1 : ಇದಲ್ಲದೆ, ಸೊಲೊಮೋನನು ತಾಮ್ರದ ಬಲಿಪೀಠವನ್ನು ಮಾಡಿಸಿದನು. ಅದರ ಉದ್ದ ಒಂಬತ್ತು ಮೀಟರ್, ಅಗಲ ಒಂಬತ್ತು ಮೀಟರ್, ಎತ್ತರ 4.5 ಮೀಟರ್,
2 : ಅನಂತರ ಅವನು ‘ಕಂಚಿನ ಕಡಲು’ ಎನಿಸಿಕೊಳ್ಳುವ ಎರಕದ ಒಂದು ದೊಡ್ಡ ಪಾತ್ರೆಯನ್ನು ಮಾಡಿಸಿದನು. ಅದರ ಬಾಯಿ ಚಕ್ರಾಕಾರವಾಗಿಯೂ ಅಂಚಿನಿಂದ ಅಂಚಿಗೆ 4.4 ಮೀಟರ್ ಇತ್ತು. ಅದರ ಎತ್ತರ 2.2 ಮೀಟರ್, ಸುತ್ತಳತೆ 13.2 ಮೀಟರ್,
3 : ಅದನ್ನು ಎರಕಹೊಯ್ಯುವಾಗ ಅದರ (ಅಂಚಿನ) ಕೆಳಗೆ ಸುತ್ತಲೂ ಮೊಳಕ್ಕೆ ಹತ್ತರಂತೆ ಹೋರಿಗಳ ಚಿತ್ರಗಳನ್ನು ಎರಡು ಸಾಲಾಗಿ ಎರಕ ಹೊಯ್ಸಿದನು.
4 : ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ ಮೂರು ಪಶ್ಚಿಮ ದಿಕ್ಕಿಗೂ ಮೂರು ದಕ್ಷಿಣದಿಕ್ಕಿಗೂ ಮೂರು ಪೂರ್ವದಿಕ್ಕಿಗೂ ಮುಖ ಮಾಡಿಕೊಂಡಿದ್ದವು. ಕಂಚಿನ ಕಡಲು ಅವುಗಳ ಬೆನ್ನಿನ ಮೇಲಿತ್ತು. ಅವುಗಳ ಹಿಂಭಾಗವು ಒಳಗಡೆಗಿತ್ತು.
5 : ಆ ಪಾತೆಯ ತಗಡು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲಾಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಅರವತ್ತು ಸಾವಿರ ಲೀಟರ್ ನೀರನ್ನು ಹಿಡಿಯುತ್ತಿತ್ತು.
6 : ಇದಲ್ಲದೆ ಅವನು ಹತ್ತು ನೀರಿನ ಬಾನೆಗಳನ್ನು ಮಾಡಿಸಿ ದಹನಬಲಿ ಸಮರ್ಪಣೆಯ ಸಾಮಾನುಗಳನ್ನು ತೊಳೆದು ಶುದ್ಧಮಾಡುವುದಕ್ಕಾಗಿ ಐದನ್ನು ಬಲಗಡೆಯಲ್ಲಿಯೂ ಐದನ್ನು ಎಡಗಡೆಯಲ್ಲಿಯೂ ಇಡಿಸಿದನು; ಕಡಲು ಎನಿಸಿಕೊಳ್ಳುವ ಪಾತ್ರೆ ಯಾಜಕರ ಸ್ನಾನಕ್ಕಾಗಿ ಇತ್ತು.
7 : ಅದೂ ಅಲ್ಲದೆ ನೇಮಕವಾದ ಮಾದರಿಯಂತೆ ಬಂಗಾರದ ಹತ್ತು ದೀಪಸ್ತಂಭಗಳನ್ನು ಮಾಡಿಸಿ, ಐದನ್ನು ದೇವಾಲಯದೊಳಗೆ ಬಲಗಡೆಯಲ್ಲೂ ಐದನ್ನು ಎಡಗಡೆಯಲ್ಲೂ ಇಡಿಸಿದನು.
8 : ಹತ್ತು ಮೇಜುಗಳನ್ನು ಮಾಡಿಸಿ ದೇವಾಲಯದೊಳಗೆ ಬಲಗಡೆ ಐದನ್ನೂ ಎಡಗಡೆ ಐದನ್ನೂ ಇಡಿಸಿ ನೂರು ಬಂಗಾರದ ಬೋಗುಣಿಗಳನ್ನು ಮಾಡಿಸಿದನು.
9 : ಮತ್ತೆ, ಯಾಜಕರ ಪ್ರಾಕಾರವನ್ನೂ ಮಹಾಪ್ರಾಕಾರವನ್ನೂ ಮಾಡಿಸಿ ಮಹಾಪ್ರಾಕಾರಕ್ಕೆ ಬಾಗಿಲುಗಳನ್ನೂ ಇಟ್ಟನು. ಅವುಗಳ ಕದಗಳನ್ನು ಕಂಚಿನ ತಗಡಿನಿಂದ ಹೊದಿಸಿದನು.
10 : ಕಡಲು ಎನಿಸಿಕೊಳ್ಳುವ ಪಾತ್ರೆಯನ್ನು ದೇವಾಲಯದ ಬಲಗಡೆಯಲ್ಲಿ ಅಂದರೆ, ಪ್ರಾಕಾರದ ಆಗ್ನೇಯ ದಿಕ್ಕಿನಲ್ಲಿ ಇರಿಸಿದನು.
11 : ಇದಲ್ಲದೆ, ಹೂರಾಮನು ಹಂಡೆಗಳನ್ನೂ ಸಲಿಕೆಗಳನ್ನೂ ಬೋಗುಣಿಗಳನ್ನೂ ಮಾಡಿದನು. ಈ ಹೂರಾಮನು ಸೊಲೊಮೋನನ ಅಪ್ಪಣೆಯಂತೆ ದೇವಾಲಯಕ್ಕಾಗಿ ಮಾಡಿದ ಸಾಮಾನುಗಳು ಇವು:
12 : ಎರಡು ಕಂಬಗಳು, ಅವುಗಳ ಮೇಲಣ ಕುಂಭಾಕಾರದ ಎರಡು ತಲೆಗಳು, ಕುಂಭಗಳ ಮೇಲೆ ಹಾಕುವುದಕ್ಕಾಗಿ ಎರಡು ಜಾಲರಿಗಳು,
13 : ಕಂಬಗಳ ತುದಿಯಲ್ಲಿರುವ ಕುಂಭಗಳ ಜಾಲರಿಗಳ ಮೇಲೆ ಎರಡೆರಡು ಸಾಲಾಗಿ ಸಿಕ್ಕಿಸುವುದಕ್ಕಾಗಿ ತಾಮ್ರದ ನಾನೂರು ದಾಳಿಂಬೆ ಹಣ್ಣುಗಳು, ಪೀಠಗಳು,
14 : ಅವುಗಳ ಮೇಲಣ ಬಾನೆಗಳು, ಕಡಲಕೊಳ ಎನಿಸಿಕೊಳ್ಳುವ ಎರಕದ ಪಾತ್ರೆ,
15 : ಅದನ್ನು ಹೊರುವ ಹನ್ನೆರಡು ಎರಕದ ಹೋರಿಗಳು,
16 : ಹಂಡೆ, ಸಲಿಕೆ ಹಾಗೂ ಮುಳ್ಳು. ಹೀಗೆ ಹೂರಾಮಾಬೀಮನು ಅರಸ ಸೊಲೊಮೋನನ ಅಪ್ಪಣೆಯ ಮೇರೆಗೆ ಸರ್ವೇಶ್ವರನ ಆಲಯಕ್ಕಾಗಿ ಅದರ ಎಲ್ಲಾ ಸಾಮಾನುಗಳನ್ನು ಒಪ್ಪಹಾಕಿದ ಕಂಚಿನಿಂದ ಮಾಡಿ ಮುಗಿಸಿದನು.
17 : ಅರಸನು ಜೋರ್ಡನ್ ತಗ್ಗಿನಲ್ಲಿ ಸುಕ್ಕೋತಿಗೂ ಚೆರೇದಕ್ಕೂ ಮಧ್ಯದಲ್ಲಿರುವ ಕುಲುಮೆಯಲ್ಲಿ ಎರಕ ಹೊಯ್ಸಿದನು.
18 : ಸೊಲೊಮೋನನು ಮಾಡಿಸಿದ ಸಾಮಾನುಗಳು ಅನೇಕವಾvದ್ದರಿಂದ ಅವುಗಳ ತಾಮ್ರದ ತೂಕ ಎಷ್ಟೆಂಬುದು ಗೊತ್ತಾಗದೆ ಹೋಯಿತು.
19 : ಅವನು ದೇವಾಲಯಕ್ಕಾಗಿ ಮಾಡಿಸಿದ ಒಳಗಿನ ಸಾಮಗ್ರಿ ಇವು: ಬಂಗಾರದ ಧೂಪವೇದಿ, ನೈವೇದ್ಯವಾದ ರೊಟ್ಟಿಗಳನ್ನಿಡತಕ್ಕ ಮೇಜುಗಳು,
20 : ನಿಯಮದ ಪ್ರಕಾರ ಮಹಾಪರಿಶುದ್ಧ ಸ್ಥಳದ ಮುಂದೆ ಉರಿಯುತ್ತಿರುವುದಕ್ಕಾಗಿ ಪುಷ್ಪಾಲಂಕಾರವುಳ್ಳ ಬಂಗಾರದ ದೀಪಸ್ತಂಭಗಳು
21 : ಉತ್ಕøಷ್ಟವಾದ ಬಂಗಾರದಿಂದ ಮಾಡಿದ ಅವುಗಳ ಹಣತೆ, ತಂಡಸ,
22 : ಚೊಕ್ಕ ಬಂಗಾರದ ಕತ್ತರಿ, ಬೋಗುಣಿ, ಧೂಪಾರತಿ, ಅಗ್ಗಿಷ್ಟಿಕೆ, ದೇವಾಲಯದ ಮಹಾಪರಿಶುದ್ಧ ಸ್ಥಳದೊಳಗಿನ ಬಾಗಿಲಿನ ಬಂಗಾರದ ಕದಗಳು, ಪರಿಶುದ್ಧ ಸ್ಥಳದ ಬಂಗಾರದ ಕದಗಳು.