Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಪೂರ್ವ


1 : ಸೊಲೊಮೋನನು ಸರ್ವೇಶ್ವರಸ್ವಾಮಿಯ ಆಲಯಕ್ಕೆ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಪಡಿಸಿದನಂತರ ತನ್ನ ತಂದೆ ದಾವೀದನು ಸರ್ವೇಶ್ವರನಿಗೆ ಹರಕೆಹೊತ್ತು ಮುಡಿಪಾಗಿಟ್ಟ ಬೆಳ್ಳಿ ಬಂಗಾರವನ್ನೂ ಎಲ್ಲ ಸಲಕರಣೆಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.
2 : ಅನಂತರ ಸೊಲೊಮೋನನು ದಾವೀದ ನಗರವಾದ ಸಿಯೋನಿನಿಂದ ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ಮೇಲೆ ತರುವುದಕ್ಕಾಗಿ ಇಸ್ರಯೇಲರ ಹಿರಿಯರು, ಕುಲಾಧಿಪತಿಗಳು, ಇವರೇ ಮೊದಲಾದ ಎಲ್ಲಾ ಇಸ್ರಯೇಲ್ ಗಣ್ಯ ವ್ಯಕ್ತಿಗಳನ್ನು ಜೆರುಸಲೇಮಿಗೆ ಕರೆಸಿಕೊಂಡನು
3 : ಇಸ್ರಯೇಲರೆಲ್ಲರೂ ಏಳನೆಯ ತಿಂಗಳಿನ ಜಾತ್ರೆಗಾಗಿ ಅರಸನ ಬಳಿಗೆ ಕೂಡಿ ಬಂದರು.
4 : ಅವರ ಹಿರಿಯರೆಲ್ಲರೂ ಕೂಡಿ ಬಂದಿರಲಾಗಿ ಲೇವಿಯರು ಸರ್ವೇಶ್ವರನ ಮಂಜೂಷವನ್ನು ಹೊತ್ತುಕೊಂಡರು.
5 : ಯಾಜಕರಾದ ಲೇವಿಯರು ದೇವದರ್ಶನದ ಗುಡಾರವನ್ನೂ ಅದರಲ್ಲಿದ್ದ ಎಲ್ಲ ಪರಿಶುದ್ಧ ಉಪಕರಣಗಳನ್ನೂ ಹೊತ್ತುಕೊಂಡು ಹೋದರು.
6 : ಅರಸ ಸೊಲೊಮೋನನೂ ಅಲ್ಲಿ ಕೂಡಿಬಂದಿದ್ದ ಎಲ್ಲ ಇಸ್ರಯೇಲರೂ ಮಂಜೂಷದ ಮುಂದೆ ಅಸಂಖ್ಯಾತ ಕುರಿದನಗಳನ್ನು ಬಲಿದಾನ ಮಾಡಿದರು.
7 : ಯಾಜಕರು ಸರ್ವೇಶ್ವರನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳವಾದ ಗರ್ಭಗುಡಿಯಲ್ಲಿ, ಕೆರೂಬಿಗಳ ರೆಕ್ಕೆಗಳ ಕೆಳಗೆ, ಅದಕ್ಕೆಂದು ನೇಮಕವಾದ ಸ್ಥಳದಲ್ಲಿಟ್ಟರು
8 : ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿದ್ದವು. ಆದುದರಿಂದ ಮಂಜೂಷವೂ ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು.
9 : ಮಂಜೂಷಕ್ಕಿಂತಲೂ ಉದ್ದವಾಗಿದ್ದ ಆ ಕೋಲುಗಳ ತುದಿಗಳು ಗರ್ಭಗುಡಿಯ ಎದುರಿನಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು. ಆದರೆ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ; ಮಂಜೂಷವು ಇಂದಿನವರೆಗೂ ಅಲ್ಲೇ ಇರುತ್ತದೆ.
10 : ಅದರಲ್ಲಿ ಎರಡು ಕಲ್ಲಿನ ಹಲಗೆಗಳು ಹೊರತಾಗಿ ಬೇರೇನೂ ಇರಲಿಲ್ಲ. ಈಜಿಪ್ಟ್ ದೇಶದಿಂದ ಬಂದ ಇಸ್ರಯೇಲರೊಡನೆ, ಹೋರೇಬ್ ಬೆಟ್ಟದ ಬಳಿ, ಸರ್ವೇಶ್ವರ ಒಡಂಬಡಿಕೆ ಮಾಡಿಕೊಂಡ ಮೇಲೆ, ಮೋಶೆ ಅವುಗಳನ್ನು ಅದರಲ್ಲಿಟ್ಟಿದ್ದನು.
11 : ಕೂಡಿಬಂದಿದ್ದ ಯಾಜಕರು, ವರ್ಗ ವ್ಯತ್ಯಾಸವಿಲ್ಲದೆ ಎಲ್ಲರೂ ತಮ್ಮನ್ನು ಶುದ್ಧಪಡಿಸಿ ಕೊಂಡಿದ್ದರು.
12 : ನಾರುಮಡಿಗಳನ್ನು ಧರಿಸಿಕೊಂಡು ತಾಳ, ಸ್ವರಮಂಡಲ, ಕಿನ್ನರಿ, ಇವುಗಳನ್ನು ಹಿಡಿದುಕೊಂಡು, ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನರು ಹಾಗೂ ಇವರ ಮಕ್ಕಳೂ ಸಹೋದರರೂ ತುತೂರಿಗಳನ್ನು ಊದತಕ್ಕ ನೂರಿಪ್ಪತ್ತು ಮಂದಿ ಯಾಜಕರೂ ಬಲಿಪೀಠದ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು.
13 : ಮಂಜೂಷವನ್ನು ಒಳಗಿಟ್ಟ ಯಾಜಕರು ದೇವಾಲಯದಿಂದ ಹೊರಗೆ ಬಂದಕೂಡಲೆ ಒಕ್ಕೊರಲಿನಿಂದ ಸ್ವರವೆತ್ತಿ ಸರ್ವೇಶ್ವರನನ್ನು ಕೀರ್ತಿಸುವುದಕ್ಕಾಗಿ, ತುತೂರಿ ಊದುವವರೂ ಗಾಯನಮಾಡುವವರೂ ಅಲ್ಲಿ ನಿಂತಿದ್ದರು. ತುತೂರಿ, ತಾಳ ಮೊದಲಾದ ವಾದ್ಯಗಳ ಧ್ವನಿ ಹಾಗೂ ‘ಸರ್ವೇಶ್ವರ ಒಳ್ಳೆಯವರು, ಅವರ ಅಚಲ ಪ್ರೀತಿ ಶಾಶ್ವತವಾದುದು’ ಎಂದು ಕೃತಜ್ಞತಾಸ್ತುತಿ ಮಾಡುವವರ ಸ್ವರ ಕೇಳಿಸಿದೊಡನೆ ಮೇಘವೊಂದು ಸರ್ವೇಶ್ವರನ ಆಲಯದಲ್ಲಿ ತುಂಬಿಕೊಂಡಿತು.
14 : ಸರ್ವೇಶ್ವರನ ತೇಜಸ್ಸಿನಿಂದ ವ್ಯಾಪ್ತವಾಗಿದ್ದ ಆ ಮೇಘವು ದೇವಾಲಯದಲ್ಲಿ ತುಂಬಿಕೊಂಡದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆಮಾಡಲಾರದೆ ಹೋದರು.

· © 2017 kannadacatholicbible.org Privacy Policy