Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಮುಗಿಸಿದ ಕೂಡಲೆ ಆಕಾಶದಿಂದ ಬೆಂಕಿ ಇಳಿದು ಬಂದು ದಹನಬಲಿದ್ರವ್ಯಗಳನ್ನೂ ಬಲಿ ಮಾಂಸವನ್ನೂ ದಹಿಸಿಬಿಟ್ಟಿತು; ಸರ್ವೇಶ್ವರನ ತೇಜಸ್ಸು ಆಲಯದಲ್ಲಿ ತುಂಬಿಕೊಂಡಿತು.
2 : ಸರ್ವೇಶ್ವರನ ಆ ತೇಜಸ್ಸು ಆಲಯದಲ್ಲಿ ತುಂಬಿಕೊಂಡಿದ್ದರಿಂದ ಯಾಜಕರು ಒಳಗೆ ಪ್ರವೇಶಿಸಲಾರದೆ ಹೋದರು.
3 : ಇಸ್ರಯೇಲರೆಲ್ಲರೂ ಬೆಂಕಿ ಇಳಿದು ಬರುವುದನ್ನೂ ಸರ್ವೇಶ್ವರನ ತೇಜಸ್ಸು ಆಲಯದಲ್ಲಿರುವುದನ್ನೂ ನೋಡಿ ನೆಲU್ಪಟ್ಟಿನ ಮೇಲೆ ಸಾಷ್ಟಾಂಗವೆರಗಿ ಆರಾಧಿಸಿದರು; “ಸರ್ವೇಶ್ವರ ಒಳ್ಳೆಯವರು; ಅವರ ಅಚಲ ಪ್ರೀತಿ ಶಾಶ್ವತ” ಎಂದು ಕೃತಜ್ಞತಾಸ್ತುತಿ ಮಾಡಿದರು.
4 : ಇವರಿಗೆ ಅನೇಕ ಪತ್ನಿಯರೂ ಮಕ್ಕಳೂ ಇದ್ದು ಅವರ ವಂಶಜರಲ್ಲಿ - 36,000 ಪುರುಷರನ್ನು ಸೈನ್ಯದಲ್ಲಿ ಸೇವೆಮಾಡಲು ಒದಗಿಸಿಕೊಟ್ಟರು.
5 : ಅರಸ ಸೊಲೊಮೋನನು ಬಲಿಯಾಗಿ ವಧಿಸಿದ ಹೋರಿಗಳು ಇಪ್ಪತ್ತೆರಡು ಸಾವಿರ, ಕುರಿಗಳು ಲಕ್ಷದ ಇಪ್ಪತ್ತು ಸಾವಿರ, ಈ ಪ್ರಕಾರ ಅರಸನೂ ಇಸ್ರಯೇಲರೆಲ್ಲರೂ ದೇವಾಲಯವನ್ನು ಪ್ರತಿಷ್ಠಿಸಿದರು.
6 : ಯಾಜಕರೂ ಲೇವಿಯರೂ ತಮ್ಮ ತಮ್ಮ ಸ್ಥಳಗಳಲ್ಲಿ ನಿಂತರು. ದಾವೀದನು ಸರ್ವೇಶ್ವರನ ಗಾಯನಸೇವೆಗಾಗಿ ಮಾಡಿಸಿದ ವಾದ್ಯಗಳು ಈ ಲೇವಿಯರ ಕೈಯಲ್ಲಿ ಇದ್ದವು. ಇವರು ರಾಜಸೇವೆಯಲ್ಲಿದ್ದುಕೊಂಡು ದೇವಾರಾಧನೆ ನಡೆಸುತ್ತಾ, “ಸರ್ವೇಶ್ವರನಿಗೆ ಕೃತಜ್ಞತಾ ಸ್ತುತಿಯನ್ನು ಸಮರ್ಪಿಸಿರಿ; ಅವರ ಅಚಲಪ್ರೀತಿ ಶಾಶ್ವತ” ಎಂಬುದಾಗಿ ಆ ವಾದ್ಯಗಳೊಡನೆ ಭಜಿಸುತ್ತಿದ್ದರು. ಯಾಜಕರು ಇವರ ಎದುರಾಗಿ ನಿಂತು ತುತೂರಿಯೂದುತ್ತಿದ್ದರು. ಇಸ್ರಯೇಲರೆಲ್ಲರೂ ನಿಂತಿದ್ದರು.
7 : ಸೊಲೊಮೋನನು ಮಾಡಿಸಿದ್ದ ಕಂಚಿನ ಬಲಿಪೀಠವು, ಸಮರ್ಪಣೆಯಾದ ದಹನಬಲಿ ದ್ರವ್ಯಗಳನ್ನೂ ಧಾನ್ಯನೈವೇದ್ಯಗಳನ್ನೂ ಶಾಂತಿ ಸಮಾಧಾನಬಲಿಯ ಕೊಬ್ಬನ್ನೂ ಹಿಡಿಯಲಾಗಲಿಲ್ಲ. ಆದ್ದರಿಂದ ಅವನು ಸರ್ವೇಶ್ವರನ ಆಲಯದ ಮುಂದಿನ ಪ್ರಾಕಾರದ ಮಧ್ಯಸ್ಥಳವನ್ನು ಪ್ರತಿಷ್ಠಿಸಿ, ಅಲ್ಲಿ ಇವುಗಳನ್ನೆಲ್ಲಾ ಸಮರ್ಪಿಸಿದನು.
8 : ಈ ಪ್ರಕಾರ ಸೊಲೊಮೋನನು ಮತ್ತು ಹಮಾತಿನ ದಾರಿಯಿಂದ ಈಜಿಪ್ಟಿನ ಹಳ್ಳದ ವರೆಗಿರುವ ಪ್ರಾಂತ್ಯಗಳಿಂದ ಮಹಾಸಮೂಹವಾಗಿ ಕೂಡಿ ಬಂದಿದ್ದ ಇಸ್ರಯೇಲರೆಲ್ಲರು ಅದೇ ಸಮಯದಲ್ಲಿ ಏಳು ದಿನಗಳವರೆಗೂ ಜಾತ್ರೆ ನಡೆಸಿದರು.
9 : ತರುವಾಯ ಎಂಟನೆಯ ದಿನದಲ್ಲಿ ಸಭೆ ಸೇರಿದರು. ಹೀಗೆ ಏಳು ದಿವಸ ಬಲಿಪೀಠ ಪ್ರತಿಷ್ಠೆಯನ್ನೂ ಇನ್ನು ಏಳು ದಿವಸ ಜಾತ್ರೆಯನ್ನೂ ನಡೆಸಿದರು.
10 : ಏಳನೆಯ ತಿಂಗಳಿನ ಇಪ್ಪತ್ತ ಮೂರನೆಯ ದಿನ ಅರಸನು ಜನರಿಗೆ ಅಪ್ಪಣೆ ಕೊಟ್ಟನು; ಅವರು ದಾವೀದ - ಸೊಲೊಮೋನರಿಗೂ ಪ್ರಜೆಗಳಾದ ಇಸ್ರಯೇಲರಿಗೂ ಸರ್ವೇಶ್ವರ ಮಾಡಿದ ಉಪಕಾರಗಳನ್ನು ನೆನಸಿಕೊಂಡು, ಆನಂದಭರಿತರಾಗಿ ಹರ್ಷಿಸುತ್ತಾ, ತಮ್ಮ ತಮ್ಮ ನಿವಾಸಗಳಿಗೆ ಹಿಂದಿರುಗಿದರು.
11 : ಸೊಲೊಮೋನನು ಸರ್ವೇಶ್ವರನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿ, ಆ ಕಟ್ಟಡಗಳ ವಿಷಯವಾಗಿ ತನ್ನ ಮನಸ್ಸಿನಲ್ಲಿ ಇದ್ದ ಯೋಜನೆಯನ್ನು ಈಡೇರಿಸಿದನು.
12 : ಬಳಿಕ ಸರ್ವೇಶ್ವರ ಅವನಿಗೆ ರಾತ್ರಿಯಲ್ಲಿ ಪ್ರತ್ಯಕ್ಷರಾಗಿ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನು ಆಲಿಸಿ, ಈ ಮನೆಯನ್ನು ಬಲಿಯರ್ಪಣಾ ಮಂದಿರಕ್ಕಾಗಿ ಆರಿಸಿಕೊಂಡಿದ್ದೇನೆ.
13 : ನಾನು ಆಕಾಶವನ್ನು ಮಳೆಗರೆಯದಂತೆ ಮುಚ್ಚುವಾಗಲು, ನಾಡನ್ನು ನಾಶಮಾಡುವುದಕ್ಕೆ ಮಿಡತೆಗಳನ್ನು ಕಳುಹಿಸುವಾಗಲು ಹಾಗೂ ನನ್ನ ಪ್ರಜೆಯ ಮೇಲೆ ಘೋರವ್ಯಾಧಿಯನ್ನು ಬರಮಾಡುವಾಗಲು
14 : ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನೇ ತಗ್ಗಿಸಿಕೊಂಡು, ನನ್ನನ್ನು ಪ್ರಾರ್ಥಿಸಿ, ನನ್ನ ದರ್ಶನವನ್ನು ಬಯಸುವುದಾದರೆ ನಾನು ಪರಲೋಕದಿಂದ ಆಲಿಸಿ, ಅವರ ಪಾಪಗಳನ್ನು ಕ್ಷಮಿಸಿ, ಅವರ ನಾಡಿಗೆ ಆರೋಗ್ಯಭಾಗ್ಯವನ್ನು ದಯಪಾಲಿಸುವೆನು.
15 : ಇನ್ನು ಮುಂದೆ ಈ ಸ್ಥಳದಲ್ಲಿ ಪ್ರಾರ್ಥಿಸುವವರನ್ನು ಕಟಾಕ್ಷಿಸಿ ಅವರ ವಿಜ್ಞಾಪನೆಗೆ ಕಿವಿಗೊಡುವೆನು.
16 : ನನ್ನ ನಾಮ ಮಹಿಮೆ ಈ ಆಲಯದಲ್ಲಿ ಶಾಶ್ವತವಾಗಿರುವಂತೆ ಇದನ್ನು ನನಗಾಗಿ ಆರಿಸಿ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ ಮನಸ್ಸೂ ಸದಾ ಅಲ್ಲಿ ಇರುವುವು.
17 : ನೀನು ನಿನ್ನ ತಂದೆಯಾದ ದಾವೀದನಂತೆ ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಗೊಂಡು ನನಗೆ ವಿಧೇಯನಾಗಿ ನಡೆದುಕೊಂಡರೆ
18 : ನಿನ್ನ ರಾಜ್ಯ ಸಿಂಹಾಸನವನ್ನು ಸ್ಥಿರಪಡಿಸುವೆನು; ‘ಇಸ್ರಯೇಲರಲ್ಲಿ ನಿನ್ನ ಸಂತಾನದವರು ತಪ್ಪದೆ ರಾಜ್ಯಾಧಿಕಾರ ನಡೆಸುವರು’ ಎಂಬುದಾಗಿ ನಿನ್ನ ತಂದೆ ದಾವೀದನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು.
19 : ಆದರೆ ನೀವು ದ್ರೋಹಿಗಳಾಗಿ, ನನ್ನ ಆಜ್ಞಾವಿಧಿಗಳನ್ನು ಉಲ್ಲಂಘಿಸಿ, ಅನ್ಯ ದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈ ಮುಗಿಯುವುದಾದರೆ,
20 : ನಾನು ಇಸ್ರಯೇಲರಿಗೆ ಕೊಟ್ಟ ನನ್ನ ನಾಡಿನಿಂದ ನಿಮ್ಮನ್ನು ಕಿತ್ತು ಹಾಕುವೆನು; ನನ್ನ ಹೆಸರಿಗೆ ಪ್ರತಿಷ್ಠಿಸಿಕೊಂಡ ಈ ಆಲಯವನ್ನು ನಿರಾಕರಿಸಿಬಿಡುವೆನು; ಎಲ್ಲ ಜನಾಂಗ ಗಳವರು ಪರಿಹಾಸ್ಯದಿಂದ ಲಾವಣಿ ಕಟ್ಟುವುದಕ್ಕೂ ನಿಂದಿಸುವುದಕ್ಕೂ ಇದು ಆಸ್ಪದವಾಗುವಂತೆ ಮಾಡುವೆನು.
21 : ಉನ್ನತವಾದ ಈ ಮಂದಿರದ ಮಾರ್ಗವಾಗಿ ಹೋಗುವವರು ಇದನ್ನು ನೋಡಿ ವಿಸ್ಮಿತರಾಗಿ, ‘ಸರ್ವೇಶ್ವರ ಈ ನಾಡನ್ನೂ ಈ ಆಲಯವನ್ನೂ ಹೀಗೇಕೆ ಮಾಡಿ ಬಿಟ್ಟರು?’ ಎಂದು ಕೇಳುವರು.
22 : ಆಗ ಅವರಿಗೆ, ‘ಈ ನಾಡಿನವರು ತಮ್ಮನ್ನು ಈಜಿಪ್ಟ್ ದೇಶದಿಂದ ಬರಮಾಡಿದ ತಮ್ಮ ಪೂರ್ವಜರ ದೇವರಾದ ಸರ್ವೇಶ್ವರನನ್ನು ಬಿಟ್ಟು, ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಸೇವೆ ಸಲ್ಲಿಸಿದ್ದರಿಂದಲೇ ಅವರು ಈ ಎಲ್ಲಾ ಆಪತ್ತುಗಳನ್ನು ಅವರಿಗೆ ಬರಮಾಡಿ ಇದ್ದಾರೆ,’ ಎಂಬ ಉತ್ತರ ಸಿಕ್ಕುವುದು,” ಎಂದರು.

· © 2017 kannadacatholicbible.org Privacy Policy