1 : ಆಗ ಸೊಲೊಮೋನನು ಹೀಗೆಂದು ಪ್ರಾರ್ಥಿಸಿದನು:
“ಹೇ ಸರ್ವೇಶ್ವರಾ, ರವಿಯನ್ನು
ಆಗಸದಲ್ಲಿ ಸ್ಥಿರವಾಗಿರಿಸಿದ ನೀವು
ಆರಿಸಿಕೊಂಡಿರಿ ಕರಿಮೋಡದಲಿ ವಾಸಿಸಲು.
2 : ನಾ ನಿರ್ಮಿಸಿರುವ ಈ ಭವ್ಯ ಮಂದಿರ ನಿಮಗಾಗಲಿ ಶಾಶ್ವತ ನಿವಾಸ.”
3 : ಇದಾದ ಮೇಲೆ ಎದ್ದು ನಿಂತಿದ್ದ ಇಸ್ರಯೇಲ್ ಸಮಾಜದ ಕಡೆಗೆ ತಿರುಗಿಕೊಂಡು ಅವರನ್ನು ಆಶೀರ್ವದಿಸಿದನು.
4 : “ಇಸ್ರಯೇಲಿನ ದೇವರಾದ ಸರ್ವೇಶ್ವರನಿಗೆ ಸ್ತೋತ್ರವಾಗಲಿ! ನನ್ನ ತಂದೆ ದಾವೀದನಿಗೆ ಅವರು ಬಾಯಿಂದ ನುಡಿದದ್ದನ್ನು ಈಗ ಕೈಯಿಂದ ನೆರವೇರಿಸಿದ್ದಾರೆ.
5 : ಅವರು, ‘ನನ್ನ ಜನರಾದ ಇಸ್ರಯೇಲರನ್ನು ಈಜಿಪ್ಟಿನಿಂದ ಬರಮಾಡಿದಂದಿನಿಂದ ನನ್ನ ನಾಮದ ನಿವಾಸಕ್ಕಾಗಿ ಇಸ್ರಯೇಲ್ ಕುಲಗಳಲ್ಲಿ ಯಾವ ಪಟ್ಟಣವನ್ನೂ ಆಲಯಸ್ಥಾನವನ್ನಾಗಿ ಆರಿಸಿಕೊಳ್ಳಲಿಲ್ಲ; ನನ್ನ ಪ್ರಜೆ ಇಸ್ರಯೇಲರನ್ನು ಆಳುವುದಕ್ಕೆ ಯಾವ ವ್ಯಕ್ತಿಯನ್ನು ಆರಿಸಿಕೊಂಡದ್ದೂ ಇಲ್ಲ.
6 : ಆದರೆ ಈಗ ನನ್ನ ನಾಮಸ್ಥಾಪನೆಗಾಗಿ ಜೆರುಸಲೇಮನ್ನೂ ನನ್ನ ಪ್ರಜೆಗಳಾದ ಇಸ್ರಯೇಲರನ್ನು ಆಳುವುದಕ್ಕೆ ದಾವೀದನನ್ನೂ ಆರಿಸಿಕೊಂಡಿದ್ದೇನೆ’, ಎಂದು ಹೇಳಿದ್ದರು.
7 : “ನನ್ನ ತಂದೆ ದಾವೀದನು ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿಗಾಗಿ ಒಂದು ಆಲಯವನ್ನು ಕಟ್ಟಬೇಕೆಂದು ಮನಸ್ಸು ಮಾಡಿದಾಗ,
8 : ನೀನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವುದಕ್ಕೆ ಮನಸ್ಸು ಮಾಡಿದ್ದು ಒಳ್ಳೆಯದೇ ಸರಿ.
9 : ಆದರೂ ಅದನ್ನು ಕಟ್ಟಬೇಕಾದವನು ನೀನಲ್ಲ. ನಿನ್ನಿಂದ ಹುಟ್ಟುವ ಮಗನು ಅದನ್ನು ನನ್ನ ಹೆಸರಿಗಾಗಿ ಕಟ್ಟಬೇಕು,’ ಎಂದು ಹೇಳಿದ್ದರು.
10 : ತಾವು ಕೊಟ್ಟ ಮಾತನ್ನು ಸರ್ವೇಶ್ವರ ನೆರವೇರಿಸಿದ್ದಾರೆ. ಅವರ ವಾಗ್ದಾನದಂತೆ ನಾನು ನನ್ನ ತಂದೆ ದಾವೀದನ ಸ್ಥಾನದಲ್ಲಿ ಕುಳಿತುಕೊಂಡಿದ್ದೇನೆ. ಇಸ್ರಯೇಲ್ ದೇವರಾದ ಸರ್ವೇಶ್ವರನ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆ.
11 : ಇದಲ್ಲದೆ, ಇಸ್ರಯೇಲರಿಗೆ ಸರ್ವೇಶ್ವರನಿಂದ ದೊರಕಿದ ನಿಬಂಧನಶಾಸನಗಳಿರುವ ಮಂಜೂಷವನ್ನು ಅದರಲ್ಲಿಟ್ಟಿದ್ದೇನೆ,” ಎಂದು ಹೇಳಿದನು.
12 : ಸೊಲೊಮೋನನು ಇಸ್ರಯೇಲರೆಲ್ಲರ ಎದುರಿನಲ್ಲಿ ಸರ್ವೇಶ್ವರನ ಬಲಿಪೀಠದ ಮುಂದೆ ಕೈಗಳನ್ನೆತ್ತಿಕೊಂಡು ಪ್ರಾರ್ಥನಾ ಭಂಗಿಯಲ್ಲಿ ನಿಂತನು.
13 : ಅವನು 2.2 ಮೀಟರ್ ಉದ್ದ, 2.2 ಮೀಟರ್ ಅಗಲ, 1.3 ಮೀಟರ್ ಎತ್ತರವಾಗಿರುವ ಒಂದು ಕಂಚಿನ ಪೀಠವನ್ನು ಮಾಡಿಸಿ ಪ್ರಾಕಾರದ ಮಧ್ಯದಲ್ಲಿರಿಸಿದ್ದನು. ಇಸ್ರಯೇಲ್ ಸರ್ವಸಮೂಹದ ಎದುರಿನಲ್ಲಿ ಅದನ್ನು ಹತ್ತಿ, ಅದರ ಮೇಲೆ ಮೊಣಕಾಲೂರಿಕೊಂಡು, ಆಕಾಶದ ಕಡೆಗೆ ಕೈಗಳನ್ನೆತ್ತಿ, ಹೀಗೆ ಪ್ರಾರ್ಥಿಸಿದನು:
14 : “ಇಸ್ರಯೇಲ್ ದೇವರಾದ ಸರ್ವೇಶ್ವರಾ, ಭೂಲೋಕದಲ್ಲೂ ಪರಲೋಕದಲ್ಲೂ ನಿಮಗೆ ಸಮಾನರಾದ ದೇವರಿಲ್ಲ; ಪೂರ್ಣಮನಸ್ಸಿನಿಂದ ನಿಮಗೆ ಪ್ರಾಮಾಣಿಕರಾಗಿ ನಡೆದುಕೊಳ್ಳುವಂಥ ಭಕ್ತರ ಬಗ್ಗೆ ನೀವು ನಿಮ್ಮ ಒಡಂಬಡಿಕೆಯನ್ನು ನೆರವೇರಿಸಿ ಕೃಪೆಯನ್ನು ತೋರಿಸುತ್ತೀರಿ.
15 : ನಿಮ್ಮ ದಾಸನೂ ನನ್ನ ತಂದೆಯೂ ಆದ ದಾವೀದನಿಗೆ ಕೊಟ್ಟ ಮಾತನ್ನು ಈಡೇರಿಸಿದ್ದೀರಿ; ನಿಮ್ಮ ಬಾಯಿ ನುಡಿದದ್ದನ್ನು ನಿಮ್ಮ ಕೈ ಈಗ ನೆರವೇರಿಸಿತು.
16 : ಇಸ್ರಯೇಲ್ ದೇವರಾದ ಸರ್ವೇಶ್ವರಾ, ನೀವು ನನ್ನ ತಂದೆ ದಾವೀದನಿಗೆ, ‘ನಿನ್ನ ಸಂತಾನದವರು ನಿನ್ನಂತೆ ಜಾಗರೂಕತೆಯಿಂದ ನನ್ನ ಕಟ್ಟಳೆಯನ್ನು ಅನುಸರಿಸಿ ನನ್ನ ಮಾರ್ಗದಲ್ಲಿ ನಡೆದುಕೊಂಡರೆ ಅವರು ಇಸ್ರಯೇಲ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದು ತಪ್ಪದು’ ಎಂಬುದಾಗಿ ವಾಗ್ದಾನ ಮಾಡಿದ್ದೀರಿ; ಅದನ್ನು ನೆರವೇರಿಸಿರಿ.
17 : ಇಸ್ರಯೇಲ್ ದೇವರೇ, ಸರ್ವೇಶ್ವರಾ, ನೀವು ನಿಮ್ಮ ದಾಸ ದಾವೀದನಿಗೆ ನುಡಿದದ್ದೆಲ್ಲವೂ ಸಾರ್ಥಕವಾಗಲಿ!
18 : “ದೇವರು ನಿಜವಾಗಿ ಮಾನವರೊಡನೆ ಭೂಲೋಕದಲ್ಲಿ ವಾಸಿಸುವರೋ? ಆಕಾಶವೂ ಉನ್ನತೋನ್ನತವಾದ ಆಕಾಶವೂ ನಿಮ್ಮ ವಾಸಕ್ಕೆ ಸಾಲವು; ಹೀಗಿರುವಲ್ಲಿ ನಾನು ಕಟ್ಟಿಸಿದ ಈ ಮಂದಿರವು ಹೇಗೆ ತಾನೆ ಸಾಕಾದೀತು?
19 : ಆದರೂ ನನ್ನ ದೇವರೇ, ಸರ್ವೇಶ್ವರಾ, ನಿಮ್ಮ ದಾಸನ ಮೊರೆಯನ್ನು ಆಲಿಸಿರಿ.
20 : ಈ ಸ್ಥಳವನ್ನು ಕುರಿತು, ‘ನನ್ನ ನಾಮದ ಮಹಿಮೆ ಇಲ್ಲಿ ನೆಲೆಸುವುದು’ ಎಂದು ಹೇಳಿದ್ದೀರಿ, ನಿಮ್ಮ ಕೃಪಾಕಟಾಕ್ಷವು ಹಗಲಿರುಳೂ ಈ ಮಂದಿರದ ಮೇಲಿರಲಿ; ಇಲ್ಲಿ ನಿಮ್ಮ ದಾಸನು ಪ್ರಾರ್ಥಿಸುವಾಗಲೆಲ್ಲಾ ಅವನಿಗೆ ಸದುತ್ತರವನ್ನು ದಯಪಾಲಿಸಿರಿ.
21 : ನಿಮ್ಮ ದಾಸನಾದ ನಾನಾಗಲಿ, ನಿಮ್ಮ ಪ್ರಜೆಗಳಾದ ಇಸ್ರಯೇಲರಾಗಲಿ, ಈ ಸ್ಥಳದ ಕಡೆಗೆ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸುವಾಗ ನಿಮ್ಮ ನಿವಾಸವಾಗಿರುವ ಪರಲೋಕದಿಂದ ನಮ್ಮ ಬಿನ್ನಹಗಳನ್ನು ಕೇಳಿ, ಕ್ಷಮೆಯನ್ನು ಅನುಗ್ರಹಿಸಿರಿ.
22 : “ನೆರೆಯವನಿಗೆ ವಿರುದ್ಧ ತಪ್ಪು ಮಾಡಿದವನು ಎಂಬ ಸಂಶಯಕ್ಕೆ ಗುರಿಯಾದ ಒಬ್ಬ ವ್ಯಕ್ತಿ ತಾನು ನಿರ್ದೋಷಿಯೆಂದು ಪ್ರಮಾಣಮಾಡಬೇಕಾದಾಗ, ಅವನು ಈ ಆಲಯಕ್ಕೆ ಬಂದು, ನಿಮ್ಮ ಪೀಠದ ಮುಂದೆ ನಿಂತು ಪ್ರಮಾಣಮಾಡಿದರೆ,
23 : ನೀವು ಪರಲೋಕದಿಂದ ಅದನ್ನು ಕೇಳಿ ನಿಮ್ಮ ಭಕ್ತರ ವ್ಯಾಜ್ಯವನ್ನು ತೀರಿಸಿರಿ. ದುಷ್ಟನನ್ನು ಖಂಡಿಸಿ ಅವನ ತಪ್ಪನ್ನು ಅವನ ಮೇಲೆಯೇ ಹೊರಿಸಿರಿ; ಅವನು ಅಪರಾಧಿಯೆಂದು ತೋರಿಸಿಕೊಡಿ. ನೀತಿವಂತನಿಗೆ ಅವನ ನೀತಿಯ ಫಲವನ್ನು ಅನುಗ್ರಹಿಸಿ, ಅವನು ನೀತಿವಂತನೆಂದು ತೋರಿಸಿಕೊಡಿ.
24 : “ತಮ್ಮ ಪಾಪಗಳ ನಿಮಿತ್ತ ಶತ್ರುಗಳ ಮುಂದೆ ತಲೆತಗ್ಗಿಸಬೇಕಾಗುವ ನಿಮ್ಮ ಪ್ರಜೆಗಳಾದ ಇಸ್ರಯೇಲರು ನಿಮ್ಮ ಕಡೆಗೆ ತಿರುಗಿಕೊಂಡು, ನಿಮ್ಮ ನಾಮವನ್ನು ಎತ್ತಿ, ಈ ಆಲಯಕ್ಕೆ ಬಂದು, ನಿಮ್ಮ ಸನ್ನಿಧಿಯಲ್ಲಿ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಮಾಡಿದರೆ,
25 : ನೀವು ಪರಲೋಕದಿಂದ ಆಲಿಸಿ ಅವರ ಪಾಪಗಳನ್ನು ಕ್ಷಮಿಸಿ, ಅವರಿಗೂ ಅವರ ಪಿತೃಗಳಿಗೂ ನೀವು ಕೊಟ್ಟ ನಾಡಿಗೆ ಅವರನ್ನು ಮರಳಿ ಬರಮಾಡಿ.
26 : “ಅವರ ಪಾಪಗಳ ನಿಮಿತ್ತ ನೀವು ಆಕಾಶವನ್ನು ಮಳೆಗರೆಯದಂತೆ ಮುಚ್ಚಿ, ಅವರನ್ನು ತಗ್ಗಿಸಿದಾಗ, ಅವರು ತಮ್ಮ ಪಾಪಗಳನ್ನು ಬಿಟ್ಟು ತಮ್ಮನ್ನು ತಗ್ಗಿಸಿದವರು ನೀವೇ ಎಂದು ನಿಮ್ಮ ನಾಮವನ್ನು ಎತ್ತಿ, ಈ ಆಲಯದ ಕಡೆಗೆ ತಿರುಗಿಕೊಂಡು, ನಿಮ್ಮನ್ನು ಪ್ರಾರ್ಥಿಸಿದರೆ,
27 : ಪರಲೋಕದಲ್ಲಿರುವ ನೀವು ಆಲಿಸಿ ನಿಮ್ಮ ಭಕ್ತರೂ ಪ್ರಜೆಗಳೂ ಆದ ಇಸ್ರಯೇಲರ ಪಾಪಗಳನ್ನು ಕ್ಷಮಿಸಿ, ಅವರು ನಡೆಯಬೇಕಾದ ಸನ್ಮಾರ್ಗವನ್ನು ತೋರಿಸಿ, ನಿಮ್ಮ ಪ್ರಜೆಗೆ ಸ್ವಂತ ಸೊತ್ತಾಗಿ ಕೊಟ್ಟ ಈ ನಾಡಿಗೆ ಮಳೆಯನ್ನು ಅನುಗ್ರಹಿಸಿರಿ.
28 : “ನಾಡಿಗೆ ಕ್ಷಾಮ, ಘೋರವ್ಯಾಧಿ, ಬೆಳೆಗೆ ಬಿಸಿಗಾಳಿ, ಬೂದಿ, ಮಿಡತೆ, ಚಿಟ್ಟೆ ಹುಳ, ಪಟ್ಟಣಗಳಿಗೆ ಶತ್ರುಗಳ ಮುತ್ತಿಗೆ, ಇಂಥ ಯಾವ ಉಪದ್ರವದಿಂದಾಗಲಿ, ವ್ಯಾಧಿಯಿಂದಾಗಲಿ, ಬಾಧೆಯುಂಟಾದರೆ
29 : ಎಲ್ಲಾ ಇಸ್ರಯೇಲರಾಗಲಿ, ಅವರಲ್ಲೊಬ್ಬನಾಗಲಿ, ತಾವು ಅನುಭವಿಸುತ್ತಿರುವ ಉಪದ್ರವ, ದುಃಖಗಳ ನಿಮಿತ್ತ ಈ ಆಲಯದ ಕಡೆಗೆ ಕೈಯೆತ್ತಿ ನಿಮಗೆ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಮಾಡಿದರೆ,
30 : ಮನುಷ್ಯರ ಹೃದಯಗಳನ್ನು ಬಲ್ಲಂಥ ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಆಲಿಸಿರಿ; ಅವರಿಗೆ ಪಾಪಪರಿಹಾರವನ್ನು ಅನುಗ್ರಹಿಸಿರಿ. ಮನುಷ್ಯರ ಅಂತರಂಗಗಳನ್ನು ಬಲ್ಲವರು ನೀವೊಬ್ಬರೇ. ಪ್ರತಿಯೊಬ್ಬನಿಗೂ ಅವನವನು ಹಿಡಿಯುವ ಮಾರ್ಗಕ್ಕೆ ತಕ್ಕಹಾಗೆ ಫಲವನ್ನು ಕೊಡಿ.
31 : ಆಗ ನಮ್ಮ ಪಿತೃಗಳಿಗೆ ನೀವು ಕೊಟ್ಟ ಈ ನಾಡಿನಲ್ಲಿ ಅವರು ವಾಸಿಸುವ ಕಾಲವೆಲ್ಲಾ ನಿಮ್ಮಲ್ಲಿ ಭಯಭಕ್ತಿಯುಳ್ಳವರಾಗಿ ನಿಮ್ಮ ಮಾರ್ಗದಲ್ಲೇ ನಡೆಯುವರು.
32 : “ನಿಮ್ಮ ಪ್ರಜೆಗಳಾದ ಇಸ್ರಯೇಲರಿಗೆ ಸೇರದಂಥ ಒಬ್ಬ ಪರದೇಶಿಯು ನಿಮ್ಮ ನಾಮ ಮಹತ್ತು, ಭುಜಬಲ, ಶಿಕ್ಷಾಹಸ್ತ ಇವುಗಳ ಸಂದೇಶವನ್ನು ಕೇಳಿ ದೂರದೇಶದಿಂದ ಬಂದು, ಈ ಆಲಯದ ಮುಂದೆ ನಿಂತು, ನಿಮ್ಮನ್ನು ಪ್ರಾರ್ಥಿಸಿದರೆ ನಿಮ್ಮ ನಿವಾಸವಾಗಿರುವ
33 : ಪರಲೋಕದಿಂದ ಅವನ ಪ್ರಾರ್ಥನೆಯನ್ನು ಕೇಳಿ ಅವನು ಬೇಡಿಕೊಂಡದ್ದನ್ನು ಅನುಗ್ರಹಿಸಿರಿ. ಆಗ ಲೋಕದ ಎಲ್ಲ ಜನರೂ ನಿಮ್ಮ ನಾಮಮಹತ್ತನ್ನು ತಿಳಿದು, ನಿಮ್ಮ ಜನರಾದ ಇಸ್ರಯೇಲರಂತೆ, ನಿಮ್ಮಲ್ಲಿ ಭಯಭಕ್ತಿ ಯುಳ್ಳವರಾಗಿ ನಾನು ನಿಮ್ಮ ಹೆಸರಿಗಾಗಿ ಈ ಆಲಯವನ್ನು ಕಟ್ಟಿಸಿದ್ದೇನೆಂದು ತಿಳಿದುಕೊಳ್ಳುವರು.
34 : “ನೀವು ನಿಮ್ಮ ಜನರನ್ನು ಶತ್ರುಗಳೊಡನೆ ಯುದ್ಧ ಮಾಡುವುದಕ್ಕೆ ಎಲ್ಲಿಗಾದರೂ ಕಳುಹಿಸಿದಾಗ ಅವರು ಅಲ್ಲಿಂದ ನೀವು ಆರಿಸಿಕೊಂಡ ಪಟ್ಟಣದ ಕಡೆಗೂ ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೂ ತಿರುಗಿಕೊಂಡು ನಿಮ್ಮನ್ನು ಪ್ರಾರ್ಥಿಸಿದರೆ,
35 : ನೀವು ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಕೇಳಿ ಅವರಿಗೆ ಜಯವನ್ನು ನೀಡಿರಿ.
36 : “ಅವರು ನಿಮಗೆ ವಿರುದ್ಧ ಪಾಪ ಮಾಡಬಹುದು. ಪಾಪಮಾಡದ ವ್ಯಕ್ತಿ ಒಬ್ಬನೂ ಇಲ್ಲ. ನೀವು ಅವರ ಮೇಲೆ ಕೋಪಗೊಂಡು ಅವರನ್ನು ಶತ್ರುಗಳ ಕೈಗೆ ಒಪ್ಪಿಸಿದಾಗ ಮತ್ತು ಆ ಶತ್ರುಗಳು ಅವರನ್ನು ಸೆರೆಹಿಡಿದು ದೂರದಲ್ಲಾಗಲಿ, ಸಮೀಪದಲ್ಲಾಗಲಿ ಇರುವ ದೇಶಕ್ಕೆ ಒಯ್ದಾಗ,
37 : ಅವರು ಸೆರೆಯವರಾಗಿ ಬಿದ್ದುಕೊಂಡಿರುವ ದೇಶದಲ್ಲಿ ಪಶ್ಚಾತ್ತಾಪಪಟ್ಟು, ನಿಮ್ಮ ಅನುಗ್ರಹದಿಂದ
38 : ತಮ್ಮ ಪಿತೃಗಳಿಗೆ ದೊರಕಿದ ನಾಡಿನ ಕಡೆಗೆ, ನೀವು ಆರಿಸಿಕೊಂಡ ಪಟ್ಟಣದ ಕಡೆಗೆ, ನಾನು ನಿಮ್ಮ ಹೆಸರಿಗಾಗಿ ಕಟ್ಟಿಸಿದ ಈ ಆಲಯದ ಕಡೆಗೆ ತಿರುಗಿಕೊಂಡು, ‘ನಾವು ನಿಮ್ಮ ಆಜ್ಞೆಗಳನ್ನು ಮೀರಿ ಪಾಪಮಾಡಿ ದ್ರೋಹಿಗಳಾದೆವು’ ಎಂದು ಒಪ್ಪಿಕೊಂಡು ಪೂರ್ಣಮನಸ್ಸಿನಿಂದ ಹಾಗೂ ಪೂರ್ಣಪ್ರಾಣದಿಂದ ನಿಮ್ಮನ್ನು ಪ್ರಾರ್ಥಿಸಿದರೆ,
39 : ನೀವು ನಿಮ್ಮ ನಿವಾಸವಾಗಿರುವ ಪರಲೋಕದಿಂದ ಅವರ ವಿಜ್ಞಾಪನೆಯನ್ನೂ ಪ್ರಾರ್ಥನೆಯನ್ನೂ ಆಲಿಸಿ, ಅವರಿಗೆ ದಯೆ ತೋರಿಸಿ, ನಿಮಗೆ ವಿರುದ್ಧ ಪಾಪಮಾಡಿದ ನಿಮ್ಮ ಪ್ರಜೆಗೆ ಕ್ಷಮೆಯನ್ನು ಅನುಗ್ರಹಿಸಿರಿ.
40 : “ನನ್ನ ದೇವರೇ, ಕಟಾಕ್ಷವಿಡಿ, ಈ ಸ್ಥಳದಲ್ಲಿ
ಮಾಡುವ ಪ್ರಾರ್ಥನೆಗೆ ಕಿವಿಗೊಡಿ.
41 : ದೇವರಾದ ಸರ್ವೇಶ್ವರಾ, ಎದ್ದು ಬನ್ನಿ,
ನಿಮ್ಮ ತೇಜೋಮಯ ಮಂಜೂಷದೊಡನೆ
ನಿಮ್ಮ ವಾಸಸ್ಥನದೊಳಗೆ ಸೇರಿಕೊಳ್ಳಿ.
ದೇವರಾದ ಸರ್ವೇಶ್ವರಾ,
ನಿಮ್ಮ ಯಾಜಕರು ರಕ್ಷಣೆಯೆಂಬ ಕವಚವನ್ನು
ಹೊದ್ದುಕೊಳ್ಳಲಿ,
ನಿಮ್ಮ ಭಕ್ತರು ಸೌಭಾಗ್ಯದಲ್ಲಿ ಹರ್ಷಿಸಲಿ.
42 : ದೇವರಾದ ಸರ್ವೇಶ್ವರಾ, ನಿಮ್ಮಿಂದ ಅಭಿಷಿಕ್ತ
ಆದವನನ್ನು ತಳ್ಳಿಬಿಡಬೇಡಿ.
ನಿಮ್ಮ ದಾಸ ದಾವೀದನಿಗೆ ಅನುಗ್ರಹಿಸಿದ
ಕೃಪೆಯನ್ನು ನೆನಪುಮಾಡಿಕೊಳ್ಳಿ.”