Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಸಮು


1 : ದಾವೀದನ ಕಾಲದಲ್ಲಿ ಮೂರು ವರ್ಷಗಳವರೆಗೂ ಬಿಡದೆ ಬರವಿತ್ತು. ದಾವೀದನು ಸರ್ವೇಶ್ವರಸ್ವಾಮಿಯನ್ನು ವಿಚಾರಿಸಿದಾಗ, “ಸೌಲನು ಗಿಬ್ಯೋನ್ಯರನ್ನು ಕೊಲ್ಲಿಸಿದ್ದರಿಂದ ಅವನ ಮೇಲೂ ಅವನ ಮನೆಯವರ ಮೇಲೂ ರಕ್ತಾಪರಾಧ ಇರುತ್ತದೆ,” ಎಂಬ ಉತ್ತರ ದೊರಕಿತು.
2 : (ಗಿಬ್ಯೋನ್ಯರು ಇಸ್ರಯೇಲ್ ಕುಲಗಳಿಗೆ ಸೇರಿದವರಲ್ಲ; ಅವರು ಅಳಿಯದೆ ಉಳಿದ ಅಮೋರಿಯರಷ್ಟೇ). ಇಸ್ರಯೇಲರು ತಾವು ಇವರನ್ನು ಕೊಲ್ಲುವುದಿಲ್ಲವೆಂದು ಪ್ರಮಾಣ ಮಾಡಿ ಇದ್ದರು. ಆದರೂ ಸೌಲನು ಇಸ್ರಯೇಲ್ ಮತ್ತು ಯೆಹೂದ ಕುಲಗಳ ಮೇಲೆ ತನಗಿದ್ದ ಅಭಿಮಾನದ ನಿಮಿತ್ತ ಇವರನ್ನೂ ನಿರ್ನಾಮಗೊಳಿಸಬೇಕೆಂದಿದ್ದನು.
3 : ಆಗ ಅರಸ ದಾವೀದನು ಗಿಬ್ಯೋನ್ಯರನ್ನು ಕರೆದು, “ನಾನು ನಿಮ್ಮ ಪರವಾಗಿ ಏನು ಮಾಡಬೇಕೆನ್ನುತ್ತೀರಿ? ನಿಮಗೆ ಪ್ರಾಯಶ್ಚಿತ್ತವಾಗಿ ಯಾವುದನ್ನು ಕೊಟ್ಟರೆ ನೀವು ಸರ್ವೇಶ್ವರನ ಪ್ರಜೆಯನ್ನು ಆಶೀರ್ವದಿಸುವಿರಿ?” ಎಂದು ಕೇಳಿದನು.
4 : ಅದಕ್ಕೆ ಅವರು, “ಸೌಲನ ಸಂತಾನದವರಿಗೂ ನಮಗೂ ಇರುವ ವ್ಯಾಜ್ಯ ಬೆಳ್ಳಿಬಂಗಾರದಿಂದ ತೀರಲಾರದು; ಇಸ್ರಯೇಲರನ್ನು ಕೊಲ್ಲುವ ಅಧಿಕಾರ ನಮಗಿಲ್ಲ,” ಎಂದು ಉತ್ತರಕೊಟ್ಟರು. ಅರಸನು ಅವರಿಗೆ, “ಏನು ಮಾಡಬೇಕು ಹೇಳಿ; ಮಾಡುತ್ತೇನೆ,” ಎಂದನು.
5 : ಅವರು, “ನಮ್ಮನ್ನು ಇಸ್ರಯೇಲ್ ಪ್ರಾಂತ್ಯಗಳಿಂದ ಹೊರಡಿಸುವುದಕ್ಕೂ ನಿರ್ನಾಮಗೊಳಿಸುವುದಕ್ಕೂ ಪ್ರಯತ್ನಿಸಿದ ಆ ಮನುಷ್ಯನ ಮಕ್ಕಳಲ್ಲಿ ಏಳು ಮಂದಿಯನ್ನು ನಮಗೆ ಒಪ್ಪಿಸಿ.
6 : ಸರ್ವೇಶ್ವರನಿಂದ ಆಯ್ಕೆಯಾದ ಸೌಲನು ವಾಸವಾಗಿದ್ದ ಗಿಬೆಯದಲ್ಲಿ ನಾವು ಅವರನ್ನು ಕೊಂದು ಸರ್ವೇಶ್ವರನ ಸನ್ನಿಧಿಯಲ್ಲೆ ನೇತುಹಾಕುತ್ತೇವೆ,” ಎಂದರು. ಅರಸನು, “ಆಗಲಿ, ಒಪ್ಪಿಸುತ್ತೇನೆ,” ಎಂದನು.
7 : ದಾವೀದನು ತಾನು ಸೌಲನ ಮಗ ಯೋನಾತಾನನಿಗೆ ಸರ್ವೇಶ್ವರನ ಹೆಸರಿನಲ್ಲಿ ಮಾಡಿದ ಪ್ರಮಾಣವನ್ನು ನೆನೆದು, ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.
8 : ಆದರೆ ಸೌಲನಿಗೆ ಅಯ್ಯಾಹನ ಮಗಳಾದ ರಿಚ್ಪಳಲ್ಲಿ ಹುಟ್ಟಿದ ಅರ್ಮೋನೀ, ಮೆಫೀಬೋಶೆತ್ ಎಂಬ ಇಬ್ಬರು ಮಕ್ಕಳನ್ನೂ, ಮೆಹೋಲದ ಬರ್ಜಿಲ್ಲೈಯ ಮಗನಾದ ಅದ್ರೀಯೇಲನಿಗೆ ಸೌಲನ ಮಗಳಾದ ಮೇರಬಳಲ್ಲಿ ಹುಟ್ಟಿದ ಐದು ಮಂದಿ ಮಕ್ಕಳನ್ನೂ ತೆಗೆದುಕೊಂಡು ಅವರನ್ನು ಗಿಬ್ಯೋನ್ಯರಿಗೆ ಒಪ್ಪಿಸಿದನು.
9 : ಅವರು ಇವರನ್ನು ಕೊಂದು ಗುಡ್ಡದ ಮೇಲೆ ಸರ್ವೇಶ್ವರನ ಸನ್ನಿಧಿಯಲ್ಲೆ ನೇತುಹಾಕಿದರು. ಈ ಏಳುಮಂದಿ ಏಕಕಾಲದಲ್ಲಿ ಹತರಾದರು. ಇವರನ್ನು ಕೊಂದಾಗ ಜವೆಗೋದಿ ಸುಗ್ಗಿಯು ಆರಂಭ ಆಗಿತ್ತು.
10 : ಆಗ ಅಯ್ಯಾಹನ ಮಗಳಾದ ರಿಚ್ಪಳು ಒಂದು ಗೋಣಿತಟ್ಟನ್ನು ತೆಗೆದುಕೊಂಡು ಅದನ್ನು ಬಂಡೆಯ ಮೇಲೆ ಹಾಸಿ ಸುಗ್ಗಿಯ ಆರಂಭದಿಂದ ಶವಗಳ ಮೇಲೆ ಮಳೆ ಬೀಳುವ ತನಕ ಆ ಗೋಣಿತಟ್ಟಿನ ಮೇಲೆ ಕುಳಿತುಕೊಂಡು ಹಗಲಿನಲ್ಲಿ ಆಕಾಶದ ಪಕ್ಷಿಗಳಾಗಲಿ ಇರುಳಿನಲ್ಲಿ ಕಾಡು ಮೃಗಗಳಾಗಲಿ ಆ ಶವಗಳನ್ನು ತಿನ್ನದಂತೆ ಕಾಯುತ್ತಿದ್ದಳು.
11 : ಅಯ್ಯಾಹನ ಮಗಳೂ ಸೌಲನ ಉಪಪತ್ನಿಯೂ ಆದ ರಿಚ್ಪಳು ಮಾಡಿದ ಈ ಕಾರ್ಯವನ್ನು ದಾವೀದನಿಗೆ ತಿಳಿಸಲಾಯಿತು.
12 : ಆಗ ಅವನು ಸೌಲನ ಮತ್ತು ಅವನ ಮಗನಾದ ಯೋನಾತಾನನ ಎಲುಬುಗಳನ್ನು ತರುವುದಕ್ಕಾಗಿ ಯಾಬೇಷ್ ಗಿಲ್ಯಾದಿಗೆ ಹೋದನು. ಫಿಲಿಷ್ಟಿಯರು ಸೌಲನನ್ನು ಗಿಲ್ಬೋವದಲ್ಲಿ ಸೋಲಿಸಿದ ನಂತರ ಅವನ ಮತ್ತು ಯೋನಾತಾನನ ಶವಗಳನ್ನು ಬೇತ್‍ಷೆಯಾನಿನ ಬೀದಿಗಳಲ್ಲಿ ತೂಗುಹಾಕಿದ್ದರು. ಯಾಬೇಷ್‍ಗಿಲ್ಯಾದಿನವರು ಅಲ್ಲಿಂದ ಅವುಗಳನ್ನು ಕದ್ದುಕೊಂಡು ಹೋಗಿದ್ದರು.
13 : ದಾವೀದನು ಯಾಬೇಷಿನಲ್ಲಿದ್ದ ಸೌಲ ಹಾಗು ಯೋನಾತಾನರ ಎಲುಬುಗಳನ್ನೂ ಗಿಬ್ಯೋನಿನಲ್ಲಿ ಹತರಾದ ಈ ಮನುಷ್ಯರ ಎಲುಬುಗಳನ್ನೂ ತೆಗೆದುಕೊಂಡು
14 : ಅವುಗಳನ್ನೆಲ್ಲಾ ಬೆನ್ಯಾಮೀನ್ ದೇಶದ ಚೇಲಾ ಊರಿನಲ್ಲಿ ಸೌಲನ ತಂದೆಯಾದ ಕೀಷನ ಸ್ಮಶಾನ ಭೂಮಿಯಲ್ಲಿ ಸಮಾಧಿಮಾಡಿಸಿದನು. ಅರಸನ ಅಪ್ಪಣೆಯಂತೆ ಇದೆಲ್ಲಾ ಆದನಂತರ ನಾಡಿನ ಮೇಲೆ ದೇವರಿಗಿದ್ದ ಕೋಪ ಶಮನವಾಯಿತು.
15 : ಒಂದು ಕಾಲದಲ್ಲಿ ಫಿಲಿಷ್ಟಿಯರಿಗೂ ಇಸ್ರಯೇಲರಿಗೂ ಮತ್ತೆ ಯುದ್ಧ ನಡೆಯಿತು. ದಾವೀದನು ತನ್ನ ಸಐನಿಕರನ್ನು ಕರೆದುಕೊಂಡು ಫಿಲಿಷ್ಟಿಯರಿಗೆ ವಿರುದ್ಧ ಯುದ್ಧಕ್ಕೆ ಹೋದಾಗ ಬಹಳವಾಗಿ ದಣಿದಿದ್ದನು.
16 : ಅವನನ್ನು ರೆಫಾಯರಲ್ಲೊಬ್ಬನಾದ ಇಷ್ಬೀಬೆನೋಬ್ ಎಂಬವನು ಕೊಲ್ಲುವುದಕ್ಕಿದ್ದನು. ಅವನ ಭರ್ಜಿಯ ತಾಮ್ರ ಮುನ್ನೂರು ಬೆಳ್ಳಿನಾಣ್ಯದ ತೂಕದ್ದು; ಅವನು ಸೊಂಟಕ್ಕೆ ಒಂದು ಹೊಸ ಕತ್ತಿಯನ್ನು ಕಟ್ಟಿಕೊಂಡಿದ್ದನು.
17 : ಚೆರೂಯಳ ಮಗನಾದ ಅಬೀಷೈಯು ದಾವೀದನ ಸಹಾಯಕ್ಕೆ ಬಂದು ಫಿಲಿಷ್ಟಿಯನನ್ನು ಕೊಂದುಹಾಕಿದನು. ಆಗ ಜನರು ದಾವೀದನಿಗೆ, “ಇಸ್ರಯೇಲರ ಆಶಾಜ್ಯೋತಿ ಆರಿಹೋಗದಂತೆ ನೀನು ಇನ್ನು ಮುಂದೆ ನಮ್ಮ ಜೊತೆಯಲ್ಲಿ ಯುದ್ಧಕ್ಕೆ ಬರಬಾರದು,” ಎಂದು ಖಂಡಿತವಾಗಿ ಹೇಳಿದರು.
18 : ಅನಂತರ ಫಿಲಿಷ್ಟಿಯರ ಸಂಗಡ ಗೋಬಿನಲ್ಲಿ ಯುದ್ಧ ನಡೆಯಿತು. ಆಗ ಹುಷಾ ಊರಿನವನಾದ ಸಿಬ್ಬೆಕ್ಕೆ ಎಂಬವನು ರೆಫಾಯನಾದ ಸಫ್ ಎಂಬವನನ್ನು ಕೊಂದನು.
19 : ಗೋಬಿನಲ್ಲಿ ಫಿಲಿಷ್ಟಿಯರೊಡನೆ ಇನ್ನೊಮ್ಮೆ ಯುದ್ಧ ನಡೆದಾಗ ಬೆತ್ಲೆಹೇಮಿನವನಾದ ಯಾರೇಯೋ ರೆಗೀಮ್ ಎಂಬವನ ಮಗ ಎಲ್ಹಾನಾನನು ಗಿತ್ತೀಯನಾದ ಗೊಲ್ಯಾತನನ್ನು ಕೊಂದನು. ಆ ಗೊಲ್ಯಾತನ ಭರ್ಜಿಯ ಹಿಡಿಕೆ ನೇಯಿಗಾರರ ಕುಂಟೆಯಷ್ಟು ಗಾತ್ರ ಇತ್ತು.
20 : ಮತ್ತೊಂದು ಸಾರಿ ಗತ್ ಊರಿನಲ್ಲಿ ಯುದ್ಧ ನಡೆಯಿತು. ಅಲ್ಲಿ ಒಬ್ಬ ಎತ್ತರದ ಪುರುಷನಿದ್ದನು. ಅವನ ಕೈಕಾಲುಗಳಿಗೆ ಆರಾರು ಬೆರಳುಗಳಂತೆ - ಒಟ್ಟಿಗೆ ಇಪ್ಪತ್ತನಾಲ್ಕು ಬೆರಳುಗಳಿದ್ದವು. ಅವನೂ ರೆಫಾಯನು.
21 : ಅವನು ಇಸ್ರಯೇಲರನ್ನು ನಿಂದಿಸಿದಾಗ ದಾವೀದನ ಅಣ್ಣನಾದ ಶಿಮೆಯಾನನ ಮಗ ಯೋನಾತಾನನು ಅವನನ್ನು ಕೊಂದುಹಾಕಿದನು.
22 : ಗತ್ ಊರಿನವರಾದ ಈ ನಾಲ್ಕು ಮಂದಿ ರೆಫಾಯರು ದಾವೀದನಿಂದಲೂ ಅವನ ಸೇವಕರಿಂದಲೂ ಹತರಾದರು.

· © 2017 kannadacatholicbible.org Privacy Policy