Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಸಮು


1 : ದಾವೀದನ ಮಗನಾದ ಅಬ್ಷಾಲೋಮನಿಗೆ ತಾಮಾರಳೆಂಬ ಬಹು ಚೆಲುವೆಯಾದ ತಂಗಿಯಿದ್ದಳು. ದಾವೀದನ ಮಗ ಅಮ್ನೋನನು ಆಕೆಯನ್ನು ಮೋಹಿಸಿದನು.
2 : ಅವನು ಆಕೆಯ ಮೇಲಿನ ಮೋಹದಿಂದ ಪೀಡಿತನಾಗಿ ಅಸ್ವಸ್ಥನಾದನು. ಆಕೆ ಕನ್ಯೆ ಆಗಿದ್ದುದರಿಂದ ಆಕೆಗೆ ಏನು ಮಾಡುವುದೂ ಅಸಾಧ್ಯವೆಂದು ಅಮ್ನೋನನಿಗೆ ಕಂಡಿತು.
3 : ಅವನಿಗೆ ಯೋನಾದಾಬನೆಂಬ ಒಬ್ಬ ಗೆಳೆಯನಿದ್ದನು. ಇವನು ದಾವೀದನ ಅಣ್ಣನಾದ ಶಿಮ್ಮನ ಮಗ ಹಾಗು ಬಹು ಯುಕ್ತಿವಂತ.
4 : ಅವನು ಒಂದು ದಿನ ಅಮ್ನೋನನನ್ನು, “ರಾಜಪುತ್ರರೇ, ನೀವು ದಿನೇದಿನೇ ಕ್ಷೀಣವಾಗುತ್ತಾ ಬರುವುದೇಕೆ? ನನಗೆ ತಿಳಿಸಬಾರದೇ?,” ಎಂದು ಕೇಳಿದನು. ಅವನು, “ನನ್ನ ತಮ್ಮನಾದ ಅಬ್ಷಾಲೋಮನ ತಂಗಿ ತಾಮಾರಳ ಮೇಲೆ ನನಗೆ ಮೋಹವುಂಟಾಗಿದೆ,” ಎಂದು ಉತ್ತರಕೊಟ್ಟನು.
5 : ಆಗ ಯೋನಾದಾಬನು, “ನೀನು ಅಸ್ವಸ್ಥನಾದವನಂತೆ ನಟಿಸಿ ಹಾಸಿಗೆಯ ಮೇಲೆ ಮಲಗಿಕೋ; ನಿನ್ನ ತಂದೆ ನಿನ್ನನ್ನು ನೋಡುವುದಕ್ಕೆ ಬಂದಾಗ, ‘ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನಗಾಗಿ ಆಹಾರ ಸಿದ್ಧಮಾಡುವುದಕ್ಕೆ ಕಳುಹಿಸಿ. ಆಕೆ ನನ್ನೆದುರಿನಲ್ಲೇ ಸಿದ್ಧಮಾಡಿ ಕೊಡುವುದಾದರೆ ಊಟಮಾಡುತ್ತೇನೆ’ ಎಂದು ಹೇಳು,” ಎಂದನು.
6 : ಅಮ್ನೋನನು ಅಸ್ವಸ್ಥನಾದವನೋ ಎಂಬಂತೆ ಮಲಗಿಕೊಂಡನು. ಅರಸನು ಅವನನ್ನು ನೋಡುವುದಕ್ಕೆ ಬಂದಾಗ ಅವನು ಅರಸನಿಗೆ, “ದಯವಿಟ್ಟು ನನ್ನ ತಂಗಿ ತಾಮಾರಳನ್ನು ನನ್ನ ಬಳಿಗೆ ಕಳುಹಿಸಿ; ಆಕೆ ನನ್ನ ಕಣ್ಮುಂದೆಯೇ ಒಂದೆರಡು ಭಕ್ಷ್ಯಗಳನ್ನು ಮಾಡಿಕೊಡುವುದಾದರೆ ಊಟಮಾಡುತ್ತೇನೆ,” ಎಂದು ಬೇಡಿಕೊಂಡನು.
7 : ದಾವೀದನು ಅರಮನೆಗೆ ಆಳುಗಳನ್ನು ಕಳುಹಿಸಿ ಆಕೆಗೆ, “ನೀನು ನಿನ್ನ ಅಣ್ಣ ಅಮ್ನೋನನ ಮನೆಗೆ ಹೋಗಿ ಅವನಿಗಾಗಿ ಆಹಾರವನ್ನು ಸಿದ್ಧಮಾಡು,” ಎಂದು ಹೇಳಿಸಿದನು.
8 : ಕೂಡಲೆ ಆಕೆ ತನ್ನ ಅಣ್ಣನಾದ ಅಮ್ನೋನನ ಮನೆಗೆ ಹೋದಳು; ಅವನು ಮಲಗಿದ್ದನು. ಆಕೆ ಹೋಗಿ ಹಿಟ್ಟು ತೆಗೆದುಕೊಂಡು ನಾದಿ ಅವನ ಕಣ್ಮುಂದೆಯೇ ಭಕ್ಷ್ಯಗಳನ್ನು ಮಾಡಿ ಸುಟ್ಟಳು.
9 : ಅನಂತರ ಆಕೆ ಅವುಗಳನ್ನು ಬಾಣಲಿಯಿಂದ ತೆಗೆದು ಅವನ ಮುಂದಿಟ್ಟಳು. ಅವನು ಊಟಮಾಡದೆ ಎಲ್ಲಾ ಜನರನ್ನು ತನ್ನ ಬಳಿಯಿಂದ ಹೊರಡಿಸಬೇಕೆಂದು ಅಪ್ಪಣೆ ಮಾಡಿದನು.
10 : ಎಲ್ಲರೂ ಹೋದಮೇಲೆ ಅವನು ತಾಮಾರಳಿಗೆ, “ಆಹಾರವನ್ನು ಈ ಕೋಣೆಗೆ ತೆಗೆದುಕೊಂಡು ಬಾ; ನೀನಾಗಿ ತಂದುಕೊಟ್ಟರೆ ಊಟಮಾಡುತ್ತೇನೆ!” ಎಂದು ಹೇಳಿದನು. ಆಗ ತಾಮಾರಳು ತಾನು ಮಾಡಿದ ಭಕ್ಷ್ಯಗಳನ್ನು ಅಣ್ಣನಾದ ಅಮ್ನೋನನಿದ್ದ ಕೋಣೆಗೆ ತೆಗೆದುಕೊಂಡು ಹೋಗಿ ಅವನ ಮುಂದಿಟ್ಟಳು.
11 : ಕೂಡಲೇ ಅವನು ಆಕೆಯನ್ನು ಹಿಡಿದು, “ನನ್ನ ತಂಗೀ, ಬಂದು ನನ್ನ ಸಂಗಡ ಮಲಗಿಕೋ,” ಎಂದನು.
12 : ಆಕೆ, “ಅಣ್ಣಾ, ಬೇಡ; ನನ್ನನ್ನು ಕೆಡಿಸಬೇಡ; ಇಸ್ರಯೇಲರಲ್ಲಿ ಇಂಥದು ನಡೆಯಬಾರದು.
13 : ಇಂಥ ಹುಚ್ಚುತನ ಬೇಡ, ಈ ಅವಮಾನವನ್ನು ಮರೆಮಾಡುವುದು ಹೇಗೆ? ನಿನಗಂತೂ ಇಸ್ರಯೇಲರಲ್ಲಿ ನೀಚನೆಂಬ ಹೆಸರು ತಪ್ಪದು. ಆದುದರಿಂದ ದಯವಿಟ್ಟು ಅರಸನ ಸಂಗಡ ಮಾತಾಡು. ಅವನು ನನ್ನನ್ನು ನಿನಗೆ ಕೊಡದಿರಲಾರನು,” ಎಂದಳು
14 : ಆದರೆ ಅವನು ಆಕೆಯ ಮಾತನ್ನು ಕೇಳದೆ ಬಲಾತ್ಕಾರದಿಂದ ಆಕೆಯನ್ನು ಕೆಡಿಸಿದನು.
15 : ಇದಾದ ಮೇಲೆ ಅವನಿಗೆ ಆಕೆಯಲ್ಲಿ ತುಂಬಾ ದ್ವೇಷ ಹುಟ್ಟಿತು. ಅವನ ಮುಂಚಿನ ಪ್ರೀತಿಗಿಂತ ದ್ವೇಷವೇ ಹೆಚ್ಚಾಯಿತು.
16 : ಅಮ್ನೋನನು ಆಕೆಗೆ, “ಎದ್ದುಹೋಗು,” ಎಂದು ಹೇಳಿದಾಗ ಆಕೆ, “ಹಾಗೆ ಮಾಡಬೇಡ; ನನ್ನನ್ನು ಹೊರಡಿಸಿ ಬಿಡುವುದು ನೀನು ಮಾಡಿದ ಮೊದಲನೆಯ ಅನ್ಯಾಯಕ್ಕಿಂತ ಹೆಚ್ಚಿನ ಅನ್ಯಾಯವಾಗಿದೆ,” ಎಂದಳು.
17 : ಆದರೆ ಅವನು ಆಕೆಯ ಮಾತನ್ನು ಕೇಳದೆ ಯಾವಾಗಲೂ ತನ್ನ ಹತ್ತಿರವೇ ಇರುವಂಥ ಆಳನ್ನು ಕರೆದು ಅವನಿಗೆ, “ಇವಳನ್ನು ಹೊರಗೆ ತಳ್ಳಿ ಕದಮುಚ್ಚು,” ಎಂದು ಆಜ್ಞಾಪಿಸಿದನು.
18 : (ಆಕೆ ನಾನಾ ವರ್ಣಗಳುಳ್ಳ ಒಂದು ನಿಲುವಂಗಿಯನ್ನು ಧರಿಸಿಕೊಂಡಿದ್ದಳು. ಕನ್ಯೆಯರಾದ ರಾಜಪುತ್ರಿಯರು ಅದೇ ತರದ ವಸ್ತ್ರಗಳನ್ನು ಹಾಕಿಕೊಳ್ಳುತ್ತಿದ್ದರು.) ಸೇವಕನು ಆಕೆಯನ್ನು ಹೊರಗೆ ಕಳುಹಿಸಿ ಕದಮುಚ್ಚಿದನು.
19 : ತಾಮಾರಳು ತಲೆಯ ಮೇಲೆ ಬೂದಿ ಹಾಕಿಕೊಂಡು, ನಿಲುವಂಗಿಯನ್ನು ಹರಿದುಕೊಂಡು, ಕೈಗಳನ್ನು ತಲೆಯ ಮೇಲಿಟ್ಟು ಗೋಳಾಡುತ್ತಾ ಹೋದಳು.
20 : ಆಕೆಯ ಸಹೋದರನಾದ ಅಬ್ಷಾಲೋಮನು ಆಕೆಯನ್ನು ಕಂಡು, “ನಿನ್ನ ಅಣ್ಣ ಅಮ್ನೋನನು ನಿನ್ನ ಮಾನಭಂಗ ಮಾಡಿದನೇ? ನನ್ನ ತಂಗೀ, ತಕ್ಷಣಕ್ಕೆ ಸುಮ್ಮನಿರು; ಅವನು ನಿನ್ನ ಅಣ್ಣನಲ್ಲವೇ? ಈ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡ,” ಎಂದು ಹೇಳಿದನು. ತಾಮಾರಳು ಒಂಟಿಗಳಾಗಿ ತನ್ನ ಅಣ್ಣನಾದ ಅಬ್ಷಾಲೋಮನ ಮನೆಯಲ್ಲೇ ವಾಸಿಸಿದಳು.
21 : ಅರಸನಾದ ದಾವೀದನು ಈ ಸಂಗತಿಯನ್ನು ಕೇಳಿ ಬಹಳವಾಗಿ ಕೋಪಗೊಂಡನು.
22 : ಅಬ್ಷಾಲೋಮನು ಅಮ್ನೋನನ ಸಂಗಡ ಒಳ್ಳೇ ಮಾತನ್ನಾಗಲಿ ಕೆಟ್ಟಮಾತನ್ನಾಗಲಿ ಆಡಲಿಲ್ಲ. ತನ್ನ ತಂಗಿಯಾದ ತಾಮಾರಳನ್ನು ಕೆಡಿಸಿದ್ದಕ್ಕಾಗಿ ಅವನು ಅಮ್ನೋನನನ್ನು ದ್ವೇಷಿಸಿದನು.
23 : ಎರಡು ವರ್ಷಗಳಾದನಂತರ ಅಬ್ಷಾಲೋಮನು ಒಂದು ದಿನ ಎಫ್ರಯಿಮನ ಬಳಿಯಲ್ಲಿರುವ ಬಾಳ್‍ಹಾಚೋರಿನಲ್ಲಿ ಕುರಿಗಳ ಉಣ್ಣೆಯನ್ನು ಕತ್ತರಿಸುವ ವ್ಯವಸ್ಥೆಮಾಡಿದನು. ಎಲ್ಲಾ ರಾಜಪುತ್ರರನ್ನು ಔತಣಕ್ಕೆ ಆಮಂತ್ರಿಸಿದನು.
24 : ಅವನು ಅರಸನ ಬಳಿಗೂ ಹೋಗಿ “ಅರಸರೇ, ತಮ್ಮ ಸೇವಕನಾದ ನಾನು ಕುರಿಗಳ ಉಣ್ಣೆಕತ್ತರಿಸುವವರನ್ನು ಕರೆಸಿದ್ದಾನೆ. ಅರಸರು ತಮ್ಮ ಸೇವಕರ ಸಮೇತ ಅಲ್ಲಿಗೆ ಚಿತ್ರೈಸೋಣವಾಗಲಿ,” ಎಂದು ಬೇಡಿಕೊಂಡನು.
25 : ಅರಸನು, “ಮಗನೇ, ಬೇಡ; ನಾವೆಲ್ಲರೂ ಬಂದರೆ ನಿನಗೆ ಕಷ್ಟವಾಗುವುದು,” ಎನ್ನಲು ಅಬ್ಷಾಲೋಮನು ಅವನನ್ನು ಬಹಳವಾಗಿ ಒತ್ತಾಯಪಡಿಸಿದನು. ಆದರೂ ಅರಸನು ಒಪ್ಪಲಿಲ್ಲ; ಅವನನ್ನು ಆಶೀರ್ವದಿಸಿದನು, ಅಷ್ಟೇ.
26 : ಆಗ ಅಬ್ಷಾಲೋಮನು, “ನೀವು ಬಾರದಿದ್ದರೆ ನನ್ನ ಅಣ್ಣನಾದ ಅಮ್ನೋನನನ್ನು ನಮ್ಮೊಡನೆ ಕಳುಹಿಸಿ,” ಎಂದನು. ಅದಕ್ಕೆ ಅರಸನು, “ಅವನೇಕೆ ನಿನ್ನ ಸಂಗಡ ಬರಬೇಕು?” ಎಂದು ಕೇಳಿದನು.
27 : ಆದರೂ ಅಬ್ಷಾಲೋಮನು ಬಹಳವಾಗಿ ಒತ್ತಾಯಪಡಿಸಿದ್ದರಿಂದ ಅರಸನು ಅಮ್ನೋನನನ್ನೂ ತನ್ನ ಬೇರೆ ಎಲ್ಲಾ ಮಕ್ಕಳನ್ನೂ ಕಳುಹಿಸಿದನು.
28 : ಇದಕ್ಕೆ ಮೊದಲೇ ಅಬ್ಷಾಲೋಮನು ತನ್ನ ಆಳುಗಳಿಗೆ, “ಕೇಳಿ, ಅಮ್ನೋನನು ದ್ರಾಕ್ಷಾರಸ ಕುಡಿದು ಮತ್ತನಾಗಿರುವಾಗ ನಾನು ಹೊಡೆಯಬೇಕೆಂದು ಹೇಳಿದಕೂಡಲೆ ಅವನನ್ನು ಹೊಡೆದು ಕೊಂದುಹಾಕಿ; ಹೆದರಬೇಡಿ. ನಿಮಗೆ ಆಜ್ಞಾಪಿಸಿದವನು ನಾನಲ್ಲವೆ? ಧೈರ್ಯದಿಂದಿರಿ, ಶೂರರಾಗಿರಿ,” ಎಂದು ಹೇಳಿದ್ದನು.
29 : ಅಬ್ಷಾಲೋಮನ ಆಳುಗಳು ಅವನ ಆಜ್ಞೆಯಂತೆ ಅಮ್ನೋನನನ್ನು ಕೊಂದರು. ರಾಜಪುತ್ರರೆಲ್ಲರೂ ತಮ್ಮ ತಮ್ಮ ಹೇಸರಗತ್ತೆಗಳನ್ನು ಹತ್ತಿ ಓಡಿ ಹೋದರು.
30 : ಅವರು ಇನ್ನೂ ಮಾರ್ಗದಲ್ಲಿರುವಾಗಲೇ ದಾವೀದನಿಗೆ, “ಅಬ್ಷಾಲೋಮನು ರಾಜಪುತ್ರರೆಲ್ಲರನ್ನೂ ಕೊಂದುಹಾಕಿದನು, ಒಬ್ಬನನ್ನೂ ಉಳಿಸಲಿಲ್ಲ,” ಎಂಬ ಸುದ್ದಿ ಮುಟ್ಟಿತು.
31 : ಆಗ ಅರಸನು ದುಃಖತಾಳಲಾರದೆ ತನ್ನ ಬಟ್ಟೆಗಳನ್ನು ಹರಿದುಕೊಂಡು ನೆಲಕ್ಕೆ ಬಿದ್ದನು. ಅವನ ಸೇವಕರೆಲ್ಲರೂ ತಮ್ಮ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಅವರ ಹತ್ತಿರ ನಿಂತರು.
32 : ಆಗ ದಾವೀದನ ಅಣ್ಣನಾದ ಶಿಮ್ಮನ ಮಗ ಯೋನಾದಾಬನು ದಾವೀದನಿಗೆ, “ರಾಜಪುತ್ರರೆಲ್ಲರನ್ನೂ ಕೊಂದು ಹಾಕಿದ್ದಾರೆಂದು ನನ್ನ ಒಡೆಯರು ನೆನೆಸದಿರಲಿ. ಅಮ್ನೋನನೊಬ್ಬನೇ ಸತ್ತಿರಬೇಕು. ಅವನು ಅಬ್ಷಾಲೋಮನ ತಂಗಿಯಾದ ತಾಮಾರಳನ್ನು ಕೆಡಿಸಿದಾಗಿನಿಂದಲೇ ಹೀಗಾಗುವುದೆಂದು ಅಬ್ಷಾಲೋಮನ ಮುಖದಿಂದ ತೋರುತ್ತಿತ್ತು.
33 : ಆದುದರಿಂದ ರಾಜಪುತ್ರರೆಲ್ಲರೂ ಸತ್ತರೆಂಬ ಸುದ್ದಿಗೆ ಅರಸರು ಲಕ್ಷ್ಯಕೊಡದಿರಲಿ; ಅಮ್ನೋನನೊಬ್ಬನೇ ಸತ್ತಿದ್ದಾನಷ್ಟೆ,” ಎಂದು ಹೇಳಿ ಸಂತೈಸಿದನು.
34 : (ಅಬ್ಷಾಲೋಮನು ತಲೆ ತಪ್ಪಿಸಿಕೊಂಡನು.) ಅಷ್ಟರಲ್ಲಿ ದಾರಿ ನೋಡುತ್ತಿದ್ದ ಕಾವಲುಗಾರನು ಒಂದು ದೊಡ್ಡ ಗುಂಪು ಹೋರೋನಿನ ಮಾರ್ಗವಾಗಿ ಗುಡ್ಡ ಇಳಿದು ಬರುವುದನ್ನು ಕಂಡನು.
35 : ಯೋನಾದಾಬನು ಅರಸನಿಗೆ, “ಇಗೋ, ರಾಜಕುಮಾರರು ಬರುತ್ತಿದ್ದಾರೆ; ನಿಮ್ಮ ಸೇವಕನ ಮಾತಿನಂತೆಯೇ ಆಯಿತಲ್ಲವೇ,” ಎಂದು ಹೇಳಿ ಮುಗಿಸುವಷ್ಟರಲ್ಲೇ
36 : ರಾಜಕುಮಾರರು ಬಂದು ಗಟ್ಟಿಯಾಗಿ ಅಳತೊಡಗಿದರು. ಅರಸನೂ ಅವನ ಸೇವಕರೂ ಬಹಳವಾಗಿ ಗೋಳಾಡಿದರು.
37 : ದಾವೀದನು ತನ್ನ ಮಗನಿಗೋಸ್ಕರ ನಿತ್ಯವೂ ದುಃಖಪಡುತ್ತಿದ್ದನು. ಅಬ್ಷಾಲೋಮನು ತಪ್ಪಿಸಿಕೊಂಡು ಗೆಷೂರಿಗೆ ಓಡಿಹೋಗಿ ಅಲ್ಲಿನ ಅರಸನೂ ಅವಿ್ಮೂಹೂದನ ಮಗನೂ ಆದ ತಲ್ಮೈಯ ಬಳಿಯಲ್ಲಿ ಮೂರು ವರ್ಷ ಇದ್ದನು.
38 : ಅರಸ ದಾವೀದನು, ಅಮ್ನೋನನ ಸಾವಿನ ದುಃಖ ಶಮನವಾದ ಮೇಲೆ ತನ್ನ ಮಗ ಅಬ್ಷಾಲೋಮನನ್ನು ನೋಡಲು ಹಾತೊರೆಯತೊಡಗಿದನು.

· © 2017 kannadacatholicbible.org Privacy Policy