ಡಸ್ತಿಕೆ.
37 : ನೀನಿತ್ತೆ ನನ್ನ ಪಾದಗಳಿಗೆ ವಿಶಾಲಸ್ಥಳ ನನ್ನ ಹೆಜ್ಜೆಗಳು ಕದಲವು ಈ ನಿಮಿತ್ತ.
38 : ಸದೆಬಡಿವೆನು ಶತ್ರುಗಳನು ಬೆನ್ನಟ್ಟಿ ಅವರನು ನಿರ್ಮೂಲ ಮಾಡದೆ ಬರೆ ಹಿಂದಿರುಗಿ.
39 : ಅವರನು ಹೊಡೆದೆ ಮತ್ತೆ ಏಳದಂತೆ ಅವರನು ಮಾಡಿದೆ ಕಾಲಿಗೆ ಬೀಳುವಂತೆ.
40 : ನನಗಿತ್ತೆ ನೀ ಕದನಕ್ಕಾಗುವ ಶೌರ್ಯವೆಂಬ ನಡುಕಟ್ಟು ತಗ್ಗಿಸಿದೆ ಎದುರಾಳಿಗಳ ನನಗಧೀನ ಮಾಡಿಬಿಟ್ಟು.
41 : ಆ ಶತ್ರುಗಳೋಡಿದರು ನನಗೆ ಬೆಂಗೊಟ್ಟು ಆ ಹಗೆಗಳನು ನಿರ್ಮೂಲ ಮಾಡಿದೆ ನಾ ಗುರಿಯಿಟ್ಟು.
42 : ಎಲ್ಲಿ ಯಾಚಿಸಿದರೂ ಅವರಿಗಿರಲಿಲ್ಲ ರಕ್ಷಕ ಸರ್ವೇಶ್ವರನಿಗೆ ಮೊರೆಯಿಟ್ಟರೂ ಅವರಿಗೆ ದೊರಕಲಿಲ್ಲ ಉತ್ತರ.
43 : ಪುಡಿಪುಡಿ ಮಾಡಿದೆ ನಾನವರನು ಮಣ್ಣಿನ ಹೆಂಟೆಯಂತೆ ಎತ್ತೆಸೆದು ಬಿಟ್ಟೆ ನಾನವರನು ಮೋರಿಯ ಕೆಸರಿನಂತೆ.
44 : ನನ್ನ ಜನರ ಒಳಕಲಹದಿಂದೆನ್ನ ನೀ ತಪ್ಪಿಸಿದೆ ನನ್ನನುಳಿಸಿ ಜನಾಂಗಗಳಿಗೆ ಜನಪನಾಗಿಸಿದೆ ನಾನರಿಯದ ಜನರನ್ನೂ ನನಗಧೀನರನ್ನಾಗಿಸಿದೆ.
45 : ದೇಶಾಂತರದವರೂ ಮುದುರಿಕೊಂಡರು ನನ್ನ ಮುಂದೆ ವಿಧೇಯರಾದರೆನಗೆ ನನ್ನ ಸುದ್ದಿ ಕೇಳಿದ ಮಾತ್ರಕೆ.
46 : ಎದೆಗುಂದಿದವರಾದರು ಆ ವಿದೇಶಿಯರು ತಮ್ಮ ಕೋಟೆಯಿಂದ ನಡುಗುತ್ತಾ ಹೊರಬಂದರು.
47 : ಸರ್ವೇಶ್ವರನು ಚೈತನ್ಯಸ್ವರೂಪನು ನನ್ನುದ್ಧಾರಕನವಗೆ ಸ್ತುತಿಸೋತ್ರವು ನನ್ನಾಶ್ರಯಸಿರಿ ದೇವಗೆ ಜಯಕಾರವು.
48 : ನನ್ನ ಶತ್ರುಗಳಿಗೆ ವಿಧಿಸುವನಾ ದೇವ ಪ್ರತಿದಂಡನೆ ಜನಾಂಗಗಳನು ಅಧೀನಪಡಿಸುವನಾತ ನನಗೆ.
49 : ಶತ್ರುಗಳಿಂದ ನೀನೆನ್ನ ಮುಕ್ತಗೊಳಿಸಿದೆ ಎದುರಾಳಿಗೆ ತಪ್ಪಿಸಿ ನನ್ನನುನ್ನತಿಗೇರಿಸಿದೆ ಹಿಂಸಾತ್ಮಕರಿಂದ ನೀಯೆನ್ನ ಸಂರಕ್ಷಿಸಿದೆ.
50 : ಎಂತಲೆ, ನಿನ್ನ ಸ್ತುತಿಪೆನು ಅನ್ಯಜನಗಳ ಮಧ್ಯೆ ನಿನ್ನ ನಾಮವನು ಹೇ ಸರ್ವೇಶ್ವರಾ ಸಂಕೀರ್ತಿಪೆ.
51 : ತಾನೇ ನೇಮಿಸಿದ ಅರಸನಿಗೆ ಆತನೀವನು ವಿಶೇಷ ರಕ್ಷಣೆ.
52 : ಅನುಗ್ರಹಿಸುವನಾತ ಅನಂತಾನಂತ ಕೃಪೆ ತಾನಭಿಷೇಕಿಸಿದ ದಾವೀದನಿಗೆ, ಆತನ ಸಂತತಿಗೆ.

· © 2017 kannadacatholicbible.org Privacy Policy