1 :
ತರುವಾಯ ಅರಸನಾದ ದಾವೀದನು ತನ್ನ ಹತ್ತಿರ ಇದ್ದ ಸೈನಿಕರನ್ನು ಎಣಿಸಿ ಅವರ ಮೇಲೆ ಸಹಸ್ರಾಧಿಪತಿಗಳನ್ನೂ ಶತಾಧಿಪತಿಗಳನ್ನೂ ನೇಮಿಸಿದನು.
2 : ಅವನು ಸೈನ್ಯವನ್ನು ಮೂರು ಪಂಗಡಗಳಾಗಿ ವಿಭಾಗಿಸಿ ಒಂದು ಪಂಗಡವನ್ನು ಯೋವಾಬನಿಗೂ, ಇನ್ನೊಂದನ್ನು ಚೆರೂಯಳ ಮಗನೂ ಯೋವಾಬನ ತಮ್ಮನೂ ಆದ ಅಬೀಷೈಗೂ, ಮತ್ತೊಂದನ್ನು ಗಿತ್ತೀಯನಾದ ಇತೈಗೂ ಒಪ್ಪಿಸಿ, “ನಾನೂ ನಿಮ್ಮ ಸಂಗಡ ಬರುತ್ತೇನೆ,” ಎಂದು ಹೇಳಿದನು.
3 : ಆಗ ಸೈನಿಕರು, “ನೀವು ಬರಬಾರದು; ನಾವು ಸೋತು ಓಡಿಹೋದರೆ ಶತ್ರುಗಳು ಲಕ್ಷಿಸುವುದಿಲ್ಲ; ನಮ್ಮಲ್ಲಿ ಅರ್ಧ ಜನ ಸತ್ತರೂ ಅದು ಅವರಿಗೆ ದೊಡ್ಡ ಲಾಭವಲ್ಲ. ನಮ್ಮಂಥ ಹತ್ತು ಸಾವಿರ ಜನರ ಬೆಲೆ ನಿಮ್ಮೊಬ್ಬರಿಗೇ ಉಂಟು. ತಾವು ಊರಲ್ಲಿದ್ದುಕೊಂಡು ಅಲ್ಲಿಂದಲೇ ನಮಗೆ ಬೇಕಾದ ಸಹಾಯಮಾಡಬಹುದು,” ಎಂದರು.
4 : ಅರಸನು, “ನಿಮಗೆ ಸರಿಕಂಡ ಹಾಗೆ ಮಾಡುತ್ತೇನೆ,” ಎಂದು ಹೇಳಿ ಊರಬಾಗಿಲಿನ ಒಂದು ಕಡೆಯಲ್ಲಿ ನಿಂತನು. ಸೈನಿಕರು ನೂರು ನೂರು ಮಂದಿಯಾಗಿ, ಸಾವಿರ ಸಾವಿರ ಮಂದಿಯಾಗಿ ಹೊರಟರು.
5 : ಅರಸನು ಯೋವಾಬ್, ಅಬೀಷೈ ಹಾಗು ಇತ್ರೈ ಎಂಬವರಿಗೆ, “ನನ್ನ ಸಲುವಾಗಿ ಯುವಕ ಅಬ್ಷಾಲೋಮನಿಗೆ ಹಾನಿಮಾಡಬೇಡಿ,” ಎಂದು ಆಜ್ಞಾಪಿಸಿದನು. ದಾವೀದನು ಸೇನಾಪತಿಗಳಿಗೆ ಕೊಟ್ಟ ಈ ಅಪ್ಪಣೆ ಸೈನ್ಯದವರಿಗೆಲ್ಲಾ ಕೇಳಿಸಿತು.
6 : ಅನಂತರ ಸೈನಿಕರು ಇಸ್ರಯೇಲರಿಗೆ ವಿರೋಧವಾಗಿ ಹೊರಟು ಬಯಲಿಗೆ ಬಂದರು. ಎಫ್ರಯಿಮ್ ಕಾಡಿನಲ್ಲಿ ಯುದ್ಧನಡೆಯಿತು.
7 : ಇಸ್ರಯೇಲರು ದಾವೀದನ ಸೈನಿಕರಿಂದ ಪೂರ್ಣವಾಗಿ ಪರಾಭವಗೊಂಡರು. ಆ ದಿನ ಇಪ್ಪತ್ತು ಸಾವಿರ ಜನರು ಹತರಾದರು.
8 : ಯುದ್ಧವು ಸುತ್ತಣ ಪ್ರದೇಶಗಳಿಗೆ ಹಬ್ಬಿಕೊಂಡಿತು. ಆ ದಿನ ಕತ್ತಿಯಿಂದ ಸತ್ತವರಿಗಿಂತ, ಮರುಳುಗಾಡಿನಲ್ಲಿ ಸತ್ತವರ ಸಂಖ್ಯೆಯೇ ಹೆಚ್ಚಾಗಿತ್ತು.
9 : ಅಬ್ಷಾಲೋಮನು ದಾವೀದನ ಸೇವಕರ ಕೈಗೆ ಸಿಕ್ಕಿದನು. ಅದು ಹೇಗೆಂದರೆ, ಅವನು ಹತ್ತಿದ್ದ ಹೇಸರಗತ್ತೆ ಒಂದು ದೊಡ್ಡ ಓಕ್‍ಮರದ ಕೆಳಗೆ ಹಾದುಹೋಗುವಾಗ ಅವನ ತಲೆ ನಿಬಿಡವಾದ ಅದರ ಕೊಂಬೆಗಳಲ್ಲಿ ಸಿಕ್ಕಿಕೊಂಡಿತು; ಆ ಹೇಸರಗತ್ತೆ ಅವನ ಕೆಳಗಿನಿಂದ ಓಡಿಹೋಯಿತು. ಅವನು ಭೂಮಿಗೂ ಆಕಾಶಕ್ಕೂ ಮಧ್ಯೆ ನೇತಾಡಬೇಕಾಯಿತು.
10 : ಇದನ್ನು ನೋಡಿದ ಒಬ್ಬ ವ್ಯಕ್ತಿ ಯೋವಾಬನಿಗೆ, “ನೋಡಿ, ಆ ಓಕ್‍ಮರದಲ್ಲಿ ಅಬ್ಷಾಲೋಮನು ನೇತಾಡುತ್ತಿರುವುದನ್ನು ಕಂಡೆ,” ಎಂದು ಹೇಳಿದನು.
11 : ಯೋವಾಬನು, “ನೀನು ಕಂಡಕೂಡಲೆ ಏಕೆ ಅವನನ್ನು ಕಡಿದು ನೆಲಕ್ಕುರುಳಿಸಲಿಲ್ಲ? ಹಾಗೆ ಮಾಡಿದ್ದರೆ, ನಾನೇ ನಿನಗೆ ಹತ್ತು ಬೆಳ್ಳಿನಾಣ್ಯಗಳನ್ನೂ ಒಂದು ನಡುಕಟ್ಟನ್ನೂ ಕೊಡುತ್ತಿದ್ದೆ,” ಎಂದನು.
12 : ಅದಕ್ಕೆ ಆ ವ್ಯಕ್ತಿ, “ನೀವು ನನ್ನ ಕೈಯಲ್ಲಿ ಸಾವಿರ ಬೆಳ್ಳಿನಾಣ್ಯಗಳನ್ನು ಇಟ್ಟರೂ ಅರಸರ ಮಗನಿಗೆ ವಿರೋಧವಾಗಿ ಕೈಯೆತ್ತೆನು. ಅರಸರು ನಮ್ಮೆಲ್ಲರಿಗೆ ಕೇಳಿಸುವಂತೆ ನಿಮಗೆ, ಅಬೀಷೈಗೆ ಹಾಗು ಇತ್ರೈಗೆ, ‘ಜಾಗರೂಕತೆಯಿಂದಿರಿ! ಆ ಯುವಕ ಅಬ್ಷಾಲೋಮನನ್ನು ಯಾರೂ ಮುಟ್ಟಬಾರದು’ ಎಂದು ಆಜ್ಞಾಪಿಸಿದರಲ್ಲವೇ?
13 : ನಾನು ಅವನ ಪ್ರಾಣಕ್ಕೆ ಅಪಾಯವನ್ನು ಉಂಟುಮಾಡಿದರೆ ಅದು ಅರಸರಿಗೆ ಮರೆಯಾಗುವುದಿಲ್ಲ; ನೀವೂ ನನ್ನನ್ನು ಕೈಬಿಟ್ಟು ದೂರ ನಿಲ್ಲುವಿರಿ,” ಎಂದು ಉತ್ತರ ಕೊಟ್ಟನು.
14 : ಆಗ ಯೋವಾಬನು, “ಇಲ್ಲಿ ನಿಂತು ನಿನ್ನೊಡನೆ ಸಮಯ ಕಳೆಯಲಾರೆ,” ಎಂದು ಹೇಳಿ ಕೂಡಲೆ ಕೈಯಲ್ಲಿ ಮೂರು ಈಟಿಗಳನ್ನು ತೆಗೆದುಕೊಂಡು ಹೋಗಿ ಅಬ್ಷಾಲೋಮನ ಎದೆಗೆ ತಿವಿದನು.
15 : ಅವನು ಇನ್ನೂ ಜೀವದಿಂದ ಮರದಲ್ಲಿ ನೇತಾಡುತ್ತಿರುವಾಗಲೇ ಯೋವಾಬನ ಆಯುಧಗಳನ್ನು ಹೊರುವ ಹತ್ತು ಮಂದಿ ಯುವಕರು ಬಂದು ಅವನನ್ನು ಕೊಂದು ಹಾಕಿದರು.
16 : ಕೂಡಲೆ ಯೋವಾಬನು ತನ್ನ ಜನರನ್ನು ತಡೆಯುವುದಕ್ಕಾಗಿ ಕಹಳೆಯನ್ನು ಊದಿಸಿದನು. ಸೈನ್ಯದವರೆಲ್ಲಾ ಇಸ್ರಯೇಲರನ್ನು ಬೆನ್ನಟ್ಟುವುದನ್ನು ಬಿಟ್ಟು ಹಿಂದಿರುಗಿದರು.
17 : ಅವರು ಅಬ್ಷಾಲೋಮನ ಶವವನ್ನು ಆ ಕಾಡಿನಲ್ಲಿದ್ದ ಒಂದು ದೊಡ್ಡ ಗುಂಡಿಯೊಳಗೆ ಹಾಕಿ ಅದರ ಮೇಲೆ ದೊಡ್ಡ ಕಲ್ಲುರಾಶಿಯನ್ನು ಮಾಡಿ ಮುಚ್ಚಿದರು. ಇಸ್ರಯೇಲರಾದರೋ ತಮ್ಮ ತಮ್ಮ ನಿವಾಸಗಳಿಗೆ ಓಡಿಹೋದರು.
18 : ಅಬ್ಷಾಲೋಮನು ಇನ್ನೂ ಜೀವದಿಂದಿದ್ದಾಗ, ತನ್ನ ಹೆಸರನ್ನುಳಿಸುವ ಮಗ ಇಲ್ಲದ್ದರಿಂದ ಒಂದು ಕಲ್ಲಿನ ಕಂಬವನ್ನು ತರಿಸಿ, ಅದನ್ನು ಅರಸನ ಕಣಿವೆಯಲ್ಲಿ ತನ್ನ ಜ್ಞಾಪಕಾರ್ಥವಾಗಿ ನಿಲ್ಲಿಸಿ, ಅದಕ್ಕೆ ತನ್ನ ಹೆಸರನ್ನಿಟ್ಟಿದ್ದನು. ಅದನ್ನು ಇಂದಿನವರೆಗೂ ‘ಅಬ್ಷಾಲೋಮನ ಸ್ಮಾರಕಸ್ತಂಭ’ ಎಂದು ಕರೆಯಲಾಗುತ್ತದೆ.
19 : ಚಾದೋಕನ ಮಗ ಅಹೀಮಾಚನು ಯೋವಾಬನಿಗೆ, “ಅಪ್ಪಣೆಯಾಗಲಿ, ನಾನು ಅರಸರ ಬಳಿಗೆ ಓಡಿ ಹೋಗಿ ಸರ್ವೇಶ್ವರಸ್ವಾಮಿ ವೈರಿಗಳಿಗೆ ಮುಯ್ಯಿತೀರಿಸಿದ್ದಾರೆಂಬ ಶುಭವರ್ತಮಾನವನ್ನು ತಿಳಿಸುತ್ತೇನೆ,” ಎಂದನು.
20 : ಯೋವಾಬನು, “ಆ ಹೊತ್ತಿನ ಸುದ್ದಿಯನ್ನು ತೆಗೆದುಕೊಂಡು ಹೋಗತಕ್ಕವನು ನೀನಲ್ಲ; ಇನ್ನೊಂದು ಸಾರಿ ನಿನ್ನನ್ನು ಕಳುಹಿಸುತ್ತೇನೆ. ಈ ಹೊತ್ತು ಅರಸರ ಮಗನು ಸತ್ತಿರುವುದರಿಂದ ವರ್ತಮಾನವು ಶುಭವಾದುದ್ದಲ್ಲ,” ಎಂದು ಹೇಳಿ
22 : ಚಾದೋಕನ ಮಗ ಅಹೀಮಾಚನು ಪುನಃ ಯೋವಾಬನಿಗೆ, “ಆಗುವುದಾಗಲಿ, ದಯವಿಟ್ಟು ಆ ಕೂಷ್ಯನ ಹಿಂದೆ ಹೋಗುವುದಕ್ಕೆ ನನಗೆ ಅಪ್ಪಣೆಕೊಡಿ,” ಎಂದು ಬೇಡಿಕೊಂಡನು. ಅದಕ್ಕೆ ಯೋವಾಬನು, “ಮಗೂ, ಏಕೆ ಹೋಗಬೇಕೆನ್ನುತ್ತೀ? ಅದಕ್ಕಾಗಿ ನಿನಗೆ ಬಹುಮಾನವೇನೂ ಸಿಕ್ಕುವುದಿಲ್ಲ,” ಎಂದನು
23 : ಆದರೆ ಅಹೀಮಾಚನು ಮತ್ತೊಮ್ಮೆ, “ಚಿಂತೆಯಿಲ್ಲ, ನನ್ನನ್ನೂ ಕಳುಹಿಸಿ,” ಎಂದು ಒತ್ತಾಯಪಡಿಸಿದ್ದರಿಂದ ಯೋವಾಬನು, “ಹೋಗು,” ಎಂದು ಹೇಳಿದನು. ಆಗ ಅಹೀಮಾಚನು ಜೋರ್ಡನ್ ತಗ್ಗಿನಲ್ಲಿರುವ ದಾರಿಯನ್ನು ಹಿಡಿದು ಆ ಕೂಷ್ಯನಿಗಿಂತ ಮುಂದಾಗಿ ಓಡಿದನು.
24 : ದಾವೀದನು ಎರಡು ಬಾಗಿಲುಗಳ ಮಧ್ಯೆ ಕುಳಿತುಕೊಂಡಿದ್ದನು. ಅಷ್ಟರಲ್ಲಿ ಕಾವಲುಗಾರನು ಗೋಪುರದ ಮಾಳಿಗೆಯನ್ನು ಹತ್ತಿ ಪಾಗಾರದ ಬಳಿಯಲ್ಲಿ ನಿಂತು ನೋಡಲು ಒಂಟಿಗನಾಗಿ ಬರುವ ಒಬ್ಬ ವ್ಯಕ್ತಿಯನ್ನು ಕಂಡನು.
25 : ಅವನು ಕೂಡಲೆ ದಾವೀದನಿಗೆ ತಿಳಿಸಿದನು. ದಾವೀದನು, “ಅವನು ಒಬ್ಬನಾಗಿ ಇದ್ದರೆ ಸಮಾಚಾರ ತರುವವನಾಗಿರಬಹುದು,” ಎಂದನು. ಆ ವ್ಯಕ್ತಿ ಬರಬರುತ್ತಾ ಸಮೀಪವಾದನು.
26 : ಅಷ್ಟರಲ್ಲಿ ಕಾವಲುಗಾರನು ಓಡುತ್ತಾ ಬರುವ ಇನ್ನೊಬ್ಬನನ್ನು ಕಂಡು ದ್ವಾರಪಾಲಕನ ಮುಖಾಂತರ, “ಇಗೋ, ಇನ್ನೊಬ್ಬನು ಒಂಟಿಗನಾಗಿ ಬರುತ್ತಿದ್ದಾನೆ,” ಎಂದು ಅರಸನಿಗೆ ತಿಳಿಸಿದನು. ಅರಸನು “ಹಾಗಾದರೆ ಅವನೂ ಸಮಾಚಾರ ತರುವವನು,” ಎಂದು ಹೇಳಿದನು.
27 : ಕಾವಲುಗಾರನು, “ಮುಂದಾಗಿ ಬರುತ್ತಿರುವವನ ಓಟ ಚಾದೋಕನ ಮಗನಾದ ಅಹೀಮಾಚನ ಓಟದ ಹಾಗೆ ಕಾಣುತ್ತದೆ,” ಎಂದನು. ಅದಕ್ಕೆ ಅರಸನು, “ಅವನು ಒಳ್ಳೆಯವನು; ಶುಭವರ್ತಮಾನ ತರುವವನು,” ಎಂದನು.
28 : ಅಹೀಮಾಚನು ಹತ್ತಿರ ಬಂದು ಅರಸನಿಗೆ, “ಶುಭವಾಗಲಿ!” ಎಂದು ಹೇಳಿ ಸಾಷ್ಟಾಂಗ ನಮಸ್ಕಾರ ಮಾಡಿದನು. “ಅರಸನಿಗೆ ವಿರುದ್ಧ ಬಂಡೆದ್ದವರನ್ನು ಅಧೀನಪಡಿಸಿದ ನಿಮ್ಮ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ!” ಎಂದನು.
29 : ಆಗ ಅರಸನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೋ?,” ಎಂದು ಕೇಳಿದನು. ಅದಕ್ಕೆ ಅಹೀಮಾಚನು, “ಯೋವಾಬನು ಒಡೆಯರ ಸೇವಕನಾದ ನನ್ನನ್ನು ಕಳುಹಿಸುವಾಗ ನಾನು ಒಂದು ದೊಡ್ಡ ದೊಂಬಿಯನ್ನು ಕಂಡೆ. ಆದರೆ ಸಂಗತಿಯೇನೆಂಬುದು ನನಗೆ ಗೊತ್ತಾಗಲಿಲ್ಲ,” ಎಂದು ಉತ್ತರಕೊಟ್ಟನು.
30 : ಆಗ ಅರಸನು, “ನೀನು ಇತ್ತ ನಿಲ್ಲು,” ಎಂದು ಆಜ್ಞಾಪಿಸಿದನು; ಅವನು ಅಂತೆಯೇ ನಿಂತನು.
31 : ಅಷ್ಟರಲ್ಲಿ ಆ ಕೂಷ್ಯನೂ ಬಂದು, “ನನ್ನ ಒಡೆಯರಾದ ಅರಸರಿಗೆ ಶುಭವರ್ತಮಾನ ತಂದಿದ್ದೇನೆ; ಸರ್ವೇಶ್ವರಸ್ವಾಮಿ ನಿಮಗೆ ವಿರುದ್ಧ ಬಂಡೆದ್ದವರೆಲ್ಲರಿಗೂ ಮುಯ್ಯಿತೀರಿಸಿದ್ದಾರೆ,” ಎಂದನು.
32 : ಅರಸನು ಅವನನ್ನು, “ಆ ಯುವಕ ಅಬ್ಷಾಲೋಮನು ಸುರಕ್ಷಿತನಾಗಿದ್ದಾನೆಯೋ?” ಎಂದು ಕೇಳಿದನು. ಅವನು, “ನನ್ನ ಒಡೆಯರಾದ ಅರಸರ ಶತ್ರುಗಳಿಗೂ, ಅವರಿಗೆ ಕೇಡು ಮಾಡುವುದಕ್ಕೆ ನಿಂತವರೆಲ್ಲರಿಗೂ ಆ ಯುವಕನಿಗಾದ ಗತಿಯೇ ಆಗಲಿ!” ಎಂದು ಉತ್ತರಕೊಟ್ಟನು.
33 : ಇದನ್ನು ಕೇಳಿದ್ದೇ ಅರಸನ ಎದೆಯೊಡೆಯಿತು. ಅವನು, “ನನ್ನ ಮಗನೇ, ಅಬ್ಷಾಲೋಮನೇ, ನನ್ನ ಮಗನೇ, ನನ್ನ ಮಗನಾದ ಅಬ್ಷಾಲೋಮನೇ, ನಿನಗೆ ಬದಲಾಗಿ ನಾನು ಸತ್ತಿದ್ದರೆ ಎಷ್ಟೋ ಒಳ್ಳೆಯದಾಗುತ್ತಿತ್ತು! ಅಬ್ಷಾಲೋಮನೇ, ನನ್ನ ಮಗನೇ, ಮಗನೇ,” ಎಂದು ಕೂಗಿ ಗೋಳಿಡುತ್ತಾ ಹೆಬ್ಬಾಗಿಲಿನ ಮೇಲಿದ್ದ ಕೋಣೆಗೆ ಹೋದನು.