1 : ದಾವೀದನು ಗುಡ್ಡದ ತುದಿಯ ಆಚೆಗೆ ಹೋಗುವಷ್ಟರಲ್ಲಿ ಮೆಫೀಬೋಶೆತನ ಸೇವಕನಾದ ಚೀಬನು ಇನ್ನೂರು ರೊಟ್ಟಿಗಳನ್ನು, ನೂರು ಒಣಗಿದ ದ್ರಾಕ್ಷಿಗೊಂಚಲುಗಳನ್ನು, ನೂರು ಹಣ್ಣುಗಳನ್ನು ಹಾಗು ಒಂದು ಬುದ್ದಲಿ ದ್ರಾಕ್ಷಾರಸವನ್ನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು.
2 : ಅರಸನು ಚೀಬನನ್ನು ನೋಡಿ, “ಇವುಗಳನ್ನು ಏಕೆ ತಂದೆ?” ಎಂದು ಕೇಳಿದನು. ಅವನು, “ಕತ್ತೆಗಳನ್ನು ಅರಸರ ಮನೆಯವರು ಸವಾರಿ ಮಾಡಲೆಂದು, ಹಣ್ಣು ರೊಟ್ಟಿಗಳನ್ನು ಆಳುಗಳು ತಿನ್ನಲೆಂದೂ ಹಾಗು ದ್ರಾಕ್ಷಾರಸವನ್ನು ಅರಣ್ಯದಲ್ಲಿ ದಣಿದವರು ಕುಡಿಯಲೆಂದು ತಂದಿದ್ದೇನೆ,” ಎಂದು ಉತ್ತರಕೊಟ್ಟನು.
3 : ಅರಸನು ಮತ್ತೆ, “ನಿನ್ನ ಯಜಮಾನನ ಮಗ ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಯೇಲರು ಈ ದಿನ ತನಗೆ ಮರಳಿ ಕೊಡುವರೆಂದು ಹೇಳಿ ಅವನು ಜೆರುಸಲೇಮಿನಲ್ಲೇ ಉಳಿದುಕೊಂಡನು,” ಎಂದನು.
4 : ಆಗ ಅರಸನು, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ಹೇಳಿದನು. ಅವನು, “ಅರಸರೇ, ನಿಮಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ; ನನ್ನ ಒಡೆಯರೇ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ!” ಎಂದನು.
5 :
ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ ಗೇರನ ಮಗನೂ ಆದ ಶಿಮ್ಮಿ ಎಂಬವನು ದಾವೀದನನ್ನು ಶಪಿಸುತ್ತಾ ಆ ಊರಿನಿಂದ ಹೊರಗೆ ಬಂದನು.
6 : ಅವನು ದಾವೀದನ, ಅವನ ಎಲ್ಲ ಸೇವಕರ, ಎಡಬಲದಲ್ಲಿದ್ದ ಸೈನಿಕರ ಹಾಗು ಶೂರರ ಕಡೆಗೆ ಕಲ್ಲೆಸೆಯತೊಡಗಿದನು.
7 : ಅಲ್ಲದೆ, ಅವನು ದಾವೀದನನ್ನು ಶಪಿಸುತ್ತಾ, “ನಡೆ, ಕೊಲೆಗಾರನೇ, ನೀಚನೇ, ನಡೆ; ಸೌಲನ ರಾಜ್ಯವನ್ನು ಕಬಳಿಸಿಕೊಂಡು, ಅವನ ಮನೆಯವರನ್ನು ಕೊಂದದ್ದಕ್ಕಾಗಿ ಸರ್ವೇಶ್ವರ ನಿನಗೆ ಮುಯ್ಯಿ ತೀರಿಸಿದ್ದಾರೆ.
8 : ಅವರು, ರಾಜ್ಯವನ್ನು ನಿನ್ನ ಮಗ ಅಬ್ಷಾಲೋಮನಿಗೆ ಕೊಟ್ಟುಬಿಟ್ಟರು. ಕೊಲೆಗಾರನೇ, ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ,” ಎಂದನು.
9 : ಆಗ ಚೆರೂಯಳ ಮಗ ಅಬೀಷೈಯು ಅರಸನಿಗೆ, “ಈ ಸತ್ತನಾಯಿ ಅರಸನಾದ ನನ್ನ ಒಡೆಯರನ್ನು ಶಪಿಸುವುದೇನು? ಅಪ್ಪಣೆಯಾಗಲಿ, ನಾನು ಅವನಿರುವಲ್ಲಿಗೇ ಹೋಗಿ, ಅವನ ತಲೆ ಹಾರಿಸಿಕೊಂಡು ಬರುತ್ತೇನೆ,” ಎಂದನು.
10 : ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನನಗೆ ನಿಮ್ಮ ಗೊಡವೆಯೇ ಬೇಡ; ಬಿಡಿ, ಅವನು ಶಪಿಸಲಿ; ದಾವೀದನನ್ನು ಶಪಿಸೆಂದು ಸರ್ವೇಶ್ವರಸ್ವಾಮಿಯೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದೆ’ ಎಂದು ಅವನನ್ನು ಯಾರು ಕೇಳಲಾದೀತು?” ಎಂದು ಉತ್ತರಕೊಟ್ಟನು.
11 : ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾವಿೂನ್ಯನು ಹೀಗೆ ಮಾಡುವುದು ಯಾವ ಲೆಕ್ಕ? ಬಿಡಿ, ಅವನು ಶಪಿಸಲಿ; ಹೀಗೆ ಮಾಡಬೇಕೆಂದು ಸರ್ವೇಶ್ವರನೇ ಅವನಿಗೆ ಆಜ್ಞಾಪಿಸಿದ್ದಾರೆ.
12 : ಬಹುಶಃ ಸರ್ವೇಶ್ವರ ನನ್ನ ಕಷ್ಟವನ್ನು ನೋಡಿ ಈ ದಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಿಯಾರು,” ಎಂದು ಹೇಳಿದನು.
13 : ದಾವೀದನೂ ಅವನ ಜನರೂ ದಾರಿಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ ಕಲ್ಲುಮಣ್ಣು ತೂರುತ್ತಾ, ಗುಡ್ಡದ ಓರೆಯಲ್ಲಿ ಸಮಾನಾಂತರದಲ್ಲೇ ನಡೆಯುತ್ತಿದ್ದನು.
14 : ಅರಸನೂ ಅವನ ಜೊತೆಯಲ್ಲಿ ಬಂದವರೆಲ್ಲರೂ ದಣಿದವರಾಗಿ ಜೋರ್ಡನ್ ಸ್ಥಳವನ್ನು ಸೇರಿ ಅಲ್ಲಿ ವಿಶ್ರಮಿಸಿಕೊಂಡರು.
15 :
ಅಷ್ಟರಲ್ಲಿ ಅಬ್ಷಾಲೋಮನು ಎಲ್ಲ ಇಸ್ರಯೇಲರೊಡನೆ ಜೆರುಸಲೇಮಿಗೆ ಬಂದನು. ಅಹೀತೋಫೆಲನೂ ಅವನ ಸಂಗಡ ಇದ್ದನು.
16 : ಅರ್ಕೀಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸರು ಚಿರಂಜೀವಿಯಾಗಿ ಬಾಳಲಿ! ಅರಸರು ಚಿರಂಜೀವಿಯಾಗಿ ಬಾಳಲಿ!” ಎಂದು ಘೋಷಿಸಿದನು.
17 : ಅಬ್ಷಾಲೋಮನು, “ಸ್ನೇಹಿತನ ಮೇಲೆ ನಿನಗಿದ್ದ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಏಕೆ ಹೋಗಲಿಲ್ಲ?” ಎಂದನು.
18 : ಅದಕ್ಕೆ ಹೂಷೈಯು, “ಹಾಗಲ್ಲ, ಸರ್ವೇಶ್ವರ, ಈ ಜನ ಹಾಗು ಇಸ್ರಯೇಲರೆಲ್ಲರು ಯಾರನ್ನು ಆರಿಸಿದ್ದಾರೋ ಅವನ ಪಕ್ಷದವನಾಗಿರುತ್ತೇನೆ ನಾನು; ಅವನ ಬಳಿಯಲ್ಲೇ ವಾಸಿಸುತ್ತೇನೆ.
19 : ಇದಲ್ಲದೆ, ನಾನು ಈಗ ಸೇವೆಮಾಡಬೇಕೆಂದಿರುವುದು ರಾಜಪುತ್ರನ ಸನ್ನಿಧಿಯಲ್ಲಿ ಅಲ್ಲವೇ? ನಿಮ್ಮ ತಂದೆಯ ಸನ್ನಿಧಿಯಲ್ಲಿ ಸೇವೆ ಮಾಡಿದಂತೆ ನಿಮ್ಮ ಸನ್ನಿಧಿಯಲ್ಲಿ ಸೇವೆ ಮಾಡುವೆನು,” ಎಂದು ಉತ್ತರಕೊಟ್ಟನು.
20 : ಅನಂತರ ಅಬ್ಷಾಲೋಮನು, “ನಾವು ಈಗ ಮಾಡತಕ್ಕದ್ದೇನು? ಆಲೋಚನೆ ಮಾಡಿ ಹೇಳು,” ಎಂಬುದಾಗಿ ಅಹೀತೋಫೆಲನನ್ನು ಕೇಳಿದನು.
21 : ಅವನು, “ತಾವು ಹೋಗಿ ತಮ್ಮ ತಂದೆ ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಗಳೊಡನೆ ಸಂಗಮಿಸಿ. ಹೀಗೆ ಮಾಡುವುದಾದರೆ, ತಾವು ತಮ್ಮ ತಂದೆಗೆ ಅಸಹ್ಯ ವೈರಿಯಾದಿರೆಂದು ಎಲ್ಲ ಇಸ್ರಯೇಲರಿಗೆ ತಿಳಿಯುವುದು. ಆಗ ತಮ್ಮ ಪಕ್ಷದವರು ಹುಮ್ಮಸ್ಸುಗೊಳ್ಳುವರು,” ಎಂದು ಉತ್ತರಕೊಟ್ಟನು.
22 : ಆಗ ಅಬ್ಷಾಲೋಮನಿಗಾಗಿ ಮಾಳಿಗೆಯ ಮೇಲೆ ಗುಡಾರಹಾಕಿದರು. ಅವನು ಎಲ್ಲ ಇಸ್ರಯೇಲರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.
23 : ಆ ದಿನಗಳಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿಗಿರುವಷ್ಟೇ ಬೆಲೆಯಿತ್ತು. ದಾವೀದನೂ ಅಬ್ಷಾಲೋಮನೂ ಅವನ ಸಲಹೆಗಳನ್ನು ಮಾನ್ಯಮಾಡುತ್ತಿದ್ದರು.