1 : ಅರಸನು ಅಬ್ಷಾಲೋಮನಿಗಾಗಿ ಅಳುತ್ತಾ ಗೋಳಾಡುತ್ತಾ ಇದ್ದಾನೆಂಬ ಸಮಾಚಾರ ಯೋವಾಬನಿಗೆ ಮುಟ್ಟಿತು.
2 : ಅರಸನು ಮಗನಿಗಾಗಿ ಪ್ರಲಾಪಿಸುತ್ತಿದ್ದಾನೆಂಬುದು ಎಲ್ಲ ಜನರಿಗೂ ಗೊತ್ತಾಗಿ ಅವರ ಜಯಘೋಷ ಗೋಳಾಟವಾಗಿ ಮಾರ್ಪಟ್ಟಿತು.
3 : ಜನರು ಆ ದಿನದ ಯುದ್ಧದಲ್ಲಿ ಸೋತು ಓಡಿಬಂದಿರುವವರೋ ಎಂಬಂತೆ, ನಾಚಿಕೆಯಿಂದ ಕಳ್ಳತನವಾಗಿ ಊರನ್ನು ಹೊಕ್ಕರು.
4 : ಅರಸನು ತನ್ನ ಮುಖ ಮುಚ್ಚಿಕೊಂಡು, “ಮಗ ಅಬ್ಷಾಲೋಮನೇ, ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಬಹಳವಾಗಿ ಗೋಳಾಡಿದನು.
5 : ಯೋವಾಬನು ಅರಸನ ಬಳಿಗೆ ಹೋಗಿ, “ನಿಮ್ಮನ್ನೂ ನಿಮ್ಮ ಗಂಡುಹೆಣ್ಣು ಮಕ್ಕಳನ್ನೂ ಹೆಂಡತಿಯರನ್ನೂ ಉಪಪತ್ನಿಯರನ್ನೂ ರಕ್ಷಿಸಿದಂಥ ನಿಮ್ಮ ಸೇವಕರನ್ನು ಈ ದಿನ ಅಪಮಾನ ಪಡಿಸಿದಿರಿ.
6 : ನೀವು ಶತ್ರುಗಳನ್ನು ಪ್ರೀತಿಸುವವರೂ ಮಿತ್ರರನ್ನು ದ್ವೇಷಿಸುವವರೂ ಆಗಿದ್ದೀರಿ; ನೀವು ನಿಮ್ಮ ಸೇನಾಧಿಪತಿಗಳನ್ನೂ ಸೈನಿಕರನ್ನೂ ಲಕ್ಷಿಸುವವರಲ್ಲವೆಂದು ಈಗ ತೋರಿಸಿಕೊಟ್ಟಿರಿ. ಈ ದಿನ ನಾವೆಲ್ಲರೂ ಸತ್ತು ಅಬ್ಷಾಲೋಮನೊಬ್ಬನೇ ಉಳಿದಿದ್ದರೆ ನಿಮಗೆ ಸಂತೋಷವಾಗುತ್ತಿತ್ತೆಂದು ಇದರಿಂದ ತಿಳಿಯಬೇಕಷ್ಟೆ!
7 : ಈಗ ಎದ್ದು ಹೋಗಿ ನಿಮ್ಮ ಸೇವಕರನ್ನು ದಯಾಭಾವದಿಂದ ಮಾತಾಡಿಸಿ. ನೀವು ಹೀಗೆ ಮಾಡದಿದ್ದರೆ ಸರ್ವೇಶ್ವರನಾಣೆ, ಸಾಯಂಕಾಲವಾಗುವಷ್ಟರಲ್ಲಿ ಎಲ್ಲರೂ ನಿಮ್ಮನ್ನು ಬಿಟ್ಟುಹೋಗುವರು. ಯೌವನ ಕಾಲದಿಂದ ಈವರೆಗೆ ನಿಮಗೆ ಬಂದೊದಗಿದ ಕೇಡುಗಳಲ್ಲಿ ಇದು ದೊಡ್ಡದಾಗುವುದು,” ಎಂದು ಹೇಳಿದನು.
8 : ಆಗ ಅರಸನು ಎದ್ದು ಬಂದು ಊರುಬಾಗಿಲಲ್ಲಿ ಕುಳಿತುಕೊಂಡನು. “ಇಗೋ, ಅರಸರು ಬಂದು ಊರುಬಾಗಿಲಲ್ಲಿ ಕುಳಿತುಕೊಂಡಿದ್ದಾರೆ,” ಎಂಬ ಸುದ್ದಿ ಪ್ರಜೆಗಳಿಗೆ ಮುಟ್ಟಿದಾಗ ಅವರೆಲ್ಲರೂ ಬಂದು ಅವನ ಸುತ್ತಲೂ ನೆರೆದರು.
9 : ಇಸ್ರಯೇಲರೆಲ್ಲರು ತಮ್ಮ ತಮ್ಮ ನಿವಾಸಗಳಿಗೆ ಓಡಿಹೋಗಿದ್ದರು. ಇಸ್ರಯೇಲ್ ಕುಲಗಳ ಜನರೆಲ್ಲರು, “ಅರಸ ದಾವೀದನು ನಮ್ಮನ್ನು ಫಿಲಿಷ್ಟಿಯರ ಕೈಯಿಂದಲೂ ಬೇರೆ ಎಲ್ಲಾ ವೈರಿಗಳ ಕೈಯಿಂದಲೂ ತಪ್ಪಿಸಿ ಕಾಪಾಡಿದ. ಆದರೆ ಅಬ್ಷಾಲೋಮನ ಕಾರಣ ನಾಡನ್ನೇ ಬಿಟ್ಟು ಓಡಿಹೋಗುವಂತೆ ಮಾಡಿದ.
10 : ಆದರೆ ನಾವು ಅಭಿಷೇಕಿಸಿದ ಅಬ್ಷಾಲೋಮನು ಯುದ್ಧದಲ್ಲಿ ಸತ್ತ. ಹೀಗಿರುವಲ್ಲಿ ಅರಸ ದಾವೀದನನ್ನು ಮರಳಿ ಕರೆದುಕೊಂಡು ಬರಬಾರದೇಕೆ? ಸುಮ್ಮನೆ ಕುಳಿತಿರುವುದೇಕೆ?” ಎಂದು ಮಾತಾಡಿಕೊಂಡರು.
11 : ಇಸ್ರಯೇಲರು ಹೀಗೆ ಮಾತಾಡಿಕೊಂಡ ಸಮಾಚಾರ ದಾವೀದನಿಗೆ ಮುಟ್ಟಿತು. ಅವನು ಯಾಜಕರಾದ ಚಾದೋಕ್ ಹಾಗು ಎಬ್ಯಾತಾರರಿಗೆ, “ನೀವು ನನ್ನ ಹೆಸರಿನಲ್ಲಿ ಯೆಹೂದಕುಲದ ಹಿರಿಯರಿಗೆ, ‘ಅರಸನಾದ ನನ್ನನ್ನು ಮತ್ತೆ ಅರಮನೆಗೆ ಕರೆದುಕೊಂಡು ಹೋಗುವುದರಲ್ಲಿ ನೀವೇಕೆ ಹಿಂದುಳಿದಿರುವಿರಿ?
12 : ನೀವು ನನ್ನ ರಕ್ತಸಂಬಂಧಿಗಳಾದ ಸಹೋದರರು; ಆದುದರಿಂದ ನನ್ನನ್ನು ಕರೆದುಕೊಂಡು ಹೋಗುವುದರಲ್ಲಿ ನೀವು ಹಿಂದುಳಿದಿರುವುದು ಸರಿಯಲ್ಲ’
13 : ಎಂಬುದಾಗಿ ತಿಳಿಸಿರಿ. ಅದಲ್ಲದೆ ಅಮಾಸನಿಗೆ, ‘ನೀನೂ ನನ್ನ ರಕ್ತಸಂಬಂಧಿಯಾಗಿದ್ದಿ; ನಾನು ಯೋವಾಬನ ಬದಲಿಗೆ ನಿನ್ನನ್ನೇ ನಿತ್ಯಸೇನಾಪತಿಯನ್ನಾಗಿ ಮಾಡುತ್ತೇನೆ. ಹಾಗೆ ಮಾಡದಿದ್ದರೆ ಸರ್ವೇಶ್ವರ ನನಗೆ ಮಾಡಬೇಕಾದದ್ದನ್ನು ಮಾಡಲಿ,’ ಎಂಬುದಾಗಿಯೂ ತಿಳಿಸಿರಿ,” ಎಂದು ಹೇಳಿ ಕಳುಹಿಸಿದನು.
14 : ಆಗ ಯೆಹೂದ್ಯರೆಲ್ಲರೂ ಏಕ ಮನಸ್ಸಿನಿಂದ ಅರಸನ ಕಡೆಗೆ ತಿರುಗಿಕೊಂಡು ಅವನಿಗೆ, “ನೀವು ನಿಮ್ಮ ಎಲ್ಲಾ ಸೇವಕರೊಡನೆ ಮರಳಿ ಬನ್ನಿ,” ಎಂದು ಹೇಳಿಕಳುಹಿಸಿದರು.
15 : ಅರಸನು ಸವದೇಶಕ್ಕೆ ಹೋಗಬೇಕೆಂದು ಹೊರಟು ಜೋರ್ಡನಿಗೆ ಬಂದಾಗ ಯೆಹೂದಕುಲದವರು ಅವನನ್ನು ಸ್ವಾಗತಿಸುವುದಕ್ಕೂ ಜೋರ್ಡನ್ ನದಿಯನ್ನು ದಾಟಿಸುವುದಕ್ಕೂ ಗಿಲ್ಗಾಲಿಗೆ ಬಂದರು.
16 : ಬೆನ್ಯಾಮೀನ್ ಕುಲದ ಗೇರನ ಮಗನೂ ಬಹುರೀಮಿನವನೂ ಆದ ಶಿಮ್ಮಿಯು ತವಕದಿಂದ ಬಂದು ಅರಸನಾದ ದಾವೀದನನ್ನು ಸ್ವಾಗತಿಸುವುದಕ್ಕೆ ಯೆಹೂದ ಕುಲದವರನ್ನು ಕೂಡಿಕೊಂಡನು.
17 : ಅವನ ಜೊತೆಯಲ್ಲಿ ಸಾವಿರ ಮಂದಿ ಬೆನ್ಯಾಮೀನ್ಯರಿದ್ದರು. ಇದಲ್ಲದೆ ಸೌಲನ ಮನೆಯ ಸೇವಕನಾದ ಚೀಬನು ತನ್ನ ಹದಿನೈದು ಮಂದಿ ಮಕ್ಕಳನ್ನೂ ಇಪ್ಪತ್ತು ಮಂದಿ ಸೇವಕರನ್ನೂ ಕರೆದುಕೊಂಡು ಬಂದನು;
18 : ಅರಸನ ಮುಂದೆಯೇ ಪೂರ್ಣಾಸಕ್ತಿಯಿಂದ ಜೋರ್ಡನ್ ನದಿಯಲ್ಲಿಳಿದು ಅರಸನ ಮನೆಯವರನ್ನು ದಾಟಿಸುವುದಕ್ಕೂ ಅವರಿಗೆ ಬೇಕಾದ ಸಹಾಯಮಾಡುವುದಕ್ಕೂ ದಡದಿಂದ ದಡಕ್ಕೆ ಹೋಗುತ್ತಾ ಬರುತ್ತಾ ಇದ್ದನು. ಅರಸನು ಜೋರ್ಡನ್ ನದಿಯನ್ನು ದಾಟಿಬಂದ ಕೂಡಲೆ ಗೇರನ ಮಗನಾದ ಶಿಮ್ಮಿಯು ಸಾಷ್ಟಾಂಗ ನಮಸ್ಕಾರ ಮಾಡಿದನು.
19 : ಒಡೆಯರು ನನ್ನನ್ನು ಅಪರಾಧಿಯೆಂದೆಣಿಸದಿರಲಿ; ನನ್ನ ಒಡೆಯರು ಜೆರುಸಲೇಮನ್ನು ಬಿಟ್ಟುಹೋಗುವಾಗ ನಾನು ಮೂರ್ಖತನದಿಂದ ಮಾಡಿದ್ದನ್ನೆಲ್ಲಾ ಅವರು ನೆನಸದಿರಲಿ, ಲಕ್ಷಿಸದಿರಲಿ.
20 : ಒಡೆಯರೇ, ತಮ್ಮ ಸೇವಕನಾದ ನಾನು ಪಾಪಮಾಡಿದೆನೆಂದು ಒಪ್ಪಿಕೊಳ್ಳುತ್ತೇನೆ. ಆದುದರಿಂದಲೇ ನಾನು ಈ ದಿನ ಅರಸನನ್ನು ಸ್ವಾಗತಿಸುವುದಕ್ಕೆ ಎಲ್ಲಾ ಜೋಸೇಫ್ಯರಲ್ಲಿ ಮೊದಲಿಗನಾಗಿ ಬಂದಿದ್ದೇನೆ,” ಎಂದು ಹೇಳಿದನು.
21 : ಚೆರೂಯಳ ಮಗ ಅಬೀಷೈಯು, “ಸರ್ವೇಶ್ವರನ ಅಭಿಷಿಕ್ತನನ್ನು ಶಪಿಸಿದ್ದಕ್ಕಾಗಿ ಶಿಮ್ಮಿಗೆ ಮರಣದಂಡನೆಯಾಗಬೇಕಲ್ಲವೇ?” ಎಂದನು.
22 : ಅದಕ್ಕೆ ದಾವೀದನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ನೀವು ಈ ದಿನ ನನ್ನನ್ನು ಆ ಕೃತ್ಯಕ್ಕೆ ಪ್ರೇರಿಸುವವರಾಗಿದ್ದೀರಿ. ಇಂಥ ದಿನದಲ್ಲಿ ಇಸ್ರಯೇಲರಲ್ಲಿ ಒಬ್ಬನಿಗೆ ಮರಣದಂಡನೆ ಆಗುವುದು ಸರಿಯೇ? ನಾನು ಇಸ್ರಯೇಲರ ಅರಸನೆಂಬುವುದು ಈ ದಿನ ಸ್ಪಷ್ಟವಾಗಿ ಗೊತ್ತಾಯಿತು,” ಎಂದು ನುಡಿದನು.
23 : ಅನಂತರ ಅರಸನು ಶಿಮ್ಮಿಗೆ, “ನಿನಗೆ ಮರಣಶಿಕ್ಷೆಯಾಗುವುದಿಲ್ಲ,” ಎಂದು ಪ್ರಮಾಣ ಮಾಡಿ ಹೇಳಿದನು.
24 : ತರುವಾಯ ಸೌಲನ ಮೊಮ್ಮಗನಾದ ಮೆಫೀಬೋಶೆತನು ಅರಸನ ದರ್ಶನಕ್ಕೆ ಬಂದನು. ಅರಸನು ಜೆರುಸಲೇಮನ್ನು ಬಿಟ್ಟಂದಿನಿಂದ ಸುರಕ್ಷಿತನಾಗಿ ಹಿಂದಿರುಗುವವರೆಗೂ ಇವನು ತನ್ನ ಪಾದಗಳನ್ನು ತೊಳೆದುಕೊಂಡಿರಲಿಲ್ಲ; ಮೀಸೆಯನ್ನು ಕತ್ತರಿಸಿರಲಿಲ್ಲ; ಬಟ್ಟೆಗಳನ್ನು ಒಗೆಸಿಕೊಂಡಿರಲಿಲ್ಲ.
25 : ಇವನು ಜೆರುಸಲೇಮಿನಿಂದ ಅರಸನ ದರ್ಶನಕ್ಕೆ ಬಂದಾಗ ಅರಸನು, “ಮೆಫೀಬೋಶೆತನೇ, ನೀನು ನನ್ನ ಸಂಗಡ ಏಕೆ ಬರಲಿಲ್ಲ?” ಎಂದು ಕೇಳಿದನು.
26 : ಅವನು, “ಒಡೆಯರೇ, ಅರಸರೇ, ನನ್ನ ಸೇವಕ ನನ್ನನ್ನು ವಂಚಿಸಿದ. ಕುಂಟನಾದ ನಾನು ಅವನಿಗೆ, ‘ಕತ್ತೆಗೆ ತಡಿಹಾಕು, ನಾನು ಕುಳಿತುಕೊಂಡು ಅರಸರ ಜೊತೆಯಲ್ಲೇ ಹೋಗಬೇಕು’ ಎಂದು ಆಜ್ಞಾಪಿಸಿದೆ.
27 : ಅವನು ಹಾಗೆ ಮಾಡದೆ ನನ್ನ ಒಡೆಯರಾದ ಅರಸರ ಬಳಿಗೆ ಬಂದು ನನ್ನ ವಿಷಯದಲ್ಲಿ ಚಾಡಿಹೇಳಿದ. ಅರಸರು ದೇವದೂತನ ಹಾಗಿರುತ್ತೀರಿ. ತಮಗೆ ಸರಿಕಂಡದ್ದನ್ನು ಮಾಡಿ.
28 : ನನ್ನ ತಂದೆಯ ಮನೆಯವರೆಲ್ಲರೂ ಅರಸರಾದ ನನ್ನ ಒಡೆಯರ ದೃಷ್ಟಿಯಲ್ಲಿ ಮರಣಕ್ಕೆ ಪಾತ್ರರಾಗಿದ್ದರು. ಆದರೂ ತಮ್ಮ ಸೇವಕನಾದ ನನ್ನನ್ನು ಭೋಜನಕ್ಕೆ ತಮ್ಮ ಪಂಕ್ತಿಯಲ್ಲಿ ಕುಳ್ಳಿರಿಸಿಕೊಂಡಿರಿ. ಅರಸರಿಗೆ ಹೆಚ್ಚಾಗಿ ಮೊರೆ ಇಡುವುದಕ್ಕೆ ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.
29 : ಆಗ ಅರಸನು, “ಹೆಚ್ಚು ಮಾತು ಏಕೆ? ಹೊಲವನ್ನು ನೀನು ಹಾಗು ಚೀಬ ಭಾಗಮಾಡಿಕೊಳ್ಳಬೇಕು. ಇದೇ ನನ್ನ ತೀರ್ಪು,” ಎಂದು ಹೇಳಿದನು.
30 : ಅದಕ್ಕೆ ಮೆಫೀಬೋಶೆತನು, “ಚೀಬನು ಎಲ್ಲವನ್ನು ತಾನೇ ತೆಗೆದುಕೊಂಡರೂ ತೆಗೆದುಕೊಳ್ಳಲಿ; ನನ್ನ ಒಡೆಯರಾದ ಅರಸರು ತಮ್ಮ ಮನೆಗೆ ಸುರಕ್ಷಿತವಾಗಿ ಬಂದದ್ದೇ ಸಾಕು,” ಎಂದನು.
31 : ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವನು ಅರಸನನ್ನು ಬೀಳ್ಕೊಡುವುದಕ್ಕಾಗಿ ರೋಗೆಲೀಮಿನಿಂದ ಜೋರ್ಡನಿಗೆ ಬಂದಿದ್ದನು.
32 : ಇವನು ಎಂಬತ್ತು ವರ್ಷದ ಮುದುಕ. ಇವನು ಬಹು ಶ್ರೀಮಂತನಾಗಿದ್ದುದರಿಂದ ದಾವೀದನು ಮಹನಯಿಮಿನಲ್ಲಿದ್ದ ಅವಧಿಯಲ್ಲಿ ಅವನ ಜೀವನಕ್ಕೆ ಬೇಕಾದುದನ್ನು ಇವನೇ ಒದಗಿಸಿಕೊಡುತ್ತಿದ್ದನು.
33 : ಅರಸನು ಆ ಬರ್ಜಿಲ್ಲೈಗೆ, “ನನ್ನ ಜೊತೆಯಲ್ಲಿ ನದಿಯ ಆಚೆಗೆ ಬಾ; ನಾನು ಜೆರುಸಲೇಮಿನಲ್ಲಿ ನಿನ್ನನ್ನು ಹತ್ತಿರವೇ ಇಟ್ಟುಕೊಂಡು ಸಾಕುತ್ತೇನೆ,” ಎಂದನು.
34 : ಅದಕ್ಕೆ ಬರ್ಜಿಲ್ಲೈಯು, “ಇಷ್ಟು ವಯಸ್ಸು ಕಳೆದವನಾದ ನಾನು ಅರಸರ ಸಂಗಡ ಜೆರುಸಲೇಮಿಗೆ ಬರುವುದು ಹೇಗೆ?
35 : ಈಗ ನಾನು ಎಂಬತ್ತು ವರ್ಷದವನು. ಒಳ್ಳೆಯದು ಕೆಟ್ಟದು ಇವುಗಳ ಭೇದ ನನಗಿನ್ನು ತಿಳಿಯುವುದೇ? ನಿಮ್ಮ ಸೇವಕನಾದ ನನಗೆ ಇನ್ನು ಅನ್ನಪಾನಗಳ ರುಚಿ ಗೊತ್ತಾಗುವುದೇ? ಗಾಯನಮಾಡುವ ಸ್ತ್ರೀ ಪುರುಷರ ಸ್ವರಗಳು ನನಗೆ ಕೇಳಿಸುತ್ತವೆಯೇ? ನಾನು ನನ್ನ ಒಡೆಯರಾದ ಅರಸರಿಗೆ ಸುಮ್ಮನೆ ಏಕೆ ಹೊರೆಯಾಗಿರಬೇಕು?
36 : ನದಿದಾಟಿ ಸ್ವಲ್ಪ ದೂರಕ್ಕೆ ನಿಮ್ಮ ಸಂಗಡ ಬರುತ್ತೇನೆ. ಅರಸರಾದ ನೀವು ನನಗೇಕೆ ಇಂಥ ಉಪಕಾರಮಾಡಬೇಕು?
37 : ದಯವಿಟ್ಟು ನಿಮ್ಮ ಸೇವಕನಾದ ನನಗೆ ಹಿಂದಿರುಗಿ ಹೋಗುವುದಕ್ಕೆ ಅಪ್ಪಣೆಯಾಗಲಿ; ನಾನು ನನ್ನ ತಂದೆತಾಯಿಗಳ ಸಮಾಧಿಯಿರುವ ಸ್ವಂತ ಊರಿಗೆ ಹೋಗಿ ಅಲ್ಲೇ ಸಾಯುವೆನು. ಇಗೋ, ಇಲ್ಲಿ ನಿಮ್ಮ ಸೇವಕನಾದ ಕಿಮ್ಹಾಮನಿರುತ್ತಾನೆ. ನನ್ನ ಒಡೆಯರಾದ ಅರಸರು ಇವನನ್ನು ಕರೆದುಕೊಂಡು ಹೋಗಿ ತಮ್ಮ ಇಷ್ಟವಿದ್ದಂತೆ ಇವನಿಗೆ ದಯೆತೋರಿಸಿ,” ಎಂದನು.
38 : ಅದಕ್ಕೆ ಅರಸನು, “ಕಿಮ್ಹಾಮನು ನನ್ನ ಸಂಗಡ ಬರಲಿ; ಅವನಿಗೆ ನಿನ್ನ ಇಷ್ಟದಂತೆ ದಯೆತೋರುತ್ತೇನೆ. ಇನ್ನೂ ಏನೇನು ಮಾಡಬೇಕೆನ್ನುತ್ತಿಯೋ ಅದೆಲ್ಲವನ್ನು ಮಾಡುತ್ತೇನೆ,” ಎಂದು ಹೇಳಿದನು.
39 : ಜನರೆಲ್ಲರು ನದಿದಾಟಿದರು. ಅರಸನು ದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಮರಳಿದನು.
40 : ಅರಸನು ಕಿಮ್ಹಾಮನೊಡನೆ ಗಿಲ್ಗಾಲಿಗೆ ತೆರಳಿದನು. ಎಲ್ಲ ಯೆಹೂದ್ಯರು ಹಾಗು ಇಸ್ರಯೇಲರಲ್ಲಿ ಅರ್ಧ ಜನರು ಅರಸನನ್ನು ಕರೆದುಕೊಂಡು ಹೋದರು.
41 : ಆಗ ಇಸ್ರಯೇಲರೆಲ್ಲರು ಅರಸನ ಮುಂದೆ ಬಂದು, “ನಮ್ಮ ಸಹೋದರರಾದ ಯೆಹೂದ್ಯರು ನಮಗೆ ತಿಳಿಸದೆ ತಾವೇ ಹೋಗಿ ಅರಸರನ್ನೂ ಅವರ ಮನೆಯವರನ್ನೂ ಅವರೊಡನೆ ಇದ್ದ ಜನರನ್ನೂ ಜೋರ್ಡನ್ ನದಿದಾಟಿಸಿ ಕರೆದುಕೊಂಡು ಬಂದದ್ದೇಕೆ?” ಎಂದು ಕೇಳಿದರು
42 : ಅದಕ್ಕೆ ಯೆಹೂದ್ಯರೆಲ್ಲರು, “ಅರಸರು ನಮಗೆ ಸಮೀಪಬಂಧು; ನೀವು ಅದಕ್ಕಾಗಿ ಸಿಟ್ಟುಗೊಳ್ಳುವುದೇಕೆ? ನಾವೇನು ಅರಸರ ಖರ್ಚಿನಿಂದ ಊಟಮಾಡಿದೆವೋ? ಅವರು ನಮಗೆ ಏನಾದರೂ ಕೊಟ್ಟಿರುವರೋ?” ಎಂದು ಉತ್ತರ ಕೊಟ್ಟರು.
43 : ಆಗ ಇಸ್ರಯೇಲರು ಯೆಹೂದ್ಯರಿಗೆ, “ಅರಸರಲ್ಲಿ ನಮಗೆ ಹತ್ತುಪಾಲು ಉಂಟಲ್ಲವೆ? ದಾವೀದನ ವಿಷಯದಲ್ಲೂ ನಮಗೆ ಹೆಚ್ಚು ಉಂಟು. ಹೀಗಿರುವುದರಿಂದ ನೀವು ನಮ್ಮನ್ನು ತಿರಸ್ಕರಿಸಿದ್ದೇಕೆ? ನಮ್ಮ ಅರಸರನ್ನು ಕರೆದುಕೊಂಡು ಬರುವ ವಿಷಯದಲ್ಲಿ ಮೊದಲು ಮಾತಾಡಿದವರು ನಾವಲ್ಲವೇ?”, ಎಂದರು. ಇಸ್ರಯೇಲರ ವಾದಕ್ಕಿಂತ ಯೆಹೂದ್ಯರ ವಾದ ಉಗ್ರವಾಗಿತ್ತು.