Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಸರ್ವೇಶ್ವರನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.
2 : ಹೂರಾಮನಿಂದ ತನಗೆ ದೊರಕಿದ ಪಟ್ಟಣಗಳನ್ನು ಭದ್ರಪಡಿಸಿ ಅವುಗಳಲ್ಲಿ ಇಸ್ರಯೇಲರು ನೆಲಸುವಂತೆ ಮಾಡಿದನು.
3 : ಅನಂತರ ಅವನು ಚೋಬರಾಜ್ಯದ ಹಮಾತಿಗೆ ಹೋಗಿ ಅದನ್ನು ಸ್ವಾಧೀನಮಾಡಿ ಕೊಂಡನು.
4 : ಮರುಭೂಮಿಯಲ್ಲಿದ್ದ ತದ್ಮೋರ್ ಪಟ್ಟಣವನ್ನೂ ಹಮಾತಿನಲ್ಲಿ ತಾನು ಕಟ್ಟಿಸಿದ ಎಲ್ಲಾ ಉಗ್ರಾಣದ ಪಟ್ಟಣಗಳನ್ನೂ ಸುಭದ್ರ ಪಡಿಸಿದನು.
5 : ಮೇಲಿನ ಮತ್ತು ಕೆಳಗಿನ ಬೇತ್ಹೋರೋನ್ ಎಂಬ ಊರುಗಳಿಗೆ ಪೌಳಿಗೋಡೆ, ಕದ, ಅಗುಳಿ ಇವುಗಳನ್ನು ಏರ್ಪಡಿಸಿ ಕೋಟೆಗಳನ್ನಾಗಿ ಮಾರ್ಪಡಿಸಿದನು.
6 : ಬಾಲಾತೂರು, ತನ್ನ ಎಲ್ಲ ಉಗ್ರಾಣದ ಪಟ್ಟಣಗಳು, ಯುದ್ಧರಥಗಳನ್ನಿರಿಸುವ ಪಟ್ಟಣ, ರಾಹುತರ ಪಟ್ಟಣ ಇವುಗಳನ್ನೂ ಕಟ್ಟಿಸಿದನು. ಜೆರುಸಲೇಮಿನಲ್ಲೂ ಲೆಬನೋನಿನಲ್ಲೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲೂ ತನಗೆ ಇಷ್ಟವಾದುವುಗಳನ್ನೆಲ್ಲಾ ಕಟ್ಟಿಸಿದನು.
7 : ಇಸ್ರಯೇಲರಿಂದ ಸಂಹೃತರಾಗದೆ ಕಾನಾನ್ ನಾಡಿನಲ್ಲಿ ಅಳಿದುಳಿದ ಹಿತ್ತಿಯ, ಅಮೋರಿಯ, ಪೆರಿಜೀಯ, ಹಿವ್ವಿಯ ಹಾಗೂ ಯೆಬೂಸಿಯ ಮೊದಲಾದ ಅನ್ಯ ಜನಾಂಗಗಳ ಸಂತಾನದವರೆಲ್ಲರನ್ನೂ ಬಿಟ್ಟಿ ಹಿಡಿದನು.
8 : ಅವರು ಇಂದಿನವರೆಗೂ ಬಿಟ್ಟೀಕೆಲಸದವರಾಗಿರುತ್ತಾರೆ.
9 : ಆದರೆ ಸೊಲೊಮೋನನು ತನ್ನ ಕೆಲಸಕ್ಕಾಗಿ ಇಸ್ರಯೇಲರನ್ನು ಬಿಟ್ಟಿಹಿಡಿಯಲಿಲ್ಲ. ಅವರನ್ನು ಸೈನಿಕರನ್ನಾಗಿ, ಅಧಿಪತಿಗಳನ್ನಾಗಿ, ಸರದಾರರನ್ನಾಗಿ ಹಾಗೂ ರಥಾಶ್ವಬಲಗಳ ನಾಯಕರನ್ನಾಗಿ ನೇಮಿಸಿ ಕೊಂಡನು.
10 : ಇಂಥ ಇನ್ನೂರೈವತ್ತು ಮಂದಿ ಮುಖ್ಯಾಧಿಪತಿಗಳು ಅರಸ ಸೊಲೊಮೋನನ ಆಳುಗಳ ಮೇಲೆ ಅಧಿಕಾರಿಗಳಾಗಿದ್ದರು.
11 : “ಯಾವ ಯಾವ ಸ್ಥಳಗಳಲ್ಲಿ ಸರ್ವೇಶ್ವರನ ಮಂಜೂಷವಿತ್ತೋ ಅವು ಪವಿತ್ರ ಸ್ಥಾನಗಳು; ಆದುದರಿಂದ ಇಸ್ರಯೇಲರ ಅರಸನಾಗಿದ್ದ ದಾವೀದನ ಮನೆ ಪವಿತ್ರವಾದುದು; ಅಲ್ಲಿ ಫರೋಹನ ಮಗಳಾದ ನನ್ನ ಹೆಂಡತಿ ವಾಸಿಸಬಾರದು,” ಎಂದುಕೊಂಡು ಸೊಲೊಮೋನನು ಆಕೆಯನ್ನು ದಾವೀದನಗರದಿಂದಾಚೆ ಆಕೆಗಾಗಿಯೇ ತಾನು ಕಟ್ಟಿಸಿದ್ದ ಮಂದಿರದಲ್ಲಿ ಇರಿಸಿದನು.
12 : ಆ ಕಾಲದಿಂದ ಸೊಲೊಮೋನನು ತಾನು ಸರ್ವೇಶ್ವರನಿಗಾಗಿ ಮಂಟಪದ ಮುಂದೆ ಕಟ್ಟಿಸಿದ ಸರ್ವೇಶ್ವರನ ಬಲಿಪೀಠದ ಮೇಲೆ,
13 : ಮೋಶೆಯ ಆಜ್ಞೆಯಂತೆ, ಸಬ್ಬತ್‍ದಿನ, ಅಮಾವಾಸ್ಯೆ ಇವುಗಳಲ್ಲೂ ಹುಳಿರಹಿತ ರೊಟ್ಟಿಗಳ ಜಾತ್ರೆ, ಪಂಚಾಶತ್ತಮ ದಿನದ ಜಾತ್ರೆ, ಪರ್ಣಕುಟೀರಗಳ ಜಾತ್ರೆ ಎಂಬೀ ಮೂರು ವಾರ್ಷಿಕಜಾತ್ರೆಗಳಲ್ಲೂ ಆಯಾ ದಿವಸಗಳಿಗೆ ನೇಮಕವಾದ ದಹನಬಲಿಗಳನ್ನು ಸಮರ್ಪಿಸುತ್ತಿದ್ದನು.
14 : ಇದಲ್ಲದೆ, ತನ್ನ ತಂದೆ ದಾವೀದನ ವಿಧಿಗೆ ಅನುಸಾರವಾಗಿ ಯಾಜಕ ವರ್ಗಗಳವರನ್ನೂ ಲೇವಿಯರನ್ನೂ ಅವರವರ ಸೇವಾವೃತ್ತಿಗೆ ನೇಮಿಸಿದನು. ಲೇವಿಯರು ಆಯಾ ದಿನದ ನೇಮದ ಪ್ರಕಾರ ದೇವಭಜನೆಮಾಡಿ ಯಾಜಕರ ಕೈಕೆಳಗೆ ಸೇವೆಮಾಡಬೇಕಾಗಿತ್ತು. ದ್ವಾರಪಾಲಕರು ತಮ್ಮ ತಮ್ಮ ವರ್ಗಗಳ ಸರದಿಯ ಮೇಲೆ ಆಯಾ ಬಾಗಿಲುಗಳನ್ನು ಕಾಯಬೇಕಾಗಿತ್ತು. ಇದು ದೈವಪುರುಷ ದಾವೀದರಾಜನ ಅಪ್ಪಣೆ ಆಗಿತ್ತು.
15 : ಅವನು ಯಾಜಕರನ್ನೂ ಲೇವಿಯರನ್ನೂ ಅರಮನೆಯ ಭಂಡಾರಗಳನ್ನೂ ಕುರಿತು ಕೊಟ್ಟ ಅಪ್ಪಣೆಯನ್ನು ಅವರು ಕಿಂಚಿತ್ತಾದರೂ ಮೀರಲಿಲ್ಲ.
16 : ಈ ಪ್ರಕಾರ ಅಸ್ತಿವಾರ ಮೊದಲುಗೊಂಡು ಸಮಾಪ್ತಿಯವರೆಗೂ ಸೊಲೊಮೋನನ ಎಲ್ಲಾ ಕೆಲಸವೂ ಮುಗಿದು ಸರ್ವೇಶ್ವರನ ಆಲಯ ಸಿದ್ಧವಾಯಿತು.
17 : ಆಮೇಲೆ, ಸೊಲೊಮೋನನು ಎದೋಮ್ ದೇಶದ ಸಮುದ್ರತೀರದಲ್ಲಿರುವ ಎಚ್ಯೋನ್ಗೆ ಬೆರ್ ಹಾಗೂ ಏಲೋತ್ ಎಂಬ ಊರುಗಳಿಗೆ ಹೋದನು.
18 : ಹೂರಾಮನು ಅವನಿಗೆ ತನ್ನ ಆಳುಗಳ ಮುಖಾಂತರ ಹಡಗುಗಳನ್ನು ಕಳುಹಿಸಿದ್ದಲ್ಲದೆ, ಸಮುದ್ರ ಪ್ರಯಾಣದಲ್ಲಿ ನಿಪುಣರಾದ ನಾವಿಕರನ್ನೂ ಕಳುಹಿಸಿದನು. ಅವರು ಸೊಲೊಮೋನನ ಸೇವಕರೊಡನೆ ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸ ಸೊಲೊಮೋನನಿಗೆ 15,000 ಕಿಲೋಗ್ರಾಂಗಿಂತ ಹೆಚ್ಚು ಬಂಗಾರವನ್ನೂ ತಂದು ಕೊಟ್ಟರು.

· © 2017 kannadacatholicbible.org Privacy Policy