Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಸಮು


1 : ಅನಂತರ ದಾವೀದನು ಸರ್ವೇಶ್ವರನನ್ನು, “ನಾನು ಜುದೇಯ ನಾಡಿನ ಯಾವುದಾದರೊಂದು ಪಟ್ಟಣಕ್ಕೆ ಹೋಗಬಹುದೇ?” ಎಂದು ಕೇಳಿದನು. “ಹೋಗಬಹುದು” ಎಂದರು ಸರ್ವೇಶ್ವರ. ಅವನು ಪುನಃ “ಯಾವ ಊರಿಗೆ ಹೋಗಲಿ?” ಎಂದು ಕೇಳಿದ್ದಕ್ಕೆ, “ಹೆಬ್ರೋನಿಗೆ ಹೋಗು,” ಎಂಬ ಉತ್ತರ ಸಿಕ್ಕಿತು.
2 : ಆಗ ದಾವೀದನು ತನ್ನ ಇಬ್ಬರು ಹೆಂಡತಿಯರಾದ ಜೆಸ್ರೀಲಿನ ಅಹೀನೋವಮಳನ್ನು ಮತ್ತು ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳನ್ನೂ ಕರೆದುಕೊಂಡು ಅಲ್ಲಿಗೆ ಹೋದನು.
3 : ದಾವೀದನ ಜನರೂ ತಮ್ಮ ತಮ್ಮ ಕುಟುಂಬಗಳನ್ನು ಕರೆದುಕೊಂಡು ಅವನ ಜೊತೆಯಲ್ಲಿ ಹೋಗಿ ಹೆಬ್ರೋನಿಗೆ ಸೇರಿದ ಊರುಗಳಲ್ಲಿ ವಾಸಿಸಿದರು.
4 : ತರುವಾಯ ಯೆಹೂದ್ಯರು ಅಲ್ಲಿಗೆ ಬಂದು ದಾವೀದನನ್ನು ಅಭಿಷೇಕಿಸಿ ತಮ್ಮ ಕುಲಕ್ಕೆ ಅರಸನನ್ನಾಗಿ ಮಾಡಿಕೊಂಡರು.
5 : ಆಗ ಅವನು ಅವರ ಬಳಿಗೆ ದೂತರನ್ನು ಕಳುಹಿಸಿ, “ನೀವು ರಾಜನಿಷ್ಠೆಯಿಂದ ನಿಮ್ಮ ಒಡೆಯ ಸೌಲನ ಶವವನ್ನು ಸಮಾಧಿ ಮಾಡಿದ್ದಕ್ಕಾಗಿ ಸರ್ವೇಶ್ವರನ ಆಶೀರ್ವಾದ ನಿಮಗೆ ಲಭಿಸಲಿ!
6 : ಅವರ ಅಚಲ ಪ್ರೀತಿಸತ್ಯತೆಗಳು ನಿಮ್ಮೊಂದಿಗಿರಲಿ! ಈ ಸತ್ಕಾರ್ಯಕ್ಕಾಗಿ ನಾನೂ ನಿಮಗೆ ಉಪಕಾರ ಮಾಡುವೆನು.
7 : ಯೆಹೂದ್ಯರು ನನ್ನನ್ನು ಅಭಿಷೇಕಿಸಿ ತಮ್ಮ ಅರಸನನ್ನಾಗಿ ಮಾಡಿಕೊಂಡಿದ್ದಾರೆ. ಆದುದರಿಂದ ಸೌಲನು ಸತ್ತು ಹೋಗಿದ್ದರೂ ನೀವು ಶೂರರಾಗಿರಿ; ನಿಮ್ಮ ಕೈಗಳು ಜೋಲುಬೀಳದಿರಲಿ,” ಎಂದು ಹೇಳಿಸಿದನು.
8 : ಸೌಲನ ಸೇನಾಪತಿ ಹಾಗು ನೇರನ ಮಗನಾದ ಅಬ್ನೇರನು ಸೌಲನ ಮಗನಾದ ಈಷ್ಬೋಶೆತನನ್ನು ನದಿಯ ಆಚೆಯಲ್ಲಿರುವ ಮಹನಯಿಮಿಗೆ ಕರೆದೊಯ್ದನು.
9 : ಗಿಲ್ಯಾದ್, ಆಶೇರ್, ಜೆಸ್ರೀಲ್, ಎಫ್ರಯಿಮ್, ಬೆನ್ಯಾವಿೂನ್ ಇವುಗಳ ಜನರ ಮೇಲೆ ಮತ್ತು ಬೇರೆ ಎಲ್ಲ ಇಸ್ರಯೇಲರ ಮೇಲೆ ಅವನನ್ನು ಅರಸನನ್ನಾಗಿ ಮಾಡಿದನು.
10 : (ಸೌಲನ ಮಗನಾದ ಈಷ್ಬೋಶೆತನಿಗೆ ಆಗ ನಾಲ್ವತ್ತು ವರ್ಷ. ಇಸ್ರಯೇಲರನ್ನು ಆತ ಎರಡು ವರ್ಷ ಆಳಿದನು). ಯೆಹೂದ್ಯರು ಮಾತ್ರ ದಾವೀದನನ್ನೇ ಹಿಂಬಾಲಿಸಿದರು.
11 : ದಾವೀದನು ಹೆಬ್ರೋನಿನಲ್ಲಿ ಯೆಹೂದ್ಯರ ಅರಸನಾಗಿ ಏಳು ವರ್ಷ ಆರು ತಿಂಗಳು ರಾಜ್ಯವಾಳಿದನು.
12 : ಒಂದು ದಿನ ನೇರನ ಮಗ ಅಬ್ನೇರನು ಮತ್ತು ಸೌಲನ ಮಗ ಈಷ್ಬೋಶೆತನ ಸೇವಕರು ಮಹನಯಿಮಿನಿಂದ ಹೊರಟು ಗಿಬ್ಯೋನಿಗೆ ಬಂದರು.
13 : ಚೆರೂಯಳ ಮಗ ಯೋವಾಬನು ಮತ್ತು ದಾವೀದನ ಸೇವಕರು ಹೊರಟು ಅವರನ್ನು ಗಿಬ್ಯೋನಿನ ಕೆರೆಯ ಹತ್ತಿರ ಸಂಧಿಸಿದರು. ಇವರು ಕೆರೆಯ ಈಚೆ, ಅವರು ಕೆರೆಯ ಆಚೆ ಕುಳಿತುಕೊಂಡರು.
14 : ಆಗ ಅಬ್ನೇರನು ಯೋವಾಬನಿಗೆ, “ಎರಡು ಕಡೆಯ ತರುಣರು ಎದ್ದು ಬಂದು ನಮ್ಮ ಮುಂದೆ ದ್ವಂದ್ವಯುದ್ಧ ಮಾಡಲಿ,” ಎಂದು ಹೇಳಿದನು. ಯೋವಾಬನು ಅದಕ್ಕೆ ಒಪ್ಪಿಕೊಂಡನು.
15 : ಆಗ ಸೌಲನ ಮಗ ಈಷ್ಬೋಶೆತನ ಕಡೆಯವರಾದ ಹನ್ನೆರಡು ಮಂದಿ ಬೆನ್ಯಾವಿೂನ್ಯರು, ಮತ್ತು ದಾವೀದನ ಸೇವಕರಲ್ಲಿ ಹನ್ನೆರಡು ಮಂದಿ ಸಮಸಂಖ್ಯೆಯಾಗಿ ಹೊರಟು ದ್ವಂದ್ವಯುದ್ಧ ಮಾಡಿದರು.
16 : ಅವರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಎದುರಾಳಿಯ ತಲೆ ಹಿಡಿದು ಕತ್ತಿಯಿಂದ ಪಕ್ಕೆಯನ್ನು ತಿವಿದುದರಿಂದ ಎಲ್ಲರೂ ಸತ್ತು ಬಿದ್ದರು. ಆದುದರಿಂದ ಗಿಬ್ಯೋನಿನಲ್ಲಿರುವ ಆ ಸ್ಥಳಕ್ಕೆ ‘ಹದಗತ್ತಿ ಕ್ಷೇತ್ರ’ ಎಂದು ಹೆಸರಾಯಿತು.
17 : ಅನಂತರ ಆ ದಿವಸ ಘೋರಯುದ್ದ ನಡೆಯಿತು. ಅಬ್ನೇರನನ್ನೂ ಇಸ್ರಯೇಲರನ್ನೂ ದಾವೀದನ ಸೇವಕರು ಸೋಲಿಸಿದರು.
18 : ಚೆರೂಯಳ ಮೂರು ಮಂದಿ ಮಕ್ಕಳಾದ ಯೋವಾಬ್, ಅಬೀಷ್ಯೆ, ಅಸಾಹೇಲ್ ಎಂಬುವರು ಅಲ್ಲಿಗೆ ಬಂದಿದ್ದರು. ಅಸಾಹೇಲನು ಅಡವಿಯ ಜಿಂಕೆಯಂತೆ ಚುರುಕು ಕಾಲಿನವನಾಗಿದ್ದನು.
19 : ಇವನು ಎಡಕ್ಕಾದರೂ ಬಲಕ್ಕಾದರೂ ತಿರುಗದೆ ಅಬ್ನೇರನನ್ನು ಹಿಂದಟ್ಟಿದನು.
20 : ಅಬ್ನೇರನು ಹಿಂದಿರುಗಿ ನೋಡಿ, “ನೀನು ಅಸಾಹೇಲನೋ?” ಎಂದು ಕೇಳಿದ್ದಕ್ಕೆ ಅವನು, “ಹೌದು” ಎಂದು ಉತ್ತರಕೊಟ್ಟನು.
21 : ಆಗ ಅಬ್ನೇರನು, “ನನ್ನನ್ನು ಬಿಟ್ಟು ಎಡಕ್ಕಾಗಲಿ ಬಲಕ್ಕಾಗಲಿ ತಿರುಗಿಕೊಂಡು ಯುವಕರಲ್ಲೊಬ್ಬನನ್ನು ಹಿಡಿದು, ಸುಲಿದುಕೋ,” ಎಂದು ಹೇಳಿದನು. ಆದರೆ ಅಸಾಹೇಲನು ಒಪ್ಪಲಿಲ್ಲ.
22 : ಮತ್ತೊಮ್ಮೆ ಅಬ್ನೇರನು, “ನನ್ನನ್ನು ಬಿಟ್ಟು ಹೋಗು; ನಿನ್ನನ್ನು ಕೊಲ್ಲಲು ನನ್ನನ್ನೇಕೆ ಒತ್ತಾಯಿಸುವೆ? ಹಾಗೆ ಕೊಂದರೆ ನಿನ್ನ ಅಣ್ಣನಾದ ಯೋವಾಬನಿಗೆ ಹೇಗೆ ತಾನೆ ಮುಖ ತೋರಿಸಲಿ,” ಎಂದನು.
23 : ಆದರೂ ಅಸಾಹೇಲನು ಬಿಟ್ಟು ಹೋಗುವುದಕ್ಕೆ ಒಪ್ಪಲಿಲ್ಲ. ಆದಕಾರಣ ಅಬ್ನೇರನು ಭರ್ಜಿಯನ್ನು ಹಿಮ್ಮುಖವಾಗಿ ಎಸೆದು ಅವನ ಹೊಟ್ಟೆಯನ್ನು ತಿವಿದನು. ಆ ಭರ್ಜಿ ಅವನ ಬೆನ್ನಿನಿಂದ ಹಾಯ್ದು ಬಂದಿತು. ಅವನು ಕೂಡಲೇ ಅಲ್ಲೇ ಬಿದ್ದು ಸತ್ತನು. ಅಸಾಹೇಲನು ಸತ್ತು ಬಿದ್ದ ಸ್ಥಳಕ್ಕೆ ಬಂದವರೆಲ್ಲರೂ ಅಲ್ಲೇ ನಿಂತರು.
24 : ಆದರೆ ಯೋವಾಬನೂ ಅಭೀಷೈಯೂ ಅಬ್ನೇರನನ್ನು ಹಿಂದಟ್ಟಿದರು. ಹೀಗೆ ಅವರು ‘ಅಮ್ಮಾ’ ಎಂಬ ಗುಡ್ಡಕ್ಕೆ ಬರುವಷ್ಟರಲ್ಲಿ ಸೂರ್ಯಾಸ್ತಮವಾಯಿತು. ಆ ಗುಡ್ಡ ಗಿಬ್ಯೋನ್ ಮರುಭೂಮಿ ಮಾರ್ಗದ ಬಳಿಯಲ್ಲಿರುವ ಗೀಯದ ಎದುರಿನಲ್ಲಿದೆ.
25 : ಬೆನ್ಯಾವಿೂನ್ಯರು ಒಂದೇ ಗುಂಪು ಆಗಿ ಕೂಡಿಕೊಂಡು ಅಬ್ನೇರನ ಬಳಿಗೆ ಬಂದು ಗುಡ್ಡದ ಮೇಲೆ ನಿಂತರು.
26 : ಆಗ ಅಬ್ನೇರನು ಯೋವಾಬನನ್ನು ನೋಡಿ, “ಕತ್ತಿ ಯಾವಾಗಲೂ ತಿನ್ನುತ್ತಲೇ ಇರಬೇಕೇ? ಹಗೆತನವೇ ಇದರ ಅಂತ್ಯ ಫಲವೆಂದು ನಿನಗೆ ಗೊತ್ತಾಗಲಿಲ್ಲವೇ? ಸಹೋದರರನ್ನು ಹಿಂದಟ್ಟುವುದು ಸಾಕೆಂದು ನಿನ್ನ ಜನರಿಗೆ ಯಾವಾಗ ಆಜ್ಞಾಪಿಸುವೆ?” ಎಂದನು.
27 : ಅದಕ್ಕೆ ಯೋವಾಬನು, “ದೇವರ ಜೀವದಾಣೆ, ಈಗ ನೀನು ಈ ಮಾತುಗಳನ್ನು ಹೇಳದಿದ್ದರೆ, ಜನರು ನಾಳೆ ಬೆಳಗಾಗುವವರೆಗೆ ತಮ್ಮ ದೇಶಬಾಂಧವರನ್ನು ಹಿಂದಟ್ಟದೆ ಬಿಡುತ್ತಿರಲಿಲ್ಲ,” ಎಂದು ಉತ್ತರಕೊಟ್ಟನು.
28 : ಕೂಡಲೆ ತುತೂರಿಯನ್ನು ಊದಿಸಿದನು. ಆಗ ಜನರು ಇಸ್ರಯೇಲರನ್ನು ಹಿಂದಟ್ಟದೆ ಬಿಟ್ಟರು. ಯುದ್ಧವು ನಿಂತುಹೋಯಿತು.
29 : ಅಬ್ನೇರನೂ ಅವನ ಜನರೂ ಅರಾಬಾ ಕಣಿವೆಯಲ್ಲಿ ರಾತ್ರಿಯೆಲ್ಲಾ ಪ್ರಯಾಣ ಮಾಡಿ ಜೋರ್ಡನ್ ನದಿದಾಟಿ ಬಿಥ್ರೋನ್ ಕಣಿವೆಯನ್ನು ಹಾಯ್ದು ಮಹನಯಿಮಿಗೆ ಸೇರಿದರು.
30 : ಯೋವಾಬನು ಅಬ್ನೇರನನ್ನು ಬೆನ್ನಟ್ಟದೆ ಹಿಂದೆ ತಿರುಗಿ ಬಂದು, ಜನರನ್ನು ಕೂಡಿಸಿ ಲೆಕ್ಕಿಸಿದಾಗ ಅವರಲ್ಲಿ ದಾವೀದನ ಹತ್ತೊಂಬತ್ತು ಮಂದಿ ಯೋಧರು ಮತ್ತು ಅಸಾಹೇಲನು ಇರಲಿಲ್ಲ.
31 : ಆದರೆ ದಾವೀದನ ಯೋಧರು ಅಬ್ನೇರನ ಜನರಾದ ಬೆನ್ಯಾವಿೂನ್ಯರಲ್ಲಿ ಮುನ್ನೂರರ್ವತ್ತು ಮಂದಿಯನ್ನು ಕೊಂದಿದ್ದರು.
32 : ಅವರು ಅಸಾಹೇಲನ ಶವವನ್ನು ತಂದು ಅದನ್ನು ಬೆತ್ಲೆಹೇಮಿನಲ್ಲಿರುವ ಅವನ ತಂದೆಯ ಸ್ಮಶಾನ ಭೂಮಿಯಲ್ಲಿ ಸಮಾಧಿ ಮಾಡಿದರು. ಅನಂತರ ಯೋವಾಬನೂ ಅವನ ಜನರೂ ರಾತ್ರಿಯೆಲ್ಲಾ ಪ್ರಯಾಣಮಾಡಿ ಹೆಬ್ರೋನಿಗೆ ಬಂದರು. ಆಗ ಸೂರ್ಯೋದಯವಾಗಿತ್ತು.

· © 2017 kannadacatholicbible.org Privacy Policy