Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಸಮು


1 : ಇದಾದನಂತರ ಅಮ್ಮೋನಿಯರ ಅರಸನು ಸತ್ತನು. ಅವನಿಗೆ ಬದಲಾಗಿ ಅವನ ಮಗ ಹಾನೂನನು ಅರಸನಾದನು.
2 : ದಾವೀದನು, “ನಾಹಾಷನು ನನಗೆ ಸ್ನೇಹತೋರಿಸಿದ್ದರಿಂದ ನಾನೂ ಅವನ ಮಗ ಹಾನೂನನಿಗೆ ಸ್ನೇಹ ತೋರಿಸುವೆನು,” ಎಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕಾಗಿ ತನ್ನ ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನಿಯರ ದೇಶಕ್ಕೆ ಬಂದರು.
3 : ಅಲ್ಲಿನ ನಾಯಕರು ತಮ್ಮ ಒಡೆಯ ಹಾನೂನನಿಗೆ, “ದಾವೀದನು ನಿಮ್ಮ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದಾನೆ. ಇದರಿಂದ ಅವನು ನಿಮ್ಮ ತಂದೆಯನ್ನು ಸನ್ಮಾನಿಸುತ್ತಾನೆಂದು ತಿಳಿಯುತ್ತೀರೋ? ಇಲ್ಲವೇ ಇಲ್ಲ. ಪಟ್ಟಣವನ್ನು ಸಂಚರಿಸಿ ನೋಡಿ ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ತನ್ನ ಆಳುಗಳನ್ನು ಕಳುಹಿಸಿದ್ದಾನೆ,” ಎಂದು ಹೇಳಿದರು.
4 : ಆದುದರಿಂದ ಹಾನೂನನು ದಾವೀದನ ಸೇವಕರನ್ನು ಬಂಧಿಸಿದನು. ಗಡ್ಡದ ಅರ್ಧಭಾಗವನ್ನು ಬೋಳಿಸಿ ಅವರ ನಿಲುವಂಗಿಗಳನ್ನು ಕುಂಡಿಯಿಂದ ಕೆಳಗಿನ ಭಾಗವನ್ನೆಲ್ಲಾ ಕತ್ತರಿಸಿ ಕಳುಹಿಸಿಬಿಟ್ಟನು.
5 : ಅವರು ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದರು. ಬಹಳವಾಗಿ ಅಪಮಾನಹೊಂದಿದ ಅವರಿಗೆ ದಾವೀದನು ಆಳುಗಳ ಮುಖಾಂತರ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಜೆರಿಕೋವಿನಲ್ಲಿದ್ದು ಅನಂತರ ಬನ್ನಿ,” ಎಂದು ಹೇಳಿಸಿದನು.
6 : ತಾವು ದಾವೀದನಿಗೆ ವೈರಿಗಳಾದೆವೆಂದು ಅಮ್ಮೋನಿಯರಿಗೆ ತಿಳಿಯಿತು. ಹಣಕೊಟ್ಟು ಬೇತ್‍ರೆಹೋಬ್, ಚೋಬಾ ಎಂಬ ಪಟ್ಟಣಗಳಿಂದ ಸಿರಿಯಾದವರ ಇಪ್ಪತ್ತು ಸಾವಿರ ಮಂದಿ ಕಾಲಾಳುಗಳನ್ನು, ಮಾಕದ ರಾಜನಿಂದ ಸಾವಿರ ಮಂದಿ ಸೈನಿಕರನ್ನು ಹಾಗು ಟೋಬ್ ದೇಶದಿಂದ ಹನ್ನೆರಡುಸಾವಿರ ಮಂದಿ ದಂಡಾಳುಗಳನ್ನೂ ಬರಮಾಡಿದರು.
7 : ಈ ಸುದ್ದಿ ದಾವೀದನಿಗೆ ಮುಟ್ಟಿತು. ಅವನು ಯೋವಾಬನನ್ನೂ ಎಲ್ಲಾ ಶೂರ ಸೈನಿಕರನ್ನೂ ಕಳುಹಿಸಿದನು.
8 : ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರಬಾಗಿಲಿನ ಬಳಿಯಲ್ಲೆ ವ್ಯೂಹಕಟ್ಟಿದರು. ಚೋಬಾ ಮತ್ತು ರೆಹೋಬ್ ಎಂಬ ಸ್ಥಳಗಳ ಸಿರಿಯಾದವರೂ ಟೋಬ್, ಮಾಕಾ ದೇಶಗಳವರೂ ಪ್ರತ್ಯೇಕವಾಗಿ ಮೈದಾನದಲ್ಲಿ ಇಳಿದುಕೊಂಡಿದ್ದರು.
9 : ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಯೇಲರಲ್ಲಿ ಶ್ರೇಷ್ಠರಾದ ಸೈನಿಕರನ್ನು ಆರಿಸಿಕೊಂಡು ಅವರನ್ನು ಸಿರಿಯಾದವರಿಗೆ ವಿರುದ್ಧ ನಿಲ್ಲಿಸಿದನು.
10 : ಉಳಿದ ಜನರನ್ನು ತನ್ನ ತಮ್ಮನಾದ ಅಬೀಷೈಯ ವಶಕ್ಕೆ ಕೊಟ್ಟು,
11 : “ಸಿರಿಯಾದವರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ; ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುತ್ತೇನೆ.
12 : ಧೈರ್ಯದಿಂದಿರು, ನಮ್ಮ ಜನರಿಗಾಗಿ ಹಾಗು ನಮ್ಮ ದೇವರ ಪಟ್ಟಣಗಳಿಗಾಗಿ ನಮ್ಮ ಪೌರುಷವನ್ನು ತೋರಿಸೋಣ; ಸರ್ವೇಶ್ವರ ತಮಗೆ ಸರಿ ಕಾಣುವಂಥದ್ದನ್ನು ಮಾಡಲಿ,” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರೋಧವಾಗಿ ಕಳುಹಿಸಿದನು.
13 : ಯೋವಾಬನೂ ಅವನ ಜನರೂ ಸಿರಿಯಾದವರಿಗೆ ವಿರೋಧವಾಗಿ ಯುದ್ಧ ಪ್ರಾರಂಭಿಸಿದಾಗ ಸಿರಿಯಾದವರು ಓಡಿಹೋದರು.
14 : ಇವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅಭೀಷೈಯನ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಹೊಕ್ಕರು. ಯೋವಾಬನು ಅಮ್ಮೋನಿಯರೊಡನೆ ಯುದ್ಧಮಾಡುವುದನ್ನು ಬಿಟ್ಟು ಜೆರುಸಲೇಮಿಗೆ ಹೋದನು.
15 : ಸಿರಿಯಾದವರಿಗೆ ತಮ್ಮ ಸೈನ್ಯ ಇಸ್ರಯೇಲರಿಂದ ಪರಾಭವಗೊಂಡಿತೆಂದು ಗೊತ್ತಾದಾಗ ಅವರೆಲ್ಲರೂ ಕೂಡಿಬಂದರು.
16 : ಹದದೆಜೆರನು ಯೂಪ್ರಟಿಸ್ ನದಿಯ ಆಚೆಯಲ್ಲಿದ್ದ ಸಿರಿಯಾ ದವರನ್ನು ಬರಮಾಡಿದನು; ಅವರು ಹೇಲಾಮಿಗೆ ಬಂದರು. ಹದದೆಜೆರನ ಸೇನಾಪತಿಯಾದ ಶೋಬಕನು ಅವರ ನಾಯಕನಾದನು.
17 : ಈ ಸುದ್ದಿ ದಾವೀದನಿಗೆ ಮಟ್ಟಿದಾಗ ಅವನು ಇಸ್ರಯೇಲ ರೆಲ್ಲರನ್ನೂ ಕೂಡಿಸಿಕೊಂಡು ಜೋರ್ಡನ್ ನದಿ ದಾಟಿ ಹೇಲಾಮಿಗೆ ಬಂದನು. ಸಿರಿಯಾದವರು ವ್ಯೂಹಕಟ್ಟಿ ದಾವೀದನೊಡನೆ ಯುದ್ಧಕ್ಕೆ ನಿಂತರು.
18 : ಆದರೆ ಇಸ್ರಯೇಲರ ಮುಂದೆ ಸೋತು ಓಡಿಹೋದರು; ದಾವೀದನು ಸಿರಿಯಾದವರ ಏಳುನೂರು ರಥಗಳನ್ನು ಹಾಳುಮಾಡಿದನು. ನಾಲ್ವತ್ತು ಸಾವಿರ ಮಂದಿ ರಾಹುತರನ್ನು ಕೊಂದನು. ಸೇನಾಪತಿಯಾದ ಶೋಬಕನು ಗಾಯಗೊಂಡು ಅಲ್ಲೇ ಸತ್ತನು.
19 : ಹದದೆಜೆರನಿಗೆ ದಾಸರಾಗಿದ್ದ ರಾಜರೆಲ್ಲರೂ ಇಸ್ರಯೇಲರ ಮುಂದೆ ತಮ್ಮ ಕೈಸಾಗದೆಂದು ತಿಳಿದು ಅವರೊಡನೆ ಸಂಧಾನ ಮಾಡಿಕೊಂಡು ಅವರ ಅಧೀನರಾದರು. ಅಂದಿನಿಂದ ಸಿರಿಯಾದವರು ಅಮ್ಮೋನಿಯರಿಗೆ ಸಹಾಯ ಮಾಡುವುದಕ್ಕೆ ಧೈರ್ಯಗೊಳ್ಳಲಿಲ್ಲ.

· © 2017 kannadacatholicbible.org Privacy Policy